
ಮಂಡ್ಯ (ನ.24): ರಾಜ್ಯ ರಾಜಕೀಯದಲ್ಲಿ ಅಧಿಕಾರ ಹಂಚಿಕೆಯ (ಪವರ್‌ಶೇರಿಂಗ್) ಕಿತ್ತಾಟ ತಾರಕಕ್ಕೇರಿರುವ ಬೆನ್ನಲ್ಲೇ, ಸಕ್ಕರೆ ನಾಡು ಮಂಡ್ಯದಲ್ಲಿ ರಾಜಕೀಯ ಹೈಡ್ರಾಮಾ ಮತ್ತು ವ್ಯಂಗ್ಯದ ಪ್ರಸಂಗವೊಂದು ನಡೆದಿದೆ. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮುಂದಿನ ಮುಖ್ಯಮಂತ್ರಿಯಾಗುತ್ತಾರಾ ಎಂಬ ಪ್ರಶ್ನೆಗೆ ಬಿಜೆಪಿ ಕಾರ್ಯಕರ್ತರು 'ಗಿಳಿ ಶಾಸ್ತ್ರ'ದ ಮೊರೆ ಹೋಗಿದ್ದು, ಫಲಿತಾಂಶ ಕಂಡು ದಂಗಾಗಿದ್ದಾರೆ.
ಮಂಡ್ಯದ ನಗರಸಭೆ ಕಚೇರಿ ಮುಂಭಾಗ ಕುಳಿತಿದ್ದ ಗಿಳಿಶಾಸ್ತ್ರ ಹೇಳುವ ವ್ಯಕ್ತಿಯ ಬಳಿ ತೆರಳಿದ ಬಿಜೆಪಿ ಕಾರ್ಯಕರ್ತರು, ಎಂದಿನ ಸಂಪ್ರದಾಯದಂತೆ ಎಲೆ-ಅಡಿಕೆ ಮತ್ತು ದಕ್ಷಿಣೆ ಇಟ್ಟು ಭವಿಷ್ಯ ಕೇಳಿದ್ದಾರೆ. 'ಕರ್ನಾಟಕದ ಮುಂದಿನ ಸಿಎಂ ಯಾರಾಗುತ್ತಾರೆ? ಡಿಕೆಶಿಯವರು ಮುಖ್ಯಮಂತ್ರಿಯಾದರೆ ರಾಜ್ಯಕ್ಕೆ ಒಳ್ಳೆಯದಾಗುತ್ತಾ?' ಎಂಬ ಪ್ರಶ್ನೆಯನ್ನು ಮುಂದಿಟ್ಟಿದ್ದಾರೆ.
ಪಂಜರದಿಂದ ಹೊರಬಂದ ಗಿಳಿ ತೆಗೆದ ಕಾರ್ಡ್ ಅಲ್ಲಿ ನೆರೆದಿದ್ದವರಲ್ಲಿ ಅಚ್ಚರಿ ಮತ್ತು ನಗೆಯುಕ್ಕಿಸಿದೆ. ಗಿಳಿಯು 'ಚೊಂಬು' ಮತ್ತು 'ಚೆಂಡು ಹೂವು' ಇರುವ ಕಾರ್ಡ್‌ಗಳನ್ನು ಆಯ್ದುಕೊಂಡಿದೆ. ಇದನ್ನು ವಿಶ್ಲೇಷಿಸಿದ ಬಿಜೆಪಿ ಕಾರ್ಯಕರ್ತರು, 'ಡಿಕೆಶಿ ಅವರಿಗೆ ಸಿಎಂ ಪಟ್ಟ ಸಿಗುವುದಿಲ್ಲ, ಅವರಿಗೆ ಅಂತಿಮವಾಗಿ ಸಿಗುವುದು 'ಚೊಂಬೇ' ಗತಿ ಎಂದು ಭವಿಷ್ಯ ನುಡಿದು ವ್ಯಂಗ್ಯವಾಡಿದ್ದಾರೆ. ಪ್ರಸ್ತುತ ಈ ಗಿಳಿ ಶಾಸ್ತ್ರದ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ರಾಜಕೀಯ ವಲಯದಲ್ಲಿ ಬಿಸಿಬಿಸಿ ಚರ್ಚೆಗೆ ಗ್ರಾಸವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