ಜಾತಿ ಗಣತಿ ಪರಿಗಣಿಸಿ ಬಜೆಟ್‌, ಮೇ 9 ರಂದು ರಾಜ್ಯದ ವರದಿ ಬಗ್ಗೆ ಚರ್ಚೆ: ಸಿಎಂ ಸಿದ್ದರಾಮಯ್ಯ

Published : May 02, 2025, 07:28 AM ISTUpdated : May 02, 2025, 07:43 AM IST
ಜಾತಿ ಗಣತಿ ಪರಿಗಣಿಸಿ ಬಜೆಟ್‌, ಮೇ 9 ರಂದು ರಾಜ್ಯದ ವರದಿ ಬಗ್ಗೆ ಚರ್ಚೆ: ಸಿಎಂ ಸಿದ್ದರಾಮಯ್ಯ

ಸಾರಾಂಶ

ರಾಜ್ಯ ಶಾಶ್ವತ ಹಿಂದುಳಿದ ವರ್ಗಗಳ ಆಯೋಗ ಸಲ್ಲಿಸಿರುವ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ವರದಿ ಸಚಿವ ಸಂಪುಟದಲ್ಲಿ ಅಂಗೀಕಾರಗೊಂಡರೆ, ಕೇಂದ್ರಕ್ಕೂ ಶಿಫಾರಸು ಮಾಡುತ್ತೇವೆ. ಜತೆಗೆ, ನಮ್ಮ ಜಾತಿಗಣತಿಯನ್ನು ಮುಂದಿನ ರಾಜ್ಯ ಬಜೆಟ್‌ನಲ್ಲಿ ಪರಿಗಣಿಸುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಬೆಂಗಳೂರು (ಮೇ.2) : ರಾಜ್ಯ ಶಾಶ್ವತ ಹಿಂದುಳಿದ ವರ್ಗಗಳ ಆಯೋಗ ಸಲ್ಲಿಸಿರುವ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ವರದಿ ಸಚಿವ ಸಂಪುಟದಲ್ಲಿ ಅಂಗೀಕಾರಗೊಂಡರೆ, ಕೇಂದ್ರಕ್ಕೂ ಶಿಫಾರಸು ಮಾಡುತ್ತೇವೆ. ಜತೆಗೆ, ನಮ್ಮ ಜಾತಿಗಣತಿಯನ್ನು ಮುಂದಿನ ರಾಜ್ಯ ಬಜೆಟ್‌ನಲ್ಲಿ ಪರಿಗಣಿಸುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜಾತಿಗಣತಿ ಶಿಫಾರಸುಗಳ ಅನ್ವಯ ಮೀಸಲಾತಿ ಪ್ರಮಾಣ ಹೆಚ್ಚಳ ಮಾಡಲು ಹಾಗೂ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹೆಚ್ಚಳ ನಿರ್ಧಾರವನ್ನು ರಾಜ್ಯಗಳು ಕೈಗೊಳ್ಳಲು ಸಾಧ್ಯವಿಲ್ಲ. ನಮ್ಮ ವರದಿ ಅಂಗೀಕಾರವಾದರೆ ಈ ಬಗ್ಗೆ ಕೇಂದ್ರಕ್ಕೆ ಶಿಫಾರಸು ಮಾಡುತ್ತೇವೆ ಎಂದರು.

ಮೇ 9 ರಂದು ರಾಜ್ಯದ ವರದಿ ಬಗ್ಗೆ ಚರ್ಚೆ:

ಕೇಂದ್ರ ಸರ್ಕಾರ ಜಾತಿ ಗಣತಿ ಮಾಡಿದರೆ ರಾಜ್ಯ ವರದಿಯ ಭವಿಷ್ಯವೇನು ಎಂಬ ಪ್ರಶ್ನೆಗೆ, ಈಗಾಗಲೇ ಕಾನೂನು ತಜ್ಞರ ಅಭಿಪ್ರಾಯ ಕೇಳಿದ್ದೇವೆ. ಜತೆಗೆ ಕಳೆದ ಸಚಿವ ಸಂಪುಟ ಸಭೆಯಲ್ಲಿ ವರದಿ ಮಂಡಿಸಿ ಲಿಖಿತವಾಗಿ ಅಭಿಪ್ರಾಯಗಳನ್ನು ಸಲ್ಲಿಸಲು ಸಚಿವರಿಗೆ ಹೇಳಿದ್ದೇವೆ. ಸಚಿವರು ಮಂಡಿಸುವ ಅಭಿಪ್ರಾಯಗಳ ಆಧಾರದ ಮೇಲೆ ಚರ್ಚೆ ಮಾಡಿ ಅಂತಿಮ ತೀರ್ಮಾನ ಕೇಂದ್ರಕ್ಕೆ ಕಳುಹಿಸುತ್ತೇವೆ ಎಂದರು.

