ನೀಟ್‌ ಕೋಟಾ ರದ್ದತಿ ಪರಿಣಾಮವೇನು?: ರಾಜ್ಯಗಳ ಅಭಿಪ್ರಾಯ ಕೇಳಿದ ಕೇಂದ್ರ ಸರ್ಕಾರ

Published : May 11, 2025, 09:27 AM IST
ನೀಟ್‌ ಕೋಟಾ ರದ್ದತಿ ಪರಿಣಾಮವೇನು?: ರಾಜ್ಯಗಳ ಅಭಿಪ್ರಾಯ ಕೇಳಿದ ಕೇಂದ್ರ ಸರ್ಕಾರ

ಸಾರಾಂಶ

ಸುಪ್ರೀಂ ಕೋರ್ಟ್‌ ಆದೇಶದ ಹಿನ್ನೆಲೆಯಲ್ಲಿ ಸ್ನಾತಕೋತ್ತರ ವೈದ್ಯಕೀಯ ಕೋರ್ಸುಗಳ ಪ್ರವೇಶದಲ್ಲಿ ರಾಜ್ಯ ಅಥವಾ ನಿವಾಸಿ ಕೋಟಾ(ಡೊಮಿಸೈಲ್‌) ಮೀಸಲಾತಿ ರದ್ದಾಗುವ ಆತಂಕ ಎದುರಾಗಿರುವ ಬೆನ್ನಲ್ಲೇ, ಕೇಂದ್ರ ಸರ್ಕಾರ ಅದರಿಂದಾಗುವ ಪರಿಣಾಮಗಳ ಬಗ್ಗೆ ಕರ್ನಾಟಕ ಸೇರಿ ಎಲ್ಲಾ ರಾಜ್ಯಗಳ ಅಭಿಪ್ರಾಯ ಕೇಳಿದೆ.

ಲಿಂಗರಾಜು ಕೋರಾ

ಬೆಂಗಳೂರು (ಮೇ.11): ಸುಪ್ರೀಂ ಕೋರ್ಟ್‌ ಆದೇಶದ ಹಿನ್ನೆಲೆಯಲ್ಲಿ ಸ್ನಾತಕೋತ್ತರ ವೈದ್ಯಕೀಯ ಕೋರ್ಸುಗಳ ಪ್ರವೇಶದಲ್ಲಿ ರಾಜ್ಯ ಅಥವಾ ನಿವಾಸಿ ಕೋಟಾ(ಡೊಮಿಸೈಲ್‌) ಮೀಸಲಾತಿ ರದ್ದಾಗುವ ಆತಂಕ ಎದುರಾಗಿರುವ ಬೆನ್ನಲ್ಲೇ, ಕೇಂದ್ರ ಸರ್ಕಾರ ಅದರಿಂದಾಗುವ ಪರಿಣಾಮಗಳ ಬಗ್ಗೆ ಕರ್ನಾಟಕ ಸೇರಿ ಎಲ್ಲಾ ರಾಜ್ಯಗಳ ಅಭಿಪ್ರಾಯ ಕೇಳಿದೆ. ಇದಕ್ಕೆ ಕರ್ನಾಟಕ ಸರ್ಕಾರ ಪ್ರಸ್ತುತ ರಾಜ್ಯದ ಎಲ್ಲಾ ಮಾದರಿ ವೈದ್ಯಕೀಯ ಶಿಕ್ಷಣ ಸಂಸ್ಥೆಗಳಲ್ಲಿ ಸರ್ಕಾರಿ ಕೋಟಾದಡಿ ಲಭ್ಯವಾಗುತ್ತಿರುವ ಸೀಟುಗಳ ಪೈಕಿ ಶೇ.50ರಷ್ಟು ಸೀಟುಗಳು ರಾಜ್ಯದ ವಿದ್ಯಾರ್ಥಿಗಳಿಗೆ ಅಥವಾ ಸ್ಥಳೀಯ ನಿವಾಸಿಗಳಿಗೆ ದೊರೆಯುತ್ತಿವೆ. ನಿವಾಸಿ ಕೋಟಾ ರದ್ದಾದಲ್ಲಿ ಈ ಸೀಟುಗಳು ಅಖಿಲ ಭಾರತ ಕೋಟಾದಡಿ ಮೆರಿಟ್‌ ಆಧಾರದಲ್ಲಿ ಹಂಚಿಕೆಯಾಗುತ್ತವೆ.

