ವನ್ಯ ಮೃಗಗಳಿಗೆ ಬದುಕುವ ಹಕ್ಕೇ ಇಲ್ಲ: ತಂತಿ ಬೇಲಿಗೆ ಸಿಲುಕಿ ನರಳಾಡಿದ ಚಿರತೆ

By Sathish Kumar KH  |  First Published Jul 14, 2023, 10:36 PM IST

ಕಾಡಿನಿಂದ ಆಹಾರವನ್ನರಸಿ ನಾಡಿಗೆ ಬಂದು ತಂತಿಬೇಲಿಗೆ ಸಿಕ್ಕಿಕೊಂಡು ನರಳುತ್ತಿದ್ದ ಚಿರತೆಯೊಂದನ್ನು ಚಿಕ್ಕಮಗಳೂರು ಅರಣ್ಯ ಅಧಿಕಾರಿಗಳು ರಕ್ಷಣೆ ಮಾಡಿದ್ದಾರೆ.


ವರದಿ- ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿಕ್ಕಮಗಳೂರು (ಜು.14): ಆಹಾರ ಅರಸಿ ಬಂದು ತಂತಿ ಬೇಲಿಗೆ ಸಿಲುಕಿ ನರಳಾಡುತ್ತಿದ್ದ ಹೆಣ್ಣು ಚಿರತೆಯೊಂದನ್ನು ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಚಿಕ್ಕಮಗಳೂರು ನಗರ ಹೊರವಲಯದ ಕದ್ರಿಮಿದ್ರಿ ಸಮೀಪದ ಕೆಸವಿನ ಮನೆ ಗ್ರಾಮದಲ್ಲಿ ಈ ಕಾರ್ಯಾಚರಣೆ ನಡೆದಿದೆ.

ಕೆಸವಿನ ಮನೆ ಗ್ರಾಮದ ನಿವಾಸಿಯೊಬ್ಬರಿಗೆ ಸೇರಿದ ಜಮೀನಿಗೆ ಅಳವಡಿಸಲಾಗಿದ್ದ ತಂತಿ ಬೇಲಿಯಲ್ಲಿ ಚಿರತೆಯೊಂದು ಸಿಕ್ಕಿಕೊಂಡಿರುವುದನ್ನು ಸ್ಥಳೀಯ ನಿವಾಸಿಯೊಬ್ಬರು ಇಂದು ಬೆಳಗ್ಗೆ 6.30ರ  ವೇಳೆಗೆ ಗಮನಿಸಿದ್ದರು.ಬೇಲಿಯಿಂದ ಬಿಡಿಸಿಕೊಳ್ಳಲು ಇನ್ನಿಲ್ಲದ ಪ್ರಯತ್ನ ನಡೆಸಿದ್ದ ಚಿರತೆ ಬೇಟೆಗೆ ಹೊಂಚುಹಾಕಿ ಬೇಲಿ ಮೇಲೆ ಕುಳಿತಂತೆ ಕಾಣುತ್ತಿತ್ತು. ಇದರಿಂದ ಗಾಬರಿಗೊಂಡ ವ್ಯಕ್ತಿ ಅರಣ್ಯ ಇಲಾಖೆ ಸಿಬ್ಬಂದಿ ಮಂಜುನಾಥ ಎಂಬುವವರಿಗೆ ಸುದ್ದಿ ಮುಟ್ಟಿಸಿದ್ದರು. ಅವರು ಸ್ಥಳಕ್ಕಾಗಮಿಸಿ ಪರಿಶೀಲಿಸಿದಾಗ ಚಿರತೆ ಬೇಲಿಗೆ ಅಳವಡಿಸಿದ್ದ ಮುಳ್ಳುತಂತಿಗೆ ಸುತ್ತಿಕೊಂಡಿರುವುದು ಕಂಡು ಬಂತು. 

Tap to resize

Latest Videos

undefined

ದಾಳಿ ಮಾಡಿದ ಚಿರತೆಯನ್ನು ಹೆಡೆಮುರಿಕಟ್ಟಿ ಹಂದಿಮರಿ ರೀತಿ ಹೊತ್ತೊಯ್ದ ಹಾಸನದ ಶೂರ!

