ಕ್ಯಾನ್ಸರ್‌ಗೆ ಬಲಿಯಾದ ಯೂಟ್ಯೂಬರ್‌: 23ಕ್ಕೆ ಬದುಕು ಮುಗಿಸಿದ ಟೆಕ್ನೋಬ್ಲೇಡ್

By Anusha Kb  |  First Published Jul 2, 2022, 10:56 AM IST

ಧೀರ್ಘಕಾಲದಿಂದ ಕ್ಯಾನ್ಸರ್‌ ವಿರುದ್ಧ ಹೋರಾಡುತ್ತಿದ್ದ ಖ್ಯಾತ ಅಮೆರಿಕನ್‌ ಯೂಟ್ಯೂಬರ್‌, ಟೆಕ್ನೋಬ್ಲೇಡ್‌ ಹೆಸರಿನಿಂದಲೇ ಅಂತರ್ಜಾಲದಲ್ಲಿ ಖ್ಯಾತಿ ಗಳಿಸಿರುವ ಅಲೆಕ್ಸಾಂಡರ್ ಅವರು ನಿನ್ನೆ ನಿಧನರಾಗಿದ್ದಾರೆ. ಎಳವೆಯಲ್ಲೇ ಬದುಕಿನ ಪಯಣ ಮುಗಿಸಿದ ಅವರಿಗೆ ಈಗಿನ್ನೂ 23 ವರ್ಷ ವಯಸ್ಸು,


ನ್ಯೂಯಾರ್ಕ್‌: ಧೀರ್ಘಕಾಲದಿಂದ ಕ್ಯಾನ್ಸರ್‌ ವಿರುದ್ಧ ಹೋರಾಡುತ್ತಿದ್ದ ಖ್ಯಾತ ಅಮೆರಿಕನ್‌ ಯೂಟ್ಯೂಬರ್‌, ಟೆಕ್ನೋಬ್ಲೇಡ್‌ ಹೆಸರಿನಿಂದಲೇ ಅಂತರ್ಜಾಲದಲ್ಲಿ ಖ್ಯಾತಿ ಗಳಿಸಿರುವ ಅಲೆಕ್ಸಾಂಡರ್ ಅವರು ನಿನ್ನೆ ನಿಧನರಾಗಿದ್ದಾರೆ. ಎಳವೆಯಲ್ಲೇ ಬದುಕಿನ ಪಯಣ ಮುಗಿಸಿದ ಅವರಿಗೆ ಈಗಿನ್ನೂ 23 ವರ್ಷ ವಯಸ್ಸು, ಅವರು ತಮ್ಮ ಯೂಟ್ಯೂಬ್‌ ಚಾನೆಲ್‌ನಲ್ಲಿ Minecraft ವೀಡಿಯೋ  ಮತ್ತು ಲೈವ್‌ಸ್ಟ್ರೀಮ್‌ಗಳಿಂದಾಗಿ ಸಾಕಷ್ಟು ಹೆಸರುವಾಸಿಯಾಗಿದ್ದಲ್ಲದೇ ಅನೇಕ ಅಭಿಮಾನಿಗಳನ್ನು ಹೊಂದಿದ್ದರು. ಟೆಕ್ನೋಬ್ಲೇಡ್‌ ಅವರು ಜುಲೈ 2022 ರ ವೇಳೆಗಾಗಲೇ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ 12 ಮಿಲಿಯನ್‌ಗಿಂತಲೂ ಅಧಿಕ ಚಂದಾದಾರರನ್ನು ಹೊಂದಿದ್ದರು. 

