ಚಂದಮಾಮನೆಡೆಗೆ ಪಯಣ ಆರಂಭಿಸಿದ ಚಂದ್ರಯಾನ- 2!

By Web Desk  |  First Published Aug 15, 2019, 11:50 AM IST

ಚಂದಮಾಮನೆಡೆಗೆ ಇದೀಗ ಚಂದ್ರಯಾನ- 2 ಪಯಣ| ಭೂಕಕ್ಷೆ ತೊರೆದು ಚಂದಿರನ ಕಕ್ಷೆಯತ್ತ ಹೊರಟಿತು ನೌಕೆ| 20ರಂದು ಕಕ್ಷೆಗೆ ಸೇರ್ಪಡೆ, ಸೆ.7ರಂದು ಲ್ಯಾಂಡಿಂಗ್‌


ಬೆಂಗಳೂರು[ಆ.15]: ಸತತ 23 ದಿನಗಳಿಂದ ಭೂಮಿಯನ್ನು ಸುತ್ತುತ್ತಿದ್ದ ಭಾರತದ ಮಹತ್ವಾಕಾಂಕ್ಷಿ ಚಂದ್ರಯಾನ-2 ನೌಕೆ ಇದೀಗ ಭೂಮಿಯ ಬಂಧ ಕಳೆದುಕೊಂಡು ಚಂದಿರನ ಕಡೆಗೆ ಮುಖ ಮಾಡಿದೆ. ಆ.20ರಂದು ಚಂದ್ರನ ಕಕ್ಷೆಗೆ ಸೇರ್ಪಡೆಯಾಗುವ ಈ ನೌಕೆ, ಕೆಲವು ದಿನಗಳ ಕಾಲ ಅಲ್ಲೇ ಗಿರಕಿ ಹೊಡೆದು ಸೆ.7ರಂದು ಚಂದ್ರನ ದಕ್ಷಿಣ ಧ್ರುವದ ಮೇಲೆ ಇಳಿಯಲಿದೆ.

ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ವಿಜ್ಞಾನಿಗಳು ಬುಧವಾರ ನಸುಕಿನ ಜಾವ 2.21ರ ವೇಳೆಗೆ ಭೂಕಕ್ಷೆಯಲ್ಲಿದ್ದ ಚಂದ್ರಯಾನ ನೌಕೆಯನ್ನು ಬಲ ಪ್ರಯೋಗಿಸಿ ಚಂದ್ರನ ಮಾರ್ಗದತ್ತ ಬಿಟ್ಟಿದ್ದಾರೆ. ಈ ವೇಳೆ 1203 ಸೆಕೆಂಡ್‌ಗಳ ಕಾಲ ದ್ರವರೂಪದ ಇಂಧನವನ್ನು ಅನ್ನು ದಹಿಸಿ ಶಕ್ತಿ ಒದಗಿಸಲಾಗಿದೆ. ಸದ್ಯ ನೌಕೆಯ ಮೇಲೆ ಬೆಂಗಳೂರಿನ ಬ್ಯಾಲಾಳುವಿನಲ್ಲಿರುವ ಕೇಂದ್ರದ ಸಹಾಯದೊಂದಿಗೆ ಬೆಂಗಳೂರಿನ ಪೀಣ್ಯದಲ್ಲಿರುವ ಇಸ್ರೋ ಟೆಲಿಮೆಟ್ರಿ ಟ್ರ್ಯಾಕಿಂಗ್‌ ಅಂಡ್‌ ಕಮಾಂಡ್‌ ನೆಟ್‌ವರ್ಕ್ ಕೇಂದ್ರ ನಿರಂತರ ನಿಗಾ ವಹಿಸಿದೆ.

Tap to resize

Latest Videos

undefined

ಚಂದ್ರಯಾನ-2 ಕಂಡಂತೆ ವಸುಧೆ: ತಾಯಿಯ ಮಡಿಲಂತೆ ಕಾಣದೆ?

ಜು.22ರಂದು ಆಂಧ್ರಪ್ರದೇಶದ ಶ್ರೀಹರಿಕೋಟದ ಬಾಹ್ಯಾಕಾಶ ನೆಲೆಯಿಂದ ಚಂದ್ರಯಾನ-2 ನೌಕೆ ಉಡಾವಣೆಯಾಗಿತ್ತು. ವಿಶ್ವದ ಅತ್ಯಂತ ಅಗ್ಗದ ಚಂದ್ರಯಾನ ಯೋಜನೆ ಆಗಿರುವ ಕಾರಣ ವಿಶ್ವಾದ್ಯಂತ ಕುತೂಹಲ ಕೆರಳಿಸಿದೆ. ಈ ಬಾರಿ ವಿಕ್ರಮ್‌ ಎಂಬ ಲ್ಯಾಂಡರ್‌ ಹಾಗೂ ಪ್ರಜ್ಞಾನ್‌ ಎಂಬ ರೋವರ್‌ ಅನ್ನು ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಸುವ ಸಾಹಸವನ್ನು ಇಸ್ರೋ ಕೈಗೆತ್ತಿಕೊಂಡಿದೆ. ಇದರಲ್ಲಿ ಯಶಸ್ವಿಯಾದರೆ ರಷ್ಯಾ, ಅಮೆರಿಕ ಹಾಗೂ ಚೀನಾ ಬಳಿಕ ಈ ಸಾಧನೆ ಮಾಡಿದ ವಿಶ್ವದ ನಾಲ್ಕನೇ ದೇಶ ಎಂಬ ಹಿರಿಮೆಗೆ ಭಾರತ ಪಾತ್ರವಾಗಲಿದೆ.

click me!