ಪತಿ ಓಂ ಪ್ರಕಾಶ್ ಇಡೀ ಮನುಕುಲಕ್ಕೇ ಮಾರಕ: ಪತ್ನಿ ವಾಟ್ಸ್ ಆ್ಯಪ್ ಆರೋಪ

Published : Apr 22, 2025, 08:25 AM ISTUpdated : Apr 22, 2025, 09:32 AM IST
ಪತಿ ಓಂ ಪ್ರಕಾಶ್  ಇಡೀ ಮನುಕುಲಕ್ಕೇ ಮಾರಕ: ಪತ್ನಿ ವಾಟ್ಸ್ ಆ್ಯಪ್ ಆರೋಪ

ಸಾರಾಂಶ

ಮಾಜಿ ಡಿಜಿಪಿ ಓಂಪ್ರಕಾಶ್ ಪತ್ನಿ ಪಲ್ಲವಿ, ವಾಟ್ಸಾಪ್ ಗ್ರೂಪ್‌ನಲ್ಲಿ ಕೌಟುಂಬಿಕ ಕಲಹ ಬಹಿರಂಗಪಡಿಸಿದ್ದರು. ಪತಿಯ ಭಯೋತ್ಪಾದಕ ಸಂಪರ್ಕ, ಅತ್ಯಾಧುನಿಕ ಶಸ್ತ್ರಾಸ್ತ್ರ ಹೊಂದಿರುವುದು, ಆಹಾರದಲ್ಲಿ ವಿಷ ಬೆರೆಸುವುದು, ಮಗಳಿಗೆ ಮಾದಕ ದ್ರವ್ಯ ನೀಡುವುದು, ಹಣದ ದುರಾಸೆ, ದೌರ್ಜನ್ಯ ಮುಂತಾದ ಗಂಭೀರ ಆರೋಪಗಳನ್ನು ಮಾಡಿದ್ದರು. ತಮ್ಮ ಮತ್ತು ಮಗಳಿಗೆ ಜೀವ ಬೆದರಿಕೆ ಇದೆ ಎಂದು ಕೇಂದ್ರ ಸರ್ಕಾರದ ಸಹಾಯ ಕೋರಿದ್ದರು.

ಬೆಂಗಳೂರು (ಏ.22): ಹತ್ಯೆಗೀಡಾಗಿರುವ ಮಾಜಿ ಡಿಜಿಪಿ ಓಂಪ್ರಕಾಶ್ ಅವರ ಪತ್ನಿ ಪಲ್ಲವಿ ಓಂ ಪ್ರಕಾಶ್‌ ಅವರು ಕೆಲ ದಿನಗಳ ಹಿಂದೆಯಷ್ಟೇ ಹಿರಿಯ ಪೊಲೀಸ್‌ ಅಧಿಕಾರಿಗಳ ಪತ್ನಿಯರು ಇರುವ ವಾಟ್ಸಾಪ್‌ ಗ್ರೂಪ್‌ನಲ್ಲಿ ತಮ್ಮ ಕೌಟುಂಬಿಕ ಕಲಹದ ಬಗ್ಗೆ ಸಂದೇಶಗಳನ್ನು ಹಾಕಿದ್ದರು. ಈ ಸಂದೇಶಗಳಲ್ಲಿ ಓಂ ಪ್ರಕಾಶ್‌ ವಿರುದ್ಧ ಸಾಲು ಸಾಲು ಆರೋಪಗಳನ್ನು ಮಾಡಿದ್ದರು. ಪತಿಗೆ ಭಯೋತ್ಪಾದಕರ ನಂಟಿದೆ, ಅವರು ಪಿಎಫ್‌ಐ ಸಂಘಟನೆ ಸದಸ್ಯರಾಗಿದ್ದಾರೆ. ಪತಿ ಬಳಿ ರಿವಾಲ್ವರ್‌ ಸೇರಿ ಅತ್ಯಾಧುನಿಕ ಶಸ್ತ್ರಾಸ್ತ್ರಗಳಿವೆ. ಆಸ್ತಿ ಮತ್ತು ಹಣದ ದುರಾಸೆಯಿಂದ ನನಗೆ ಮತ್ತು ಮಗಳ ಮೇಲೆ ದೌರ್ಜನ್ಯ ಮಾಡುತ್ತಿದ್ದಾರೆ ಎಂಬಿತರ ಆರೋಪಗಳನ್ನು ಮಾಡಿದ್ದರು ಎಂದು ತಿಳಿದು ಬಂದಿದೆ.

