ಬೆಂಗಳೂರು : ಎಲ್ಲ ದೂರುಗಳಿಗೆ ಒಂದೇ ಆ್ಯಪ್‌!

By Kannadaprabha NewsFirst Published Dec 26, 2019, 11:30 AM IST
Highlights

ಬಿಬಿಎಂಪಿ, ಜಲಮಂಡಳಿ, ಬೆಸ್ಕಾಂ, ಸಂಚಾರಿ ಪೊಲೀಸ್‌, ಬಿಎಂಆರ್‌ಸಿಎಲ್‌, ಬಿಡಿಎ ಸೇರಿದಂತೆ ನಗರದ ಯಾವುದೇ ಇಲಾಖೆಗೆ ಸಂಬಂಧಿಸಿದ ದೂರುಗಳನ್ನು ಇನ್ಮುಂದೆ ಒಂದೇ ಆ್ಯಪ್ ಮೂಲಕ ಕೊಡಬಹುದಾಗಿದೆ. 

ಬೆಂಗಳೂರು [ಡಿ.26]:  ಬಿಬಿಎಂಪಿ, ಜಲಮಂಡಳಿ, ಬೆಸ್ಕಾಂ, ಸಂಚಾರಿ ಪೊಲೀಸ್‌, ಬಿಎಂಆರ್‌ಸಿಎಲ್‌, ಬಿಡಿಎ ಸೇರಿದಂತೆ ನಗರದ ಯಾವುದೇ ಇಲಾಖೆಗೆ ಸಂಬಂಧಿಸಿದ ದೂರುಗಳನ್ನು ನಾಗರಿಕರು ಒಂದೇ ವೇದಿಕೆಯಡಿ ಸಲ್ಲಿಸಲು ಅನುಕೂಲ ಆಗುವಂತೆ ‘ನಮ್ಮ ಬೆಂಗಳೂರು’ ಆ್ಯಪ್‌ ಅನ್ನು ಶೀಘ್ರದಲ್ಲಿ ಬಿಬಿಎಂಪಿ ಬಿಡುಗಡೆಗೊಳಿಸಲಿದೆ ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್‌.ಅನಿಲ್‌ಕುಮಾರ್‌ ತಿಳಿಸಿದ್ದಾರೆ.

ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ಜನ್ಮದಿನಾಚರಣೆ ಆಯೋಜಿಸಿದ್ದ ಯುನೈಟೆಡ್‌ ವೇ ಬುಧವಾರ ನಗರದ ಯವನಿಕಾ ಸಭಾಂಗಣದಲ್ಲಿ ಆಯೋಜಿಸಿದ್ದ ‘ಸುಶಾಸನ ದಿನಾಚರಣೆ’ ಸಮಾರಂಭದಲ್ಲಿ ‘​ಸಾರ್ವಜನಿಕರ ಕೂಂದುಕೊರತೆಗಳ ಪರಿಣಾಮಕಾರಿ ಪರಿಹಾರ’ ಕುರಿತು ಬಿಬಿಎಂಪಿ ಆಯುಕ್ತ ಬಿ.ಎಚ್‌.ಅನಿಲ್‌ಕುಮಾರ್‌, ನಗರ ಪೊಲೀಸ್‌ ಆಯುಕ್ತ ಭಾಸ್ಕರ್‌ ರಾವ್‌, ಜಲಮಂಡಳಿ ಮುಖ್ಯ ಎಂಜಿನಿಯರ್‌ ಕೆಂಪರಾಮಯ್ಯ ಅವರು ವಿಷಯ ಮಂಡನೆ ಮಾಡಿದರು.