ಅವರ ಕುಟುಂಬದವರು ಟೆಕ್ನೋಬ್ಲೇಡ್‌ ಸಾವನ್ನು ಖಚಿತಪಡಿಸಿದ್ದಾರೆ. ಕ್ಯಾನರ್ ವಿರುದ್ಧ ಗೆಲ್ಲಲು ಧೀರ್ಘಕಾಲದ ಹೋರಾಟ ಮಾಡುತ್ತಲೇ ಟೆಕ್ನೋಬ್ಲೇಡ್‌ ಹಲವು ವಿಡಿಯೋಗಳನ್ನು ಮಾಡಿದ್ದಾರೆ. ಆತನ ಪರವಾಗಿ ಆತನ ಪೋಷಕರು ಆತನ ಯೂಟ್ಯೂಬ್‌ನಲ್ಲಿ ವಿಡಿಯೋವೊಂದನ್ನು ಹರಿ ಬಿಟ್ಟು ಆತ ತಮ್ಮನ್ನು ಅಗಲಿದ್ದಾಗಿ ಹೇಳಿದ್ದಾರೆ. So Long Nerds ಹೆಸರಿನಲ್ಲಿ ರಿಲೀಸ್ ಮಾಡಿರುವ ಈ ವಿಡಿಯೋದಲ್ಲಿ ಟೆಕ್ನೋಬ್ಲೇಡ್‌ ತಂದೆ ಮಗನ ಅಗಲಿಕೆಯ ನೋವಿನೊಂದಿಗೆ ಕಣ್ಣು ತುಂಬಿಕೊಂಡು ಗದ್ಗದಿತ ಕಂಠದಿಂದ ತುಂಬಾ ಭಾವುಕವಾಗಿ ಮಾತನಾಡಿದ್ದು ಆತ ಇನ್ನಿಲ್ಲ ಎಂಬುದನ್ನು ಟೆಕ್ನೋಬ್ಲೇಡ್‌ ಅಭಿಮಾನಿಗಳಿಗೆ ತಿಳಿಸಿದ್ದಾರೆ. 

Tap to resize

Latest Videos

ಇದನ್ನೂ ಓದಿ : ಕೋಲ್ಕತ್ತಾದ ಫೇಕ್‌ ಕಾಲ್‌ ಸೆಂಟರ್‌ ಮುಚ್ಚಿಸಿದ ಅಮೆರಿಕಾದ ಯೂಟ್ಯೂಬರ್ ಮಾರ್ಕ್ ರಾಬರ್: ಹೇಗಿತ್ತು ಕಾರ್ಯಾಚರಣೆ?

ಕೊನೆಯ ವಿಡಿಯೋದಲ್ಲಿ ಟೆಕ್ನೋಬ್ಲೇಡ್‌ ಸಾವಿಗೂ ಮೊದಲು ಬರೆದಿಟ್ಟ ಪತ್ರವನ್ನು ಆತನ ತಂದೆ ಓದಿದ್ದಾರೆ. ಆತನ ಹೆಸರು ಅಲೆಕ್ಸ್ ಎಂದಾಗಿದ್ದು, ಆತ ಅಭಿಮಾನಿಗಳಿಗಾಗಿ ಬರೆದ ಅಂತಿಮ ವಿದಾಯ ಸಂದೇಶವನ್ನು ಓದಿದ್ದಾರೆ. ಹಲವು ವರ್ಷಗಳಿಂದ ನನ್ನ ಕಂಟೆಂಟ್ ಅನ್ನು ಬೆಂಬಲಿಸಿದ್ದಕ್ಕೆ ಎಲ್ಲರಿಗೂ ಧನ್ಯವಾದಗಳು. ನನಗೆ ಇನ್ನೂ ನೂರು ಜನ್ಮ ಬಂದರೂ ನಾನು ಪ್ರತಿ ಬಾರಿಯೂ ಟೆಕ್ನೋಬ್ಲೇಡ್ ಆಗಿಯೇ ಇರಲು ಬಯಸುತ್ತೇನೆ. ನನ್ನ ಬದುಕಿನ ಪ್ರತಿಕ್ಷಣವೂ ಅತ್ಯಂತ ಸುಂದರ ಸಂತೋಷದ ಕ್ಷಣಗಳಾಗಿದ್ದವು ಎಂದು ಆತ ತನ್ನ ಪತ್ರದಲ್ಲಿ ಬರೆದಿದ್ದಾನೆ. 

