
ಉಳ್ಳಾಲ : ಮಂಗಳೂರು ನಗರದ ಹೊರವಲಯದಲ್ಲಿರುವ ನಾಲ್ಕು ಬಾವಿಗಳ ನೀರಿನಿಂದ ಪೆಟ್ರೋಲ್ ವಾಸನೆ ಬರುತ್ತಿದ್ದು, ಆ ನೀರಿಗೆ ಬೆಂಕಿ ಹಚ್ಚಿದರೆ ಉರಿಯುತ್ತಿರುವುದು ತೀವ್ರ ಕುತೂಹಲ ಹಾಗೂ ಆತಂಕಕ್ಕೆ ಕಾರಣವಾಗಿದೆ.
ದೇರಳಕಟ್ಟೆಜಂಕ್ಷನ್ ಸಮೀಪದ ಕಾನಕೆರೆ ಎಂಬಲ್ಲಿ ನಾಲ್ಕು ಬಾವಿಗಳ ನೀರಿನಿಂದ ಪೆಟ್ರೋಲ್ ವಾಸನೆ ಬರುತ್ತಿದೆ. ಈ ನೀರನ್ನು ಬಾವಿಯಿಂದ ಹೊರ ತೆಗೆದು ಬೆಂಕಿ ಹಚ್ಚಿದರೆ ಉರಿಯುತ್ತಿದೆ. ಈ ಬಗ್ಗೆ ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಹರಡುತ್ತಿದ್ದಂತೆ ಅಗ್ನಿಶಾಮಕ ದಳ ಮತ್ತು ಐಒಸಿಎಲ್(ಇಂಡಿಯನ್ ಆಯಿಲ್ ಕಾರ್ಪೋರೇಷನ್ ಲಿಮಿಟೆಡ್) ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ನೀರನ್ನು ಪರೀಕ್ಷಿಸಿ ಸ್ಥಳದ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ.
ಇದೇ ವೇಳೆ ಪೆಟ್ರೋಲ್ ಬಂಕ್‌ನಿಂದ ಸೋರಿಕೆ ಉಂಟಾಗುತ್ತಿರುವುದರಿಂದ ಸಮಸ್ಯೆ ಉದ್ಭವವಾಗಿದೆ ಎಂದು ಸಾರ್ವಜನಿಕರು ಆರೋಪಿಸಿರುವ ಕಾರಣ ಎಸಿಪಿ ರಾಮರಾವ್, ಪೆಟ್ರೋಲ್ ಬಂಕ್ ಅನ್ನು ತಾತ್ಕಾಲಿಕವಾಗಿ ಮುಚ್ಚಿಸಿದ್ದಾರೆ.
ಗುರುವಾರ ಬೆಳಗ್ಗೆ 9 ಗಂಟೆ ವೇಳೆಗೆ ಸ್ಥಳಕ್ಕೆ ಅಗ್ನಿಶಾಮಕ ದಳ ದೌಡಾಯಿಸಿ ಬಾವಿ ಮತ್ತು ಸ್ಥಳವನ್ನು ಪರಿಶೀಲಿಸಿ ಮುಂಜಾಗ್ರತಾ ಕ್ರಮವನ್ನು ವಹಿಸಿಕೊಂಡರು. ಸಂಜೆವರೆಗೂ ಅಗ್ನಿ ಶಾಮಕ ಸಿಬ್ಬಂದಿ ಸ್ಥಳದಲ್ಲಿಯೇ ಠಿಕಾಣಿ ಹೂಡಿದ್ದರು. ಕೊಣಾಜೆ ಪೊಲೀಸರು ಸ್ಥಳಕ್ಕಾಗಮಿಸಿ ಸ್ಥಳದಲ್ಲಿ ಬಾವಿಯನ್ನು ನೋಡಲು ಬಂದ ಕುತೂಹಲಿಗರನ್ನು ನಿಯಂತ್ರಿಸಿದರು.
ಐಒಸಿಎಲ್ ಕಂಪನಿ ಅಧಿಕಾರಿಗಳು ಭೇಟಿ ನೀಡಿ ಸ್ಥಳೀಯರಿಂದ, ಪೆಟ್ರೋಲ್ ಬಂಕ್ ಮಾಲೀಕರಿಂದ ಮಾಹಿತಿ ಸಂಗ್ರಹಿಸಿದ್ದಾರೆ. ಮುಂಜಾಗ್ರತಾ ಕ್ರಮವನ್ನು ವಹಿಸಿಕೊಳ್ಳುವಂತೆ ಜನರಿಗೂ ಸೂಚಿಸಿದ್ದಾರೆ. ಬಾವಿಗೆ ರಾಸಾಯನಿಕ ಸೇರಿರುವುದರಿಂದ ನೀರು ಕಲುಷಿತಗೊಂಡಿರುವುದು ಪ್ರಾಥಮಿಕ ಪರಿಶೀಲನೆಯಿಂದ ಗೊತ್ತಾಗಿದೆ. ಬಹಳ ಸಮಯದಿಂದ ಸುರಿದ ತ್ಯಾಜ್ಯ ನೀರು ಮಿಥೆನಾಲ್ ಆಗಿ ಪರಿವರ್ತನೆಗೊಳ್ಳುವ ಸಾಧ್ಯತೆ ಇದೆ. ಇದರಲ್ಲಿಯೂ ಬೆಂಕಿ ಕಾಣಿಸಬಹುದು. ನೀರಿನ ಮಾದರಿ ಸಂಗ್ರಹಿಸಿ, ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು ವರದಿ ಬಂದ ಬಳಿಕವೇ ನಿಖರ ಕಾರಣವನ್ನು ತಿಳಿಸಬಹುದು ಎಂದಿದ್ದಾರೆ.
