
ಬೆಂಗಳೂರು[ನ.19]: ಕಂದಾಯ ಇಲಾಖೆಯು ನ.12ರಿಂದ 18ರವರೆಗೆ ‘ಕಡತ ವಿಲೇವಾರಿ ಸಪ್ತಾಹ’ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ರಜಾ ದಿನವಾದ ಭಾನುವಾರವೂ (ನ.18) ಕಂದಾಯ ಇಲಾಖೆಯ ಎಲ್ಲಾ ಕಚೇರಿಗಳು ಕಾರ್ಯನಿರ್ವಹಿಸಿದ್ದು, ಸಪ್ತಾಹವು ಯಶಸ್ವಿಯಾಗಿ ಮುಗಿದಿದೆ ಎಂದು ಕಂದಾಯ ಸಚಿವ ಆರ್.ವಿ. ದೇಶಪಾಂಡೆ ಹೇಳಿದ್ದಾರೆ.
ಸಾಲು-ಸಾಲು ರಜೆಗಳ ಹಿನ್ನೆಲೆಯಲ್ಲಿ ಕಂದಾಯ ಇಲಾಖೆಗೆ ಸಂಬಂಧಿಸಿದ ಸಾವಿರಾರು ಕಡತಗಳು ವಿಲೇವಾರಿಯಾಗದೆ ಬಾಕಿ ಉಳಿದಿದ್ದವು. ಸರಕಾರದ ಪ್ರಮುಖ ಇಲಾಖೆಯಾದ ಕಂದಾಯ ಇಲಾಖೆ ಕಡತಗಳು ವಿಲೇವಾರಿಯಾಗದೆ ಉಳಿದಿದ್ದರಿಂದ ಸಾರ್ವಜನಿಕರಿಗೆ ತೀವ್ರ ಸಮಸ್ಯೆ ಉಂಟಾಗುತ್ತಿತ್ತು. ಹೀಗಾಗಿ ನ.12ರಂದು ಒಂದು ವಾರ ಕಡತ ವಿಲೇವಾರಿ ಸಪ್ತಾಹ ಮಾಡಿದ್ದೇವೆ. ಹೀಗಾಗಿ ರಾಜ್ಯಾದ್ಯಂತ ತಮ್ಮ ಕಚೇರಿಯೂ ಸೇರಿದಂತೆ ಎಲ್ಲ ಪ್ರಾದೇಶಿಕ ಆಯುಕ್ತರ ಕಚೇರಿ, ಜಿಲ್ಲಾಧಿಕಾರಿ ಕಚೇರಿ, ತಾಲೂಕು ಕಚೇರಿಗಳೂ ಭಾನುವಾರವನ್ನು ಸಾರ್ವತ್ರಿಕ ರಜಾ ದಿನದ ಬದಲಾಗಿ ‘ಕರ್ತವ್ಯ ದಿನ’ ಎಂದು ಭಾವಿಸಿ ಕರ್ತವ್ಯ ನಿರ್ವಹಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮುಂದಿನ ದಿನಗಳಲ್ಲಿ ಇನ್ನಷ್ಟುರಚನಾತ್ಮಕ ಹಾಗೂ ಜನಪರ ಕ್ರಮಗಳನ್ನು ವಿಸ್ತೃತವಾಗಿ ಕೈಗೊಳ್ಳಲಾಗುವುದು. 21ನೇ ಶತಮಾನದಲ್ಲಿ ಕಂದಾಯ ಇಲಾಖೆಯು ತಂತ್ರಜ್ಞಾನ ಆಧರಿತವಾಗಿ ತ್ವರಿತ ಹಾಗೂ ಪಾರದರ್ಶಕವಾಗಿ ಕಾರ್ಯ ನಿರ್ವಹಿಸಬೇಕು. ಈ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕಡತಗಳ ಕ್ಷಿಪ್ರ ವಿಲೇವಾರಿಗೆ ಮುಂದಾಗಿದ್ದೇವೆ. ಭಾನುವಾರ ನಡೆದ ಕಡತ ವಿಲೇವಾರಿಯಲ್ಲಿ ಸಪ್ತಾಹ ಆರಂಭವಾಗುವ ಮೊದಲು ತಮ್ಮಲ್ಲಿ ಬಾಕಿ ಇದ್ದ ಕಡತ, ವಿಲೇವಾರಿ ಆದ ಕಡತ ಹಾಗೂ ಬಾಕಿ ಇರುವ ಕಡತಗಳ ಬಗ್ಗೆ ಮಾಹಿತಿ ನೀಡುವಂತೆ ಎಲ್ಲಾ ಅಧಿಕಾರಿಗಳಿಗೆ ಆದೇಶಿಸಲಾಗಿದೆ. ಸದ್ಯದಲ್ಲೇ ಮಾಹಿತಿ ತರಿಸಿಕೊಂಡು ಪ್ರಗತಿ ಪರಿಶೀಲನೆ ನಡೆಸಲಾಗುವುದು ಎಂದು ಸಚಿವ ಆರ್.ವಿ. ದೇಶಪಾಂಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