ಶಿವಮೊಗ್ಗದಿಂದ ಅರವಳಿಕೆ ತಜ್ಞರ ಆಗಮನ:  ನಂತರ ಸುದ್ದಿ ತಿಳಿದು ಉಪ ಅರಣ್ಯ ಸಂರಕ್ಷಣಾಧಿಕಾರಿ ಕ್ರಾಂತಿ ಸೇರಿದಂತೆ ಇತರೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದರು. ಸುಲಭಕ್ಕೆ ಚಿರತೆಯನ್ನು ರಕ್ಷಿಸಲು ಸಾಧ್ಯವಿಲ್ಲದ ಕಾರಣ ಕೂಡಲೇ ಶಿವಮೊಗ್ಗದ ಅರವಳಿಕೆ ತಜ್ಞರಿಗೆ ಮಾಹಿತಿ ರವಾನಿಸಿದರು. ಗ್ರಾಮದ ರಸ್ತೆ ಪಕ್ಕದ ಜಮೀನಿನ ಬೇಲಿಗೆ ಚಿರತೆ ಸಿಕ್ಕಿಕೊಂಡಿದ್ದ ಹಿನ್ನೆಲೆಯಲ್ಲಿ ವಾಹನ ಸಂಚಾರ ತಡೆ ಹಿಡಿದು, ಮುನ್ನೆಚ್ಚರಿಕೆ ವಹಿಸಿದರು. ಆವೇಳೆಗಾಗಲೇ ಸುತ್ತ ಮುತ್ತಲಿನ ಗ್ರಾಮಗಳ ನೂರಾರು ಜನರು ಕುತೂಹಲದಿಂದ ಸ್ಥಳದಲ್ಲಿ ಜಮಾಯಿಸಿದ್ದರು.

ಕೆಲವೇ ನಿಮಿಷಗಳಲ್ಲಿ ಅರವಳಿಕೆ ಚುಚ್ಚುಮದ್ದು ನೀಡಿ ಚಿರತೆ ರಕ್ಷಣೆ : ಮಧ್ಯಾಹ್ನದ ವೇಳಗೆ ಶಿವಮೊಗ್ಗದ ತಾವರೆಕೊಪ್ಪ ಹುಲಿ-ಸಿಂಹಧಾಮದ ಪಶುವೈದ್ಯ ಅರವಳಿಕೆ ತಜ್ಞ ಡಾ.ಮುರಳಿ ಮನೋಹರ್ ನೇತೃತ್ವದ ತಂಡ ಆಗಮಿಸಿ ಚಿರತೆ ಸೆರೆ ಹಿಡಿಯುವ ಕಾರ್ಯಾಚರಣೆ ಆರಂಭಿಸಿದರು.ಕೆಲವೇ ನಿಮಿಷಗಳಲ್ಲಿ ಅರವಳಿಕೆ ಚುಚ್ಚುಮದ್ದು ನೀಡಿ ಚಿರತೆಯನ್ನು ಸುರಕ್ಷಿತವಾಗಿ ಬೇಲಿಯಿಂದ ಬಿಡಿಸಲಾಯಿತು. ಡಾ.ಮುರಳಿ ಮನೋಹರ್ ಅವರಿಗೆ ಸಿಬ್ಬಂದಿಗಳಾದ ರಂಗನಾಥ್, ಆರೀಫ್, ಆರ್‌ಎಫ್ಓ ಮೋಹನ್, ಕೆ.ಜಿ ರಮೇಶ್ ಸಹಕಾರ ನೀಡಿದರು. ಮುಳ್ಳುತಂತಿಗೆ ಸಿಕ್ಕಿಕೊಂಡಿದ್ದರೂ ಚಿರತೆಗೆ ಗಂಭೀರ ಗಾಯಗಳು ಆಗಿರಲಿಲ್ಲ. ಎದೆಯ ಭಾಗದಲ್ಲಿ ರಕ್ತ ಒಸರಿದ ಗುರುತು ಇತ್ತಾದರೂ ಸಂಪೂರ್ಣ ಆರೋಗ್ಯಕರವಾಗಿತ್ತು. ಚಿರತೆಗೆ ಅಗತ್ಯ ಚಿಕಿತ್ಸೆ ನೀಡಲಾಗಿದ್ದು, ಅರಣ್ಯ ಇಲಾಖೆ ಸುಪರ್ದಿಯಲ್ಲಿದೆ. ಅದು ಸಂಪೂರ್ಣ ಚೇತರಿಸಿಕೊಂಡ ನಂತರ ಸೂಕ್ತ ಅರಣ್ಯ ಪ್ರದೇಶಕ್ಕೆ ಬಿಡಲು ಇಲಾಖೆ ನಿರ್ಧರಿಸಿದೆ.