ಪೆಟ್ರೋಲ್ ಬಂಕ್‌ನಿಂದ ಸೋರಿಕೆ?:
ದೇರಳಕಟ್ಟೆಜಂಕ್ಷನ್‌ನಲ್ಲಿ ಕಾರ್ಯಾಚರಿಸುತ್ತಿರುವ ಪೆಟ್ರೋಲ್ ಬಂಕ್‌ನಿಂದ ತೈಲ ಸೋರಿಕೆ ಉಂಟಾಗಿ ಇಂತಹ ಸಮಸ್ಯೆ ಉದ್ಭವಿಸಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಈ ಕುರಿತು ಬಂಕ್ ಪ್ರಬಂಧಕರಲ್ಲಿ ದೂರಿದಾಗ, ತಮ್ಮ ಬಂಕ್‌ನ ತೈಲದಲ್ಲಿ ಯಾವುದೇ ವ್ಯತ್ಯಾಸಗಳು ಕಂಡುಬರುತ್ತಿಲ್ಲ. ಬಂಕ್‌ನಿಂದ ಯಾವುದೇ ಸೋರಿಕೆ ಉಂಟಾಗುತ್ತಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.
ಈ ಭಾಗಕ್ಕೆ ಪೇಟೆಯ ತ್ಯಾಜ್ಯ ನೀರು ಹೊರಬಿಡುತ್ತಿರುವುದರಿಂದ ಗ್ರಾಮಸ್ಥರಿಗೆ ವಿಪರೀತ ಸೊಳ್ಳೆ ಕಾಟ ಆರಂಭವಾಗಿದೆ. ಗ್ರಾಮದಲ್ಲಿ ಎಳೆಯ ಮಕ್ಕಳೇ ಇದ್ದು, ಅವರ ಮೈಪೂರ್ತಿ ಸೊಳ್ಳೆ ಕಡಿತದಿಂದ ಹುಣ್ಣುಗಳೇ ಆಗಿವೆ. ಆರೋಗ್ಯ ಇಲಾಖೆಯಿಂದ ಬಂದ ವರದಿಯಲ್ಲೂ ಬಾವಿಯ ನೀರು ಕುಡಿಯದಂತೆ ಎಚ್ಚರಿಕೆ ನೀಡಲಾಗಿದೆ. ಶೀಘ್ರವೇ ಸಂಬಂಧಪಟ್ಟವರು ಕ್ರಮ ಕೈಗೊಳ್ಳದಿದ್ದಲ್ಲಿ ಗ್ರಾಮದಲ್ಲಿ ಅನಾಹುತ ಸಂಭವಿಸಬಹುದು ಎಂದು ಗ್ರಾಮಸ್ಥರು ದೂರಿದ್ದಾರೆ.
ಪೆಟ್ರೋಲ್ ಬಂಕ್ ಕೆಳಭಾಗದಲ್ಲಿ ಕೆಲವು ಮನೆಗಳಿತ್ತು. 15 ವರ್ಷದ ಹಿಂದೆ ಸಿಡಿಲಿನ ಹೊಡೆತಕ್ಕೆ ತಡೆಗೋಡೆಗೆ ಹಾನಿಯಾಗಿತ್ತೇ ಹೊರತು ಟ್ಯಾಂಕ್‌ಗೆ ಯಾವುದೇ ಹಾನಿಯಾಗಿರಲಿಲ್ಲ. ತಜ್ಞರನ್ನು ಕರೆಸಿ ಪರಿಶೀಲಿಸಲಾಗಿತ್ತು. ಆ ಬಳಿಕವೂ ಅಧಿಕಾರಿಗಳು ಪರಿಶೀಲಿಸಿದ್ದರು. ಪೆಟ್ರೋಲ್ ಸೋರಿಕೆ ಆಗಿಲ್ಲ ಎಂಬುದು ಖಚಿತವಾಗಿತು. ಪೆಟ್ರೋಲ್ ಸೋರಿಕೆಯಾಗಿ ಬಾವಿ ಸೇರುತ್ತಿದೆ ಎಂಬ ಸ್ಥಳೀಯರ ಸಂಶಯವಾಗಿದ್ದು, ಅದಕ್ಕೆ ಯಾವುದೇ ಪುರಾವೆ ಇಲ್ಲ.-ಸೀತಾರಾಮ ಶೆಟ್ಟಿದಡಸ್, ಪೆಟ್ರೋಲ್ ಬಂಕ್ ಮಾಲೀಕರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