ಅಷ್ಟೇ ಅಲ್ಲ, ಶೈಕ್ಷಣಿಕವಾಗಿ ತೀವ್ರ ಹಿಂದುಳಿದಿರುವ ಕಲ್ಯಾಣ ಕರ್ನಾಟಕ ಭಾಗದ ವೈದ್ಯಕೀಯ ಕಾಲೇಜುಗಳಲ್ಲಿ ಸಂವಿಧಾನದ 371(ಜೆ) ಅಡಿ ಸ್ಥಳೀಯ ನಿವಾಸಿಗಳಿಗೆ ಲಭ್ಯವಾಗಿರುತ್ತಿರುವ ಸರ್ಕಾರಿ ಕೋಟಾದ ಶೇ.70ರಷ್ಟು ಸೀಟುಗಳ ಮೇಲೂ ಇದು ಪರಿಣಾಮ ಬೀರುವ ಸಾಧ್ಯತೆ ಇದೆ. ಜತೆಗೆ ರಾಜ್ಯದ ಇತರ ಭಾಗಗಳ ವೈದ್ಯಕೀಯ ಕಾಲೇಜುಗಳಲ್ಲಿ 371(ಜೆ) ಅಡಿ ಲಭ್ಯವಾಗುವ ಶೇ.8ರಷ್ಟು ಸೀಟುಗಳೂ ಕೈತಪ್ಪಿ ಸಂಪೂರ್ಣ ಮೆರಿಟ್‌ ಆಧಾರದಲ್ಲಿ ಹಂಚಿಕೆಯಾಗಬಹುದು. ಇದರಿಂದ ರಾಜ್ಯದ ವಿದ್ಯಾರ್ಥಿಗಳಿಗೆ ತೀವ್ರ ಅನ್ಯಾಯವಾಗಲಿದೆ ಎಂದು ತನ್ನ ಅಭಿಪ್ರಾಯ ತಿಳಿಸಿದೆ. 

ಸಾಲ ಮರುಪಾವತಿಯಲ್ಲಿ ದ.ಕನ್ನಡ ನಂ.1: ಡಿ.ಕೆ.ಶಿವಕುಮಾರ್‌

ರಾಜ್ಯಗಳ ಅಭಿಪ್ರಾಯಕ್ಕೆ ಕೇಂದ್ರದಿಂದ ಯಾವ ನಿರ್ದೇಶನ ಬರುತ್ತದೆ ಎನ್ನುವುದನ್ನು ಆಧರಿಸಿ ಮುಂದಿನ ನಿರ್ಧಾರ ಮಾಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣದಲ್ಲಿ ನಿವಾಸಿ ಕೋಟಾದಡಿ ಮೀಸಲಾತಿ ನೀಡುವುದು ಸಾಂವಿಧಾನಿಕ ಅಲ್ಲ ಎಂದು ಸುಪ್ರೀಂ ಕೋರ್ಟ್‌ ಕಳೆದ ಜ.29ರಂದು ತೀರ್ಪು ನೀಡಿತ್ತು. ಸಂವಿಧಾನದ ಪ್ರಕಾರ ಪ್ರತ್ಯೇಕ ರಾಜ್ಯ ಅಥವಾ ಪ್ರಾಂತೀಯ ನಿವಾಸ ಎಂಬುದಿಲ್ಲ. ಇಡೀ ಭಾರತದ ಯಾವುದೇ ಭಾಗದಲ್ಲಿ ವಾಸಿಸುವ ನಾಗರಿಕರಿಗೆ ದೇಶ ಏಕೈಕ ನಿವಾಸ. ಹಾಗಾಗಿ ನೀಟ್‌ ಅರ್ಹತೆ ಪಡೆದಿರುವ ಅಭ್ಯರ್ಥಿಗಳಿಗೆ ಮೆರಿಟ್‌ ಆಧಾರದಲ್ಲಿ ಎಲ್ಲ ಸೀಟುಗಳನ್ನು ಹಂಚಿಕೆ ಮಾಡಬೇಕೆಂದು ಆದೇಶಿಸಿದೆ. ಈ ಆದೇಶ ಜಾರಿ ಮಾಡಬೇಕಾ ಅಥವಾ ಆದೇಶ ಪುನರ್‌ ಪರಿಶೀಲಿಸಲು ಮೇಲ್ಮನವಿ ಸಲ್ಲಿಸಬೇಕಾ ಎಂಬ ಜಿಜ್ಞಾಸೆಯಲ್ಲಿರುವ ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳ ಅಭಿಪ್ರಾಯ ಸಂಗ್ರಹಿಸಿ ಮುಂದಿನ ಹೆಜ್ಜೆ ಇಡಲು ಹೊರಟಿದೆ. 