 

10 ಮಿಲಿಯನ್ ಯೂಟ್ಯೂಬ್  ಫಾಲೋವರ್‌ಗಳನ್ನು ಹೊಂದಿರುವ ಟೆಕ್ನೋಬ್ಲೇಡ್, ತಮ್ಮ ಲೈವ್ ಸ್ಟ್ರೀಮಿಂಗ್ ಮತ್ತು ಸ್ಯಾಂಡ್‌ಬಾಕ್ಸ್ ವೀಡಿಯೋ ಗೇಮ್ ಆಡುವ ವೀಡಿಯೊಗಳನ್ನು ಪೋಸ್ಟ್ ಮಾಡುವ ಮೂಲಕ ಯೂಟ್ಯೂಬ್‌ನಲ್ಲಿ ಭಾರಿ ಖ್ಯಾತಿ ಗಳಿಸಿದ್ದರು. ಆಗಸ್ಟ್ 2021ರಲ್ಲಿ ಟೆಕ್ನೋಬ್ಲೇಡ್ ಅವರು ತಾನು ಕ್ಯಾನ್ಸರ್‌ನಿಂದ ಬಳಲುತ್ತಿರುವುದಾಗಿ ಖಚಿತಪಡಿಸಿದರು. ಫೆಬ್ರವರಿಯಲ್ಲಿ ಪೋಸ್ಟ್ ಮಾಡಿದ ನಿಧಿ ಸಂಗ್ರಹದ ವೀಡಿಯೊದಲ್ಲಿ, ಅವರು ತಮ್ಮ ಬಲಗೈಯಲ್ಲಿ ನೋವಿನ ಗೆಡ್ಡೆ ಬೆಳೆದ ನಂತರ ಕೀಮೋಥೆರಪಿ, ರೇಡಿಯೇಶನ್ ಥೆರಪಿ ಮತ್ತು ಅಂಗ ಸಾಲ್ವೇಜ್ ಆಪರೇಷನ್‌ಗೆ ಒಳಗಾಗಿದ್ದಾಗಿ ವಿವರಿಸಿದ್ದರು.

ಟೆಕ್ನೋಬ್ಲೇಡ್ ಅವರು ತಮ್ಮ ವೈಯಕ್ತಿಕ ಜೀವನದ ಬಗ್ಗೆ ಅಭಿಮಾನಿಗಳೊಂದಿಗೆ ಹೆಚ್ಚೇನೂ ಹೇಳಿಕೊಂಡಿರಲಿಲ್ಲ. ಕಿರೀಟ ಇರುವ ಹಂದಿಯ ಫೋಟೋ ಇರುವ ಅವರ ಆನ್‌ಲೈನ್ ಅವತಾರವನ್ನು ಹೊರತುಪಡಿಸಿ ಅವರ ಬಗ್ಗೆ ಅಭಿಮಾನಿಗಳಿಗೆ ಹೆಚ್ಚೇನು ತಿಳಿದಿರಲಿಲ್ಲ. ಟೆಕ್ನೋಬ್ಲೇಡ್ ನಿಧನದಿಂದ ಅಭಿಮಾನಿಗಳು ತೀವ್ರ ಆಘಾತಕ್ಕೊಳಗಾಗಿದ್ದಾರೆ. J Schlattt, ಕ್ಯಾಪ್ಟನ್ ಪಫಿ ಅಕಾ ಕಾರಾ, ಟಾಮಿ ಇನ್ನಿಟ್, ಲುಡ್ವಿಗ್ ಅಹ್ಗ್ರೆನ್, ಕ್ವಾಕಿಟಿ ಮತ್ತು ಜೇಕ್ ಲಕ್ಕಿ ಅವರಂತಹ ಅನೇಕ ಯುಟ್ಯೂಬರ್‌ಗಳು ಟೆಕ್ನೋಬ್ಲೇಡ್ ಅವರಿಗೆ ಅಂತಿಮ ನಮನ ಸಲ್ಲಿಸಿದ್ದಾರೆ. 

