ಅಕ್ರಮ ಆಸ್ತಿ ಪ್ರಕರಣ: ಜಮೀರ್‌ಗೆ 3 ತಾಸು ಎಸಿಬಿ ಡ್ರಿಲ್‌

By Kannadaprabha NewsFirst Published Aug 7, 2022, 5:40 AM IST
Highlights

ಅಕ್ರಮ ಆಸ್ತಿ ಕೇಸ್‌: ಸಿದ್ದು ಆಪ್ತ ಶಾಸಕಗೆ ವಿಚಾರಣೆ ಬಿಸಿ, ಮತ್ತಷ್ಟು ದಾಖಲೆಗಳ ಜತೆ ವಿಚಾರಣೆಗೆ ಬರಲು ಸೂಚನೆ

ಬೆಂಗಳೂರು(ಆ.07):  ಅಕ್ರಮ ಆಸ್ತಿ ಪ್ರಕರಣ ಸಂಬಂಧ ಚಾಮರಾಜಪೇಟೆ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಹಾಗೂ ಮಾಜಿ ಸಚಿವ ಜಮೀರ್‌ ಅಹಮ್ಮದ್‌ ಖಾನ್‌ ಅವರನ್ನು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ವು ಶನಿವಾರ ಸುದೀರ್ಘ ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿಕೊಂಡಿದೆ. ನೋಟಿಸ್‌ ಹಿನ್ನೆಲೆಯಲ್ಲಿ ರೇಸ್‌ಕೋರ್ಸ್‌ ರಸ್ತೆಯ ಖನಿಜ ಭವನದಲ್ಲಿರುವ ಎಸಿಬಿ ಕಚೇರಿಯ ತನಿಖಾಧಿಕಾರಿ ಮುಂದೆ ಶಾಸಕ ಜಮೀರ್‌ ಹಾಜರಾದರು. ಬಳಿಕ ಮೂರು ತಾಸುಗಳ ಕಾಲ ಅಕ್ರಮ ಆಸ್ತಿ ಸಂಪಾದನೆ ಕುರಿತು ಪ್ರಶ್ನಿಸಿದ ಅಧಿಕಾರಿಗಳು, ಮತ್ತೆ ಕೆಲ ದಾಖಲೆಗಳ ಸಮೇತ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ಕಳುಹಿಸಿದ್ದಾರೆ. ವಿಚಾರಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಜಮೀರ್‌ ಅಹಮ್ಮದ್‌, ನಾನು ಎಸಿಬಿ ತನಿಖೆಗೆ ಸಂಪೂರ್ಣವಾಗಿ ಸಹಕರಿಸುತ್ತೇನೆ. ಈಗಾಗಲೇ ಇದೇ ಆರೋಪದ ಸಂಬಂಧ ಜಾರಿ ನಿರ್ದೇಶನಾಲಯ (ಇ.ಡಿ.)ಕ್ಕೆ ಸಲ್ಲಿಸಿದ ದಾಖಲೆಗಳನ್ನೇ ಎಸಿಬಿಗೂ ಕೂಡಾ ಕೊಟ್ಟಿದ್ದೇನೆ ಎಂದು ಸ್ಪಷ್ಟಪಡಿಸಿದರು.

ನಾನು ಯಾವುದೇ ತಪ್ಪು ಮಾಡಿಲ್ಲ. ಅಕ್ರಮವಾಗಿ ಆಸ್ತಿ ಸಂಪಾದನೆ ಮಾಡಿದ್ದೇನೆ ಎಂಬುದು ಸತ್ಯಕ್ಕೆ ದೂರವಾದ ಆರೋಪವಾಗಿದೆ. ಪ್ರಕರಣದ ಕುರಿತು ಕೇಳಿದ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಿದ್ದೇನೆ. ಕೆಲ ಮಾಹಿತಿಗಳನ್ನು ಅಧಿಕಾರಿಗಳು ಕೇಳಿದ್ದಾರೆ. ಆ ಸಂಬಂಧ ದಾಖಲೆಗಳನ್ನು ಸಲ್ಲಿಸಲು ಸಮಯ ಪಡೆದಿದ್ದೇನೆ ಎಂದು ಹೇಳಿದರು.

ಜಮೀರ್‌ಗೆ ಸಾಲ ಕೊಟ್ಟು ಸಂಕಷ್ಟಕ್ಕೆ ಸಿಲುಕಿದ ಕಾಂಗ್ರೆಸ್‌ ನಾಯಕ ಕೆಜಿಎಫ್ ಬಾಬು!

