Resarvation For Panchamasali : ಪಂಚಮಸಾಲಿ ಮೀಸಲು ಬಗ್ಗೆ ಒಳ್ಳೆ ನಿರ್ಧಾರ: ಸಿಎಂ

By Kannadaprabha News  |  First Published Dec 20, 2021, 8:28 AM IST
  •   ಪಂಚಮಸಾಲಿ ಮೀಸಲು ಬಗ್ಗೆ ಒಳ್ಳೆ ನಿರ್ಧಾರ: ಸಿಎಂ
  •  ಹಿಂದುಳಿದ ವರ್ಗಗಳ ಆಯೋಗಕ್ಕೆ ಎಲ್ಲರೂ ಸಹಕಾರ ನೀಡಬೇಕು
  • ಎಲ್ಲರ ಭಾವನೆಗಳಿಗೂ ಸ್ಪಂದಿಸುತ್ತೇವೆ
  •  ಶಿಗ್ಗಾಂವಿಯಲ್ಲಿ ಕಿತ್ತೂರು ರಾಣಿ ಚನ್ನಮ್ಮ ಪುತ್ಥಳಿ ಅನಾವರಣಗೊಳಿಸಿದ ಬೊಮ್ಮಾಯಿ

 ಹಾವೇರಿ (ಡಿ.20):  ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಸಂಬಂಧವಾಗಿ ಒಳ್ಳೆಯ ನಿರ್ಧಾರ ಕೈಗೊಳ್ಳೋಣ. ಅದಕ್ಕಾಗಿ ಹಿಂದುಳಿದ ವರ್ಗಗಳ ಆಯೋಗಕ್ಕೆ ಸಹಕಾರ ನೀಡಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraja Bommai) ತಿಳಿಸಿದ್ದಾರೆ. ಶಿಗ್ಗಾಂವಿಯಲ್ಲಿ ಭಾನುವಾರ ಕಿತ್ತೂರು ರಾಣಿ ಚನ್ನಮ್ಮ ಪುತ್ಥಳಿ ಅನಾವರಣ ಸಮಾರಂಭದಲ್ಲಿ ಮಾತನಾಡಿದ ಅವರು, ತುಳಿತಕ್ಕೊಳಗಾದವರಿಗೆ ನ್ಯಾಯ ಕೊಡಲು ನಮ್ಮ ಸರ್ಕಾರ (BJP Govt) ಸಿದ್ಧವಾಗಿದ್ದು ಎಲ್ಲರ ಭಾವನೆಗಳಿಗೂ ಸ್ಪಂದಿಸುವುದಾಗಿ ತಿಳಿಸಿದರು.

"

Tap to resize

Latest Videos

ಕಿತ್ತೂರು ರಾಣಿ ಚನ್ನಮ್ಮ (Kitturu Rani chennamma) ರಾಜ್ಯ ವಿಸ್ತರಣೆಗೆ ಹೋರಾಟ ಮಾಡಲಿಲ್ಲ. ರಾಜ್ಯದ ಜನರ ರಕ್ಷಣೆಗೆ, ಸ್ವಾಭಿಮಾನಕ್ಕಾಗಿ ಹೋರಾಡಿದಳು. ಪ್ರತಿಯೊಬ್ಬ ಕಿತ್ತೂರು ನಾಗರಿಕ ಯೋಧರಾಗಿ ಪರಿವರ್ತನೆ ಆದರು. ಇಂದು ಈ ರಾಜ್ಯ, ಸಮುದಾಯ ತನ್ನ ಅಸ್ಮಿತೆ, ಸ್ವಾಭಿಮಾನಕ್ಕಾಗಿ ಯೋಧರಾಗಿ ಹೋರಾಟ ಮಾಡುವ ಅಗತ್ಯ ಇದೆ. ಇತಿಹಾಸವನ್ನು ನಾವು ಅರ್ಥ ಮಾಡಿಕೊಳ್ಳಬೇಕಿದೆ ಎಂದು ಅಭಿಪ್ರಾಯಪಟ್ಟರು.

