ಒಳಮೀಸಲಾತಿ ಜಾರಿಗೆ ಬಿಜೆಪಿ ಹಮ್ಮಿಕೊಂಡಿದ್ದ ಪಾದಯಾತ್ರೆ ದಿಢೀರ್ ಮುಂದೂಡಿದ್ದೇಕೆ

Kannadaprabha News   | Kannada Prabha
Published : Mar 14, 2026, 11:01 AM IST
Why BJP Postponed its Internal Reservation Padayatra Government s Stand Revealed

ಸಾರಾಂಶ

ಒಳಮೀಸಲಾತಿ ಜಾರಿಗೆ ಒತ್ತಾಯಿಸಿ ಬಿಜೆಪಿ ಹಮ್ಮಿಕೊಂಡಿದ್ದ ಚಿತ್ರದುರ್ಗ-ಬೆಂಗಳೂರು ಪಾದಯಾತ್ರೆಯನ್ನು ತಾತ್ಕಾಲಿಕವಾಗಿ ಮುಂದೂಡಿದೆ. ಮಾ. 27ರಂದು ನಡೆಯಲಿರುವ ರಾಜ್ಯ ಸಚಿವ ಸಂಪುಟದ ವಿಶೇಷ ಸಭೆಯ ನಿರ್ಣಯವನ್ನು ಕಾದುನೋಡಿ, ಮುಂದಿನ ಹೋರಾಟದ ಬಗ್ಗೆ ನಿರ್ಧರಿಸಲು ಪಕ್ಷ ತೀರ್ಮಾನಿಸಿದೆ.

ಬೆಂಗಳೂರು (ಮಾ.14): ಸುಪ್ರೀಂ ಕೋರ್ಟ್ ನಿರ್ದೇಶನದಂತೆ ನ್ಯಾ.‌ನಾಗಮೋಹನ್ ದಾಸ್ ವರದಿ ಆಧರಿಸಿ ಒಳಮೀಸಲಾತಿ ಜಾರಿ ಮಾಡುವಂತೆ ಒತ್ತಾಯಿಸಿ ಪ್ರಮುಖ ಪ್ರತಿಪಕ್ಷ ಬಿಜೆಪಿ ಇದೇ ತಿಂಗಳ 22ರಿಂದ ಚಿತ್ರದುರ್ಗದಿಂದ ಬೆಂಗಳೂರಿನವರೆಗೆ ನಡೆಸಲು ಉದ್ದೇಶಿಸಿದ್ದ ಪಾದಯಾತ್ರೆಯನ್ನು ತಾತ್ಕಾಲಿಕವಾಗಿ ಮುಂದೂಡಿದೆ.

ಈ ತಿಂಗಳ 27ರಂದು ಒಳಮೀಸಲಾತಿ ಜಾರಿ ಸಂಬಂಧ ನಡೆಯಲಿರುವ ರಾಜ್ಯ ಸರ್ಕಾರದ ಸಚಿವ ಸಂಪುಟದ ವಿಶೇಷ ಸಭೆಯ ನಿರ್ಣಯವನ್ನು ಕಾದು ನೋಡಿ ಬಳಿಕ ಪಾದಯಾತ್ರೆ ಬಗ್ಗೆ ನಿರ್ಧಾರ ಕೈಗೊಳ್ಳಲು ಮುಂದಾಗಿದೆ.

ಶುಕ್ರವಾರ ನಡೆದ ರಾಜ್ಯ ಬಿಜೆಪಿಯ ಹಿರಿಯ ನಾಯಕರನ್ನು ಒಳಗೊಂಡ ಕೋರ್ ಕಮಿಟಿ ಸಭೆಯಲ್ಲಿ ಈ ಬಗ್ಗೆ ವಿಸ್ತೃತವಾಗಿ ಚರ್ಚಿಸಿದ ಬಳಿಕ ರಾಜ್ಯ ಸರ್ಕಾರದ ಅಂತಿಮ ನಿರ್ಧಾರವನ್ನು ತಿಳಿಯದೆ ತರಾತುರಿಯಲ್ಲಿ ಪಾದಯಾತ್ರೆ ಮಾಡುವುದು ಸರಿಯಲ್ಲ ಎಂಬ ಅಭಿಪ್ರಾಯಕ್ಕೆ ಬರಲಾಯಿತು.

ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ, ಸುಪ್ರೀಂಕೋರ್ಟ್ ಮಾರ್ಗದರ್ಶಿ ಸೂಚನೆಯಡಿ ಶೇ.56 ಒಳ ಮೀಸಲಾತಿ ನೀಡುವಂತೆ ನಾವು ಒತ್ತಾಯಿಸುತ್ತೇವೆ. ಇದಕ್ಕೆ ಎಲ್ಲ ರೀತಿಯ ಜನಜಾಗೃತಿಗೂ ಸಿದ್ಧರಿದ್ದೇವೆ. ಸಚಿವ ಕೆ.ಎಚ್.ಮುನಿಯಪ್ಪ ಅವರು 27ರಂದು ವಿಶೇಷ ಸಂಪುಟ ಸಭೆ ಮಾಡುವುದಾಗಿ ಹೇಳಿದ್ದಾರೆ. ಅದನ್ನು ಕಾದು ನೋಡುತ್ತೇವೆ. ಬಳಿಕ ರಾಜ್ಯಾದ್ಯಂತ ಹೋರಾಟ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಸರ್ಕಾರದಿಂದ ಅನ್ಯಾಯ:

ರಾಜ್ಯದ ಕಾಂಗ್ರೆಸ್‌ ಸರ್ಕಾರ ಎಸ್‌ಸಿ, ಎಸ್‌ಟಿ ಸಮುದಾಯಕ್ಕೆ ಸದಾ ಕಾಲ ಅನ್ಯಾಯ ಮಾಡುತ್ತ ಬಂದಿದೆ‌. ಅವರ ವಿಚಾರ ಬಂದಾಗ ಯಾವುದೇ ಸ್ಪಷ್ಡವಾಗಿರುವ ನಿಲುವು ನಿರ್ಧಾರ ತೆಗೆದುಕೊಂಡಿಲ್ಲ. ಹಿಂದೆ ಐದು ವರ್ಷ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾದಾಗ ಒಳ ಮೀಸಲಾತಿ ಹೋರಾಟ, ಎಸ್‌ಸಿ, ಎಸ್‌ಟಿ ಜನಾಂಗಕ್ಕೆ ಮೀಸಲಾತಿ ಹೆಚ್ಚಳ ಮಾಡಬೇಕೆಂಬ ಕೂಗು ಕೇಳಿತು. ಸ್ವಾಮೀಜಿಗಳು ಪಾದಯಾತ್ರೆ ಮಾಡಿದರು. ಹಿಂದುಳಿದ ವರ್ಗದ ಸ್ವಾಮೀಜಿಗಳು ಪಾದಯಾತ್ರೆ ಮಾಡಿದರು. ಅಹಿಂದ ನಾಯಕ ಅಂತ ಹೇಳುವ ಸಿದ್ದರಾಮಯ್ಯ ಮುಸ್ಲೀಂರನ್ನು ಬಿಟ್ಟು ಅಹಿಂದ ವರ್ಗಕ್ಕೆ ಬದುಕಿನಲ್ಲಿ ಬದಲಾಗುವ ಯಾವುದೇ ಯೋಜನೆ ಮಾಡಿಲ್ಲ ಎಂದು ಆರೋಪಿಸಿದರು.

ಕಳಕಳಿ ಇಲ್ಲ:

ರಾಜ್ಯ ಸರ್ಕಾರಕ್ಕೆ ಒಳ ಮೀಸಲಾತಿಯ ಬಗ್ಗೆ ಸ್ಪಷ್ಟತೆ ಇಲ್ಲ. ಈ ಜನಾಂಗದ ಬಗ್ಗೆ ಕಳಕಳಿ ಇಲ್ಲ. ನಾವು ಮೀಸಲಾತಿ ಹೆಚ್ಚಳ ಮಾಡಿದ್ದು ಚುನಾವಣೆ ಗಿಮಿಕ್ ಅಂದರು. ನಾವು ನವೆಂಬರ್‌ನಲ್ಲಿ ಮೀಸಲಾತಿ ಹೆಚ್ಚಳ ಮಾಡಿದ್ದೆವು. ಚುನಾವಣೆ ಎಪ್ರಿಲ್‌ನಲ್ಲಿ ನಡೆಯಿತು‌. ಅಂಬೇಡ್ಕರ್ ಅವರು ಈ ಜನಾಂಗಕ್ಕೆ ಜನಸಂಖ್ಯೆ ಆಧಾರದ ಮೇಲೆ ಮೀಸಲಾತಿ ನೀಡಬೇಕು ಎಂದು ಹೇಳಿದ್ದಾರೆ. ನಾವು ಅಧಿಕಾರದಲ್ಲಿದ್ದಾಗ ಮೀಸಲಾತಿ ಹೆಚ್ಚಳ ಮಾಡಲು ನ್ಯಾ.ನಾಗಮೊಹನ್ ದಾಸ್ ಸಮಿತಿ ವರದಿ ನೀಡಿತ್ತು. ಆ ವರದಿಯಂತೆ ನಾವು ಸಂಪುಟದಲ್ಲಿ ಒಪ್ಪಿಗೆ ಪಡೆದು ಕಾನೂನು ಮಾಡಿ ಜಾರಿ ಮಾಡಿದ್ದೇವೆ. ಒಳ ಮೀಸಲಾತಿ ಹೆಚ್ಚಳವನ್ನೂ ನಾವು ಮಾಡಿದ್ದೆವು. ಅದರ ಬಗ್ಗೆ ಎರಡು ತೀರ್ಪುಗಳಿದ್ದವು. ಇವರಿಗೆ ಬದ್ದತೆ ಇದ್ದಿದ್ದರೆ 2013 ರಲ್ಲಿಯೇ ಮಾಡಬಹುದಿತ್ತು ಎಂದರು.

