
ಬೆಂಗಳೂರು (ಆ.6) : ಗ್ರಾಮಗಳಲ್ಲಿನ ಜಲಮೂಲಗಳ ಸಮಗ್ರ ಮಾಹಿತಿಯನ್ನು ಜನರಿಗೆ ನೀಡಿ ಜಲಮೂಲಗಳ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ನೀರಿನ ಮಾಹಿತಿ ಕೇಂದ್ರ (ವಾಟರ್ ನಾಲೆಡ್ಜ್ ಸೆಂಟರ್) ಸ್ಥಾಪಿಸಲಾಗುವುದು ಎಂದು ಸಚಿವ ಎನ್.ಎಸ್.ಬೋಸರಾಜು ತಿಳಿಸಿದರು.
ವಿಕಾಸಸೌಧದಲ್ಲಿ ಶನಿವಾರ ತಮ್ಮನ್ನು ಭೇಟಿ ಮಾಡಿದ ಆರ್ಚ್ ಆಫ್ ಲಿವಿಂಗ್ ನದಿ ಪುನಶ್ಚೇತನ ಸಂಸ್ಥೆಯ ಪ್ರತಿನಿಧಿಗಳೊಂದಿಗೆ ರಾಜ್ಯದ ಕೆರೆಗಳ ಅಧ್ಯಯನ ಹಾಗೂ ಜಲಮೂಲಗಳ ಪುನರುಜ್ಜೀವನ ಕುರಿತಂತೆ ಚರ್ಚಿಸಿ ಮಾತನಾಡಿದರು.
ರಾಯಚೂರು ಜಿಲ್ಲೆಯಲ್ಲಿ ವಿಜ್ಞಾನ ಕೇಂದ್ರ ಸ್ಥಾಪನೆ ಪ್ರಸ್ತಾವಕ್ಕೆ ಕೇಂದ್ರದಿಂದ ಶೀಘ್ರ ಅನುಮತಿ, ಬೋಸರಾಜು
ಗ್ರಾಮಗಳಲ್ಲಿನ ಜಲಮೂಲಗಳ ಮಹತ್ವ ಜನರಿಗೆ ತಿಳಿಯುವುದು ಕಡಿಮೆ. ಹೀಗಾಗಿ ಜಲಮೂಲಗಳ ಬಗ್ಗೆ ಮಾಹಿತಿ ನೀಡಬೇಕಿದೆ. ಅದಕ್ಕಾಗಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನೀರಿನ ಮಾಹಿತಿ ಕೇಂದ್ರ ಸ್ಥಾಪಿಸಲಾಗುವುದು. ಆ ಕೇಂದ್ರದಲ್ಲಿ ಜಲಮೂಲಗಳ ಬಳಕೆ, ಮರು ಬಳಕೆ, ಮಾಲಿನ್ಯ ನಿಯಂತ್ರಣ ಹಾಗೂ ಪೋಲಾಗುತ್ತಿರುವ ನೀರಿನ ಮಾಹಿತಿ ಸೇರಿದಂತೆ ಹಲವು ಮಾಹಿತಿಗಳನ್ನು ನೀಡಲಾಗುವುದು. ಜತೆಗೆ ಅವರ ಪಾಲುದಾರಿಕೆಯಲ್ಲಿ ಜಲಮೂಲಗಳನ್ನು ಸಂರಕ್ಷಿಸುವ ಕ್ರಮಗಳನ್ನು ಅನುಷ್ಠಾನಗೊಳಿಸಲಾಗುವುದು. ಈ ಬಗ್ಗೆ ತಜ್ಞರ ಮೂಲಕ ಅಧ್ಯಯನ ನಡೆಸಲಾಗುವುದು ಎಂದರು.
ರಾಜ್ಯದ ಕೆರೆ, ನಾಲೆಗಳು ಸೇರಿದಂತೆ ಜಲಮೂಲಗಳ ಸಂರಕ್ಷಣೆ ಹಾಗೂ ಅವುಗಳ ಒತ್ತುವರಿ ತಡೆಯುವುದು ನಮ್ಮ ಮೊದಲ ಆದ್ಯತೆಯಾಗಿದೆ. ಸಂರಕ್ಷಣೆ ಮತ್ತು ಒತ್ತುವರಿ ತಡೆಗಟ್ಟುವ ನಿಟ್ಟಿನಲ್ಲಿ ಸಾರ್ವಜನಿಕರ ಸಹಭಾಗಿತ್ವ ಪ್ರಮುಖವಾಗಿದೆ. ಹೀಗಾಗಿ ಜಲಮೂಲಗಳ ಸಂರಕ್ಷಣೆಗೆ ಸ್ವಯಂ ಸೇವಕರು ಮತ್ತು ಗ್ರಾಮೀಣ ಸಮುದಾಯವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಚಿಂತಿಸಲಾಗಿದೆ. ಗ್ರಾಮೀಣ ಸಮುದಾಯದ ಸ್ವಯಂ ಸೇವಕರು ತಮ್ಮ ವ್ಯಾಪ್ತಿಯಲ್ಲಿರುವ ಜಲಮೂಲಗಳ ಬಗ್ಗೆ ನಿಗಾವಹಿಸುವುದು ಹಾಗೂ ಯಾವುದೇ ನ್ಯೂನತೆ ಕಂಡುಬಂದಲ್ಲಿ ಸಂಬಂಧಪಟ್ಟಅಧಿಕಾರಿಗಳಿಗೆ ಮಾಹಿತಿ ನೀಡುವ ಕೆಲಸ ಅವರದ್ದಾಗಿರುತ್ತದೆ. ಈ ಕುರಿತಂತೆ ಅನುಷ್ಠಾನದ ಬಗ್ಗೆ ಉನ್ನತ ಮಟ್ಟದಲ್ಲಿ ಚರ್ಚೆ ನಡೆಸಿ ಅಂತಿಮಗೊಳಿಸಲಾಗುವುದು ಎಂದರು.
ಬೆಳೆಹಾನಿ ನೋಡುವಂತೆ ಮನವಿ, ಮಹಿಳೆಯ ಕಡೆಗೆ ತಿರುಗಿಯೂ ನೋಡದೆ ಹೋದ ಸಚಿವ ಬೋಸರಾಜ್
ಆರ್ಚ್ ಆಫ್ ಲಿವಿಂಗ್ ನದಿ ಪುನಶ್ಚೇತನ ಸಂಸ್ಥೆ ರಾಷ್ಟ್ರೀಯ ನಿರ್ದೇಶಕ ಡಾ.ಲಿಂಗರಾಜು ಯಲೆ, ತಜ್ಞರಾದ ರವೀಂದ್ರ ಭಟ್, ಸಹದೇವ್ ಗುಂಡಜ್ಜಿ, ಟಿ.ಎಸ್.ಹುಮ್ಸೆ ಇದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