ರಾಜ್ಯದಲ್ಲಿ ಹಿಂಸೆಗೆ ತಿರುಗಿದ ವಕ್ಫ್‌ ಗದ್ದಲ: ಬೂದಿಮುಚ್ಚಿದ ಕೆಂಡದ ಸ್ಥಿತಿ

By Kannadaprabha NewsFirst Published Nov 1, 2024, 4:58 AM IST
Highlights

ತಮ್ಮ ಆಸ್ತಿ ವಕ್ಫ್‌ ಬೋರ್ಡ್‌ ಮಾಲೀಕತ್ವಕ್ಕೆ ಹೋಗಬಹುದೆಂಬ ಆತಂಕದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಸವಣೂರು ತಾಲೂಕಿನ ಕಡಕೋಳ ಗ್ರಾಮಸ್ಥರು ಮುಸ್ಲಿಂ ಮುಖಂಡರ ಮನೆಗಳ ಮೇಲೆ ಬುಧವಾರ ರಾತ್ರಿ ಕಲ್ಲುತೂರಾಟ ನಡೆಸಿದ್ದು, ಘಟನೆಯಲ್ಲಿ ಆರು ಮಂದಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.

ಹಾವೇರಿ (ನ.01): ರಾಜ್ಯದಲ್ಲಿ ತೀವ್ರ ಗದ್ದಲಕ್ಕೆ ಕಾರಣವಾಗಿರುವ ವಕ್ಫ್‌ ಆಸ್ತಿ ವಿವಾದ ಇದೀಗ ಹಾವೇರಿಯಲ್ಲಿ ಹಿಂಸಾಚಾರಕ್ಕೆ ಕಾರಣವಾಗಿದೆ. ತಮ್ಮ ಆಸ್ತಿ ವಕ್ಫ್‌ ಬೋರ್ಡ್‌ ಮಾಲೀಕತ್ವಕ್ಕೆ ಹೋಗಬಹುದೆಂಬ ಆತಂಕದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಸವಣೂರು ತಾಲೂಕಿನ ಕಡಕೋಳ ಗ್ರಾಮಸ್ಥರು ಮುಸ್ಲಿಂ ಮುಖಂಡರ ಮನೆಗಳ ಮೇಲೆ ಬುಧವಾರ ರಾತ್ರಿ ಕಲ್ಲುತೂರಾಟ ನಡೆಸಿದ್ದು, ಘಟನೆಯಲ್ಲಿ ಆರು ಮಂದಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಘಟನೆಗೆ ಸಂಬಂಧಿಸಿ 32 ಮಂದಿಯನ್ನು ವಶಕ್ಕೆ ಪಡೆದಿರುವ ಪೊಲೀಸರು, ಗ್ರಾಮದಲ್ಲಿ ಬಿಗಿ ಬಂದೋಬಸ್ತ್‌ ಕಲ್ಪಿಸಿದ್ದಾರೆ.

ರಾಜ್ಯದ ಇತರೆಡೆಯಂತೆ ಕಡಕೋಳ ಗ್ರಾಮದಲ್ಲೂ ಕೆಲವರ ಆಸ್ತಿಯ ಪಹಣಿಯಲ್ಲಿ ವಕ್ಫ್‌ ಆಸ್ತಿ ಎಂದು ಸೇರ್ಪಡೆ ಮಾಡಲು ಸಿದ್ಧತೆ ನಡೆಯುತ್ತಿತ್ತು. ಈ ಸಂಬಂಧ ಜಿಲ್ಲಾಧಿಕಾರಿ ಕಚೇರಿಯಿಂದ ತಾಲೂಕು ಕಚೇರಿಗೆ ಮುಂದಿನ ಕ್ರಮ ಕೈಗೊಳ್ಳುವಂತೆ ಪತ್ರ ಬಂದಿರುವ ಸುದ್ದಿ ತಿಳಿದು ನೂರಾರು ರೈತರು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದರು. ಅಲ್ಲದೆ ವಕ್ಫ್‌ ಮಂಡಳಿ ಮುಂದಿನ ದಿನಗಳಲ್ಲಿ ತಮ್ಮನ್ನು ಒಕ್ಕಲೆಬ್ಬಿಸಬಹುದು ಎಂಬ ಆತಂಕಕ್ಕೆ ತುತ್ತಾಗಿದ್ದ ಗ್ರಾಮಸ್ಥರು ಬುಧವಾರ ರಾತ್ರಿ ಮುಸ್ಲಿಂ ಮುಖಂಡ ಮೊಹಮ್ಮದ್ ರಫಿ, ಇತರರ ಮನೆ ಮೇಲೆ ಕಲ್ಲು ತೂರಾಟ ನಡೆಸಿ ದಾಂದಲೆ ನಡೆಸಿದ್ದಾರೆ. ಅಲ್ಲದೆ, ಅವರ ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಜಖಂಗೊಳಿಸಿದ್ದಾರೆ.
ಕಲ್ಲು ತೂರಾಟ ಹಾಗೂ ದಾಂಧಲೆಯಿಂದಾಗಿ ಗ್ರಾಮದಲ್ಲಿ ಉದ್ನಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಸುದ್ದಿ ತಿಳಿದು ರಾತ್ರೋರಾತ್ರಿ ಜಿಲ್ಲಾಧಿಕಾರಿ ಡಾ.ವಿಜಯ ಮಹಾಂತೇಶ ದಾನಮ್ಮನವರ, ಎಸ್ಪಿ ಅಂಶುಕುಮಾರ್‌ ಅವರು ಗ್ರಾಮಕ್ಕೆ ಭೇಟಿ ನೀಡಿದ್ದಾರೆ.

