ಕರಾವಳಿಯ ಜನಪ್ರಿಯ ಕಲೆ ಯಕ್ಷಗಾನ ಥೀಮ್‌ ಮೊದಲ ಅಂಚೆ ಚೀಟಿ ಬಿಡುಗಡೆಗೆ ಸಿದ್ಧ!

By Kannadaprabha News  |  First Published Jan 8, 2024, 6:36 AM IST

ಮೊದಲ ಬಾರಿಗೆ ಕರಾವಳಿಯ ಜನಪ್ರಿಯ ಕಲೆ ಯಕ್ಷಗಾನಕ್ಕೆ ಕೇಂದ್ರ ಸರ್ಕಾರದ ರಾಷ್ಟ್ರೀಯ ಮನ್ನಣೆ ಲಭಿಸುತ್ತಿದೆ. ಯಕ್ಷಗಾನ ಥೀಮ್‌ ಹೊಂದಿರುವ ವಿಶೇಷ ಅಂಚೆ ಚೀಟಿಯನ್ನು ಕೇಂದ್ರ ಸರ್ಕಾರ ಹೊರತರುತ್ತಿದ್ದು ಜ.25ರಂದು ಮಂಗಳೂರಿನಲ್ಲಿ ಬಿಡುಗಡೆಗೊಳ್ಳಲಿದೆ.


ಆತ್ಮಭೂಷಣ್‌

ಮಂಗಳೂರು (ಜ.8) : ಮೊದಲ ಬಾರಿಗೆ ಕರಾವಳಿಯ ಜನಪ್ರಿಯ ಕಲೆ ಯಕ್ಷಗಾನಕ್ಕೆ ಕೇಂದ್ರ ಸರ್ಕಾರದ ರಾಷ್ಟ್ರೀಯ ಮನ್ನಣೆ ಲಭಿಸುತ್ತಿದೆ. ಯಕ್ಷಗಾನ ಥೀಮ್‌ ಹೊಂದಿರುವ ವಿಶೇಷ ಅಂಚೆ ಚೀಟಿಯನ್ನು ಕೇಂದ್ರ ಸರ್ಕಾರ ಹೊರತರುತ್ತಿದ್ದು ಜ.25ರಂದು ಮಂಗಳೂರಿನಲ್ಲಿ ಬಿಡುಗಡೆಗೊಳ್ಳಲಿದೆ.

Tap to resize

Latest Videos

ಗಣ್ಯರ ಅಂಚೆ ಚೀಟಿ ಮಾತ್ರವಲ್ಲ ಜಾನಪದ, ಶಾಸ್ತ್ರೀಯ ಕಲೆಗಳ ಅಂಚೆ ಚೀಟಿಯನ್ನು ಮುದ್ರಿಸಿ ಹೊರತರುವ ಮೂಲಕ ಅಂಚೆ ಇಲಾಖೆ ವಿಶೇಷ ಮನ್ನಣೆ ನೀಡುತ್ತಿರುವುದು ಗೊತ್ತೇ ಇದೆ. ಈಗಾಗಲೇ ಕೂಚಿಪುಡಿ, ಭರತನಾಟ್ಯವೇ ಮೊದಲಾದ ಕಲೆಗಳ ಬಗ್ಗೆ ಅಂಚೆ ಚೀಟಿ ಬಿಡುಗಡೆಯಾಗಿದೆ. ಗತಿಸಿದ ಹೋದ ಯಕ್ಷಗಾನ ಕವಿ ನಂದಳಿಕೆ ಮುದ್ದಣ್ಣ(ಲಕ್ಷ್ಮೀನಾರಾಯಣಪ್ಪ)ನ ಅಂಚೆ ಚೀಟಿ 2017ರಲ್ಲಿ ಹೊರಬಂದಿತ್ತು. 2023ರ ಡಿಸೆಂಬರ್‌ನಲ್ಲಿ ಮಂಗಳೂರಿನ ಉಳ್ಳಾಲದಲ್ಲಿ ಪೋರ್ಚುಗೀಸರ ವಿರುದ್ಧ ಹೋರಾಡಿದ ಧೀರ ವನಿತೆ ವೀರ ರಾಣಿ ಅಬ್ಬಕ್ಕ ದೇವಿ ಹೆಸರಿನ ಅಂಚೆ ಚೀಟಿಯೂ ಬಿಡುಗಡೆಗೊಂಡಿದೆ.

