
ಯಾದಗಿರಿ (ಮೇ.29): ರಾಜ್ಯಾದ್ಯಂತ ಮಕ್ಕಳು ಇಂದಿನಿಂದ ಶಾಲೆಗೆ ಹೋಗಲು ಆರಂಭಿಸಿದ್ದಾರೆ. ಆದರೆ, ಕನ್ನಡ ಶಾಲೆಗಳ ಪರಿಸ್ಥಿತಿ ಎಷ್ಟು ದಯನೀಯವಾಗಿದೆ ಅನ್ನೋದಕ್ಕೆ ಇಲ್ಲಿನ ವಿಡಿಯೋ ಸಾಕ್ಷಿಯಾಗಿದೆ. ಅದೂ ಸಚಿವ ಶರಣಬಸಪ್ಪ ದರ್ಶನಾಪುರ ಅವರ ಊರಿನ ಶಾಲೆಗಳೇ ಈ ರೀತಿಯ ಗತಿಯಾದ್ರೆ, ಇನ್ನು ಕುಗ್ರಾಮದಲ್ಲಿರುವ ಶಾಲೆಗಳ ಸ್ಥಿತಿ ಕೇಳೋದೇ ಬೇಡ.
ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ದರಿಯಾಪೂರ ಗ್ರಾಮದಲ್ಲಿರುವ ಕನ್ನಡ ಶಾಲೆ ನಿಜಕ್ಕೂ ಶಾಲೆಯ ಅಲ್ಲ. ಅಕ್ಷರಶಃ ಹಂದಿಗೂಡು. ಅಂಥ ಶಾಲೆಗೆ ವಿದ್ಯಾಭ್ಯಾಸಕ್ಕಾಗಿ ಮಕ್ಕಳು ಬರುತ್ತಿದ್ದಾರೆ. ಅಲ್ಲಿನ ಪರಿಸ್ಥಿತಿ ಎಷ್ಟು ಕೆಟ್ಟದಾಗಿದೆಯೆಂದರೆ, ವಿಡಿಯೋ ವೈರಲ್ ಆದ ಬೆನ್ನಲ್ಲಿಯೇ ಕರ್ನಾಟಕ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಸ್ವಯಂಪ್ರೇರಿತ ದೂರು ದಾಖಲಿಸಿದೆ.
'ಯಾದಗಿರಿ ಜಿಲ್ಲೆಯ ದರಿಯಾಪುರ ಗ್ರಾಮದಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಯ ಸುರಕ್ಷತೆ ಮತ್ತು ನೈರ್ಮಲ್ಯ ಸ್ಥಿತಿಯನ್ನು ಕಾಯ್ದುಕೊಳ್ಳದ ಕಾರಣ ಗುರುವಾರ ಶಾಲೆ ತೆರೆಯುವ ಮೊದಲ ದಿನದಂದು ಕರ್ನಾಟಕ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಸ್ವಯಂಪ್ರೇರಿತ ದೂರು ದಾಖಲಿಸಿದೆ' ಎಂದು ವರದಿಯಾಗಿದೆ.
ಬುಧವಾರ ಯಾದಗಿರಿ ಜಿಲ್ಲೆಯಾದ್ಯಂತ ಭಾರಿ ಮಳೆಯಾಗಿದ್ದು, ಗುರುವಾರ ಶಾಲೆ ಆರಂಭ ದಿನವೇ ವಿದ್ಯಾರ್ಥಿಗಳು ಆಘಾತಕ್ಕೆ ಒಳಗಾದರು. ಮಳೆ ನೀರು ಹಾಗೂ ಚರಂಡಿ ನೀರು ಸೀದಾ ಶಾಲೆಯ ಅವರಣಕ್ಕೆ ನುಗ್ಗಿತ್ತು.
ಇಂದು ಬೆಳಿಗ್ಗೆ ಶಾಲೆಗೆ ತೆರಳಿದ ವಿದ್ಯಾರ್ಥಿಗಳು ನೀರು ನೋಡಿ ಆಘಾತಪಟ್ಟಿದ್ದಾರೆ. ಚರಂಡಿ ನೀರಿನಿಂದ ಜಲಾವೃತಗೊಂಡ ಆವರಣದಲ್ಲೇ ವಿದ್ಯಾರ್ಥಿಗಳು ಓಡಾಟ ಮಾಡಿದ್ದಾರೆ.
ಡ್ರೈನೇಜ್ ತುಂಬಿ ಶಾಲಾ ಆವರಣಕ್ಕೆ ಒಳಚರಂಡಿ ನೀರು ನುಗ್ಗಿದ್ದರೆ, ಮೊಣಕಾಕಾಲುದ್ದ ನೀರಲ್ಲೇ ವಿದ್ಯಾರ್ಥಿಗಳು ಶಾಲೆಗೆ ಬಂದಿದ್ದಾರೆ. ಡ್ರೈನೇಜ್ ನಲ್ಲಿ ನೀರು ಪಾಸ್ ಆಗದೇ ಶಾಲಾ ನೀರು ನುಗ್ಗಿದೆ. ಡ್ರೈನೇಜ್ ಕ್ಲೀನ್ ಮಾಡದೇ ನಿರ್ಲಕ್ಷ್ಯ ವಹಿಸಿರುವ ಆಧಿಕಾರಿಗಳ ವಿರುದ್ದ ಗ್ರಾಮಸ್ಥರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದು ಇಲ್ಲಿನ ಶಾಲೆ ಮಾತ್ರವಲ್ಲ ಇಡೀ ಯಾದಗಿರಿ ಜಿಲ್ಲೆಯ ಪರಿಸ್ಥಿತಿಯೇ ಹೀಗಾಗಿದೆ. ಮಳೆಗೆ ಶಹಾಪುರ ನಗರ ಕೆರೆಯಂತಾಗಿದೆ. ಶಹಾಪುರ ನಗರದ ಹಲವು ರಸ್ತೆಗಳು ಸಂಪೂರ್ಣ ಜಲಾವೃತಗೊಂಡಿದೆ. ನಗರದ ಬಸವೇಶ್ವರ ವೃತ್ತದಲ್ಲಿ ಮಳೆ ನೀರು ತುಂಬಿದೆ. ಮಳೆ ನೀರಿನಲ್ಲಿ ಸಂಚಾರ ಮಾಡಲು ವಾಹನ ಸವಾರರ ಪರದಾಟ ಮಾಡಿದ್ದು, ಬಸವೇಶ್ವರ ವೃತ್ತದಲ್ಲಿ ಹಲವು ಅಂಗಡಿ-ಮುಂಗಟ್ಟುಗಳಿಗೆ ನೀರು ನುಗ್ಗಿದೆ.ಇದೇ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಶಾಸಕ ಶರಣಬಸಪ್ಪ ದರ್ಶನಾಪುರ ವಿರುದ್ಧ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