
ನೆಲಮಂಗಲ : ಮಹೂರ್ತದ ವೇಳೆ ಮುರಿದು ಬಿದ್ದ ಮದುವೆ ತಾಳಿ ಕಟ್ಟುವ ವೇಳೆ ಪ್ರಿಯಕರನನ್ನು ನೋಡಿ ಹಸೆಮಣೆಯಿಂದ ಮೇಲೆದ್ದ ಯುವತಿ ಮದುವೆ ಬೇಡವೆಂದು ಹಠ ಹಿಡಿದು ಹೊರ ನಡೆದ ಸಿನಿಮೀಯ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪಟ್ಟಣದ ವಿಶ್ವಶಾಂತಿ ಸಮುದಾಯ ಭವನದಲ್ಲಿ ನಡೆದಿದೆ. ಆ ಸಂದರ್ಭ ಮದುವೆ ಮನೆಯಲ್ಲಿ ತೀವ್ರ ಗಲಾಟೆಯಾಗಿ ಪ್ರಕರಣ ಪೊಲೀಸ್ ಸ್ಟೇಷನ್ ಮೆಟ್ಟಿಲು ಹತ್ತಿದೆ.
ನಂದರಾಮಯ್ಯನಪಾಳ್ಯದ ನಿವಾಸಿ ರಂಗನಾಥ್ ಹಾಗೂ ಬೆಂಗಳೂರಿನ ಕಾಮಾಕ್ಷಿಪಾಳ್ಯದ ಯುವತಿ ಪದ್ಮಪ್ರಿಯ ವಿವಾಹ ನಿಶ್ಚಯವಾದಂತೆ ಭಾನುವಾರ ನಡೆಯಬೇಕಿತ್ತು. ವರನ ಕಡೆಯವರೇ ಲಕ್ಷಾಂತರ ರು. ಖರ್ಚು ಮಾಡಿ ಮದುವೆ ಆಯೋಜಿಸಿದ್ದರು. ಕಳೆದದ ರಾತ್ರಿ ಆರತಕ್ಷತೆಯಲ್ಲಿ ಲವಲವಿಕೆಯಿಂದ ಇದ್ದ ವಧು ಬೆಳಗ್ಗೆ ಮಹೂರ್ತದ ವೇಳೆ ಪ್ರಿಯಕರ ಸಂಜು ಮದುವೆ ಮಂಟಪಕ್ಕೆ ಬಂದದ್ದೇ ತಡ ಈ ಮದುವೆ ಬೇಡ ಎಂದು ನಿರಾಕರಿಸಿದ್ದಾಳೆ. ಆಗ ಮದುವೆ ಮನೆಯಲ್ಲಿ ಎರಡು ಕುಟುಂಬಗಳ ನಡುವೆ ಗಲಾಟೆ ತೀವ್ರವಾಗಿ ಸ್ಥಳೀಯ ಪೊಲೀಸರು ಆಗಮಿಸಿದರು. ಆದರೆ ಸ್ಥಳದಲ್ಲಿ ಸಮಸ್ಯೆ ಇತ್ಯರ್ಥವಾಗದ ಕಾರಣ ಬಂದು ವಧು, ವರ ಹಾಗೂ ಪ್ರಿಯಕರನ್ನು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ.
ಫೇಸ್‌ಬುಕ್ ಲವ್: ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾಗಿದ್ದ ಸಂಜು ಮತ್ತು ಪದ್ಮಪ್ರಿಯ ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಆದರೆ ಬಳಿಕ ಯುವತಿ ಮನೆಯವರು ನಿಶ್ಚಯ ಮಾಡಿದ್ದ ವರನೊಂದಿಗೆ ಮದುವೆಯಾಗಲು ಸಿದ್ಧಗೊಂಡಿದ್ದಳು. ಇನ್ನೇನು ತಾಳಿ ಕಟ್ಟಬೇಕೆನ್ನುವಷ್ಟರಲ್ಲಿ ಪ್ರಿಯಕರ ಎದುರಿಗೆ ಬಂದಿದ್ದರಿಂದ ವಧು ಹಸೆಮಣೆ ಬಿಟ್ಟು ಮೇಲೆದ್ದಿದ್ದಾಳೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