ರಕ್ಷಣಾ ಕಾರ್ಯ ವಿಳಂಬ, ಸ್ಥಳೀಯರ ಅಸಮಾಧಾನ : ಚಿರತೆ ಬೇಲಿಗೆ ಸಿಕ್ಕಿಕೊಂಡಿರುವುದು ಬೆಳಗ್ಗೆ 6.30 ವೇಳಗೆ ಗೊತ್ತಾದರೂ 11.30ರ ವೇಳಗೆ ರಕ್ಷಣಾ ಕಾರ್ಯ ಆರಂಭವಾದ ಬಗ್ಗೆ ಸ್ಥಳೀಯ ನಿವಾಸಿಗಳು ಅಸಮಾಧಾನ ವ್ಯಕ್ತಪಡಿಸಿದರು. ಅರಣ್ಯ ಇಲಾಖೆ ಸಿಬ್ಬಂದಿಗಳು ಈ ರೀತಿ ವಿಳಂಭ ಮಾಡುವುದರಿಂದ ಚಿರತೆ ತಪ್ಪಿಸಿಕೊಳ್ಳುವ ಅಥವಾ ಬಿಡಿಸಿಕೊಳ್ಳುವ ಪ್ರಯತ್ನದಲ್ಲಿ ತಾನೇ ಸಾವಪ್ಪುವ ಸಾಧ್ಯತೆ ಇರುತ್ತದೆ. ಈ ಭಾಗದಲ್ಲಿ ಕೆಲವು ದಿನಗಳ ಹಿಂದೆಯೂ ಚಿರತೆ ಕಾಣಿಸಿಕೊಂಡಿದ್ದ ಬಗ್ಗೆ ಮಾಹಿತಿ ನೀಡಿದರೂ ಮುಂಜಾಗ್ರತಾ ಕ್ರಮವನ್ನು ಇಲಾಖೆ ಕೈಗೊಂಡಿಲ್ಲ ಎಂದು ದೂರಿದರು. ಜಮೀನಿನ ತಂತಿ ಬೇಲಿಗೆ ಸಿಕ್ಕಿಕೊಂಡಿದ್ದ 3 ರಿಂದ 4 ವರ್ಷ ಪ್ರಾಯದ ಹೆಣ್ಣು ಚಿರತೆಯನ್ನು ಕೆಸವಿನ ಮನೆ ಗ್ರಾಮದಲ್ಲಿ ರಕ್ಷಿಸಲಾಗಿದೆ. ಯಾವುದೇ ಗಂಭೀರ ಗಾಯಗಳಿಲ್ಲದೆ ಸಂಪೂರ್ಣ ಆರೋಗ್ಯಕರ ಸ್ಥಿತಿಯಲ್ಲಿದೆ. ಒಂದು ದಿನ ಅದನ್ನು ವಿಶ್ರಾಂತಿಯಲ್ಲಿಡುತ್ತೇವೆ. ನಂತರ ಮೇಲಾಧಿಕಾರಿಗಳ ಅನುಮತಿ ಪಡೆದು ಸೂಕ್ತವಾದ ಅರಣ್ಯ ಪ್ರದೇಶಕ್ಕೆ ಬಿಡಲಾಗುವುದು ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಕ್ರಾಂತಿ ತಿಳಿಸಿದರು. 

ಗೃಹಲಕ್ಷ್ಮಿ ಯೋಜನೆಗೆ ಉಚಿತ ಅರ್ಜಿ ಸಲ್ಲಿಕೆ: ಮನೆ ಬಾಗಿಲಿಗೆ ಬರ್ತಾರೆ ಪ್ರಜಾಪ್ರತಿನಿಧಿಗಳು

ಜಿಲ್ಲೆಗೆ ಅರವಳಿಕೆ ತಜ್ಞರನ್ನು ನೇಮಿಸುವಂತೆ ಒತ್ತಾಯ : ವನ್ಯಪ್ರಾಣಿ-ಮಾನವ ಸಂಘರ್ಷ ನಿಯಂತ್ರಿಸುವ ಸಲುವಾಗಿ ಚಿಕ್ಕಮಗಳೂರು ಜಿಲ್ಲೆಗೂ ಅರವಳಿಕೆ ತಜ್ಞರನ್ನು ನೇಮಿಸಬೇಕು ಎಂದು ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ಜಿ.ವೀರೇಶ್ ಒತ್ತಾಯಿಸಿದರು. ಕೆಸವಿನ ಮನೆಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಪ್ರತಿ ಸಂದರ್ಭದಲ್ಲೂ ಶಿವಮೊಗ್ಗದಿಂದಲೇ ಪಶು ವೈದ್ಯರು, ಅರವಳಿಕೆ ತಜ್ಞರು ಆಗಮಿಸಬೇಕಿದೆ. ಇದರಿಂದ ವನ್ಯ ಪ್ರಾಣಿಗಳು ಜೀವ ಕಳೆದುಕೊಳ್ಳುವುದು ಅಥವಾ ತಪ್ಪಿಸಿಕೊಂಡು ಮನುಷ್ಯ ಮೇಲೆ ದಾಳಿ ಮಾಡುವಂತಹ ಸಾಧ್ಯತೆಗಳು ಇರುತ್ತವೆ ಈ ಕಾರಣಕ್ಕೆ ಚಿಕ್ಕಮಗಳೂರು ಜಿಲ್ಲಾ ಕೇಂದ್ರದಲ್ಲೂ ಸುಸಜ್ಜಿತವಾದ ಪ್ರಯೋಗಾಲಯ, ಅರವಳಿಕೆ ತಜ್ಞರು, ಪಶುವೈದ್ಯರು, ಸಿಬ್ಬಂದಿ ಮತ್ತು ಅಗತ್ಯ ಅನುದಾನವನ್ನೂ ಸರ್ಕಾರ ಒದಗಿಸಬೇಕು ಎಂದು ಒತ್ತಾಯಿಸಿದರು.

click me!