UGC ಹೊಸ ನಿಯಮ: ದಶಕಗಳ ಕಾಲ ದುಡಿದ ಕರ್ನಾಟಕದ 6,000+ ಅತಿಥಿ ಉಪನ್ಯಾಸಕರು ಈಗ ನಿರುದ್ಯೋಗಿಗಳು!

Kannadaprabha News   | Kannada Prabha
Published : Mar 14, 2026, 09:22 AM IST
34,000 Guest Teachers in Distress: No Honorarium for 5 Months!

ಸಾರಾಂಶ

ಯುಜಿಸಿ ನಿಗದಿಪಡಿಸಿದ ಹೊಸ ಅರ್ಹತಾ ಮಾನದಂಡಗಳಿಂದಾಗಿ, ರಾಜ್ಯದ ಸರ್ಕಾರಿ ಕಾಲೇಜುಗಳಲ್ಲಿ ದಶಕಗಳಿಂದ ಸೇವೆ ಸಲ್ಲಿಸುತ್ತಿದ್ದ ಸಾವಿರಾರು ಅತಿಥಿ ಉಪನ್ಯಾಸಕರು ಉದ್ಯೋಗ ಕಳೆದುಕೊಂಡಿದ್ದಾರೆ. ಸೇವಾ ಭದ್ರತೆಗಾಗಿ ಹೋರಾಡುತ್ತಿದ್ದ ಇವರಿಗೆ, ಹೈಕೋರ್ಟ್ ಆದೇಶದ ನಂತರ ಹೊಸ ನಿಯಮ ಪಾಲಿಸದ ಕಾರಣ ನಿರುದ್ಯೋಗದ ಸಂಕಷ್ಟ

ಗೋಪಾಲ್‌ ಯಡಗೆರೆ

ಶಿವಮೊಗ್ಗ (ಮಾ.14) ಕಳೆದ ಎರಡು ದಶಕಗಳಿಂದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕೆಲಸ ಮಾಡುತ್ತ ಬಂದಿರುವ ಸಾವಿರಾರು ಮಂದಿ ಅತಿಥಿ ಉಪನ್ಯಾಸಕರು ಇಂದು ದೊಡ್ಡ ಸಂಕಷ್ಟಕ್ಕೆ ಸಿಲುಕಿದ್ದಾರೆ. ಯುಜಿಸಿ ನಿಗದಿ ಮಾಡಿದ ಹೊಸ ಅರ್ಹತಾ ಮಾನದಂಡಗಳೇ ಇವರಿಗೆ ಶಾಪವಾಗಿ ಪರಿಣಮಿಸಿದ್ದು, ಯುಜಿಸಿಯ ಹೊಸ ನಿಯಮಗಳನ್ನು ಪೂರೈಸದ ಕಾರಣ, ಸುಮಾರು 6,000ಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರು ಕೆಲಸ ಇಲ್ಲದ ನಿರುದ್ಯೋಗಿಗಳಾಗಿದ್ದಾರೆ.

ಹೈಕೋರ್ಟ್ ಆದೇಶದಂತೆ, ರಾಜ್ಯ ಕಾಲೇಜು ಶಿಕ್ಷಣ ಇಲಾಖೆಯು 2025–26ನೇ ಸಾಲಿನ 2, 4 ಮತ್ತು 6ನೇ ಸೆಮಿಸ್ಟರ್‌ಗಳಿಗೆ ಹೊಸ ನೇಮಕಾತಿ ಪ್ರಕ್ರಿಯೆ ಆರಂಭಿಸಿದೆ. ಈ ನೇಮಕಾತಿ ಸಂಪೂರ್ಣವಾಗಿ ಯುಜಿಸಿ ನಿಯಮಗಳ ಆಧಾರವಾಗಿದ್ದು, ಸ್ನಾತಕೋತ್ತರ ಪದವಿಯ ಜೊತೆಗೆ ಎನ್‌ಇಟಿ, ಕೆ-ಸೆಟ್ ಅಥವಾ ಪಿಎಚ್‌.ಡಿ ಕಡ್ಡಾಯವಾಗಿದೆ. ಕಳೆದ ಡಿಸೆಂಬರ್ 4ಕ್ಕೆ ಈ ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಅರ್ಹತೆ ಇಲ್ಲದ ಅತಿಥಿ ಉಪನ್ಯಾಸಕರಿಗೆ ಮುಂದಿನ ಅವಕಾಶಗಳು ಸಿಗದ ಕಾರಣ ಅವರು ನಿರುದ್ಯೋಗ ಸಮಸ್ಯೆ ಎದುರಿಸುತ್ತಿದ್ದಾರೆ.