ಆಯ್ದ ಸಂದೇಶಗಳು ಹೀಗಿವೆ:
1.ಪತಿ ಬಳಿ ಅತ್ಯಾಧುನಿಕ ಅಯುಧಗಳಿವೆ

ನಾನು ಮತ್ತು ನನ್ನ ಪುತ್ರಿ, ಪತಿ ಓಂ ಪ್ರಕಾಶ್‌ ಅವರಿಂದ ತೀವ್ರ ಕೌಟುಂಬಿಕ ಹಿಂಸಾಚಾರಕ್ಕೆ ಒಳಗಾಗಿದ್ದೇವೆ. ಪತಿ ಓಂ ಪ್ರಕಾಶ್‌ ಬಳಿ ಅತ್ಯಾಧುನಿಕ ಆಯುಧಗಳಿವೆ. ತಿನ್ನುವ ಆಹಾರ, ಕುಡಿಯುವ ನೀರಿಗೆ ಇನ್ಸುಲಿನ್‌, ಸ್ಯಾನಿಟೈಸರ್‌, ಹಿಟ್‌ ಸೇರಿ ಹಲವು ಜೈವಿಕ ರಾಸಾಯನಿಕಗಳನ್ನು ಬೆರೆಸುತ್ತಿದ್ದಾರೆ. ಇವುಗಳನ್ನು ಇಷ್ಟು ದಿನ ನನ್ನ ಮೇಲೆ ಪ್ರಯೋಗಿಸಿದ್ದಾರೆ. ಈ ಬಗ್ಗೆ ನನ್ನ ಮಗಳು ದನಿ ಎತ್ತಿದ್ದಕ್ಕೆ ಅವಳ ಮಿದುಳನ್ನು ಗುರಿಯಾಗಿಸಿಕೊಂಡು ಮಾದಕ ದ್ರವ್ಯ ನೀಡಲು ಪ್ರಾರಂಭಿಸಿದ್ದಾರೆ. ನನ್ನ ಮಗಳು ಪ್ರತಿ ದಿನ ಸಾಯುತ್ತಿದ್ದಾಳೆ. ನಾವು ತುಂಬಾ ಅನಿಶ್ಚಿತತೆಯಲ್ಲಿದ್ದೇವೆ. ಅಪಾಯಕಾರಿ ಹಾಗೂ ಅಸುರಕ್ಷಿತ ಪರಿಸ್ಥಿತಿಯಲ್ಲಿದ್ದೇವೆ. ನಮಗೆ ತುರ್ತು ಸಹಾಯ ಮತ್ತು ಭದ್ರತೆಯ ಅಗತ್ಯವಿದೆ.

ಕಾಯಿಲೆ ಹೆಸರಲ್ಲಿ ಓಂಪ್ರಕಾಶ್ ಕೊಂದ ಪತ್ನಿ ಬಚಾವ್ ಆಗ್ತಾರಾ, ಏನಿದು ಸ್ಕಿಜೋಫ್ರೇನಿಯಾ?