ಬಿಬಿಎಂಪಿ ಆಯುಕ್ತ ಅನಿಲ್‌ಕುಮಾರ್‌ ಮಾತನಾಡಿ, ಬಿಬಿಎಂಪಿ, ಬೆಸ್ಕಾಂ, ಜಲಮಂಡಳಿ, ಬಿಡಿಎ, ಸಂಚಾರಿ ಪೊಲೀಸ್‌, ಬಿಎಂಟಿಸಿ ಪ್ರತ್ಯೇಕ ಸಹಾಯವಾಣಿ ಸಂಖ್ಯೆ ಹೊಂದಿವೆ. ಅಲ್ಲದೇ ತಮ್ಮದೇ ಆ್ಯಪ್‌, ಜಾಲತಾಣ ಹೊಂದಿವೆ. ಇದರಿಂದ ನಾಗರಿಕರು ದೂರು ಸಲ್ಲಿಸಲು ಗೊಂದಲಕ್ಕೆ ಒಳಗಾಗುತ್ತಿದ್ದಾರೆ. ಹೀಗಾಗಿ ಸಮಸ್ಯೆಗೆ ತ್ವರಿತವಾಗಿ ಪರಿಹಾರ ದೊರೆಯುತ್ತಿಲ್ಲ. ಹಾಗಾಗಿ, ಬಿಬಿಎಂಪಿ ನಮ್ಮ ಬೆಂಗಳೂರು ಎಂಬ ಅಪ್ಲಿಕೇಷನ್‌ ಅಭಿವೃದ್ಧಿಪಡಿಸುತ್ತಿದೆ ಎಂದರು.

ನಗರದ ಯಾವುದೇ ಇಲಾಖೆಗೆ ಸಂಬಂಧಿಸಿದ ದೂರುಗಳನ್ನು ಆ್ಯಪ್‌ ಮೂಲಕ ಸಲ್ಲಿಕೆ ಮಾಡಬಹುದು. ಸಂಬಂಧಪಟ್ಟಇಲಾಖೆ ದೂರಿಗೆ ಸ್ಪಂದಿಸುವ ವ್ಯವಸ್ಥೆ ಈ ಅಪ್ಲೀಕೆಷನ್‌ನಲ್ಲಿ ಮಾಡಲಾಗಿದೆ. ಜನವರಿ 2ನೇ ವಾರದಲ್ಲಿ ಬಿಡುಗಡೆ ಗೊಳಿಸಲಾಗುವುದು ಎಂದು ತಿಳಿಸಿದರು.

ಕುಡಿದು ಹೋದ್ರೆ ಮೆಟ್ರೋ ಹತ್ತಂಗಿಲ್ಲ : ಎಚ್ಚರ!...

ಸಾರ್ವಜಕರ ಸಮಸ್ಯೆಗೆ ತ್ವರಿತವಾಗಿ ಸ್ಪಂದಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ದೂರು ಕೇಳಿಬಂದ ಕೆಲವೇ ಗಂಟೆಯಲ್ಲಿ ಸ್ಪಂದಿಸುವ ಕೆಲಸ ಬಿಬಿಎಂಪಿ ಅಧಿಕಾರಿಗಳು ಮಾಡುತ್ತಿದ್ದಾರೆ. ಜತೆಗೆ ದೂರು ಪರಿಹಾರ ಮಾಡಿದ ವಿವರ ಮತ್ತು ಫೋಟೋ ದಾಖಲೆ ಸಮೇತ ಸಲ್ಲಿಸುತ್ತಾರೆ ಎಂದು ಈ ವೇಳೆ ಹೇಳಿದರು.

ನಗರ ಪೊಲೀಸ್‌ ಆಯುಕ್ತ ಭಾಸ್ಕರ್‌ ರಾವ್‌ ಮಾತನಾಡಿ, ಸುರಕ್ಷಾ ಆ್ಯಪ್‌ ಮೂಲಕ ಸಲ್ಲಿಕೆಯಾಗುವ ದೂರುಗಳಿಗೆ ಕೇವಲ 9 ನಿಮಿಷದಲ್ಲಿ ಸ್ಪಂದಿಸಲಾಗುತ್ತಿದೆ. ಇದನ್ನು 4 ನಿಮಿಷಕ್ಕೆ ಇಳಿಸುವ ಪ್ರಯತ್ನ ಮಾಡಲಾಗುತ್ತಿದೆ. ಮಹಿಳಾ ಮತ್ತು ಮಕ್ಕಳ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಲಾಗಿದೆ. 2,300 ಮಹಿಳಾ ಸಿಬ್ಬಂದಿ ನಗರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ನಿರ್ಭಯ ನಿಧಿಯಡಿ ಪಿಂಕ್‌ ಸಾರಥಿ ವಾಹನ ನಗರದಲ್ಲಿ ಗಸ್ತು ತಿರುತ್ತವೆ. ನಗರದ ಸುರಕ್ಷತೆಗೆ ಪಾದಚಾರಿ ಮಾರ್ಗ ಮತ್ತು ಸಮೂಹ ಸಾರಿಗೆ ವ್ಯವಸ್ಥೆ ಇನ್ನಷ್ಟುಬಲಪಡಿಸುವುದು ಅಗತ್ಯವಾಗಿದೆ ಎಂದು ಸಲಹೆ ನೀಡಿದರು.

