ಶೀಘ್ರದಲ್ಲೇ ಬರಲಿದೆ ಹಳದಿ ಎಲೆ ರೋಗ ಮುಕ್ತ ಅಡಕೆ ಸಸಿ

Published : Feb 09, 2025, 11:07 AM IST
ಶೀಘ್ರದಲ್ಲೇ ಬರಲಿದೆ ಹಳದಿ ಎಲೆ ರೋಗ ಮುಕ್ತ ಅಡಕೆ ಸಸಿ

ಸಾರಾಂಶ

ಪ್ರಮುಖ ವಾಣಿಜ್ಯ ಬೆಳೆ ಅಡಕೆಗೆ ಕರಾವಳಿ ಹಾಗೂ ಮಲೆನಾಡು ಪ್ರದೇಶಗಳ ಅಲ್ಲಲ್ಲಿ ಹಳದಿ ಎಲೆ ರೋಗ ಬಾಧೆ ತಟ್ಟಿದೆ. ಕಳೆದ ಎರಡು ದಶಕಗಳಿಂದ ಅಡಕೆ ಮರಗಳ ಗರಿ ಹಳದಿ ಬಣ್ಣಕ್ಕೆ ತಿರುಗಿ ಕ್ರಮೇಣ ಸೊರಗುವುದು ಈ ರೋಗದ ಲಕ್ಷಣ. 

ಆತ್ಮಭೂಷಣ್‌

ಮಂಗಳೂರು (ಫೆ.09): ಹಳದಿ ಎಲೆ ರೋಗ ಪೀಡಿತ ಪ್ರದೇಶದ ಆಯ್ದ ರೋಗಮುಕ್ತ ಅಡಕೆ ತಳಿಯಿಂದ ಟಿಶ್ಯೂ(ಅಂಗಾಂಶ ಕಸಿ) ಸಸಿಯನ್ನು ಅಭಿವೃದ್ಧಿಪಡಿಸುವಲ್ಲಿ ಕಾಸರಗೋಡಿನ ಕೇಂದ್ರೀಯ ತೋಟಗಾರಿಕಾ ಬೆಳೆಗಳ ಸಂಶೋಧನಾ ಸಂಸ್ಥೆ(ಸಿಪಿಸಿಆರ್‌ಐ) ಯಶಸ್ವಿಯಾಗಿದೆ. ಇದರಿಂದಾಗಿ ಭವಿಷ್ಯದಲ್ಲಿ ಹಳದಿ ಎಲೆ ರೋಗ ಪೀಡಿತ ಪ್ರದೇಶಗಳಲ್ಲಿ ರೋಗ ನಿರೋಧಕ ತಳಿ ಅಡಕೆ ಬೆಳೆಯಲು ಒತ್ತು ನೀಡಲು ಸಾಧ್ಯವಾಗಲಿದೆ.

ಪ್ರಮುಖ ವಾಣಿಜ್ಯ ಬೆಳೆ ಅಡಕೆಗೆ ಕರಾವಳಿ ಹಾಗೂ ಮಲೆನಾಡು ಪ್ರದೇಶಗಳ ಅಲ್ಲಲ್ಲಿ ಹಳದಿ ಎಲೆ ರೋಗ ಬಾಧೆ ತಟ್ಟಿದೆ. ಕಳೆದ ಎರಡು ದಶಕಗಳಿಂದ ಅಡಕೆ ಮರಗಳ ಗರಿ ಹಳದಿ ಬಣ್ಣಕ್ಕೆ ತಿರುಗಿ ಕ್ರಮೇಣ ಸೊರಗುವುದು ಈ ರೋಗದ ಲಕ್ಷಣ. ಇದರಿಂದಾಗಿ ಅಡಕೆ ಇಳುವರಿಯೂ ಇಲ್ಲದೆ, ಮರವನ್ನೂ ಕಳೆದುಕೊಳ್ಳಬೇಕಾಗುತ್ತದೆ. ಈ ರೋಗ ನಿವಾರಣೆಗೆ ಯಾವುದೇ ಔಷಧ ಇದುವರೆಗೂ ಕಂಡುಹಿಡಿಯಲು ಕೃಷಿ ವಿಜ್ಞಾನಿಗಳಿಗೆ ಸಾಧ್ಯವಾಗಿಲ್ಲ. ಹೀಗಾಗಿ ಹಳದಿ ಎಲೆ ರೋಗ ಪೀಡಿತ ಪ್ರದೇಶಗಳಲ್ಲಿ ಪರ್ಯಾಯ ಬೆಳೆಗೆ ಒತ್ತು ನೀಡಲು ಕೃಷಿ ವಿಜ್ಞಾನಿಗಳು, ತೋಟಗಾರಿಕಾ ಅಧಿಕಾರಿಗಳು ಉತ್ತೇಜನ ನೀಡುತ್ತಿದ್ದಾರೆ.