2.ಪತಿಗೆ ಭಯೋತ್ಪಾದಕರ ಜತೆಗೆ ಸಂಪರ್ಕವಿದೆ
ನನ್ನ ಮಗಳ ಫೋನ್‌, ಲ್ಯಾಪ್‌ಟಾಪ್‌ ಸೇರಿ ಡಿಜಿಟೆಲ್‌ ಸಾಧನಗಳನ್ನು ಹ್ಯಾಕ್‌ ಮಾಡಲಾಗಿದೆ. ಇದಕ್ಕೆ ಸಾಕಷ್ಟು ಪುರಾವೆಗಳಿವೆ. ನಮ್ಮ ಮನೆಯ ಅಡುಗೆಯ ನಾರಾಯಣ್‌, ಪತಿಯ ನೆಚ್ಚಿನ ಸಿಬ್ಬಂದಿ ಮಸ್ತಾನ್‌ ಇವರನ್ನು ವಿಚಾರಣೆ ಮಾಡಿದರೆ ಸತ್ಯಾಂಶ ಹೊರಗೆ ಬರಲಿದೆ. ಪತಿ ಓಂ ಪ್ರಕಾಶ್‌ ಭಯೋತ್ಪಾದಕರ ಸಂಪರ್ಕ ಹೊಂದಿದ್ದಾರೆ. ಪಿಎಫ್‌ಐ ಸಂಘಟನೆ ಸದಸ್ಯರಾಗಿದ್ದಾರೆ. ಪತಿಯ ಸಾಮ್ರಾಜ್ಯ ದೊಡ್ಡದಿದೆ. ದೇಶದ ಸುರಕ್ಷತೆ ಮತ್ತು ಸಾರ್ವಭೌಮತ್ವಕ್ಕೆ ಮಾತ್ರವಲ್ಲದೆ, ಇಡೀ ಮನುಕುಲಕ್ಕೆ ಬೆದರಿಕೆಯಾಗಿದ್ದಾರೆ. ಅವರು ಈ ಅಪಾಯಕಾರಿ ಜೈವಿಕ ರಾಸಾಯನಿಕ ಶಸ್ತ್ರಾಸ್ತ್ರಗಳು ಹಾಗೂ ಆಧುನಿಕ ಶಸ್ತ್ರಾಸ್ತ್ರಗಳನ್ನು ಎಲ್ಲಿಂದ ಪಡೆಯುತ್ತಾರೆ ಎಂಬುದು ಗೊತ್ತಿಲ್ಲ. ಇದು ಸಾಮಾನ್ಯ ಪ್ರಕರಣವಲ್ಲ. ಇದು ಹೈ ಫ್ರೊಫೈಲ್‌ ಪ್ರಕರಣವಾಗಿದೆ. ಭಯೋತ್ಪಾದನೆಗೆ ಸಂಬಂಧಿಸಿದ ಈ ಪ್ರಕರಣವನ್ನು ಎನ್‌ಐಎ ತನಿಖೆ ನಡೆಸಬೇಕು. ನನ್ನ ಮಗಳು ಮತ್ತು ನನಗೆ ತುರ್ತು ಸಹಾಯ ಮತ್ತು ಭದ್ರತೆಯ ಅಗತ್ಯವಿದೆ. ಪೊಲೀಸ್‌ ಸಿಬ್ಬಂದಿ, ಇನ್ಸ್‌ಪೆಕ್ಟರ್‌ಗಳನ್ನು ಪತಿ ಓಂ ಪ್ರಕಾಶ್‌ ಖರೀದಿಸುತ್ತಾರೆ. ನಮಗೆ ಕೇಂದ್ರ ಸರ್ಕಾರದಿಂದ ರಕ್ಷಣೆ ಬೇಕು. ಡಿಜಿಪಿ ಮತ್ತು ನಗರ ಪೊಲೀಸ್‌ ಆಯುಕ್ತರು ನನ್ನನ್ನು ತುರ್ತಾಗಿ ಭೇಟಿಯಾಗಬೇಕು.

3.ಮನೆಗೆ ತರಿಸುವ ಅಹಾರವೂ ಕಲಬೆರೆಕೆ
ಪತಿ ಓಂ ಪ್ರಕಾಶ್‌ ತಮ್ಮ ವಿರುದ್ಧ ಮಾತನಾಡುವವರನ್ನು ಮಾನಸಿಕ ಅಸ್ವಸ್ಥರು ಎಂದು ಬಿಂಬಿಸುತ್ತಾರೆ. ನಮ್ಮ ಮನೆಯಲ್ಲಿ ಕೆಲಸ ಮಾಡಿದ ಮಸ್ತಾನ್‌, ಧನಂಜಯ್‌ ಸೇರಿ ಈ ಹಿಂದೆ ಕೆಲಸ ಮಾಡಿದ ಅನೇಕ ಸಿಬ್ಬಂದಿ ಪತಿಯ ದುಷ್ಕೃತ್ಯಗಳಿಗೆ ಸಾಥ್‌ ನೀಡಿದ್ದಾರೆ. ಅವರನ್ನು ವಿಚಾರಣೆ ಮಾಡಿದರೆ ಎಲ್ಲವೂ ಬಹಿರಂಗವಾಗುತ್ತದೆ. ಪತಿ ತನ್ನ ಹಣ ಬಲದಿಂದ ಎಂತಹ ಕೆಲಸ ಬೇಕಾದರೂ ಮಾಡುತ್ತಾರೆ. ರಾಷ್ಟ್ರಪತಿ, ಪ್ರಧಾನಿ, ಎನ್‌ಐಎ ಹಾಗೂ ಅಜಿತ್‌ ದೋವಲ್ ದಯವಿಟ್ಟು ಸಹಾಯ ಮಾಡಿ. ಕರ್ನಾಟಕದ ಕೆಳ ಹಂತದ ಪೊಲೀಸ್‌ ಅಧಿಕಾರಿಗಳು ಪತಿ ಓಂ ಪ್ರಕಾಶ್‌ಗೆ ಹೆದರುತ್ತಾರೆ. ಸ್ಥಳೀಯ ಪೊಲೀಸರು ಪತಿಯ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಪತಿ ವಿರುದ್ಧ ದೂರು ನೀಡಲು ಹೋದರೆ ದೂರು ಸ್ವೀಕರಿಸುವುದಿಲ್ಲ.

