
ಕಾರವಾರ : ಪ್ರಕೃತಿಪ್ರಿಯರು ಹಾಗೂ ಕೀಟ ಪ್ರೇಮಿಗಳಿಗೆ ಸಂತಸ ತರಿಸುವ ಘಟನೆಯೊಂದು ಕಾರವಾರ ತಾಲೂಕಿನ ಗುಡ್ಡೆಹಳ್ಳಿಯಲ್ಲಿ ನಡೆದಿದೆ. ಇಲ್ಲಿನ ಅರಣ್ಯ ಪ್ರದೇಶದಲ್ಲಿ ಪ್ರಪಂಚದ ಅತಿದೊಡ್ಡ ಪತಂಗ ಎಂದು ಪರಿಗಣಿಸಲ್ಪಡುವ “ಅಟ್ಲಾಸ್ ಮೋತ್” (Atlas Moth) ಪತ್ತೆಯಾಗಿದೆ. ಪತ್ರಕರ್ತ ರವಿ ಗೌಡ ಅವರು ಚಾರಣದ ನಿಮಿತ್ತ ಗುಡ್ಡೆಹಳ್ಳಿಯ ಕಾಡು ಪ್ರದೇಶಕ್ಕೆ ಭೇಟಿ ನೀಡಿದ ವೇಳೆ ಈ ಅಪರೂಪದ ಪತಂಗವನ್ನು ಗಮನಿಸಿದ್ದಾರೆ.
ಅಟ್ಲಾಸ್ ಮೋತ್ ಅಥವಾ Attacus atlas ಎಂಬ ವೈಜ್ಞಾನಿಕ ಹೆಸರಿನ ಈ ಪತಂಗವು ಪ್ರಪಂಚದಲ್ಲೇ ಅತ್ಯಂತ ದೊಡ್ಡ ಆಕಾರದ ಪತಂಗಗಳಲ್ಲಿ ಒಂದಾಗಿದೆ. ಇದರ ರೆಕ್ಕೆಗಳ ವಿಸ್ತೀರ್ಣ ಸುಮಾರು 24 ಸೆಂ.ಮೀ. ಗಳಷ್ಟು ಇದ್ದು, ರೆಕ್ಕೆಗಳ ಬಣ್ಣ ಮತ್ತು ವಿನ್ಯಾಸವು ಅತ್ಯಂತ ಆಕರ್ಷಕವಾಗಿವೆ. ಮಳೆಗಾಲದ ಅವಧಿಯಲ್ಲಿ ಕರಾವಳಿ ಹಾಗೂ ಪಶ್ಚಿಮ ಘಟ್ಟದ ಕಾಡು ಪ್ರದೇಶಗಳಲ್ಲಿ ಇಂತಹ ದೈತ್ಯಾಕಾರದ ಪತಂಗಗಳನ್ನು ಕಾಣಬಹುದಾಗಿದೆ.
ಅಟ್ಲಾಸ್ ಪತಂಗದ ಜೀವನಚಕ್ರ ಅತ್ಯಂತ ರೋಚಕ ಮತ್ತು ವಿಭಿನ್ನವಾಗಿದೆ. ಈ ಪತಂಗವು ತನ್ನ ಮೊಟ್ಟೆಗಳನ್ನು ನಿರ್ದಿಷ್ಟ ಮರಗಳ ಎಲೆಗಳ ಮೇಲೆಯೇ ಇಡುತ್ತದೆ. ಮೊಟ್ಟೆಯಿಂದ ಹೊರಬರುವ ಹುಳು ಅಥವಾ ಲಾರ್ವಾ ಆ ಮರದ ಎಲೆಗಳನ್ನು ತಿಂದು ಸಾಕಷ್ಟು ಶಕ್ತಿ ಸಂಗ್ರಹಿಸಿಕೊಳ್ಳುತ್ತದೆ. ನಂತರ ಅದು ಕೋಶ (ಕೋಕೂನ್) ರಚನೆ ಮಾಡಿ ಅದರೊಳಗೆ ಪೂರ್ಣಾವಸ್ಥೆಯ ಪತಂಗವಾಗಿ ರೂಪಾಂತರಗೊಳ್ಳುತ್ತದೆ. ಕೋಶದಿಂದ ಹೊರಬರುವ ಪೂರ್ಣಾವಸ್ಥೆಯ ಪತಂಗವು ಅತ್ಯಂತ ಅಲ್ಪ ಆಯುಷ್ಯ ಹೊಂದಿದೆ. ಇದು ಮಾತ್ರ ಒಂದು ಅಥವಾ ಎರಡು ವಾರಗಳ ಕಾಲ ಮಾತ್ರ ಬದುಕಿರುತ್ತದೆ. ಈ ಅವಧಿಯಲ್ಲಿ ಪತಂಗವು ಸಂತಾನೋತ್ಪತ್ತಿ ಪೂರ್ಣಗೊಳಿಸಿ ತಕ್ಷಣ ಸಾಯುತ್ತದೆ.