ಇದರಿಂದ 2025-26ನೇ ಸಾಲಿನ ಸ್ನಾತಕೋತ್ತರ ವೈದ್ಯಕೀಯ ಪದವಿ ಕೋರ್ಸುಗಳ ಪ್ರವೇಶದಲ್ಲಿ ರಾಜ್ಯ ಅಥವಾ ನಿವಾಸಿ ಮೀಸಲಾತಿ ಕೋಟಾ ರದ್ದಾಗಲಿದೆಯಾ ಎನ್ನುವುದು ಇನ್ನೂ ಪ್ರಶ್ನೆಯಾಗಿಯೇ ಉಳಿದಿದೆ. ಈ ಮಧ್ಯೆ, ಕೇಂದ್ರಕ್ಕೆ ತನ್ನ ಅಭಿಪ್ರಾಯ ಸಲ್ಲಿಸುವ ಜೊತೆಗೆ ಈ ವಿಚಾರವಾಗಿ ಕಾನೂನಾತ್ಮಕವಾಗಿ ತಾನೇನು ಮಾಡಬಹುದು ಎಂಬ ಬಗ್ಗೆಯೂ ರಾಜ್ಯ ಸರ್ಕಾರ ಕಾನೂನು ತಜ್ಞರ ಅಭಿಪ್ರಾಯ ಪಡೆಯಲು ಮುಂದಾಗಿದೆ. ಈ ವಿಚಾರದಲ್ಲಿ ಶೀಘ್ರ ರಾಜ್ಯ ಅಡ್ವೊಕೇಟ್‌ ಜನರಲ್‌ ಅವರ ಅಭಿಪ್ರಾಯ ಪಡೆದು ಮುಂದೇನು ಮಾಡಬಹುದು ತೀರ್ಮಾನಿಸುವುದಾಗಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ್‌ ಪ್ರಕಾಶ್‌ ಪಾಟೀಲ ತಿಳಿಸಿದ್ದಾರೆ.

