ಯಾರು ಏನೇ ಹೇಳಿದರೂ ನಾನೇ ರೈತ ಸಂಘದ ಅಧ್ಯಕ್ಷ: ಕೋಡಿಹಳ್ಳಿ

By Kannadaprabha NewsFirst Published Jun 26, 2022, 7:55 AM IST
Highlights

*  ರೈತ ಸಂಘದಲ್ಲಿ ಯಾವುದೇ ಬಿರುಕು ಇಲ್ಲ, ಎಲ್ಲವೂ ಸರಿಯಾಗಿಯೇ ಇದೆ
*  ಬೇರೆಯವರು ಸುಳ್ಳು ಹೇಳಿ ಗೊಂದಲ ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ
*  ಪಠ್ಯ ಪುಸ್ತಕ ವಿವಾದ ಬೇಡ 

ಬೆಂಗಳೂರು(ಜೂ.26):  ಭ್ರಷ್ಟಾಚಾರದ ಆರೋಪ ಕೇಳಿ ಬಂದಾಗ ಆ ಬಗ್ಗೆ ಸೂಕ್ತ ತನಿಖೆ ನಡೆಸಿ ತಪ್ಪು ಸಾಬೀತಾದರೆ ಅವರಿಗೆ ತಕ್ಕ ಶಿಕ್ಷೆ ಆಗಬೇಕು. ನಾನು ತಪ್ಪು ಮಾಡಿದ್ದರೆ ನನಗೂ ಶಿಕ್ಷೆಯಾಗಲಿ ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್‌ ಹೇಳಿದ್ದಾರೆ. 

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತ ಸಂಘದಲ್ಲಿ ಯಾವುದೇ ಬಿರುಕು ಇಲ್ಲ, ಎಲ್ಲವೂ ಸರಿಯಾಗಿಯೇ ಇದೆ. ಯಾರು ಏನು ಹೇಳಿದರೂ ತಾವೇ ರೈತ ಸಂಘದ ಅಧ್ಯಕ್ಷನಾಗಿ ಅಧಿಕಾರದಲ್ಲಿದ್ದೇನೆ. ಬೇರೆಯವರು ಸುಳ್ಳು ಹೇಳಿ ಗೊಂದಲ ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ ಎಂದರು. ರಾಜಕಾರಣದಲ್ಲಿ ಭ್ರಷ್ಟಾಚಾರ ತುಂಬಿದ್ದು, ಒಂದು ಪಕ್ಷದ ಭ್ರಷ್ಟಾಚಾರಕ್ಕೆ ಪ್ರತಿಯಾಗಿ ಮತ್ತೊಂದು ಪಕ್ಷದ ಭ್ರಷ್ಟಾಚಾರ ತೋರಿಸಿ ಬಾಯಿ ಮುಚ್ಚಿಸುವ ಕೆಲಸವನ್ನು ಎರಡು ಪಕ್ಷದ ನಡುವೆ ನಡೆಯುತ್ತಿದೆ ಎಂದು ಆರೋಪಿಸಿದರು.

ಕೋಡಿಹಳ್ಳಿ ಬಣದ ರೈತರ ಮೇಲೆ ಜೆಡಿಎಸ್‌ನ ಮಸಿ: ಇಬ್ಬರಿಗೆ ಗಾಯ, ಆಸ್ಪತ್ರೆಗೆ ದಾಖಲು!

ಸೂಕ್ತ ಬೆಂಬಲ ಬೆಲೆ ನೀಡಿ:

ದೇಶಾದ್ಯಂತ ಕೇಂದ್ರ ಸರ್ಕಾರ ಕನಿಷ್ಠ ಬೆಂಬಲ ಬೆಲೆ ನೀಡಬೇಕು ಎಂದು ಘೋಷಿಸಿದ್ದು ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಯೋಜನೆಯನ್ನು ಸರಿಯಾಗಿ ಜಾರಿಗೊಳಿಸಿ ರೈತರಿಗೆ ಉಪಯೋಗ ಆಗುವಂತೆ ಹಾಗೂ ತಲುಪುವಂತೆ ಮಾಡಬೇಕು. ಮುಂಗಾರು ಆರಂಭವಾಗಿದ್ದು, ರಾಸಾಯನಿಕ ಗೊಬ್ಬರಗಳ ಬೆಲೆ ಗಗನಕ್ಕೆ ಏರುತ್ತಿರುವುದರಿಮದ ರೈತರು ಕಂಗಾಲಾಗಿದ್ದಾರೆ. ಆದರೆ ಕೃಷಿ ಇಲಾಖೆ ಇತ್ತ ಗಮನ ನೀಡಿಲ್ಲ. ಮತ್ತೊಂದು ಹಾವೇರಿ ಗೋಲಿಬಾರ್‌ ಘಟನೆ ನಡೆಯದ ಹಾಗೇ ನೋಡಿಕೊಳ್ಳಿ ಎಂದು ಮುಖ್ಯಮಂತ್ರಿಗಳಿಗೆ ಕೋಡಿಹಳ್ಳಿ ಚಂದ್ರಶೇಖರ್‌ ವಿನಂತಿಸಿಕೊಂಡರು.

ಪಠ್ಯ ಪುಸ್ತಕ ವಿವಾದ ಬೇಡ :

ಪಠ್ಯ ಪುಸ್ತಕ ಪರಿಷ್ಕರಣೆ ವಾದ ವಿವಾದ ಮಕ್ಕಳ ಮೇಲೆ ಪರಿಣಾಮ ಬೀರುತ್ತಿದೆ. ಇದರಿಂದ ಮಕ್ಕಳ ಭವಿಷ್ಯಕ್ಕೆ ತೊಂದರೆ ಆಗುತ್ತಿದೆ. ಪಠ್ಯ ಪುಸ್ತಕ ಪರಿಷ್ಕರಣೆಯನ್ನು ಸೂಕ್ತ ರೀತಿಯಲ್ಲಿ ಮಾಡಿ ಎಂದು ಅವರು ಹೇಳಿದರು.
 

click me!