ಇದನ್ನೂ ಓದಿ:  Isak Munda Success Story : ಹಸಿವು ಮರೆಯಲು ಯುಟ್ಯೂಬ್ ಚಾನೆಲ್ ಶುರು ಮಾಡಿದವನ ಯಶೋಗಾಥೆ

ಟೆಕ್ನೋಬ್ಲೇಡ್ ಅವರ ತಂದೆ ವಿದಾಯ ವೀಡಿಯೊದಲ್ಲಿ ಅವರ ಅಭಿಮಾನಿಗಳಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಮತ್ತು ಅವರ ದಿವಂಗತ ಮಗನ ಸರಕುಗಳಿಗೆ ಆನ್‌ಲೈನ್ ಆರ್ಡರ್‌ಗಳಿಂದ ಬರುವ ಆದಾಯದ ಒಂದು ಭಾಗವು ಈಗ ಕ್ಯಾನ್ಸರ್‌ ಚಾರಿಟಿಗೆ ಹೋಗುತ್ತದೆ ಎಂದು ತಿಳಿಸಿದರು.

ಅವರ ಕುಟುಂಬದ ಲಿಖಿತ ಹೇಳಿಕೆಯೊಂದಿಗೆ ವೀಡಿಯೊ ಮುಕ್ತಾಯಗೊಂಡಿದೆ. ಟೆಕ್ನೋಬ್ಲೇಡ್‌ ಅವರು ಆರಂಭಿಕ ದಿನಗಳಿಂದಲೂ ಯಾವಾಗಲೂ ತಮ್ಮ ಪ್ರೇಕ್ಷಕರನ್ನು ಸಂತೋಷಪಡಿಸಲು ಬಯಸುತ್ತಿದ್ದರು. ಮತ್ತು ತನ್ನ ಅಭಿಮಾನಿಗಳಿಗೆ ಪ್ರತಿಫಲ ನೀಡುವ ಮಾರ್ಗಗಳನ್ನು ರೂಪಿಸುತ್ತಿದ್ದರು. ಆನ್‌ಲೈನ್‌ನಲ್ಲಿ ಬಹುಮಾನಗಳನ್ನು ನೀಡುವುದು, ಉತ್ತಮ ಕ್ರೀಡಾ ಮನೋಭಾವವನ್ನು ಪ್ರೋತ್ಸಾಹಿಸುವುದು ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಅವರ Minecraft ಸಾಹಸಗಳನ್ನು ಮನರಂಜನೆಗಾಗಿ ಹಂಚಿಕೊಳ್ಳಲು ಬಯಸಿದ್ದರು. ಅವರ ಅಂತಿಮ ಯಶಸ್ಸಿನ ನಂತರವೂ ಅವರು ತಮ್ಮ ಉತ್ತಮ ಸ್ವಭಾವದ ವಿನಯತೆ ನಮ್ರತೆಯನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು ಎಂದು ಹೇಳಿಕೆಯಲ್ಲಿದೆ

ಇವರ ಕೊನೆಯ ವಿಡಿಯೋ ಯೂಟ್ಯೂಬ್‌ನಲ್ಲಿ ನಿನ್ನೆ ಪೋಸ್ಟ್ ಆಗಿದ್ದು, ಮೂರು ಕೋಟಿಗೂ ಅಧಿಕ ಜನ ವೀಕ್ಷಿಸಿದ್ದಾರೆ. ಎಂಟು ಲಕ್ಷಕ್ಕೂ ಅಧಿಕ ಜನ ಕಾಮೆಂಟ್ ಮಾಡಿ ಸಂತಾಪ ವ್ಯಕ್ತಪಡಿಸಿದ್ದಾರೆ. 

click me!