ಅತಿಥಿ ಉಪನ್ಯಾಸಕರ ಸಮಸ್ಯೆಗೆ ಇದೊಂದು ಹೊಸ ಸಂಗತಿಯಲ್ಲ. 1995–96ರಲ್ಲೇ ಅರೆಕಾಲಿಕ ಉಪನ್ಯಾಸಕರನ್ನು ಕಾಯಂ ಮಾಡಲು ಸರ್ಕಾರ ತೀರ್ಮಾನಿಸಿತ್ತು. ಆದರೆ, ಸೇವಾ ಭದ್ರತೆ ನೀಡಬೇಕಾಗುತ್ತದೆ ಎಂಬ ಕಾರಣಕ್ಕೆ, 2003ರಲ್ಲಿ ‘ಅರೆಕಾಲಿಕ’ ಎಂಬ ಪದವನ್ನು ‘ಅತಿಥಿ’ ಎಂದು ಬದಲಾಯಿಸಲಾಯಿತು. ಇದರಿಂದ ಸೇವಾ ಭದ್ರತೆಗೆ ಇರುವ ಹಕ್ಕುಗಳು ಕಳೆದುಕೊಳ್ಳುವಂತಾಯಿತು. ಮೊದಲಿಗೆ ತಿಂಗಳಿಗೆ ಕೇವಲ 1,200 ರು. ಗೌರವಧನ ಪಡೆದುಕೊಳ್ಳುತ್ತಿದ್ದ ಈ ಉಪನ್ಯಾಸಕರು, ವರ್ಷಗಳಿಂದ ಸೇವಾ ಭದ್ರತೆಗಾಗಿ ಹೋರಾಡುತ್ತಿದ್ದರು. 2022-23ರಲ್ಲಿ ಹೋರಾಟ ತೀವ್ರವಾದಾಗ ಅಂದಿನ ಸರ್ಕಾರ ಸಂಬಳವನ್ನು ಹೆಚ್ಚಿಸುವ ಸಲುವಾಗಿ ಅವರ ಕಾರ್ಯಭಾರವನ್ನೂ ಹೆಚ್ಚಿಸಿದ ಪರಿಣಾಮ ಅಂದು ಸುಮಾರು 10 ಸಾವಿರಕ್ಕೂ ಹೆಚ್ಚು ಮಂದಿ ಕೆಲಸವನ್ನು ಕಳೆದುಕೊಳ್ಳಬೇಕಾಯಿತು.

ಸೇವಾ ಭದ್ರತೆಯ ವಿಚಾರ ಚರ್ಚೆಯಲ್ಲಿ ಇರುವಾಗಲೇ ಯುಜಿಸಿಯು, ‘ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಬೋಧಕರಾಗಿ ಕೆಲಸ ಮಾಡುವವರು ಸ್ನಾತಕೋತ್ತರ ಪದವಿಯ ಜತೆಗೆ ರಾಷ್ಟ್ರೀಯ ಅರ್ಹತಾ ಪರೀಕ್ಷೆ (ಎನ್‌ಇಟಿ) ಇಲ್ಲವೇ ಕರ್ನಾಟಕ ರಾಜ್ಯ ಅರ್ಹತಾ ಪರೀಕ್ಷೆ (ಕೆ-ಸೆಟ್‌) ತೇರ್ಗಡೆಯಾಗಿರಬೇಕು, ಪಿಎಚ್‌.ಡಿ ಪಡೆದಿರಬೇಕು ಎಂದು ನಿಯಮ ಜಾರಿಗೆ ತಂದಿತು. ಪ್ರಥಮ ದರ್ಜೆ ಕಾಲೇಜುಗಳಲ್ಲೂ ಇಂತಹ ಅರ್ಹತೆ ಹೊಂದಿರುವ ಅತಿಥಿ ಉಪನ್ಯಾಸಕರನ್ನೇ ನೇಮಕ ಮಾಡಿಕೊಳ್ಳಬೇಕು ಎಂದು ಸೂಚಿಸಿತ್ತು.