ಇದನ್ನೂ ಓದಿ: ಮೋದಿ ಸರ್ಕಾರದಿಂದ ರಾಜ್ಯಕ್ಕೆ ನಿರಂತರ ಅನ್ಯಾಯ: ಬಿಜೆಪಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ!...

ಬಿಹಾರ ಚುನಾವಣೆ ಹಿನ್ನೆಲೆಯಲ್ಲಿ ಗಣತಿ:

ಕೇಂದ್ರ ಸರ್ಕಾರ ರಾತ್ರೋರಾತ್ರಿ ಜಾತಿ ಗಣತಿ ಮಾಡುವುದಾಗಿ ಘೋಷಿಸಿದ್ದು ನೋಡಿದರೆ, ಕಾಂಗ್ರೆಸ್‌ ಪಕ್ಷದ ಒತ್ತಡ ಹಾಗೂ ಬಿಹಾರ ಚುನಾವಣೆ ದೃಷ್ಟಿಯಿಂದ ನಿರ್ಧರಿಸಿದಂತಿದೆ ಎಂದು ಆರೋಪಿಸಿರುವ ಸಿದ್ದರಾಮಯ್ಯ, ಕೇಂದ್ರವು ಕೇವಲ ಜಾತಿಗಣತಿ ಮಾಡದೆ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ನಡೆಸಬೇಕು. ಜತೆಗೆ ಶೇ.50 ರಷ್ಟು ಇರುವ ಮೀಸಲಾತಿ ಮಿತಿಯನ್ನು ಸಡಿಲಗೊಳಿಸಬೇಕು ಎಂದು ಹೇಳಿದರು.

ಇನ್ನು ‘ರಾಜ್ಯದಲ್ಲಿ 165 ಕೋಟಿ ರು. ವೆಚ್ಚ ಮಾಡಿ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ವರದಿ ಸಿದ್ಧಪಡಿಸಿ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಲಾಗಿದೆ. ಸಂಪುಟದಲ್ಲಿ ವರದಿ ಅಂಗೀಕಾರವಾದರೆ ಈ ವರದಿಯ ಶಿಫಾರಸುಗಳನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸುತ್ತೇವೆ. ಮೀಸಲಾತಿ ಹೆಚ್ಚಳದ ಅಧಿಕಾರ ಕೇಂದ್ರಕ್ಕೆ ಮಾತ್ರ ಇದೆ’ ಎಂದೂ ಸ್ಪಷ್ಟಪಡಿಸಿದರು.

ಕೇಂದ್ರ ಸರ್ಕಾರ ಜನಗಣತಿ ಜತೆಗೆ ಜಾತಿ ಗಣತಿ ಮಾಡುವುದಾಗಿ ಘೋಷಿಸಿದೆ. ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರವನ್ನು ಹಾಗೂ ಅದಕ್ಕಿಂತ ಹೆಚ್ಚಾಗಿ ರಾಹುಲ್‌ ಗಾಂಧಿ ಅವರನ್ನು ಅಭಿನಂದಿಸುತ್ತೇನೆ. ಜಾತಿಗಣತಿ ಆಗಬೇಕು ಎಂದು ಅವರು ದೇಶಾದ್ಯಂತ ಒತ್ತಾಯ ಮಾಡುತ್ತಿದ್ದರು. ಈ ಬಗ್ಗೆ ದೇಶದೆಲ್ಲೆಡೆ ಒತ್ತಡ ಉಂಟಾಗಿತ್ತು. ಇದೀಗ ಬಿಹಾರ ಚುನಾವಣೆಯೂ ಇರುವುದರಿಂದ ಮೋದಿ ಸರ್ಕಾರ ನಿರ್ಧಾರ ಮಾಡಿದೆ ಎಂದು ಹೇಳಿದರು.