4.ಮಗನ ಬಳಿ ರಿವಾಲ್ವರ್‌, ರೈಫಲ್‌ ಇದೆ
ನನ್ನ ಮನಗ ಬಳಿ ರಿವಾಲ್ವರ್‌ ಮತ್ತು ರೈಫಲ್‌ಗಳಿವೆ. ಅದನ್ನು ತಕ್ಷಣವೇ ವಶಕ್ಕೆ ಪಡೆಯಬೇಕು. ಪತಿ ಓಂ ಪ್ರಕಾಶ್‌ ಆಸ್ತಿಗಾಗಿ ದುರಾಸೆ, ಅಸೂಯೆಯಿಂದ ನನ್ನ ಮತ್ತು ಮಗಳ ಮೇಲೆ ದೌರ್ಜನ್ಯ ಮಾಡುತ್ತಿದ್ದಾರೆ. ನನ್ನ ಮಗ-ಸೊಸೆಯನ್ನು ಬೆಂಬಲಿಸುವ ಪತಿ ಭ್ರಷ್ಟರಾಗಿದ್ದಾರೆ. ಈ ಗ್ರೂಪಿನಲ್ಲಿರುವ ಅಧಿಕಾರಿಗಳು ಹಾಗೂ ಇತರರು ತಕ್ಷಣವೇ ಕ್ರಮ ಕೈಗೊಳ್ಳಬೇಕು. ದಯವಿಟ್ಟು ಈ ಸಂದೇಶವನ್ನು ಸಾಧ್ಯವಾದಷ್ಟು ಸಂರಕ್ಷಿಸಿ. ನಾನು ನನ್ನ ಪತಿ ಬಗ್ಗೆ ಹೇಳಿರುವ ಎಲ್ಲ ಸಂಗತಿಗಳು ಸರಿಯಾಗಿವೆ.

ಡೈನಿಂಗ್‌ ಟೇಬಲ್‌ನಲ್ಲಿ ಕೂತು ಮೀನಿನೂಟ ಮಾಡುವಾಗ ಡಿಜಿಪಿಗೆ ಚಾಕು ಹಾಕಿದ್ದ ಪತ್ನಿ!

5.ನಾನು ಒತ್ತೆಯಾಳಾಗಿದ್ದೇನೆ
ನನ್ನ ಪತಿ ಓಂ ಪ್ರಕಾಶ್‌ ನಿವೃತ್ತಿಗೂ ಕೆಲ ತಿಂಗಳ ಮುನ್ನ ತಿಂಗಳಲ್ಲಿ ಒಬ್ಬ ಪೊಲೀಸ್‌ ಅಧಿಕಾರಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರು. ಆತ್ಮಹತ್ಯೆಗೆ ಮಾನಸಿಕ ಅಸ್ಥಿರತೆ ಕಾರಣ ಎಂದು ಘೋಷಿಸುತ್ತಿದ್ದರು. ಪತಿ ಓಂ ಪ್ರಕಾಶ್‌ ಬಳಿ ರಿವಾಲ್ವರ್‌ ಇದ್ದು, ಕೂಡಲೇ ವಶಕ್ಕೆ ಪಡೆಯಬೇಕು. ಈ ಸಂದೇಶ ಹ್ಯಾಕ್‌ ಅಥವಾ ಕಣ್ಮರೆಯಾಗುವ ಮೊದಲು ಉಳಿಸಿ. ನಾನು ಒತ್ತೆಯಾಳಾಗಿದ್ದೇನೆ. ನಾನು ಎಲ್ಲಿಗೆ ಹೋದರೂ ಓಂ ಪ್ರಕಾಶ್‌ ಅವರ ಎಜೆಂಟ್‌ಗಳು ಕಣ್ಣಿಡುತ್ತಾರೆ. ನಾನು ಕೆಲ ವರ್ಷಗಳಿಂದ ಪ್ರತ್ಯೇಕವಾಗಿ ವಾಸಿಸಲು ಕೇಳುತ್ತಿದ್ದೇನೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಡಿಕೆಶಿ ಸಿಎಂ ಆದ್ರೆ ಅವರ ಸಂಪುಟದಲ್ಲಿ ನಾನು ಸಚಿವ ಆಗೋಲ್ಲ: ಕೆಎನ್ ರಾಜಣ್ಣ ದೊಡ್ಡ ನಿರ್ಧಾರ!
'ಅಫಿಡವಿಟ್‌ನಲ್ಲಿ ಡಿಕ್ಲೇರ್ ಮಾಡಿದ್ದರೂ ಟೀಕೆ 'ಚಿಲ್ಲರ್ ಕೆಲಸ': ಸಿಎಂ ಡಿಸಿಎಂ ದುಬಾರಿ ವಾಚ್ ಬಗ್ಗೆ ಬಿಜೆಪಿ ಹೇಳಿಕೆಗೆ ಕಾಶೆಪ್ಪನವರು ಕಿಡಿ