ಬೆಂಗಳೂರು ಜಲಮಂಡಳಿ ಮುಖ್ಯ ಎಂಜಿನಿಯರ್‌ ಕೆಂಪರಾಮಯ್ಯ ಮಾತನಾಡಿ, ಪ್ರತಿ ತಿಂಗಳು ಸುಮಾರು 11 ರಿಂದ 12 ಸಾವಿರ ದೂರುಗಳು ದಾಖಲಾಗುತ್ತಿವೆ. ಬಿಬಿಎಂಪಿ ಮತ್ತು ಬಿಎಂಆರ್‌ಸಿಎಲ್‌ ಕಾಮಗಾರಿಯಿಂದ ಜಲಮಂಡಳಿಯ ಕೊಳವೆಗಳು ದುರಸ್ತಿಗೊಳ್ಳುತ್ತಿವೆ. ಸಾರ್ವಜನಿಕರ ಸಮಸ್ಯೆ ಪರಿಹಾರಕ್ಕೆ ಪ್ರತಿವಾರ ಉಪವಿಭಾಗದ ಮಟ್ಟದಲ್ಲಿ ನೀರಿನ ಅದಾಲತ್‌ ನಡೆಸಲಾಗುತ್ತಿದೆ ಎಂದು ಹೇಳಿದರು.

ಕೆರೆ ನಿರ್ವಹಣೆಗೆ 1,253 ಕೋಟಿ

ರಾಜ್ಯ ಸರ್ಕಾರ ಹೊಸದಾಗಿ 38 ಕೆರೆಗಳನ್ನು ಬಿಬಿಎಂಪಿಗೆ ನೀಡಿದ್ದು, ಇದರಿಂದ ಬಿಬಿಎಂಪಿ ನಿರ್ವಹಣೆಯ ಕೆರೆಗಳ ಸಂಖ್ಯೆ 207ಕ್ಕೆ ಏರಿಕೆಯಾಗಿದೆ. ಕೆರೆಗಳ ಸರ್ವೇ ಕಾರ್ಯ ನಡೆಯುತ್ತಿದೆ. ಸಿಸಿಟಿವಿ ಅಳವಡಿಕೆ, ಒತ್ತುವರಿ ತಡೆ, ತಂತಿ ಬೇಲಿ ಅಳವಡಿಕೆ ಸೇರಿದಂತೆ ಕೆರೆಗಳ ಸಮಗ್ರ ಅಭಿವೃದ್ಧಿಗೆ 1,253 ಕೋಟಿ ರು. ಅನುದಾನ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ ಮಾಡಲಾಗಿದೆ. ಇನ್ನು 1048 ಉದ್ಯಾನವನಗಳನ್ನು ಬಿಬಿಎಂಪಿ ನಿರ್ವಹಣೆ ಮಾಡುತ್ತಿದೆ. ಅದರಲ್ಲಿ ಈಗಾಗಲೇ 1,274 ಉದ್ಯಾನವನಗಳನ್ನು ಅಭಿವೃದ್ಧಿಪಡಿಸಲಾಗಿದೆ. ಉಳಿದ ಉದ್ಯಾನವನಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಅನಿಲ್‌ಕುಮಾರ್‌ ತಿಳಿಸಿದರು.

click me!