ಕರ್ನಾಟಕ ಕರಾವಳಿಯಲ್ಲಿ ಮುಂದಿನ 5 ದಿನ ಭಾರಿ ಮಳೆ!

By Kannadaprabha News  |  First Published Jul 6, 2022, 8:02 AM IST

* ಮುಂಗಾರು ಸಕ್ರಿಯ, ಮಳೆ ಕೊರತೆ ಶೇ.2ರಷ್ಟುಇಳಿಕೆ

* ಕರ್ನಾಟಕ ಕರಾವಳಿಯಲ್ಲಿ ಮುಂದಿನ 5 ದಿನ ಭಾರಿ ಮಳೆ

* ಭಾರತದ ವಾಯುವ್ಯ ಭಾಗ ಬುಧವಾರದಿಂದ ತನ್ನ ಋುತುಮಾನದ ಮಳೆಯನ್ನು ಪಡೆದುಕೊಳ್ಳಲಿದೆ


ನವದೆಹಲಿ(ಜು.06): ಮಧ್ಯಭಾರತದಲ್ಲಿ ಉಂಟಾದ ಕಡಿಮೆ ಒತ್ತಡ ಪ್ರದೇಶದ ನೆರವಿನಿಂದ ನೈಋುತ್ಯ ಮುಂಗಾರು ವೇಗ ಪಡೆದುಕೊಂಡಿದೆ. ಖಾರಿಫ್‌ ಬೆಳೆ ಬಿತ್ತನೆಗೆ ಸಾಕಾಗುವಷ್ಟುಮಳೆ ಸುರಿಯುತ್ತಿದೆ. ಮುಂಗಾರು ಆರಂಭ ಕಾಲದಿಂದ ಉಂಟಾಗಿದ್ದ ಮಳೆ ಕೊರತೆಯ ಪ್ರಮಾಣವನ್ನು ಶೇ.2ರಷ್ಟುಕಡಿಮೆ ಮಾಡಿದೆ ಎಂದು ಹವಾಮಾನ ಇಲಾಖೆ ಮಂಗಳವಾರ ಹೇಳಿದೆ.

ಮುಂದಿನ 5 ದಿನಗಳವರೆಗೆ ಮಧ್ಯ ಭಾರತ ಮತ್ತು ಭಾರತದ ಕರಾವಳಿ ಭಾಗಗಳಲ್ಲಿ ಮುಂಗಾರು ಮಳೆ ಸಕ್ರಿಯವಾಗಿರಲಿದೆ. ಭಾರತದ ವಾಯುವ್ಯ ಭಾಗ ಬುಧವಾರದಿಂದ ತನ್ನ ಋುತುಮಾನದ ಮಳೆಯನ್ನು ಪಡೆದುಕೊಳ್ಳಲಿದೆ. ಮಧ್ಯಪ್ರದೇಶದಲ್ಲಿ ಉಂಟಾಗಿರುವ ಕಡಿಮೆ ಒತ್ತಡ ಪ್ರದೇಶದಿಂದಾಗಿ ಕರ್ನಾಟಕದ ಕರಾವಳಿ, ತೆಲಂಗಾಣ, ಕೇರಳ ಮತ್ತು ಒಡಿಶಾಗಳಲ್ಲಿ ಮಳೆಯಾಗಲಿದೆ ಎಂದು ಹವಮಾನ ಇಲಾಖೆ ಹೇಳಿದೆ.

Tap to resize

Latest Videos

undefined

ಕಳೆದ 2 ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯ ಪರಿಣಾಮದಿಂದಾಗಿ ದೇಶದಲ್ಲಿ ಉಂಟಾಗಿದ್ದ ಮಳೆ ಕೊರತೆ ಶೇ.2ರಷ್ಟುಕಡಿಮೆಯಾಗಿದೆ. ಆದರೂ ಉತ್ತರ ಪ್ರದೇಶ (ಶೇ.-48), ಜಾರ್ಖಂಡ್‌ (ಶೇ.-42), ಕೇರಳ (ಶೇ.-38), ಒಡಿಶಾ (ಶೇ.-26), ಮಿಜೋರಂ (ಶೇ.-25) ಮತ್ತು ಗುಜರಾತ್‌ (ಶೇ.-22) ರಾಜ್ಯಗಳಲ್ಲಿ ಮಳೆ ಕೊರತೆ ಉಂಟಾಗಿದೆ.

15 ಜಿಲ್ಲೆಗಳಲ್ಲಿ ಮಳೆ ಅಬ್ಬರ: ಕರಾವಳಿ, ಮಲೆನಾಡು ತತ್ತರ

 

ರಾಜ್ಯದ 15ಕ್ಕೂ ಅಧಿಕ ಜಿಲ್ಲೆಗಳಲ್ಲಿ ಮಂಗಳವಾರ ಭಾರಿ ಮಳೆಯಾಗಿದ್ದು, ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ವರುಣನ ಆರ್ಭಟ ಜೋರಾಗಿದೆ.

ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ, ಮಧ್ಯಕರ್ನಾಟಕದ ದಾವಣಗೆರೆ ಹಾಗೂ ಉತ್ತರಕರ್ನಾಟಕದ ಧಾರವಾಡ, ಹಾವೇರಿ, ಗದಗ, ಬೆಳಗಾವಿ, ಬಳ್ಳಾರಿ, ಕೊಪ್ಪಳ ಜಿಲ್ಲೆಗಳಲ್ಲಿ ಮಳೆಯಾಗಿದ್ದು, ರಾಜ್ಯದ ಉಳಿದೆಡೆ ತುಂತುರು ಮಳೆ ಹಾಗೂ ಮೋಡ ಮುಸುಕಿದ ವಾತಾವರಣವಿತ್ತು. ಬುಧವಾರ ಕೂಡ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಆರೆಂಜ್‌ ಅಲರ್ಚ್‌ ಘೋಷಿಸಲಾಗಿದೆ.

ತತ್ತರಿಸಿದ ಕರಾವಳಿ, ಮಲೆನಾಡು

ಮಳೆಗೆ ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳು ತತ್ತರಿಸಿವೆ. ಉಳ್ಳಾಲದ ಸೋಮೇಶ್ವರದ ಉಚ್ಚಿಲಗುಡ್ಡೆಯಲ್ಲಿರುವ ಅಂಗನವಾಡಿ ಕೇಂದ್ರ, ಉಚ್ಚಿಲ ಗುಡ್ಡೆಯ ಹಿರಿಯ ಪ್ರಾಥಮಿಕ ಶಾಲೆಯ ಆವರಣ ಜಲಾವೃತಗೊಂಡಿದೆ. ಕೇರಳ- ಕರ್ನಾಟಕ ಗಡಿಭಾಗವಾದ ಸಾರಡ್ಕ ಎಂಬಲ್ಲಿ ಮಂಗಳವಾರ ಬೆಳಗ್ಗೆ ರಸ್ತೆಗೆ ಗುಡ್ಡ ಕುಸಿದು ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಮುಡಿಪು- ವಿಟ್ಲದ ನಡುವೆ ಕುಡ್ತಮುಗೇರು ಎಂಬಲ್ಲಿ ರಸ್ತೆ ಮೇಲೆ ಪ್ರವಾಹದ ನೀರು ನುಗ್ಗಿ ಬೆಳಗ್ಗೆ ಕೆಲಕಾಲ ಸಂಚಾರ ಅಸ್ತವ್ಯಸ್ತವಾಗಿತ್ತು. ಉಳ್ಳಾಲದ ತಲಪಾಡಿ, ದೇವಿಪುರ, ಕೋಟೆಕಾರು, ವೈದ್ಯನಾಥ ನಗರ, ಒಂಬತ್ತುಕೆರೆ, ಪೆರ್ಮನ್ನೂರು ಗ್ರಾಮದ ಕಲ್ಲಾಪು ಎಂಬಲ್ಲಿ ತಗ್ಗು ಪ್ರದೇಶದಲ್ಲಿದ್ದ 20ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿ ಹಾನಿಯಾಗಿದೆ. ಉಡುಪಿ ನಗರದಲ್ಲೂ 30ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿತ್ತು.

ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ನೀರಿನ ಮಟ್ಟಏರಿಕೆಯಾಗಿದ್ದು, ನಾಪೋಕ್ಲು- ಭಾಗಮಂಡಲ, ಮಡಿಕೇರಿ - ಭಾಗಮಂಡಲ ರಸ್ತೆ ಮೇಲೆ ನೀರು ಹರಿಯುತ್ತಿದೆ. ಇದರಿಂದ ವಾಹನ ಸಂಚಾರ ಸ್ಥಗಿತಗೊಳಿಸಲಾಗಿದ್ದು, ಬೋಟ್‌ನ ಸಹಾಯದ ಮೂಲಕ ಸಾರ್ವಜನಿಕರನ್ನು ಸಾಗಿಸಲಾಗುತ್ತಿದೆ.

ಬೆಳಗಾವಿ ಜಿಲ್ಲೆಯಲ್ಲಿ ಮುಂಗಾರು ಆರ್ಭಟ ಮಂಗಳವಾರ ತುಸು ಹೆಚ್ಚಾಗಿದೆ. ಲೋಂಡಾ-ಮಡಗಾಂವ ರೈಲು ಮಾರ್ಗದ ಕುಲೇಂ ನಿಲ್ದಾಣದ ಬಳಿ ರೈಲು ಹಳಿಯ ಮೇಲೆ ಮರವೊಂದು ಬಿದ್ದ ಪರಿಣಾಮ ಲೋಂಡಾ-ಮಡಗಾಂವ ನಿಲ್ದಾಣಗಳ ನಡುವೆ ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು. ಬೆಳಗಾವಿ-ಪಣಜಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿದಿದೆ. ದಾವಣಗೆರೆಯಲ್ಲೂ ಮಳೆಗೆ 10 ಮನೆಗಳಿಗೆ ಹಾನಿಯಾಗಿದೆ.

click me!