ಇತ್ತೀಚೆಗೆ ಇ.ಡಿ. ವರದಿ ಆಧರಿಸಿ ಎಸಿಬಿ, ಜಮೀರ್‌ ವಿರುದ್ಧ ಅಕ್ರಮ ಆಸ್ತಿ ಸಂಪಾದನೆ ಆರೋಪದ ಮೇರೆಗೆ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡಿದೆ. ಈ ಸಂಬಂಧ ಶಾಸಕರ ಮನೆ ಹಾಗೂ ಅವರಿಗೆ ಸೇರಿದ ಏಳು ಕಡೆ ದಾಳಿ ನಡೆಸಿ ದಾಖಲೆಗಳನ್ನು ಸಹ ಅಧಿಕಾರಿಗಳು ಜಪ್ತಿ ಮಾಡಿದ್ದರು. ಈ ದಾಖಲೆಗಳನ್ನು ಆಧರಿಸಿ ವಿಚಾರಣೆಗೆ ಹಾಜರಾಗುವಂತೆ ಎರಡು ಬಾರಿ ಶಾಸಕರಿಗೆ ಎಸಿಬಿ ಅಧಿಕಾರಿಗಳು ನೋಟಿಸ್‌ ಜಾರಿಗೊಳಿಸಿದ್ದರು. ಆಗ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಟ್ಟಹಬ್ಬದ ಆಚರಣೆ ಹಿನ್ನೆಲೆಯಲ್ಲಿ ಹಾಜರಾಗಲು ಸಮಯ ಕೇಳಿದ್ದ ಜಮೀರ್‌ ಅವರು, ಕೊನೆಗೆ ಶನಿವಾರ ತನಿಖಾಧಿಕಾರಿಗಳ ಮುಂದೆ ಹಾಜರಾಗಿ ಹೇಳಿಕೆ ದಾಖಲಿಸಿದ್ದಾರೆ.

ಕಂಟೋನ್ಮೆಂಟ್‌ ಪ್ರದೇಶದಲ್ಲಿ ಶಾಸಕ ಜಮೀರ್‌ ಅವರ ಕಟ್ಟಿಸಿರುವ ವೈಭವೋಪೇತ ಮನೆ ವಿಚಾರವಾಗಿ ಎಸಿಬಿ ಮಾಹಿತಿ ಕೇಳಿತ್ತು. ಈ ಮನೆಗೆ 80 ರು.ಗೂ ಕೋಟಿ ಅಧಿಕ ಮೊತ್ತ ವೆಚ್ಚ ಮಾಡಲಾಗಿದೆ ಎಂದು ಇ.ಡಿ. ಸಹ ವರದಿ ನೀಡಿತ್ತು. ಆದರೆ ಈ ಆರೋಪವನ್ನು ನಿರಾಕರಿಸಿರುವ ಜಮೀರ್‌, ಮನೆಗೆ ವ್ಯಯಿಸಲಾಗಿರುವ ಹಣಕಾಸಿನ ಕುರಿತು ದಾಖಲೆಗಳನ್ನು ಸಲ್ಲಿಸಿದ್ದಾರೆ. ಅಲ್ಲದೆ ವಿದೇಶದಿಂದ ಪೀಠೋಪಕರಣ ಹಾಗೂ ಮಾರ್ಬಲ್‌ ಕಲ್ಲಿನ ವೆಚ್ಚದ ಬಗ್ಗೆ ದಾಖಲೆ ಸಲ್ಲಿಸಲು ಅವರು ಸಮಯ ಕೇಳಿದ್ದಾರೆ ಎಂದು ತಿಳಿದು ಬಂದಿದೆ.

ನಾನು ಡಿಕೆಶಿ ಇಬ್ಬರೇ ಎಸಿಬಿಗೆ ಕಾಣೋದು

ಇದೇ ಆರೋಪದ ಸಂಬಂಧ ಇ.ಡಿ.ಗೆ ಸಲ್ಲಿಸಿದ ದಾಖಲೆಗಳನ್ನೇ ಎಸಿಬಿಗೂ ಕೊಟ್ಟಿದ್ದೇನೆ. ರಾಜ್ಯದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹಾಗೂ ಜಮೀರ್‌ ಮಾತ್ರ ಇ.ಡಿ., ಎಸಿಬಿ ಕಣ್ಣಿಗೆ ಬೀಳುವುದು ಅಂತ ಕಾಂಗ್ರೆಸ್‌ ಶಾಸಕ ಜಮೀರ್‌ ಅಹ್ಮದ್‌ ತಿಳಿಸಿದ್ದಾರೆ. 
 

click me!