ಉತ್ತರಕನ್ನಡ: ಅಟ್ಟಣಿಗೆ ಯಕ್ಷಗಾನ, 8 ವೇದಿಕೆಗಳಲ್ಲಿ ನಡೆದ "ಜಲಂಧರ ಕಾಳಗ" ಪ್ರಸಂಗ

ಯಕ್ಷಗಾನ ಮೇರು ಕಲಾವಿದರಾದ ಕರಾವಳಿ ಮೂಲದ ಕೆರೆಮನೆ ಶಿವರಾಮ ಹೆಗಡೆ, ಕೆರೆಮನೆ ಶಂಭು ಹೆಗಡೆ ಇವರ ಕುರಿತ ಅಂಚೆ ಚೀಟಿಗಳು ಹೊರಬಂದಿವೆ. ಆದರೆ ಯಕ್ಷಗಾನ ಥೀಮ್‌ ಬಗ್ಗೆ ಅಂಚೆ ಚೀಟಿ ಇದುವರೆಗೆ ಬಂದಿರಲಿಲ್ಲ.

ಸಂಸದ ನಳಿನ್‌ ಕುಮಾರ್‌ ಪ್ರಯತ್ನ:

ಯಕ್ಷಗಾನಕ್ಕೆ ರಾಷ್ಟ್ರೀಯ ಮನ್ನಣೆ ನೀಡಬೇಕು ಎಂಬ ಆಶಯದಲ್ಲಿ ದ.ಕ. ಸಂಸದ ನಳಿನ್‌ ಕುಮಾರ್‌ ಕಟೀಲ್‌ ಕಳೆದ ಮೂರು ವರ್ಷಗಳಿಂದ ಪ್ರಯತ್ನ ನಡೆಸುತ್ತಿದ್ದರು. ಈ ಹಿಂದೆ ವಿಶೇಷ ಅಂಚೆ ಚೀಟಿಗಳನ್ನು ಅಂಚೆ ಇಲಾಖೆಯೇ ತನ್ನದೇ ಅನುದಾನದಲ್ಲಿ ಹೊರತರುತ್ತಿತ್ತು. ಆದರೆ ಈಗ ಅನುದಾನದ ಅಲಭ್ಯತೆ ಕಾರಣದಿಂದ ಹೊರಗಿನಿಂದ ಅನುದಾನ ನೀಡಿದರೆ ಮಾತ್ರ ವಿಶೇಷ ಅಂಚೆ ಚೀಟಿ ಹೊರತರಲು ಸಾಧ್ಯವಾಗುತ್ತದೆ. ಹೀಗಾಗಿ ಯಕ್ಷಗಾನ ಥೀಮ್‌ ಅಂಚೆ ಚೀಟಿ ಕೂಡ ಹೊರಗಿನ ಅನುದಾನದಿಂದ ಹೊರಬರುತ್ತಿದೆ.

5 ಲಕ್ಷ ಅಂಚೆ ಚೀಟಿ: ನಳನ್‌ ಕೋರಿಕೆ ಮೇರೆಗೆ ಕೇಂದ್ರ ಸ್ವಾಮ್ಯದ ಮಂಗಳೂರು ರಿಫೈನರಿ ಅಂಡ್‌ ಪೆಟ್ರೋಕೆಮಿಕಲ್‌ ಲಿಮಿಟೆಡ್‌ (ಎಂಆರ್‌ಪಿಎಲ್‌) ಅಂಚೆಚೀಟಿ ಪ್ರಾಯೋಜನೆ ವಹಿಸಿಕೊಂಡಿದೆ. ಸುಮಾರು 5.36 ಲಕ್ಷ ರು. ಮೊತ್ತವನ್ನು ಅಂಚೆ ಇಲಾಖೆಗೆ ಬಿಡುಗಡೆಗೊಳಿಸಿದೆ. ಈ ಮೊತ್ತದಲ್ಲಿ ಸುಮಾರು 5 ಲಕ್ಷದಷ್ಟು ಯಕ್ಷಗಾನ ಥೀಮ್‌ನ ಅಂಚೆ ಚೀಟಿ ಮುದ್ರಣಗೊಂಡು ಹೊರಬರಲಿದೆ. ಪ್ರತಿ ಅಂಚೆ ಚೀಟಿ 5 ರು. ಮುಖಬೆಲೆಯನ್ನು ಹೊಂದಲಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.

ಯಕ್ಷಗಾನದ ರೇಖಾಚಿತ್ರ

ಯಕ್ಷಗಾನ ಥೀಮ್‌ನ ಈ ವಿಶೇಷ ಅಂಚೆ ಚೀಟಿಯಲ್ಲಿ ಯಕ್ಷಗಾನದ ರೇಖಾಚಿತ್ರ ಇರಲಿದೆ. ಇದರಲ್ಲಿ ಯಕ್ಷಗಾನದ ತೆಂಕು ಹಾಗೂ ಬಡಗು ಎರಡೂ ತಿಟ್ಟುಗಳಿಗೆ ಸಮಾನ ಪ್ರಾಧಾನ್ಯತೆ ನೀಡುವ ಸಲುವಾಗಿ ಎರಡೂ ತಿಟ್ಟುಗಳ ರೇಖಾಚಿತ್ರ ವಿನ್ಯಾಸವುಳ್ಳ ಚಿತ್ರವನ್ನು ಅಂಚೆ ಚೀಟಿಯಾಗಿ ರೂಪಿಸಲಾಗಿದೆ.

