20 ವರ್ಷದ ಬಳಿಕ ಬಂದ್ ಆಗುತ್ತಿದೆ ಮಾಜಿ ವಿಶ್ವ ನಂ.1 ಚ್ಯಾಟ್ ಮೆಸೆಂಜರ್

By Suvarna Web DeskFirst Published Oct 8, 2017, 8:19 PM IST
Highlights

ಡಿ.15ರ ಬಳಿಕ ಎಐಎಮ್ ಡಾಟ್ ಕಾಮ್'ನ ಇಮೇಲ್ ವಿಳಾಸ ಹೊಂದಿರುವವರು ಮಾತ್ರ ಎಒಎಲ್ ಮೆಸೆಂಜರ್'ನ್ನು ಬಳಕೆ ಮಾಡಬಹುದು. ಇನ್ನುಳಿದ ಬಳಕೆದಾರರು ಮೆಸೆಂಜರ್'ಗೆ ಲಾಗಿನ್ ಆಗಲು ಸಾಧ್ಯವಾಗುವುದಿಲ್ಲ.

ಬೆಂಗಳೂರು(ಅ. 08): ಒಂದು ಕಾಲದಲ್ಲಿ ಮೈಕ್ರೋಸಾಫ್ಟ್, ಗೂಗಲ್ ಮೊದಲಾದವುಗಳಿಗೆ ತಲೆನೋವಾಗಿದ್ದ ಎಒಎಲ್ ಇನ್ಸ್'ಟೆಂಟ್ ಮೆಸೆಂಜರ್ ಈಗ ಇತಿಹಾಸ ಪುಟ ಸೇರುತ್ತಿದೆ. 1997ರಲ್ಲಿ ಆರಂಭಗೊಂಡು ಕೆಲ ವರ್ಷದವರೆಗೆ ವಿಶ್ವದ ಟಾಪ್ ಮೆಸೆಂಜರ್ ಎನಿಸಿದ್ದ ಎಒಎಲ್ ಬಂದ್ ಆಗಲಿದೆ. ಡಿಸೆಂಬರ್ 15ಕ್ಕೆ ಎಒಎಲ್ ಯುಗ ಮುಕ್ತಾಯವಾಗಲಿದೆ. ಎಒಎಲ್'ನ ಮಾಲಕ ಸಂಸ್ಥೆ ಓತ್ ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರಡಿಸಿದೆ.

ಡಿ.15ರ ಬಳಿಕ ಎಐಎಮ್ ಡಾಟ್ ಕಾಮ್'ನ ಇಮೇಲ್ ವಿಳಾಸ ಹೊಂದಿರುವವರು ಮಾತ್ರ ಎಒಎಲ್ ಮೆಸೆಂಜರ್'ನ್ನು ಬಳಕೆ ಮಾಡಬಹುದು. ಇನ್ನುಳಿದ ಬಳಕೆದಾರರು ಮೆಸೆಂಜರ್'ಗೆ ಲಾಗಿನ್ ಆಗಲು ಸಾಧ್ಯವಾಗುವುದಿಲ್ಲ.

1997ರಲ್ಲಿ ಪ್ರಾರಂಭಗೊಂಡ ಎಒಎಲ್ ಇನ್ಸ್'ಟೆಂಟ್ ಮೆಸೆಂಜರ್ ಆ ಸಮಯದಲ್ಲಿ ಬಹಳ ಜನಪ್ರಿಯವಾಗಿತ್ತು. ಅಮೆರಿಕದಲ್ಲಂತೂ ಅದೊಂದು ದೊಡ್ಡ ಹವಾ ಸೃಷ್ಟಿಸಿತ್ತು. 2001ರಲ್ಲೇ ಸುಮಾರು 10 ಕೋಟಿ ನೊಂದಾಯಿತ ಬಳಕೆದಾರರಿದ್ದರೆನ್ನಲಾಗಿದೆ. ಮಾರುಕಟ್ಟೆಯಲ್ಲಿ ಎಒಎಸ್ ಎಷ್ಟು ಪ್ರಬಲವಾಗಿತ್ತೆಂದರೆ, ಮೈಕ್ರೋಸಾಫ್ಟ್'ನಂತಹ ಎದುರಾಳಿಗಳಿಗೆ ಒಂದಿಷ್ಟೂ ಜಾಗ ಕಲ್ಪಿಸುವ ಅವಕಾಶ ಕೊಡುತ್ತಿರಲಿಲ್ಲ. ಮೈಕ್ರೋಸಾಫ್ಟ್'ನ ಮೆಸೆಂಜರ್'ಗಳಿಂದ ಎಒಎಲ್ ಮೆಸೆಂಜರ್'ಗೆ ಬರುತ್ತಿದ್ದ ಚ್ಯಾಟ್'ಗಳನ್ನು ಬ್ಲಾಕ್ ಮಾಡುತ್ತಿತ್ತು. ಆಗ, ಎಒಎಲ್ ವಿರುದ್ಧ ಮಿಕ್ಕೆಲ್ಲಾ ಪ್ರತಿಸ್ಪರ್ಧಿಗಳು ಒಗ್ಗೂಡಿ ಅಮೆರಿಕ ಸರಕಾರಕ್ಕೆ ದೂರು ಕೊಂಡೊಯ್ಯುವ ಮಟ್ಟಕ್ಕೆ ಹೋಗಿತ್ತು.

ಆದರೆ, ವರ್ಷಗಳುರುತ್ತಾ ಹೋದಂತೆ ಗೂಗಲ್ ಚ್ಯಾಟ್, ಫೇಸ್ಬುಕ್ ಮೊದಲಾದವು ಪ್ರವರ್ದಮಾನಕ್ಕೆ ಬರತೊಡಗಿದವು. ಎಒಎಲ್'ನ ಚ್ಯಾಟ್ ಮೆಸೆಂಜರ್'ಗಳ ಜನಪ್ರಿಯತೆ ಕುಗ್ಗುತ್ತಾ ಹೋಯಿತು.

ಅಂದಹಾಗೆ, ಎಒಎಲ್ ಎಂದರೆ ಅಮೆರಿಕಾ ಆನ್'ಲೈನ್ ಎಂಬುದು ವಿಸ್ತೃತ ರೂಪ. ಯಾಹೂ ಇದರ ಸೋದರ ಸಂಸ್ಥೆ. ಎಒಎಲ್'ನಂತೆ ಯಾಹೂ ಕೂಡ ಓತ್ ಸಂಸ್ಥೆಯ ಒಡೆತನಕ್ಕೆ ಸೇರಿದ್ದು. ಇವೆಲ್ಲವೂ ಅಮೆರಿಕದ ಕೇಬಲ್ ದೈತ್ಯ ವೆರಿಜಾನ್ ಕಮ್ಯೂನಿಕೇಶನ್ಸ್ ಸಂಸ್ಥೆಯ ಮಾಲಿಕತ್ವಕ್ಕೆ ಸೇರಿವೆ. ಯಾಹೂ ಮೆಸೆಂಜರ್ ಇನ್ನೂ ಕಾರ್ಯನಿರ್ವಹಿಸುತ್ತಿದೆ. ಫ್ಲಿಕರ್, ಟಂಬ್ಲರ್ ಮೊದಲಾದ ಜನಪ್ರಿಯ ಸೋಷಿಯಲ್ ಮೀಡಿಯಾ ತಾಣಗಳು ಸಂಸ್ಥೆಯ ಪ್ರಮುಖ ಬ್ಯುಸಿನೆಸ್ ಆಗಿವೆ.

click me!