ಒಂದು ಸಮುದಾಯ ಬಹಳ ಮುಂದೆ ಹೋಗಿ ಇನ್ನೊಂದು ಸಮುದಾಯ ಹಿಂದುಳಿದರೆ ಮುಂದೆ ಹೋದ ಸಮುದಾಯಕ್ಕೂ ಒಳ್ಳೆಯದಾಗುವುದಿಲ್ಲ. ಆದ್ದರಿಂದ ಎಲ್ಲರ ಭಾವನೆಗಳಿಗೂ ಸ್ಪಂದಿಸುವ ಕೆಲಸ ಮಾಡುತ್ತೇನೆ. ಪ್ರತಿಯೊಂದು ಸಮಾಜಕ್ಕೂ ತಮ್ಮದೇ ಭಾವನೆಯಿದ್ದು, ಸ್ವಲ್ಪ ಸಮಾಯಾವಕಾಶ ನೀಡಿದರೆ ಎಲ್ಲವನ್ನೂ ಈಡೇರಿಸಲು ಪ್ರಯತ್ನಿಸುತ್ತೇನೆ. ನಾಡಿನ ಬಹುತೇಕ ಜನರಿಗೆ, ವಿಶೇಷವಾಗಿ ಧ್ವನಿಯಿಲ್ಲದವರು, ತುಳಿತಕ್ಕೊಳಗಾದವರಿಗೆ ನ್ಯಾಯ ಕೊಡಿಸಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.

ಮೀಸಲಾತಿ ನೀಡುವಲ್ಲಿ ಗಡಿಬಿಡಿ ಬೇಡ-ವಚನಾನಂದ ಶ್ರೀ

ಸಾನ್ನಿಧ್ಯ ವಹಿಸಿದ್ದ ಹರಿಹರ ಪಂಚಮಸಾಲಿ (Panchamasali)  ಪೀಠದ ವಚನಾನಂದ ಸ್ವಾಮೀಜಿ ಮಾತನಾಡಿ, ನಮ್ಮ ಒಳಜಗಳದಿಂದ ಅನೇಕ ವರ್ಷಗಳಿಂದ ಚೆನ್ನಮ್ಮ ಮೂರ್ತಿ ಅನಾವರಣ ಸಾಧ್ಯವಾಗಿರಲಿಲ್ಲ. ಶಿಗ್ಗಾಂವಿಗೆ ಬಂದು ಎಲ್ಲರ ಜತೆ ಮಾತನಾಡಿ ಸಿಎಂ ಅವರಿಂದ ಮೂರ್ತಿ ಅನಾವರಣ ಮಾಡಿಸಿದೆವು.

