ಎಟಿಎಂ ಕಾರ್ಡ್ ಸುರಕ್ಷಿತವಾಗಿಡುವ 10 ಟಿಪ್ಸ್

By Web DeskFirst Published Oct 22, 2016, 6:35 PM IST
Highlights

ದೇಶದ ಐದು ಪ್ರಮುಖ ಬ್ಯಾಂಕುಗಳ 32 ಲಕ್ಷ ಕ್ರೆಡಿಟ್‌, ಡೆಬಿಟ್‌ ಕಾರ್ಡ್‌ಗಳ ಸುರಕ್ಷತಾ ಕವಚವನ್ನು ಛೇದಿಸಿರುವ ಪ್ರಕರಣ ದೇಶದಲ್ಲಿ ಆತಂಕದ ವಾತಾವರಣವನ್ನು ಸೃಷ್ಟಿಸಿದೆ. ಕಾರ್ಡ್‌ಗಳ ಮೂಲಕ ಮಾಡುವ ವಹಿವಾಟು ಎಷ್ಟುಸುರಕ್ಷಿತ ಎಂಬ ಪ್ರಶ್ನೆಯನ್ನೂ ಇದು ಹುಟ್ಟು ಹಾಕಿದೆ. ಈ ಹಿನ್ನೆಲೆಯಲ್ಲಿ ಎಟಿಎಂ ಕಾರ್ಡ್ ಸುರಕ್ಷಿತವಾಗಿಡುವ 10 ಟಿಪ್ಸ್ ಇಲ್ಲಿದೆ ನೋಡಿ.

1) ಬ್ಯಾಂಕಿನಲ್ಲಿ ಮೊಬೈಲ್ ಮತ್ತು ನಿಮ್ಮ ಇಮೇಲ್‌ ಐಡಿಯನ್ನು ನೋಂದಾಯಿಸಿ. ಆರ್‌ಬಿಐ ಮಾರ್ಗಸೂಚಿಯಂತೆ ನಿಮ್ಮ ಖಾತೆಯ ವಹಿವಾಟು ಮಾಹಿತಿಯನ್ನು ಬ್ಯಾಂಕುಗಳು ನಿಮ್ಮ ಮೊಬೈಲ್ ಅಥವಾ ಇಮೇಲ್‌ಗೆ ರವಾನಿಸಬೇಕು.

2) ಬ್ಯಾಂಕುಗಳು ರವಾನಿಸುವ ಯಾವುದೇ ಎಸ್‌ಎಂಎಸ್‌ ಅಥವಾ ಇಮೇಲ್‌ ಅನ್ನು ನಿರ್ಲಕ್ಷಿಸಬೇಡಿ. ಅದನ್ನು ಓದಿ. ಏಕೆಂದರೆ ಅದರಲ್ಲಿ ನಿಮ್ಮ ಖಾತೆಯಲ್ಲಿ ನಡೆದಿರುವ ವಹಿವಾಟಿನ ಮಾಹಿತಿ ಇರಬಹುದು. ನಿಮಗರಿವಿಲ್ಲದಂತೆ ವಹಿವಾಟು ನಡೆದಿದ್ದು ನಿಮಗೆ ಗೊತ್ತಾದ ತಕ್ಷಣವೇ ಬ್ಯಾಂಕ್‌ ಸಿಬ್ಬಂದಿ ಗಮನಕ್ಕೆ ತನ್ನಿ. ಒಂದು ವೇಳೆ ನಿಮ್ಮ ಖಾತೆಯಿಂದ ಹಣ ವರ್ಗಾವಣೆಯಾಗಿದ್ದರೆ, ಅದನ್ನು ಪತ್ತೆ ಹಚ್ಚಿ ವಾಪಸು ಪಡೆಯಲು ಬ್ಯಾಂಕುಗಳಿಗೂ ಸಾಧ್ಯವಾಗುತ್ತದೆ.

Latest Videos


3) ಎಟಿಎಂ ಪಿನ್‌ ಸೇರಿದಂತೆ ಬ್ಯಾಂಕ್‌ ಖಾತೆಗೆ ಸಂಬಂಧಿಸಿದ ಖಾಸಗಿ ಮಾಹಿತಿಯನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ನಮ್ಮಿಂದಾದ ಲೋಪದಿಂದ ನಷ್ಟವಾದರೆ ಬ್ಯಾಂಕ್‌ ತುಂಬಿಕೊಡುವುದಿಲ್ಲ.


4) ನಿಮ್ಮ ಕ್ರೆಡಿಟ್‌, ಡೆಬಿಟ್‌ ಕಾರ್ಡ್‌ ಪಿನ್‌ ಯಾವಾಗಲೂ ಬದಲಾಯಿಸುತ್ತಿರಿ. ಇದರಿಂದ ಯಾವುದೋ ಹಂತದಲ್ಲಿ ಪಿನ್‌ ಸೋರಿಕೆಯಾಗಿದ್ದರೂ ನಷ್ಟತಡೆಗಟ್ಟಬಹುದು.