ಏರ್‌ಶೋನಲ್ಲಿ ಅಮೆರಿಕದ ಎಫ್‌ - 35, ರಷ್ಯಾದ ಎಸ್‌ಯು-35 ಯುದ್ಧ ವಿಮಾನ ಆಕರ್ಷಣೆ

ರೋಗಮುಕ್ತ ಟಿಶ್ಯೂ ಕಸಿ ಅಭಿವೃದ್ಧಿ: ಹಳದಿ ಎಲೆ ರೋಗ ಪೀಡಿತ ಪ್ರದೇಶಗಳ ಪೈಕಿ ಸುಳ್ಯದಲ್ಲಿ ಟಿಶ್ಯೂ ಸಸಿ ಅಭಿವೃದ್ಧಿಪಡಿಸುವ ಸಂಶೋಧನೆಗೆ ಕೃಷಿ ವಿಜ್ಞಾನಿಗಳು ಕೈಹಾಕಿ ಯಶಸ್ವಿಯಾಗಿದ್ದಾರೆ. ಸುಳ್ಯ ಪ್ರದೇಶದ ಹಳದಿ ಎಲೆ ರೋಗ ಪೀಡಿತ ಅಡಕೆ ತೋಟಗಳಲ್ಲಿ ರೋಗ ರಹಿತ ಅಡಕೆ ಮರವನ್ನು ಆಯ್ದುಕೊಂಡು ಈ ಪ್ರಯೋಗ ನಡೆಸಿದ್ದಾರೆ. ಅಂತಹ ಅಡಕೆ ಮರದ ಸಿಂಗಾರದ ಹೂವನ್ನು ಬಳಸಿಕೊಂಡು ಕಾಸರಗೋಡಿನ ಸಿಪಿಸಿಆರ್‌ಐ ಕೃಷಿ ಪ್ರಯೋಗ ಶಾಲೆಯಲ್ಲಿ ಅಂಗಾಂಶ ಕಸಿ ಕಟ್ಟಿದ್ದಾರೆ. ತಂತ್ರಜ್ಞಾನದಲ್ಲಿ ಹಂತ ಹಂತವಾಗಿ ಅಂಗಾಂಶ ಕಸಿ ಮಾಡಿ ಗಿಡವನ್ನು ಅಭಿವೃದ್ಧಿಪಡಿಸುವಲ್ಲಿ ಯಶಸ್ಸು ಕಂಡಿದ್ದಾರೆ. ಈಗ ಸಿಪಿಸಿಆರ್‌ಐನಲ್ಲಿ ಕಸಿ ಮಾಡಿದ ನೂರು ಅಡಕೆ ಗಿಡಗಳು ಪಾಲಿ ಹೌಸ್‌ ಮಾದರಿಯಲ್ಲಿ ಬೆಳೆಯತೊಡಗಿದೆ. 

ಅಡಕೆ ಮರದ ಸಿಂಗಾರದ ಹೂವಿನಿಂದ ಸಾವಿರಾರು ಇಂತಹ ಗಿಡಗಳನ್ನು ಕಸಿ ಕಟ್ಟಿ ಅಭಿವೃದ್ಧಿಪಡಿಸಲು ಸಾಧ್ಯವಿದೆ ಎಂಬುದನ್ನು ಕೃಷಿ ವಿಜ್ಞಾನಿಗಳು ತೋರಿಸಿಕೊಟ್ಟಿದ್ದಾರೆ. ಆರಂಭದಲ್ಲಿ ಹಳದಿ ಎಲೆ ರೋಗ ಪೀಡಿತ ಪ್ರದೇಶದಲ್ಲಿ ರೋಗ ರಹಿತ ಹಾಗೂ ಅಧಿಕ ಫಸಲು ನೀಡುವ ಅಡಕೆ ಮರವನ್ನು ಆಯ್ಕೆ ಮಾಡಿ, ಅದರ ಹಿಂಗಾರದ ಹೂವನ್ನೇ ಕಸಿ ಕಟ್ಟುವ ಪ್ರಯೋಗಕ್ಕೆ ಬಳಕೆ ಮಾಡಲಾಗಿದೆ. ಈ ತಂತ್ರಜ್ಞಾನದ ಪೇಟೆಂಟ್‌ ಪಡೆಯಲು ಸಿಪಿಸಿಆರ್‌ಐ ಅರ್ಜಿ ಸಲ್ಲಿಸಿದೆ. ಪೇಟೆಂಟ್‌ ದೊರೆತ ಬಳಿಕ ಈ ತಂತ್ರಜ್ಞಾನದಲ್ಲಿ ಅಂಗಾಂಶ ಕಸಿ ಕಟ್ಟಿ ಅಡಕೆ ಸಸಿ ಅಭಿವೃದ್ಧಿಪಡಿಸಲು ಬೆಳೆಗಾರರಿಗೆ ಸಿಪಿಸಿಆರ್‌ಐ ತರಬೇತು ನೀಡಲಿದೆ. ಈ ರೋಗ ರಹಿತ ಅಡಕೆ ಗಿಡಗಳು ನಾಲ್ಕೈದು ವರ್ಷಗಳಲ್ಲಿ ಫಸಲು ನೀಡಲಿದೆ. ಉತ್ತಮ ಇಳುವರಿಯ ಗಿಡವನ್ನೇ ಸಿದ್ಧಪಡಿಸಲಾಗುತ್ತಿದೆ ಎನ್ನುತ್ತಾರೆ ಸಿಪಿಸಿಆರ್‌ಐ ಕೃಷಿ ವಿಜ್ಞಾನಿಗಳು.