ಸಮುದಾಯ ಸಮುದಾಯಗಳಲ್ಲಿ ಬೆಂಕಿ ಹಚ್ಚುವ ಕೆಲಸ ಯಾರೂ ಮಾಡಬಾರದು. ಪ್ರೀತಿ ಹಂಚುವ ಕೆಲಸ ಮಾಡಬೇಕು. ಕಿತ್ತೂರು ಚೆನ್ನಮ್ಮನ  ಕೋಟೆ ಪುನರುತ್ಥಾನಕ್ಕೆ ನಾವು ಪಾದಯಾತ್ರೆ ಮಾಡಿದ್ದೆವು. ಆಗ ಬಸವರಾಜ ಬೊಮ್ಮಾಯಿ ಬಂದಿದ್ದರು. ಆಗ ಯಡಿಯೂರಪ್ಪ (Yediyurappa) . 50 ಕೋಟಿ ಅನುದಾನ ಬಿಡುಗಡೆ ಮಾಡಿದ್ದರು. ಆದಷ್ಟುಬೇಗ ಪಂಚಮಸಾಲಿ ಸಮಾಜವನ್ನು ಒಬಿಸಿಯಲ್ಲಿ ಸೇರಿಸಬೇಕು. ಮೀಸಲಾತಿ ವಿಚಾರದಲ್ಲಿ ಸರ್ಕಾರ ಗಡಿಬಿಡಿ ಮಾಡಬಾರದು. ನಮ್ಮ ಖುಷಿಗಾಗಿ ಬೊಮ್ಮಾಯಿ ಅವರು 2ಎ ನೀಡಿದರೆ ಮುಂದೆ ನ್ಯಾಯಾಲಯದಲ್ಲಿ ತಿರಸ್ಕಾರವಾಗುವ ಸಾಧ್ಯತೆಯಿರುತ್ತದೆ. ಆದ್ದರಿಂದ ಸೂಕ್ತ ರೀತಿಯಲ್ಲಿ ಕ್ರಮ ಕೈಗೊಂಡು ಪಂಚಮಸಾಲಿ ಸಮಾಜಕ್ಕೆ ಸಾಮಾಜಿಕ ನ್ಯಾಯ ಕೊಡಬೇಕು. ಆದಷ್ಟುಬೇಗ ಸಿಎಂ ಬಸವರಾಜ ಬೊಮ್ಮಾಯಿ ಅವರು ನಮ್ಮ ಸಮಾಜಕ್ಕೆ ಸಾಮಾಜಿಕ ನ್ಯಾಯ ಕೊಡುವ ವಿಶ್ವಾಸವಿದೆ ಎಂದು ಹೇಳಿದರು.

ಒಬ್ಬರನ್ನು ತುಳಿದು ಬೆಳೆಯುವುದು ಸರಿಯಲ್ಲ. ಒಬ್ಬರನ್ನೊಬ್ಬರು ಕೈ ಹಿಡಿದುಕೊಂಡು ಬೆಳೆಯಬೇಕು. ರಾಜ್ಯದಲ್ಲಿ ಪಂಚಮಸಾಲಿ ಎನ್ನುವ ಧ್ವನಿ ಮೊಳಗಿದ್ದೇ ಹರಿಹರದ ಹರ ಜಾತ್ರೆಯಿಂದ. ಗಂಗಾರತಿಯಂತೆ ಮುಂದೆ ತುಂಗಭದ್ರಾರತಿ ಆಗುತ್ತದೆ. ಹರಿದ್ವಾರದಲ್ಲಿ ಯೋಗಿ ಆದಿತ್ಯನಾಥ ಅವರಂತೆ ಇಲ್ಲಿ ಬಸವರಾಜ ಬೊಮ್ಮಾಯಿ ನಮ್ಮೊಂದಿಗೆ ಇರುತ್ತಾರೆ.

ಹರಿಹರ ಪೀಠ ಇಂದು ಪಂಚ ದಾಸೋಹ ಪೀಠವಾಗಿದೆ. ಅಧ್ಯಾತ್ಮ, ಆರೋಗ್ಯ ದಾಸೋಹ ನಿತ್ಯವೂ ನಡೆಯುತ್ತಿದೆ. ಸಮಾಜದ ವಿಷಯ ಬಂದಾಗ ಎಲ್ಲರೂ ಒಗ್ಗಟ್ಟಾಗಬೇಕು. ರಾಜಕಾರಣದ ಸಮಯದಲ್ಲಿ ಪಕ್ಷ ಮಾಡಿ. ಸಮಾಜದ ಪ್ರಶ್ನೆ ಬಂದಾಗ ಪಂಚಮಸಾಲಿಗಳಾಗಿ ಎಂದು ವಚನಾನಂದ ಶ್ರೀ ಕರೆ ನೀಡಿದರು.