ಈ ಪತಂಗದ ಅತ್ಯಂತ ವಿಶಿಷ್ಟ ಗುಣವೆಂದರೆ ಇದಕ್ಕೆ ಬಾಯಿ ಅಥವಾ ಜೀರ್ಣಾಂಗ ವ್ಯವಸ್ಥೆಯೇ ಇಲ್ಲ! ಹುಳು ಸ್ಥಿತಿಯಲ್ಲಿರುವಾಗಲೇ ಇದು ಅಗತ್ಯವಾದ ಎಲ್ಲಾ ಶಕ್ತಿಯನ್ನು ಎಲೆಗಳನ್ನು ತಿಂದು ಸಂಗ್ರಹಿಸಿಕೊಳ್ಳುತ್ತದೆ. ಕೋಶದಿಂದ ಹೊರಬಂದು ಪೂರ್ಣಾವಸ್ಥೆಯಾದ ನಂತರ ಯಾವುದೇ ಆಹಾರ ಸೇವನೆ ಮಾಡುವುದಿಲ್ಲ. ಆದ್ದರಿಂದ, ಇದು ತನ್ನ ದೇಹದಲ್ಲಿ ಉಳಿದಿರುವ ಶಕ್ತಿಯನ್ನು ಉಳಿಸಿಕೊಳ್ಳಲು ತುಂಬಾ ಕಡಿಮೆ ಹಾರಾಟ ಮಾಡುತ್ತದೆ ಮತ್ತು ಹೆಚ್ಚಿನ ಸಮಯವನ್ನು ಮರದ ಎಲೆಗಳ ಮೇಲೆಯೇ ವಿಶ್ರಾಂತಿ ಪಡೆಯುತ್ತಾ ಕಳೆಯುತ್ತದೆ.
ಅಟ್ಲಾಸ್ ಪತಂಗವು ತನ್ನ ಆಯುಷ್ಯದ ಕೊನೆಯ ಹಂತದಲ್ಲಿ ತುಂಬಾ ಬಲಹೀನವಾಗುತ್ತದೆ. ಈ ಸಮಯದಲ್ಲಿ ಇದು ಹಕ್ಕಿಗಳು, ಓತಿ ಮತ್ತು ಇರುವೆಗಳಂತಹ ಪಕ್ಷಿಗಳು ಮತ್ತು ಕೀಟ ಸರಿಸೃಪಗಳಿಗೆ ಸುಲಭ ಬಲಿಯಾಗುತ್ತದೆ. ಪ್ರಕೃತಿಯ ಆಹಾರ ಸರಪಳಿಯಲ್ಲಿ ಇದು ಒಂದು ಪ್ರಮುಖ ಪಾತ್ರ ವಹಿಸುತ್ತದೆ.
ಕಾರವಾರದ ಕಾಡುಗಳಲ್ಲಿ ಈ ಅಪರೂಪದ ಅಟ್ಲಾಸ್ ಪತಂಗ ಪತ್ತೆಯಾಗಿರುವುದು ಸ್ಥಳೀಯ ಜೀವ ವೈವಿಧ್ಯತೆಯ ಸಂಪತ್ತನ್ನು ಮತ್ತೊಮ್ಮೆ ನೆನಪಿಸುತ್ತದೆ. ಮಳೆಗಾಲದ ಹಸಿರು ಕಾಡುಗಳಲ್ಲಿ ಕಂಡುಬರುವ ಈ ದೈತ್ಯಾಕಾರದ ಪತಂಗವು ಪ್ರಕೃತಿಯ ಅದ್ಭುತ ಸೃಷ್ಟಿಯೆಂದು ಕೀಟ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