ಅಂದು ಸೋನಿಯಾ ಗಾಂಧಿ ಬಳ್ಳಾರಿಗೆ ಮೂರು ಸಾವಿರ ಕೋಟಿ ವಿಶೇಷ ಪ್ಯಾಕೇಜ್ ನೀಡೋ ಮೂಲಕ ತಮ್ಮನ್ನು ಗೆಲ್ಲಿಸಿದ ಬಳ್ಳಾರಿ ಜನರಿಗೆ ಕೃತಜ್ಞತೆ ಸಲ್ಲಿಸಿದ್ದರು. ಈಗ ರಾಹುಲ್ ಗಾಂಧಿ ಕೊಟ್ಟ ಮಾತು ಉಳಿಸಿಕೊಳ್ಳುತ್ತಾರಾ?
ವರದಿ : ನರಸಿಂಹ ಮೂರ್ತಿ ಕುಲಕರ್ಣಿ, ಏಷ್ಯಾನೆಟ್ ಸುವರ್ಣ ನ್ಯೂಸ್
ಬಳ್ಳಾರಿ (ಮೇ.22): ಅಮ್ಮನಂತೆ ಮಗ ಕೂಡ ಬಳ್ಳಾರಿ ಜನರಿಗೆ ಕೊಟ್ಟಿರೋ ಭರವಸೆ ಈಡೇರಿಸುತ್ತಾರಾ..? ಅಂದು ಸೋನಿಯಾ ಗಾಂಧಿ ಬಳ್ಳಾರಿಗೆ ಮೂರು ಸಾವಿರ ಕೋಟಿ ವಿಶೇಷ ಪ್ಯಾಕೇಜ್ ನೀಡೋ ಮೂಲಕ ತಮ್ಮನ್ನು ಗೆಲ್ಲಿಸಿದ ಬಳ್ಳಾರಿ ಜನರಿಗೆ ಕೃತಜ್ಞತೆ ಸಲ್ಲಿಸಿದ್ದರು. ಇದೀಗ ಅಮ್ಮನಂತೆ ಮಗನೂ ಕೂಡ ಮೊನ್ನೆ ನಡೆದ ಚುನಾವಣೆ ವೇಳೆ ಬಳ್ಳಾರಿಯಲ್ಲಿ ಜೀನ್ಸ್ ಅಪರೆಲ್ ಪಾರ್ಕ್ ಮಾಡುವ ಭರವಸೆ ನೀಡಿದ್ದರು. ಇದಕ್ಕಾಗಿ ಐದು ಸಾವಿರ ಕೋಟಿ ವಿಶೇಷ ಅನುದಾನ ಮೀಸಲಿಡೋದಾಗಿ ಘೋಷಣೆ ಮಾಡಿದ್ರು. ಇದೀಗ ಆ ಭರವಸೆ ಈಡೇರಿಸುತ್ತಾರಾ ಅನ್ನೋದನ್ನು ಕಾದು ನೋಡಬೇಕಿದೆ.
ರಾಹುಲ್ ಭರವಸೆಯಂತೆ ಜೀನ್ಸ್ ಪಾರ್ಕ್ ಮಾಡ್ತಾರಾ?
ಇನ್ನೂ ರಾಜ್ಯದ ಜನರಿಗೆ ಚುನಾವಣೆಯಲ್ಲಿ ವೇಳೆ ಘೋಷಣೆ ಮಾಡಿದ ಐದು ಗ್ಯಾರಂಟಿ ಗಳನ್ನು ಮೊದಲ ಕ್ಯಾಬಿನೆಟ್ ನಲ್ಲಿ ಚರ್ಚಿಸಿ ಈಡೇರಿಸುವ ವಿಶ್ವಾಸ ನೀಡಲಾಗಿದೆ. ಆದ್ರೇ ರಾಹುಲ್ ಗಾಂಧಿ ಬಳ್ಳಾರಿಯ ಜನರಿಗೆ ಕೊಟ್ಟ ಭರವಸೆ ಈಡೇರಿಸುತ್ತಾರಾ..? ಅನ್ನೋದು ಸದ್ಯ ಬಳ್ಳಾರಿ ಜನರ ಪ್ರಶ್ನೆಯಾಗಿದೆ.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬಳ್ಳಾರಿಯನ್ನು ಜೀನ್ಸ್ ಕ್ಯಾಪಿಟಲ್ ಮಾಡುವೆ: ರಾಹುಲ್ ಗಾಂಧಿ
ಅಂದು ಸೋನಿಯಾ ಇಂದು ರಾಹುಲ್
1999ರಲ್ಲಿ ಬಳ್ಳಾರಿ ಲೋಕಸಭಾ ಚುನಾವಣೆ ವೇಳೆ ಸಾಕಷ್ಟು ಜಿದ್ದಾ ಜಿದ್ದಿ ಏರ್ಪಾಡಾಗಿತ್ತು. ಶತಯಾ ಗತಯಾ ಸೋನಿಯಾ ಅವರನ್ನು ಸೋಲಿಸಲು ಸುಷ್ಮಾ ಸ್ವರಾಜ್ ಪಣ ತೊಟ್ಟಿದ್ದರು. ಆದ್ರೆ ಕಾಂಗ್ರೆಸ್ ಪಕ್ಷದ ತವರೂರಾದ ಬಳ್ಳಾರಿಯ ಜನರು ಸೋನಿಯಾ ಗಾಂಧಿ ಅವರನ್ನು ಕೈಬಿಡಲಿಲ್ಲ. ಹೀಗಾಗಿ ಬಳ್ಳಾರಿ ಜನರ ಋಣ ತೀರಿಸಲು ಸೋನಿಯಾ ಗಾಂಧಿ ಅವರು ಬಳ್ಳಾರಿಗೆ ಮೂರು ಸಾವಿರ ಕೋಟಿಯ ವಿಶೇಷ ಅನುದಾನ ನೀಡಿದ್ರು. ಅಮ್ಮನಂತೆ ಮಗ ರಾಹುಲ್ ಗಾಂಧಿ ಕೂಡ ಭಾರತ್ ಜೋಡೋ ಯಾತ್ರೆ ವೇಳೆ ಮತ್ತು ಚುನಾವಣೆ ಪ್ರಚಾರಕ್ಕೆ ಬಂದಾಗ ಬಳ್ಳಾರಿ ಜನರಿಗೊಂದು ಭರವಸೆ ನೀಡಿದ್ದರು. ಜೀನ್ಸ್ ಉದ್ಯಮ ನಂಬಿಕೊಂಡು ಇಲ್ಲಿ ಸಾವಿರಾರು ಜನರು ಇರೋ ಹಿನ್ನೆಲೆ, ಬಳ್ಳಾರಿ ರಾಷ್ಟ್ರ ಮಟ್ಟದ ಜೀನ್ಸ್ ಅಪರೆಲ್ ಪಾರ್ಕ್ ಮಾಡೋ ಭರವಸೆ ನೀಡಿದ್ರು. ಇದಕ್ಕಾಗಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ್ರೇ ಐದು ಸಾವಿರ ಹಣ ಮೀಸಲಿಡೋ ಭರವಸೆ ನೀಡಿದ್ರು. ಇದೀಗ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಒಂದೋಂದೇ ಗ್ಯಾರಂಟಿ ಈಡೇರಿಸಲು ಮುಂದಾಗುತ್ತಿರೋ ಬೆನ್ನಲ್ಲೇ ನಮಗೆ ಕೊಟ್ಟ ಭರವಸೆ ಈಡೇರಿಸಿ ಎನ್ನುತ್ತಿದ್ದಾರೆ ಬಳ್ಳಾರಿಯ ಜೀನ್ಸ್ ಉದ್ಯಮಿಗಳು.
ಯಾವ ರೀತಿಯ ಜೀನ್ಸ್ ನಿಮಗೆ ಸರಿ ಹೊಂದುತ್ತೆ ಗೊತ್ತಾ?
ಜೀನ್ಸ್ ಉದ್ಯಮ ನಂಬಿಕೊಂಡ ಹತ್ತು ಸಾವಿರ ಜನರು:
ಬಳ್ಳಾರಿ 400 ಜೀನ್ಸ್ ಸಿದ್ದ ಉಡುಪು ಘಟಕಗಳಿವೆ. ಹತ್ತು ಸಾವಿರ ಕುಟುಂಬಗಳು ಇದನ್ನೆ ನಂಬಿ ಜೀವನ ನಡೆಸುತ್ತಿವೆ. ಭಾರತ್ ಜೋಡೋ ಯಾತ್ರೆ ವೇಳೆ ಬಳ್ಳಾರಿಗೆ ಬಂದಿದ್ದ ರಾಹುಲ್ ಜೀನ್ಸ್ ಘಟಕಗಳಿಗೆ ಭೇಟಿ ನೀಡಿದ್ರು. ಇಲ್ಲಿ ಕೆಲಸ ಮಾಡೋ ಕಾರ್ಮಿಕರ ಕಷ್ಟ ಸುಖವನ್ನು ಆಲಿಸಿದ್ದರು. ನಂತರ ಚುನಾವಣೆ ಪ್ರಚಾರಕ್ಕೆ ಬಂದ ವೇಳೆ ಬಳ್ಳಾರಿಯಲ್ಲೊಂದು ಜೀನ್ಸ್ ಅಪರಲ್ ಪಾರ್ಕ್ ನಿರ್ಮಾಣ ಮಾಡುವ ಭರವಸೆ ನೀಡಿದ್ರು. ಜೀನ್ಸ್ ಅಪರೆಲ್ ಪಾರ್ಕ್ ಮಾಡಿದ್ರೇ, ವಾಷಿಂಗ್ ಪ್ಲಾಂಟ್ ಗೆ ಬೇಕಾದ ನೀರು, ಇಪಿಟಿ ಪ್ಲಾಂಟ್, ಸ್ಟೀಚ್ಚಿಂಗ್ ಯೂನಿಟ್ ಗೆ ಸಹಾಯ ಸಹಕಾರ ಸಿಗೋದ್ರ ಜೊತೆಗೆ ಅವಶ್ಯಕವಾದ ಮಾರುಕಟ್ಟೆ ಸೇರಿದಂತೆ ಅನೇಕ ಸಮಸ್ಯೆ ಬಗೆಹರಿಯಲಿದೆ ಎನ್ನುತ್ತಾರೆ ಇಲ್ಲಿಯ ಉದ್ಯಮಿಗಳು. ಕಾಂಗ್ರೆಸ್ ಮೇಲಿನ ವಿಶ್ವಾಸದಿಂದ ವಿಭಜಿತ ಬಳ್ಳಾರಿಯ ಐದು ಕ್ಷೇತ್ರದಲ್ಲಿ ಜನರು ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಿದ್ದಾರೆ. ಇದೀಗ ರಾಹುಲ್ ಗಾಂಧಿ ಕೊಟ್ಟ ಮಾತಿನಂತೆ ಜೀನ್ಸ್ ಉದ್ಯಮಕ್ಕೆ ರಾಜ್ಯ ಸರ್ಕಾರ ಉತ್ತೇಜನ ಕೊಡ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.