ಮೀಸಲಾತಿ ಮಿತಿ ಹೆಚ್ಚಾಗಬೇಕು:

ಜನಸಂಖ್ಯೆಗೆ ಅನುಸಾರವಾಗಿ ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರಿಗೆ ಮೀಸಲಾತಿ ಸಿಗಬೇಕಾದರೆ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆ ಆಗಬೇಕು. ಇಂದಿರಾ ಸಾಹ್ನಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಒಟ್ಟು ಮೀಸಲಾತಿ ಶೇ.50 ರಷ್ಟು ದಾಟಬಾರದು ಎಂದು ಮಿತಿ ಹೇರಿತ್ತು. ಇದಕ್ಕೆ ಸಂವಿಧಾನಾತ್ಮಕ ಅಥವಾ ವೈಜ್ಞಾನಿಕ ಕಾರಣ ನೀಡಿರಲಿಲ್ಲ. ಬಳಿಕ ಆರ್ಥಿಕವಾಗಿ ಹಿಂದುಳಿದವರು (ಇಡಬ್ಲ್ಯೂಎಸ್‌) ಮೀಸಲಾತಿ ಸೇರಿ ವಿವಿಧ ಕಾರಣಗಳಿಗೆ ಮೀಸಲಾತಿ ಹೆಚ್ಚಳ ಮಾಡಿದ್ದು, ಅದನ್ನು ಸುಪ್ರೀಂ ಕೋರ್ಟ್‌ ಕೂಡ ಒಪ್ಪಿದೆ.

ಈ ಹಿನ್ನೆಲೆಯಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹೆಚ್ಚಳ ಆಗಬೇಕು ಎಂದು ನಾವು ಒತ್ತಾಯಿಸಿದ್ದೆವು. ಈ ಅಂಶವನ್ನು ಕಾಂಗ್ರೆಸ್‌ ಪ್ರಣಾಳಿಕೆಯಲ್ಲೂ ಸೇರಿಸಲಾಗಿತ್ತು. ಏ.9ರಂದು ನಡೆದ ಎಐಸಿಸಿ ಸಮಾವೇಶದಲ್ಲೂ ಈ ಬಗ್ಗೆ ನಿರ್ಣಯ ಮಾಡಿದ್ದೆವು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ನಿರ್ಧಾರ ಮಾಡಿದೆ ಎಂದು ಸಿದ್ದರಾಮಯ್ಯ ಹೇಳಿದರು.

ಖಾಸಗಿ ಕ್ಷೇತ್ರದಲ್ಲೂ ಮೀಸಲಾತಿ ಬೇಕು:

ಕೇಂದ್ರದ ಈ ಘೋಷಣೆ ಮಹಿಳಾ ಮೀಸಲಾತಿ ರೀತಿ ನಾಮ್‌ ಕೇ ವಾಸ್ತೆ ಆಗಬಾರದು. ಖಾಸಗಿ ಶಿಕ್ಷಣ ಸಂಸ್ಥೆಗಳು ಹಾಗೂ ಕಾರ್ಪೊರೇಟ್‌ ಕಂಪೆನಿಗಳಲ್ಲೂ ಮೀಸಲಾತಿ ಜಾರಿಯಾಗಬೇಕು. ಬಿಜೆಪಿಯವರ ಇತಿಹಾಸ ನೋಡಿದರೆ ಮೊದಲಿನಿಂದಲೂ ಸಾಮಾಜಿಕ ನ್ಯಾಯದ ವಿರೋಧ ಮಾಡಿದ್ದರು. 73 ಹಾಗೂ 74ನೇ ತಿದ್ದುಪಡಿಯನ್ನೂ ವಿರೋಧಿಸಿದ್ದರು. ಈಗಲಾದರೂ ನಾಮ್‌ ಕೇ ವಾಸ್ತೆ ಘೋಷಣೆ ಮಾಡದೆ ಪ್ರಾಮಾಣಿಕವಾಗಿ ಜಾತಿವಾರು ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ನಡೆಸಿ ಜಾರಿ ಮಾಡಬೇಕು ಎಂದು ಸಿಎಂ ಆಗ್ರಹಿಸಿದರು.

ಇದನ್ನೂ ಓದಿ: ಇದನ್ನೂ ಓದಿ: 12000 ಮಂದಿ ಪೌರಕಾರ್ಮಿಕರ ನೌಕರಿ ಕಾಯಂ, ನುಡಿದಂತೆ ನಡೆದ ರಾಜ್ಯ ಸರ್ಕಾರ!...

ಜಾತಿಗಣತಿ ಮತ್ತು ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆ ಎರಡೂ ಒಂದೇ: ಸಿಎಂ

ನಾವು ಕೇವಲ ಗಣತಿ ಮಾಡದೆ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆಯನ್ನೂ ಮಾಡಿದ್ದೇವೆ. ಕೇಂದ್ರವೂ ಅದನ್ನೇ ಮಾಡಬೇಕು ಎಂದು ಒತ್ತಾಯ ಮಾಡುತ್ತಿದ್ದೇವೆ. ಜಾತಿಗಣತಿ ಮತ್ತು ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆ ಎರಡೂ ಒಂದೇ ಎಂದು ಪ್ರಶ್ನೆಯೊಂದಕ್ಕೆ ಸಿದ್ದರಾಮಯ್ಯ ಪ್ರತಿಕ್ರಿಯಿಸಿದರು.