5) ಎಟಿಎಂನಲ್ಲಿ ಹಣ ಪಡೆದ ನಂತರ ಬರುವ ರಸೀದಿಯನ್ನು ಅಲ್ಲಿಯೇ ಇರುವ ಕಸದ ಬುಟ್ಟಿಗೆ ಅಥವಾ ಯಾರ ಕೈಗೋ ಸಿಗುವಂತೆ ಎಸೆಯಬೇಡಿ. ಅಷ್ಟಕ್ಕೂ ವಹಿವಾಟು ನಡೆದ ತಕ್ಷಣವೇ ಎಸ್‌ಎಂಎಸ್‌ ಬರುವುದರಿಂದ ರಸೀದಿ ಅಗತ್ಯವೇ ಇಲ್ಲ. 


6) ಎಲ್ಲೇ ಆಗಲೀ ಪಿನ್‌ ನಂಬರ್‌ ದಾಖಲಿಸುವಾಗ ಕೈಯಿಂದ ಮರೆಮಾಡಿ. ಇದರಿಂದ ಪಿನ್‌ ಬೇರೆಯವರಿಗೆ ಗೊತ್ತಾಗುವುದನ್ನು ಅಥವಾ ಕ್ಯಾಮೆರಾಗಳಲ್ಲಿ ದಾಖಲಾಗುವುದನ್ನು ತಡೆಯಬಹುದು.


7) ಡೆಬಿಟ್‌ ಕಾರ್ಡ್‌ ಬೇರೆಯವರ ಕೈಗೆ ನೀಡಬೇಡಿ. ನಿಮ್ಮ ಕಾರ್ಡ್‌ ಮಾಹಿತಿಯನ್ನು ಕದ್ದು ಡಮ್ಮಿ ಕಾರ್ಡ್‌ ಮೂಲಕ ಹಣ ಲಪಟಾಯಿಸುವ ಸಾಧ್ಯತೆ ಇದೆ. ಕಾರ್ಡ್‌ ಕೊಡುವುದೇ ತಪ್ಪು. ಇನ್ನು ಪಿನ್‌ ಹೇಳಿದರೆ ಅದಕ್ಕಿಂತ ದೊಡ್ಡ ಅಪಾಯ ಬೇರೆ ಇಲ್ಲ.


8) ಪ್ರತಿಬಾರಿ ಪಾವತಿಗೆ ಕಾರ್ಡ್‌ ಕೊಟ್ಟು ಮರಳಿ ಪಡೆಯುವಾಗ ಅದು ನಿಮ್ಮದೇ ಕಾರ್ಡ್‌ ಎಂಬುದನ್ನು ಖಚಿತಪಡಿಸಿಕೊಳ್ಳಿ. ಹಾಗೆಯೇ ಒಟಿಪಿ ಇಲ್ಲದ ಆನ್‌ಲೈನ್‌ ವಹಿವಾಟು ಅಪಾಯಕಾರಿ.


9) ಎಟಿಎಂನಲ್ಲಿ ನೀವು ಕಾರ್ಡ್‌ ಬಳಸಿ ನಗದು ಪಡೆದಾಗ, ವ್ಯವಹಾರ ಪೂರ್ಣಗೊಂಡಿದೆ ಎಂಬ ಸಂದೇಶ ಬರುವವರೆಗೂ ಕಾಯಬೇಕು. ಒಂದು ವೇಳೆ ಆ ಸಂದೇಶ ಬಾರದೇ ಇದ್ದಾಗ ತಕ್ಷಣವೇ ಬ್ಯಾಂಕ್‌ ಸಿಬ್ಬಂದಿಗೆ ಕರೆ ಮಾಡಿ ಟ್ರಾನ್ಸಾಕ್ಷನ್‌ ಪೂರ್ಣಗೊಳ್ಳುವಂತೆ ನೋಡಿಕೊಳ್ಳಬೇಕು. 
10) ಎಟಿಎಂ ಕ್ಯಾಮೆರಾಗಳೂ ಸುರಕ್ಷಿತವಲ್ಲ. ಆ ಕ್ಯಾಮೆರಾಗಳಿಗೆ ನಿಮ್ಮ ಪಿನ್‌ ದಾಖಲಾಗದಂತೆ ಕೈಮರೆ ಮಾಡಿ ವಹಿವಾಟು ನಡೆಸಬೇಕು. 

--
(ರೇಣುಕಾಪ್ರಸಾದ್‌ ಹಾಡ್ಯ- ಕನ್ನಡ ಪ್ರಭ)
 

click me!