ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲೂ ಸಾಧನೆ ಮಾಡುತ್ತಿದ್ದರೂ, ಸಮಾಜದಲ್ಲಿನ ಹಳೆಯ ಮನೋಭಾವದಿಂದ ಅನೇಕ ಹೆಣ್ಣುಮಕ್ಕಳು ಪ್ರತಿಭೆ ಇದ್ದರೂ ಸಾಧನೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಡಾ. ಕೆ.ಆರ್. ಸಂಧ್ಯಾ ರೆಡ್ಡಿ ಅಭಿಪ್ರಾಯಪಟ್ಟರು. ಕೌಟುಂಬಿಕ ಕಟ್ಟುಪಾಡುಗಳು ಮತ್ತು ಪುರುಷ ಪ್ರಧಾನ ಸಮಾಜದ ಮನಸ್ಥಿತಿಯೇ ಇದಕ್ಕೆ ಕಾರಣವೆಂದು ಅವರು ಹೇಳಿದರು.
ಬೆಂಗಳೂರು (ಏ.5): ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲೂ ಮುಂಚೂಣಿಯಲ್ಲಿದ್ದು, ಸಾಧನೆ ಮಾಡುತ್ತಿದ್ದಾರೆ. ಆದರೆ, ಈಗಲೂ ಸಮಾಜದಲ್ಲಿ ಹಿಂದಿನ ಕಾಲದ ಮನೋಭಾವ ಮುಂದುವರಿದಿದ್ದು, ಅದರ ಪರಿಣಾಮ ಅನೇಕ ಹೆಣ್ಣುಮಕ್ಕಳು ಪ್ರತಿಭೆಯಿದ್ದರೂ ಸಾಧನೆ ಮಾಡಲು ಸಾಧ್ಯವಾಗದಂತಾಗಿದೆ ಎಂದು ಜಾನಪದ ಸಂಶೋಧಕಿ ಡಾ। ಕೆ.ಆರ್.ಸಂಧ್ಯಾ ರೆಡ್ಡಿ ಅಭಿಪ್ರಾಯಪಟ್ಟರು.
ಶೇಷಾದ್ರಿಪುರ ಕಾಲೇಜಿನ ಕನ್ನಡ ಸಂಘ-ಕನ್ನಡ ವಿಭಾಗದಿಂದ ಶುಕ್ರವಾರ ಆಯೋಜಿಸಲಾಗಿದ್ದ ‘ಮಹಿಳಾ ಅಧ್ಯಯನದ ತಾತ್ವಿಕ ನೆಲೆಗಳು ಸಾಧ್ಯತೆ ಮತ್ತು ಸವಾಲುಗಳು’ ವಿಷಯ ಕುರಿತ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಸ್ತ್ರೀವಾದಿ ಅಧ್ಯಯನಗಳು ಗಂಭೀರವಾಗಿ ಆಗುತ್ತಿದೆ. ಸಮಾಜದ ಎಲ್ಲ ಸ್ತರಗಳಲ್ಲೂ ಮಹಿಳೆಯರು ತಮ್ಮ ಛಾಪು ಮೂಡಿಸುತ್ತಿದ್ದಾರೆ. ರಾಷ್ಟ್ರಪತಿ, ಪ್ರಧಾನಮಂತ್ರಿಯಂತಹ ಹುದ್ದೆಗಳಲ್ಲಿ ಮಹಿಳೆಯರು ಕಾಣಿಸಿಕೊಳ್ಳುತ್ತಿದ್ದಾರೆ. ಆದರೂ, ಮಹಿಳೆಯರ ಕುರಿತು ಸಮಾಜದ ಮನಸ್ಥಿತಿ ಬದಲಾಗಿಲ್ಲ. ಅದರಲ್ಲೂ ಕೌಟುಂಬಿಕ ವಿಚಾರ ಬಂದಾಗ ಮಾತ್ರ ಪುರುಷ ಪ್ರಧಾನ ಸಮಾಜ ಅವರ ಮೇಲೆ ಸವಾರಿ ಮಾಡುತ್ತಿದೆ. ಅದರಿಂದಾಗಿ ಮಹಿಳೆಯರಲ್ಲಿ ಎಷ್ಟೇ ಪ್ರತಿಭೆಯಿದ್ದರೂ ಅದನ್ನು ಬಳಸಿಕೊಂಡು ಸಾಧನೆ ಮಾಡದಂತಾಗಿದೆ ಎಂದರು.
ಇದನ್ನೂ ಓದಿ: ಈ ವರ್ಷದ ಜಗತ್ತಿನ ಟಾಪ್ 10 ಶ್ರೀಮಂತ ಮಹಿಳೆಯರ ಫೋರ್ಬ್ಸ್ ಪಟ್ಟಿ ರಿಲೀಸ್, ಭಾರತದ ಏಕೈಕ ಮಹಿಳೆಗೆ ಸ್ಥಾನ!
ಎಸ್.ಎಲ್.ಭೈರಪ್ಪ, ಚಂದ್ರಶೇಖರ ಕಂಬಾರ ಸೇರಿದಂತೆ ಮಹಾನ್ ಸಾಹಿತಿಗಳ ರೀತಿಯಲ್ಲಿ ಸಾಹಿತ್ಯ ರಚಿಸುವ ಸಾಮರ್ಥ್ಯ ಮತ್ತು ಪ್ರತಿಭೆ ಅನೇಕ ಮಹಿಳಾ ಸಾಹಿತಿಗಳಲ್ಲಿದೆ. ಆದರೆ, ಕೌಟುಂಬಿಕ ಕಟ್ಟುಪಾಡುಗಳು ಅವರ ಸಾಹಿತ್ಯದ ಬಗೆಗಿನ ಒಲವಿನಿಂದ ವಿಮುಖರಾಗುವಂತಾಗುತ್ತಿದೆ. ಹೀಗಾಗಿ ಕೌಟುಂಬಿಕ ಕಟ್ಟುಪಾಡು, ಸಮಾಜ, ಪುರುಷರ ಮನಸ್ಥಿತಿ ಬದಲಾಗಬೇಕು. ಯಾರು ಮಹಿಳೆಯರನ್ನು ವಿರೋಧಿಸುತ್ತಾರೋ ಅಂತಹವರನ್ನು ಮತ್ತು ಅಂತಹ ಆಚರಣೆಗಳನ್ನು ನಾವೇ ದೂರವಿಟ್ಟು ಪ್ರತಿಭಟಿಸಬೇಕು ಎಂದು ಹೇಳಿದರು.
ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಡಾ। ಎಚ್.ಎಲ್.ಪುಷ್ಪಾ, ವಿಮರ್ಶಕಿ ಡಾ। ಎಂ.ಎಸ್.ಆಶಾದೇವಿ, ಶೇಷಾದ್ರಿಪುರಂ ಕಾಲೇಜಿನ ಪ್ರಾಂಶುಪಾಲ ಮೇಜರ್ ಡಾ। ಐ.ಆಂಜನಪ್ಪ, ಕನ್ನಡ ಸಂಘದ ಸಂಚಾಲಕಿ ಎಂ.ಎನ್.ಅರ್ಚನಾ ತೇಜಸ್ವಿ, ಕನ್ನಡ ವಿಭಾಗದ ಮುಖ್ಯಸ್ಥೆ ಎಚ್.ಎಂ.ಗೀತಾ ಇದ್ದರು