ಗರಿಷ್ಠ ಗೌರವ:

ಅಂಚೆ ಇಲಾಖೆಯಲ್ಲಿ ಮೂರು ವಿಧದ ಸ್ಟಾಂಪ್‌ ಸಿದ್ಧಪಡಿಸಲು ಅವಕಾಶ ಇದೆ. ಡೆಫಿನೆಟಿವ್‌ ಸ್ಟಾಂಪ್‌ ಎಂದರೆ ಹಾಲಿ ಅಂಚೆ ಕಚೇರಿಗಳಲ್ಲಿ ಕಾಗದ ಪತ್ರಗಳನ್ನು ಕಳುಹಿಸಲು ಉಪಯೋಗಿಸುವ ಮಾಮೂಲು ಸ್ಟಾಂಪ್‌. ಇನ್ನೊಂದು ಮೈ ಸ್ಟಾಂಪ್‌ ಎಂದರೆ, ವ್ಯಕ್ತಿಗತ ಅಂಚೆ ಚೀಟಿಗಳು. ಈ ಅಂಚೆ ಚೀಟಿ ಬೇಕಾದರೆ 300 ರು. ತೆತ್ತು ತನ್ನದೇ ವೈಯಕ್ತಿಕ ಚಿತ್ರವುಳ್ಳ 12 ಸ್ಟಾಂಪ್‌ನ್ನು ಪಡೆದುಕೊಳ್ಳಬಹುದು. ಕಮ್ಮೆಮೊರೇಟಿವ್‌ ಸ್ಟಾಂಪ್‌ ಎಂದರೆ, ಗಣ್ಯ ವ್ಯಕ್ತಿ ಅಥವಾ ವಿಶೇಷ ಸ್ಟಾಂಪ್‌ಗಳು. ಈ ಸ್ಟಾಂಪ್‌ಗಳನ್ನು ಮುದ್ರಿಸಲು ಕೇಂದ್ರ ಸರ್ಕಾರದ ಒಪ್ಪಿಗೆ ಸೂಚಿಸಬೇಕಾಗುತ್ತದೆ. ಅಲ್ಲದೆ ವಿನ್ಯಾಸ ಕೂಡ ಅಂಚೆ ಇಲಾಖೆಯ ಅನುಮೋದನೆ ಪಡೆಯಬೇಕಾಗುತ್ತದೆ.

ಒಂದು ಬಾರಿ ಮಾತ್ರ ಈ ವಿಶೇಷ ಅಂಚೆ ಚೀಟಿ ಮುದ್ರಣಗೊಳ್ಳುವುದು ಬಿಟ್ಟರೆ, ಮರು ಮುದ್ರಣಕ್ಕೆ ಇಲ್ಲಿ ಅವಕಾಶ ಇಲ್ಲ. ಈ ವಿಶೇಷ ಅಂಚೆ ಚೀಟಿ ಹೊರತರುವ ಮೂಲಕ ಕೇಂದ್ರ ಸರ್ಕಾರದ ಗರಿಷ್ಠ ಗೌರವಕ್ಕೆ ಪಾತ್ರವಾಗಿದೆ ಎಂದು ಅರ್ಥ. ಇಂತಹ ಅಂಚೆ ಚೀಟಿಗಳನ್ನು ಅಂಚೆ ಚೀಟಿ ಹಾಗೂ ನಾಣ್ಯ ಸಂಗ್ರಾಹಕರು ಪ್ರತ್ಯೇಕವಾಗಿ ಸಂಗ್ರಹಿಸುತ್ತಾರೆ. 

ವೈಷ್ಣೋದೇವಿ ಉತ್ಸವದಲ್ಲಿ ಮೊದಲ ಬಾರಿ ಯಕ್ಷಗಾನ ಪ್ರದರ್ಶನ!

ಯಕ್ಷಗಾನಕ್ಕೆ ಎಲ್ಲೆಡೆ ಗೌರವಾದರ ಸಿಗುತ್ತಿರುವಾಗ ಕೇಂದ್ರ ಸರ್ಕಾರದಿಂದ ಕೂಡ ರಾಷ್ಟ್ರೀಯ ಮನ್ನಣೆ ಸಿಗಬೇಕು ಎಂದು ಕಳೆದ ಮೂರು ವರ್ಷಗಳ ನಿರಂತರ ಪ್ರಯತ್ನದಿಂದ ಇದು ಸಾಧ್ಯವಾಗಿದೆ. ಜ.25ರಂದು ಯಕ್ಷಗಾನ ಥೀಮ್‌ ಅಂಚೆ ಚೀಟಿ ಬಿಡುಗಡೆಗೊಳ್ಳಲಿದೆ.

-ನಳಿನ್‌ ಕುಮಾರ್‌ ಕಟೀಲ್‌, ಸಂಸದ, ದ.ಕ.

click me!