ರಾಜ್ಯದಲ್ಲಿ 1500ಕ್ಕೂ ಹೆಚ್ಚು ಸೀಟು ಲಭ್ಯ: ರಾಜ್ಯದ ವೈದ್ಯಕೀಯ ಶಿಕ್ಷಣ ಸಂಸ್ಥೆಗಳಲ್ಲಿ ಲಭ್ಯವಿರುವ ಸ್ನಾತಕೋತ್ತರ ವೈದ್ಯಕೀಯ ಪದವಿ ಕೋರ್ಸುಗಳನ್ನು ರಾಜ್ಯ ಸರ್ಕಾರ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕೌನ್ಸೆಲಿಂಗ್‌ ಮೂಲಕ ನೀಟ್‌ ಮೂಲಕ ಅರ್ಹತೆ ಪಡೆದವರಿಗೆ ಹಂಚಿಕೆ ಮಾಡುತ್ತದೆ. ಪ್ರಾಧಿಕಾರದ ಮಾಹಿತಿ ಪ್ರಕಾರ, ರಾಜ್ಯದಲ್ಲಿ 63ಕ್ಕೂ ಹೆಚ್ಚು ಕಾಲೇಜುಗಳಲ್ಲಿ 6000ಕ್ಕೂ ಹೆಚ್ಚು ಪಿಜಿ ವೈದ್ಯಕೀಯ ಸೀಟುಗಳು ಲಭ್ಯವಿದ್ದು, ಇದರಲ್ಲಿ ಶೇ.50ರಷ್ಟು ಅಂದರೆ ಶೇ.3000ಕ್ಕೂ ಹೆಚ್ಚು ಸೀಟುಗಳನ್ನು ಸರ್ಕಾರಿ ಕೋಟಾದಡಿ ಹಂಚಿಕೆ ಮಾಡಲಾಗುತ್ತದೆ. ಈ ಪೈಕಿ ಶೇ.50ರಷ್ಟು ಅಂದರೆ ಸುಮಾರು 1500 ಸೀಟುಗಳನ್ನು ನಿವಾಸಿ ಕೋಟಾದಡಿ ರಾಜ್ಯದಲ್ಲಿ ಎಂಬಿಬಿಎಸ್‌ ಓದಿದ ಅಥವಾ 12ನೇ ತರಗತಿವರೆಗೂ ಕರ್ನಾಟಕದಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳಿಗೆ ಹಂಚಿಕೆ ಮಾಡಲಾಗುತ್ತದೆ. ಈ ಸೀಟುಗಳ ಹಂಚಿಕೆ ಎಸ್ಸಿ,ಎಸ್ಟಿ, ಹಿಂದುಳಿದ ವರ್ಗ, 371(ಜೆ) ಸೇರಿ ಇನ್ನಿತರೆ ಕಾನೂನಾತ್ಮಕ ಮೀಸಲಾತಿಗೆ ಅನುಗುಣವಾಗಿ ನಡೆಯುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಶುದ್ಧ ನೀರು ಘಟಕದಲ್ಲಿನ್ನು ಯುಪಿಐ ಪೇಮೆಂಟ್: ದಿನದ 24 ಗಂಟೆ ಸೇವೆ

ಸುಪ್ರೀಂ ಕೋರ್ಟ್‌ ಆದೇಶದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಡೊಮಿಸಿಲ್‌ ಮೀಸಲಾತಿ ರದ್ದುಪಡಿಸಬೇಕಾ ಅಥವಾ ಬೇಡವಾ ಎನ್ನುವ ವಿಚಾರ ಸರ್ಕಾರದಲ್ಲಿ ಚರ್ಚೆಯ ಹಂತದಲ್ಲಿದೆ. ಈ ಮಧ್ಯೆ, ಈ ಮೀಸಲಾತಿ ರದ್ದುಪಡಿಸುವುದರಿಂದ ಆಗುವ ಪರಿಣಾಮಗಳ ಬಗ್ಗೆ ಕೇಂದ್ರ ಸರ್ಕಾರ ಅಭಿಪ್ರಾಯ ಕೇಳಿತ್ತು. ಇದಕ್ಕೆ ನಮ್ಮ ಪ್ರತಿಕ್ರಿಯೆ ತಿಳಿಸಲಾಗಿದ್ದು, ಮುಂದಿನ ನಿರ್ದೇಶನಕ್ಕಾಗಿ ಕಾಯುತ್ತಿದ್ದೇವೆ.
- ಡಾ.ಬಿ.ಎಲ್‌. ಸುಜಾತಾ ರಾಥೋಡ್‌, ವೈದ್ಯಕೀಯ ಶಿಕ್ಷಣ ಇಲಾಖೆ ನಿರ್ದೇಶಕರು

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ನೊಂದವರಿಗೆ ನ್ಯಾಯ ಕೊಡಿಸುವಲ್ಲಿ ರಾಜ್ಯ ಮೊದಲ ಸ್ಥಾನ: ಗೃಹಸಚಿವ ಪರಮೇಶ್ವರ್
ಜಿಎಸ್‌ಟಿ ದರ ಬದಲಾವಣೆ ಬಳಿಕ ವಾಣಿಜ್ಯ ತೆರಿಗೆ ಸಂಗ್ರಹ ಕುಸಿತ