ಕೂಡಲ ಸಂಗಮದ ಬಸವಜಯ ಮೃತ್ಯುಂಜಯ (Basava Mrutyunjaya) ಶ್ರೀ ಮಾತನಾಡಿ, ಮುಖ್ಯಮಂತ್ರಿ ಬೊಮ್ಮಾಯಿ ಅವರ ಬಗ್ಗೆ ನಮಗೆ ಅಪಾರ ಅಭಿಮಾನವಿದೆ. ನಮ್ಮ ಎಲ್ಲ ಬೇಡಿಕೆಗಳಿಗೆ ಅವರು ಸ್ಪಂದಿಸುತ್ತಿದ್ದಾರೆ. 2ಎ ಮೀಸಲಾತಿ ಪಾದಯಾತ್ರೆ ಸಂದರ್ಭದಲ್ಲೂ ಅವರು ಸಹಕಾರ ನೀಡಿದ್ದಾರೆ. ಮೀಸಲಾತಿ ನೀಡುವ ಬಗ್ಗೆ ಅವರು ಸಕಾರಾತ್ಮವಾಗಿ ಸ್ಪಂದಿಸಿದ್ದಾರೆ. 2ಎ ಮೀಸಲಾತಿ ಶೀಘ್ರದಲ್ಲಿ ಕೊಡಿಸುವ ವಿಶ್ವಾಸವಿದೆ. ಕೇಂದ್ರ ಸರ್ಕಾರವು ಮಹಿಳಾ ರೆಜಿಮೆಂಟ್‌ ಆರಂಭಿಸಲು ನಿರ್ಧರಿಸಿದ್ದು, ಅದಕ್ಕೆ ರಾಣಿ ಚೆನ್ನಮ್ಮ ನಾಮಕರಣಕ್ಕೆ ಶಿಫಾರಸು ಮಾಡಬೇಕು ಎಂದು ಹೇಳಿದರು.

ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿ, ದೇಶಕ್ಕಾಗಿ ತ್ಯಾಗ ಮಾಡಿದ ಮಹಾನ್‌ ಪುರುಷರ ಹೆಸರಿಗೆ ಕಳಂಕ ತರುವ ರೀತಿಯಲ್ಲಿ ನಡೆದುಕೊಳ್ಳುವುದು ಖಂಡನೀಯ. ಎಲ್ಲ ಪ್ರತಿಮೆಗಳಿಗೆ ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕು. ಸಮಾಜದಲ್ಲಿ ಶಾಂತಿ ಕದಡುವವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕು. ಮುಖ್ಯಮಂತ್ರಿ ಹೆಸರು ಕೆಡಿಸಲು ಕೆಲವರು ಷಡ್ಯಂತ್ರ ಮಾಡುತ್ತಿದ್ದಾರೆ. ಕೆಲವೇ ದಿನಗಳಲ್ಲಿ ಸತ್ಯ ಗೊತ್ತಾಗಲಿದೆ. ಪಂಚಮಸಾಲಿಗಳಿಗೆ 2ಎ ಮೀಸಲಾತಿ ನೀಡಬೇಕು. ಅದೇ ರೀತಿ ಎಲ್ಲ ವರ್ಗಗಳಿಗೂ ಸಾಮಾಜಿಕ ನ್ಯಾಯ ಕೊಡಬೇಕು ಎಂದು ಹೇಳಿದರು.

ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಅರುಣಕುಮಾರ ಪೂಜಾರ, ಸೋಮಣ್ಣ ಬೇವಿನಮರದ, ಮಂಜುನಾಥ ಕುನ್ನೂರು, ವಿನಯ ಕುಲಕರ್ಣಿ, ವಿಜಯಾನಂದ ಕಾಶಪ್ಪನವರ ಇತರರು ಮಾತನಾಡಿದರು. ಶಿವಾನಂದ ಬಾಗೂರ, ಬಸವರಾಜ ದಿಂಡೂರ, ಸಂಡೂರ ನಾಗನಗೌಡ್ರ, ಮಲ್ಲಿಕಾರ್ಜುನ ಹಾವೇರಿ, ಶ್ರೀಕಾಂತ ದುಂಡಿಗೌಡ್ರ ಇತರರು ಇದ್ದರು.

click me!