Latest Videos

ಎಚ್‌ಎಂಟಿ ಜಾಗಕ್ಕೆ ಈಶ್ವರ್ ಖಂಡ್ರೆ ಅತಿಕ್ರಮ ಪ್ರವೇಶ: ಎಚ್.ಡಿ.ಕುಮಾರಸ್ವಾಮಿ

32 ಜನ ಪೊಲೀಸ್ ವಶಕ್ಕೆ: ಘಟನೆಗೆ ಸಂಬಂಧಿಸಿ ಹಲ್ಲೆಗೊಳಗಾದವರಿಂದ ಮಾಹಿತಿ ಪಡೆಯಲಾಗುತ್ತಿದೆ. ಈ ಸಂಬಂಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಲಾಗುತ್ತದೆ. ಕಲ್ಲುತೂರಾಟ ಹಿನ್ನೆಲೆಯಲ್ಲಿ ಈವರೆಗೆ 32 ಮಂದಿಯನ್ನು ವಶಕ್ಕೆ ಪಡೆದಿದ್ದು, ಇದರಲ್ಲಿ ಮೂವರು ಅಪ್ರಾಪ್ತರು ಸೇರಿದ್ದಾರೆ. ಗ್ರಾಮದಲ್ಲಿ ಭದ್ರತೆಗೆ 4 ಕೆಎಸ್​ಆರ್​ಪಿ ತುಕಡಿ, 200 ಪೊಲೀಸ್​ ಸಿಬ್ಬಂದಿ ನಿಯೋಜಿಸಲಾಗಿದೆ. ರೂಟ್​ಮಾರ್ಚ್ ಕೂಡಾ‌ ಮಾಡಲಾಗುತ್ತದೆ. ಗಲಭೆ ವೇಳೆ ದುಷ್ಕರ್ಮಿಗಳು ಕೆಲವರ ಮನೆಗಳ ಗಾಜು ಒಡೆದಿದ್ದಾರೆ ಎಂದು ಎಸ್ಪಿ ಅಂಶು ಕುಮಾರ್ ಮಾಹಿತಿ ನೀಡಿದ್ದಾರೆ.

ಮನೆಗಳು ಖಾಲಿ: ಗಲಾಟೆ ಹಿನ್ನೆಲೆಯಲ್ಲಿ ಪೊಲೀಸರು ತಮ್ಮನ್ನು ಬಂಧಿಸಬಹುದು ಎಂಬ ಭೀತಿಗೊಳಗಾಗಿರುವ ಕಡಕೋಳ ಗ್ರಾಮದ ಅನೇಕರು ಗ್ರಾಮವನ್ನೇ ತೊರೆದಿದ್ದಾರೆ. ದೀಪಾವಳಿ ಸಂಭ್ರಮದಲ್ಲಿರಬೇಕಾದ ಗ್ರಾಮದ ಬಹುತೇಕ ಮನೆಗಳು ಇದೀಗ ಖಾಲಿ ಹೊಡೆಯುತ್ತಿದ್ದು, ಗ್ರಾಮದಲ್ಲಿ ಪರಿಸ್ಥಿತಿ ಬೂದಿಮುಚ್ಚಿದ ಕೆಂಡದಂತಿದೆ. ಹಾವೇರಿ ಜಿಲ್ಲೆಯಲ್ಲಿ 1649 ಆಸ್ತಿಗಳ ಖಾತೆ ಬದಲಾವಣೆಗೆ ಜಿಲ್ಲಾ ವಕ್ಫ್‌ ಅಧಿಕಾರಿಗಳಿಂದ ಜಿಲ್ಲಾಧಿಕಾರಿಗೆ ಪತ್ರ ಬಂದಿದ್ದು, ಈ ಸಂಬಂಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ತಹಸೀಲ್ದಾರ್‌ಗಳಿಗೆ ಜಿಲ್ಲಾಧಿಕಾರಿ ಸೂಚಿಸಿದ್ದರು.

ಎರಡು ಬಾರಿ ಗೆದ್ದ ಕುಮಾರಸ್ವಾಮಿ ಏನು ಮಾಡಿದರು: ಸಿ.ಪಿ.ಯೋಗೇಶ್ವರ್ ಪ್ರಶ್ನೆ

ವಕ್ಫ್‌ ಆಸ್ತಿ ವಿಚಾರವಾಗಿ ಯಾರಿಗೂ ನಾವು ನೋಟಿಸ್ ಕೊಟ್ಟಿಲ್ಲ. ವಕ್ಫ್‌ ಆಸ್ತಿಗೆ ಸಂಬಂಧಿಸಿ ಹಿಂದೆ ಇದ್ದ ಪಟ್ಟಿ ಆಧಾರದಲ್ಲಿ ಮುಂದಿನ ಕ್ರಮಕ್ಕೆ ಪತ್ರ ಬರೆದಿದ್ದೆವು. ತಮ್ಮ ಜಾಗವನ್ನು ವಕ್ಫ್‌ ಆಸ್ತಿ ಮಾಲೀಕತ್ವಕ್ಕೆ ಹೋಗುತ್ತದೆಂಬ ಆತಂಕದಿಂದ ಜನ ಇದೀಗ ಗಲಾಟೆ ಮಾಡಿದ್ದಾರೆ. ಸದ್ಯ ಪರಿಸ್ಥಿತಿ ತಿಳಿಯಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.
- ಡಾ.ವಿಜಯ ಮಹಾಂತೇಶ ದಾನಮ್ಮನವರ, ಜಿಲ್ಲಾಧಿಕಾರಿ ಹಾವೇರಿ

click me!