ಕುಬ್ಜ ಅಡಕೆ ತಳಿಯೂ ಅಭಿವೃದ್ಧಿ: ನೆಲದಿಂದಲೇ ಕೊಯ್ಯಬಹುದಾದ ಕುಬ್ಜ (ಡಾರ್ಫ್‌) ಅಡಕೆ ತಳಿಯನ್ನು ಸಿಪಿಸಿಆರ್‌ಐ ಪ್ರತ್ಯೇಕವಾಗಿ ಅಭಿವೃದ್ಧಿಪಡಿಸಿದೆ. ಪ್ರಸಕ್ತ ಇದರಲ್ಲಿ ನೂರು ಸಸಿಗಳಿದ್ದು, ಎರಡು ವರ್ಷಗಳಲ್ಲಿ ಫಸಲು ನೀಡಲು ಆರಂಭವಾಗುತ್ತದೆ. ಯಾವ ಸಸಿಯಲ್ಲಿ ಉತ್ತಮ ಫಸಲು ಸಿಗುತ್ತದೆ ಎಂಬುದನ್ನು ಆಧರಿಸಿ ಅದೇ ತಳಿಯ ಸಸಿಯನ್ನು ಇನ್ನಷ್ಟು ಅಭಿವೃದ್ಧಿಪಡಿಸಲಾಗುವುದು. ಇದರ ತಂತ್ರಜ್ಞಾನವನ್ನು ಬೆಳೆಗಾರರಿಗೆ ನೀಡಲು ಸಿಪಿಸಿಆರ್‌ಐ ಉದ್ದೇಶಿಸಿದೆ. ಈ ತಳಿಯನ್ನು ಬೆಳೆಸಿದರೆ, ಅಡಕೆ ಕೊಯ್ಯಲು ಹಾಗೂ ಔಷಧ ಸಿಂಪರಣೆಗೆ ಕಾರ್ಮಿಕರೇ ಬೇಕಾಗಿಲ್ಲ. ಬೆಳೆಗಾರರೇ ನೆಲದಿಂದಲೇ ಸುಲಭವಾಗಿ ನಿರ್ವಹಿಸಬಹುದು. ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಅಡಕೆ ಫಸಲು ಪಡೆಯಲು ಸಾಧ್ಯವಿದೆ ಎನ್ನುತ್ತಾರೆ ಕೃಷಿ ವಿಜ್ಞಾನಿಗಳು.

ಅಡಕೆ ಫಸಲಿಗೆ ಭಾರಿ ಹೊಡೆತ: ಶೇ.50ರಷ್ಟು ಉತ್ಪಾದನೆಯೇ ಇಲ್ಲ!

ಹಳದಿ ಎಲೆ ರೋಗ ಪೀಡಿತ ಪ್ರದೇಶಗಳ ಅಡಕೆ ತೋಟಗಳ ಪೈಕಿ ರೋಗ ರಹಿತ ಅಡಕೆ ಮರದ ಹಿಂಗಾರದ ಹೂವಿನಿಂದ ಮಾಡಿದ ಅಂಗಾಂಶ ಕಸಿ ಯಶಸ್ವಿಯಾಗಿದೆ. ಇದನ್ನು ಇನ್ನೂ ಅಭಿವೃದ್ಧಿಪಡಿಸಲಾಗುತ್ತಿದೆ. ಇದಲ್ಲದೆ ಕುಬ್ಜ ಗಿಡದ ಹೈಬ್ರೀಡ್‌ ಅಡಕೆ ತಳಿಯನ್ನೂ ಅಭಿವೃದ್ಧಿಪಡಿಸಲಾಗಿದೆ. ಇದು ಕೂಡ ಬೆಳೆಗಾರರಿಗೆ ಉತ್ತಮ ಇಳುವರಿಯನ್ನು ನೀಡಬಲ್ಲದು.
-ಡಾ.ಕೆ.ಬಿ.ಹೆಬ್ಬಾರ್‌, ನಿರ್ದೇಶಕರು, ಸಿಪಿಸಿಆರ್‌ಐ ಕಾಸರಗೋಡು

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ
ಕರ್ನಾಟಕದಲ್ಲಿ ಶೇ.63 ಭ್ರಷ್ಟಾಚಾರ: ಸಿಬಿಐ ತನಿಖೆಗೆ ಒತ್ತಾಯಿಸಿದ ಆರ್‌.ಅಶೋಕ್‌