ಲಸಿಕೆ ಪಡೆದವರ ಮೇಲೆ ಮದ್ಯದ ಪರಿಣಾಮ ಏನು?

By Kannadaprabha NewsFirst Published Jan 18, 2021, 8:55 AM IST
Highlights

ಲಸಿಕೆ ಪಡೆದವರು ಮದ್ಯ ಸೇವಿಸಿದಲ್ಲಿ ಆಗುವ ಪರಿಣಾಮ ಏನು..? ಮದ್ಯ ಸೇವಿಸಿದಲ್ಲಿ ದೇಹ ಮೇಲಾಗುವ ದುಷ್ಪರಿಣಾಮಗಳು ಯಾವ ರೀತಿ ಇದೆ..?

ಬೆಂಗಳೂರು (ಜ.18):  ಕೊರೋನಾ ಲಸಿಕೆ ಪಡೆದವರು ಮದ್ಯ (ಆಲ್ಕೋಹಾಲ್‌) ಸೇವಿಸಿದರೆ ಲಸಿಕೆಯ ಶಕ್ತಿ ಕಡಿಮೆಯಾಗುತ್ತದೆ ಎಂಬ ಉದ್ದೇಶದಿಂದ ತಜ್ಞರು ಲಸಿಕೆ ಪಡೆದ 45 ದಿನಗಳವರೆಗೆ ಆಲ್ಕೋಹಾಲ್‌ ಸೇವಿಸಿದಂತೆ ತಿಳಿಸಿದ್ದಾರೆ. ಲಸಿಕೆ ಪಡೆದವರ ಮೇಲೆ ಮದ್ಯ ಸೇವನೆ ಪರಿಣಾಮದ ಬಗ್ಗೆ ಅಧ್ಯಯನ ನಡೆಸಲು ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಹೇಳಿದ್ದಾರೆ.

"

ಬೆಂಗಳೂರಿನ ಎಚ್‌ಎಎಲ್‌ ರಸ್ತೆಯ ಮಣಿಪಾಲ್‌ ಆಸ್ಪತ್ರೆಯಲ್ಲಿ ಸಿಬ್ಬಂದಿಗೆ ಕೊರೋನಾ ಲಸಿಕೆ ನೀಡಿಕೆಗೆ ಚಾಲನೆ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೋನಾ ತಾಂತ್ರಿಕ ಸಲಹಾ ಸಮಿತಿ ಅಧ್ಯಕ್ಷ ಡಾ.ಎಂ.ಕೆ. ಸುದರ್ಶನ್‌ ಅವರು ಶನಿವಾರ ಲಸಿಕೆ ಪಡೆದವರು 45 ದಿನಗಳ ಕಾಲ ಆಲ್ಕೋಹಾಲ್‌ ಸೇವಿಸಬಾರದು ಎಂದು ಹೇಳಿದ್ದಾರೆ.

ಕೊರೋನಾ ಲಸಿಕೆ ಪಡೆದು ಹೆಚ್ಚು ಮದ್ಯ ಸೇವಿಸಿದರೆ ಮದ್ಯದ ಪರಿಣಾಮದಿಂದ ಲಸಿಕೆ ಕೆಲಸ ಮಾಡದಿರಬಹುದು ಎಂಬ ಉದ್ದೇಶದಿಂದ ಡಾ.ಎಂ.ಕೆ. ಸುದರ್ಶನ್‌ ಅವರು ಹೇಳಿರಬಹುದು. ಈ ಬಗ್ಗೆ ಹೆಚ್ಚು ಅಧ್ಯಯನ ನಡೆಸಲಾಗುವುದು. ಅಧ್ಯಯನ ವರದಿ ಆಧಾರದ ಮೇಲೆ ಕೊರೋನಾ ಲಸಿಕೆ ಪಡೆದವರಿಗೆ ಮದ್ಯ ಸೇವನೆಯಿಂದ ಉಂಟಾಗುವ ಪರಿಣಾಮದ ಬಗ್ಗೆ ಅಧಿಕೃತವಾಗಿ ಪ್ರಕಟಿಸಲಾಗುವುದು ಎಂದು ಹೇಳಿದರು

ಕೊರೋನಾ ಲಸಿಕೆ ಪಡೆಯಲು ಕಾದು ನೋಡುವ ತಂತ್ರ..! ...

ಶನಿವಾರ ಲಸಿಕೆ ಪಡೆದಿದ್ದ ಡಾ.ಎಂ.ಕೆ. ಸುದರ್ಶನ್‌ ಅವರು, ಲಸಿಕೆ ಪಡೆದ 45 ದಿನಗಳ ಕಾಲ ಆಲ್ಕೋಹಾಲ್‌ ಸೇವಿಸಬಾರದು. ರಷ್ಯಾದ ಸ್ಪುಟ್ನಿಕ್‌ ವ್ಯಾಕ್ಸಿನ್‌ ತಯಾರಕರು ಅಧಿಕೃತವಾಗಿಯೇ ಈ ಸೂಚನೆ ನೀಡಿದ್ದಾರೆ. ಹೀಗಾಗಿ ಮದ್ಯ ಸೇವಿಸುವಂತೆ ನಾನು ಶಿಫಾರಸು ಮಾಡುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದರು.

ಲಸಿಕೆ ಪಡೆದವರು ನಿರ್ಲಕ್ಷ್ಯ ಮಾಡಬಾರದು:

ಲಸಿಕೆ ಪಡೆದವರನ್ನು ಉದ್ದೇಶಿಸಿ ಮಾತನಾಡಿದ ಅವರು, ಮಣಿಪಾಲ್‌ ಆಸ್ಪತ್ರೆಯಲ್ಲಿ ದೊಡ್ಡ ಮಟ್ಟದಲ್ಲಿ ಲಸಿಕೆ ಅಭಿಯಾನ ಕೈಗೊಂಡಿದ್ದು ಅತ್ಯುತ್ತಮವಾಗಿ ವ್ಯವಸ್ಥೆ ಮಾಡಲಾಗಿದೆ. ಲಸಿಕೆ ಪಡೆದವರು ಮಧ್ಯಾಹ್ನದಿಂದಲೇ ರೋಗನಿರೋಧಕ ಶಕ್ತಿ ವೃದ್ಧಿಸಿದೆ ಎಂಬ ಭ್ರಮೆ ಬೇಡ. ಮೊದಲ ಲಸಿಕೆ ಪಡೆದವರು 28 ದಿನಗಳ ಬಳಿಕ ಎರಡನೇ ಡೋಸ್‌ ಪಡೆಯಬೇಕು. ಬಳಿಕ ಎರಡು ವಾರಗಳಿಗೆ ಅಂದರೆ ಮೊದಲ ಡೋಸ್‌ ಪಡೆದ 40 ದಿನಗಳ ಬಳಿಕ ರೋಗನಿರೋಧಕ ಶಕ್ತಿ ವೃದ್ಧಿಸುತ್ತದೆ. ಅಲ್ಲಿಯವರೆಗೆ ಕೊರೋನಾ ಕುರಿತ ಮುನ್ನೆಚ್ಚರಿಕೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದರು.

click me!