50% ಮೀಸಲಾತಿ ಮಿತಿ ಸಡಿಲಗೊಳಿಸಿ

ಕೇಂದ್ರ ಸರ್ಕಾರ ರಾತ್ರೋರಾತ್ರಿ ಜಾತಿ ಗಣತಿ ಮಾಡುವುದಾಗಿ ಘೋಷಿಸಿದ್ದು ನೋಡಿದರೆ, ಕಾಂಗ್ರೆಸ್‌ ಪಕ್ಷದ ಒತ್ತಡ ಹಾಗೂ ಬಿಹಾರ ಚುನಾವಣೆ ದೃಷ್ಟಿಯಿಂದ ನಿರ್ಧರಿಸಿದಂತಿದೆ. ಕೇಂದ್ರವು ಕೇವಲ ಜಾತಿಗಣತಿ ಮಾಡದೆ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಕೂಡ ನಡೆಸಬೇಕು. ಜತೆಗೆ ಶೇ.50 ರಷ್ಟು ಇರುವ ಮೀಸಲಾತಿ ಮಿತಿಯನ್ನು ಸಡಿಲಗೊಳಿಸಬೇಕು

- ಸಿದ್ದರಾಮಯ್ಯ, ಮುಖ್ಯಮಂತ್ರಿ

ಕೇಂದ್ರದ ಜಾತಿ ಗಣತಿ ಸಿದ್ಧತೆಗೇ ಬೇಕು ಕನಿಷ್ಠ ಆರು ತಿಂಗಳು ಸಮಯ!

ನವದೆಹಲಿ: 1931ರ ಬಳಿಕ ಇದೇ ಮೊದಲ ಬಾರಿಗೆ ದೇಶವ್ಯಾಪಿ ಜನಗಣತಿ ಜೊತೆಗೆ ಜಾತಿಗಣತಿ ನಡೆಸುವುದಾಗಿ ಕೇಂದ್ರ ಸರ್ಕಾರ ಘೋಷಿಸಿದ್ದು, ಆ ಕುರಿತ ಚರ್ಚೆಗಳು ಆರಂಭವಾಗಿವೆ. ಆದರೆ ಜಾತಿಗಣತಿ ಸುಲಭದ ಕೆಲಸವಲ್ಲ. ಏಕಕಾಲಕ್ಕೆ ಲಕ್ಷಾಂತರ ಸಂಖ್ಯೆಯಲ್ಲಿ ಸರ್ಕಾರಿ ನೌಕರರು ನಡೆಸುವ ಈ ಬೃಹತ್‌ ಕಾರ್ಯಾಚರಣೆಗೆ ಭಾರೀ ಸಿದ್ಧತೆ ಅಗತ್ಯ. ಸರ್ಕಾರ ಇಂಥದ್ದೊಂದು ಜನಗಣತಿಗೆ ಸಿದ್ಧತೆ ನಡೆಸಲೇ ಕನಿಷ್ಠ 6 ತಿಂಗಳು ಬೇಕು. ಕೇಂದ್ರ, ರಾಜ್ಯದ ಪಟ್ಟಿಯಲ್ಲಿ ಬೇರೆ ಬೇರೆ ಜಾತಿಗಳಿವೆ. ಅವುಗಳ ಪರಿಗಣನೆ ಕುರಿತು ನಿರ್ಧಾರವಾಗಬೇಕು. ಸಿಬ್ಬಂದಿಗೆ ತರಬೇತಿ ನೀಡಬೇಕು. ಇದಕ್ಕೆಲ್ಲಾ ಸಮಯ ಬೇಕಾಗುತ್ತದೆ ಎನ್ನುತ್ತವೆ ವರದಿಗಳು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವರುಣಾ ಜನತೆಯ ಋಣ ತೀರಿಸಲು ಸಾಧ್ಯವಿಲ್ಲ, ಆದರೂ ಶ್ರಮಿಸುವೆ: ಯತೀಂದ್ರ ಸಿದ್ದರಾಮಯ್ಯ
ಮಹಾಮೇಳಾವ್ ಅನುಮತಿ ನಿರಾಕರಣೆ: ನಾಡದ್ರೋಹಿ ಎಂಇಎಸ್ ‌ಪುಂಡರಿಗೆ ಶಾಕ್ ಕೊಟ್ಟ ಬೆಳಗಾವಿ ಜಿಲ್ಲಾಡಳಿತ