ಯುಜಿಸಿ ರೂಪಿಸಿದ ನಿಯಮವನ್ನು ಪ್ರಶ್ನಿಸಿ, ಅತಿಥಿ ಉಪನ್ಯಾಸಕರು ಹೈಕೋರ್ಟ್‌ ಮೆಟ್ಟಿಲೇರಿದ್ದರು. ನಿಗದಿಪಡಿಸಿದ ‘ಅರ್ಹತೆ’ ಇರುವವರು, ಇಲ್ಲದವರ ನಡುವಿನ ಕಾನೂನು ಹೋರಾಟ ಆರಂಭವಾಗಿದ್ದರಿಂದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ನೇಮಕಾತಿ ಪ್ರಕ್ರಿಯೆ ಕಗ್ಗಂಟಾಗಿತ್ತು. ವಿಚಾರಣೆಯ ನಂತರ ಯುಜಿಸಿ ನಿಯಮವನ್ನೇ ಕೋರ್ಟ್‌ ಎತ್ತಿಹಿಡಿದಿತ್ತು.

ವಿದ್ಯಾರ್ಹತೆ ಪಡೆಯಲು ಉನ್ನತ ಶಿಕ್ಷಣ ಇಲಾಖೆ ನೀಡಿದ್ದ ಮೂರು ವರ್ಷಗಳ ಗಡುವೂ ಮುಕ್ತಾಯವಾಗಿದ್ದು, ಆಯಾ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಪಡೆದು ಹಿಂದಿನಿಂದಲೂ ಕೆಲಸ ಮಾಡುತ್ತ ಬಂದಿರುವವರು ಈಗ ಕೆಲಸ ಇಲ್ಲದೆ ಖಾಲಿ ಕೂರುವಂತಾಗಿದೆ. ಇದರಲ್ಲಿ ಹಲವರಿಗೆ ವಯಸ್ಸು 40 ವರ್ಷ ದಾಟಿದ್ದು ಅವರಿಗೆ ಬೇರೆಲ್ಲೂ ಕೆಲಸ ಸಿಗದೆ ನಿರುದ್ಯೋಗ ಸ್ಥಿತಿಯನ್ನು ಅನುಭವಿಸುತ್ತಿದ್ದಾರೆ.

ಉಪನ್ಯಾಸಕ್ಕೆ ಅವಕಾಶ ನೀಡಿ: ವೆಂಕಟೇಶ

ಯುಜಿಸಿ ನಿಯಮದಲ್ಲಿರುವಂತೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರನ್ನು ಮಾತ್ರ ನೇಮಿಸಿಕೊಳ್ಳಬೇಕೆಂದು ಭೇದ ಮಾಡದೆ ಎಲ್ಲರನ್ನು ಉಪನ್ಯಾಸಕ್ಕೆ ಅವಕಾಶ ನೀಡಬೇಕು. ಯುಜಿಸಿ ಪರೀಕ್ಷೆ ಅಥವಾ ಎನ್‌ಇಟಿ ಅಥವಾ ಕರ್ನಾಟಕ ರಾಜ್ಯ ಅರ್ಹತಾ ಪರೀಕ್ಷೆ (ಕೆ-ಸೆಟ್‌) ಉತ್ತೀರ್ಣರಾದವರನ್ನು ಮಾತ್ರ ಅತಿಥಿ ಉಪನ್ಯಾಸಕರ ಹುದ್ದೆಗೆ ಪರಿಗಣಿಸದೆ, ಎನ್‌ಇಟಿ ಅಥವಾ ಕೆ- ಸೆಟ್‌ ಪರೀಕ್ಷೆಯ ಅರ್ಹರಲ್ಲದವರನ್ನು ಅತಿಥಿ ಉಪನ್ಯಾಸಕ ಹುದ್ದೆಗೆ ಪರಿಗಣಿಸಬೇಕು ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ನಾನ್‌ ಯುಜಿಸಿ ಅತಿಥಿ ಉಪನ್ಯಾಸಕರ ಸಂಘದ ರಾಜ್ಯಾಧ್ಯಕ್ಷ ಸಿ.ವೆಂಕಟೇಶ್‌ ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದ ಗೃಹ ಸಚಿವ ಜಿ. ಪರಮೇಶ್ವರ್; ಒಳಮೀಸಲಾತಿ ಬಗ್ಗೆ ಮಹತ್ವದ ಘೋಷಣೆ!
ಒಳಮೀಸಲಾತಿ ಜಾರಿಗೆ ಬಿಜೆಪಿ ಹಮ್ಮಿಕೊಂಡಿದ್ದ ಪಾದಯಾತ್ರೆ ದಿಢೀರ್ ಮುಂದೂಡಿದ್ದೇಕೆ