ಒಳ ಮೀಸಲಾತಿ ಜಾರಿ ಮಾಡಲು ಸಂವಿಧಾನ ತಿದ್ದುಪಡಿ ಅಗತ್ಯ ಇಲ್ಲ ಅಂತ ಸುಪ್ರೀಂ ಕೋರ್ಟ್ ಹೇಳಿತು. ನಾವು ಮಾಡಿದಂತೆ ಸುಪ್ರೀಂ ಕೋರ್ಟ್ ಹೇಳಿತು. ಅದರಂತೆ ಮತ್ತೆ ನ್ಯಾ.ನಾಗಮೊಹನ ದಾಸ್ ಸಮಿತಿ ಮಾಡಿದರು. ಅವರು ವರದಿ ಕೊಟ್ಟರೂ ಆ ವರದಿ ಜಾರಿ ಮಾಡದೇ ಸಂಪುಟದಲ್ಲಿ ತಮಗೆ ಬೇಕಾದಂತೆ ಮೀಸಲಾತಿ ಬಗ್ಗೆ ನಿರ್ಧಾರ ಮಾಡಿದರು‌ ಎಂದರು.

ಒಳ ಮೀಸಲಾತಿಯನ್ನು ಕಾನೂನು ಮಾಡಿದ್ದೀರಿ. ಅದಕ್ಕೆ ರಾಜ್ಯಪಾಲರ ಒಪ್ಪಿಗೆಯೂ ಇದೆ. ಆದರೆ, ರಾಜ್ಯ ಸರ್ಕಾರಕ್ಕೆ ತಾನೇ ಮಾಡಿದ ಕಾನೂನು ಜಾರಿ ಮಾಡಲು ಆಗುತ್ತಿಲ್ಲ. ಅದಕ್ಕೆ ವಿಶೇಷ ಸಂಪುಟ ಸಭೆ ಏಕೆ ಬೇಕು? ಅವರ ಮಂತ್ರಿ ಮಂಡಲದಲ್ಲಿಯೇ ಎರಡು ಗುಂಪಿದೆ. ಒಳ ಮಿಸಲಾತಿಯೇ ಬೇಡ ಎನ್ನುವ ಗುಂಪಿದೆ. ಮುಖ್ಯಮಂತ್ರಿಗಳು ಒಳ ಮೀಸಲಾತಿ ಬೇಡ ಎನ್ನುವ ಗುಂಪಿನ ಸಚಿವರ ಒತ್ತಡಕ್ಕೆ ಮಣಿದಿದ್ದಾರೆ ಎಂದು ಬೊಮ್ಮಾಯಿ ಆಪಾದಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಸದ ಗೋವಿಂದ ಕಾರಜೋಳ, ಮಾಜಿ ಸಚಿವರಾದ ಬಿ. ಶ್ರೀರಾಮುಲು, ರಾಜುಗೌಡ, ಶಿವನಗೌಡ ನಾಯಕ್ ಹಾಗೂ ರಾಜ್ಯ ಬಿಜೆಪಿ ಎಸ್ಟಿ ಮೋರ್ಚಾ ಅಧ್ಯಕ್ಷ ಬಂಗಾರು ಹನುಮಂತು ಹಾಜರಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದ ಗೃಹ ಸಚಿವ ಜಿ. ಪರಮೇಶ್ವರ್; ಒಳಮೀಸಲಾತಿ ಬಗ್ಗೆ ಮಹತ್ವದ ಘೋಷಣೆ!
LPG vs Induction stove: ಗ್ಯಾಸ್ ಸಿಲಿಂಡರ್-ಇಂಡಕ್ಷನ್ ಸ್ಟೌ ಎರಡರಲ್ಲಿ ಯಾವುದು ಅಡುಗೆ ಮಾಡಲು ಕಡಿಮೆ ಖರ್ಚು?