ಕೇಂದ್ರ ಸರ್ಕಾರ ವಿಐಎಸ್‌ಎಲ್ ಕಾರ್ಖಾನೆಯನ್ನು ಮುಚ್ಚುವ ನಿರ್ಧಾರದಿಂದ ಸದ್ಯಕ್ಕೆ ಹಿಂದೆ ಸರಿದಿದೆ. ಬೀಸುವ ದೊಣ್ಣೆಯಿಂದ ನಾವು ಪಾರಾಗಿದ್ದೇವೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ಶಿವಮೊಗ್ಗ (ಮಾ.30): ಕೇಂದ್ರ ಸರ್ಕಾರ ವಿಐಎಸ್‌ಎಲ್ ಕಾರ್ಖಾನೆಯನ್ನು ಮುಚ್ಚುವ ನಿರ್ಧಾರದಿಂದ ಸದ್ಯಕ್ಕೆ ಹಿಂದೆ ಸರಿದಿದೆ. ಬೀಸುವ ದೊಣ್ಣೆಯಿಂದ ನಾವು ಪಾರಾಗಿದ್ದೇವೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು. ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಭದ್ರಾವತಿಯ ವಿಐಎಸ್‌ಎಲ್ ಕಾರ್ಖಾನೆಯನ್ನು ಯಾವುದೇ ಕಾರಣಕ್ಕೂ ಮುಚ್ಚುವುದಿಲ್ಲ. ಕಾರ್ಮಿಕರು ಆತಂಕ ಪಡುವ ಅಗತ್ಯವಿಲ್ಲ ಎಂದರು.
ಕೇಂದ್ರ ಸರ್ಕಾರ ನಷ್ಟದಲ್ಲಿದ್ದ ವಿಐಎಸ್‌ಎಲ್ ಕಾರ್ಖಾನೆಯನ್ನು ಮುಚ್ಚುವ ನಿರ್ಧಾರ ಕೈಗೊಂಡಿತ್ತು. ಭದ್ರಾವತಿ ಕಾರ್ಖಾನೆ ಸೇರಿದಂತೆ ಹಲವು ಕಾರ್ಖಾನೆಗಳು ಕೂಡ ಈ ಪಟ್ಟಿಯಲ್ಲಿದ್ದವು. ಆದರೆ ಕೇಂದ್ರ ಉಕ್ಕು ಸಚಿವ ಹಾಗೂ ಗೃಹ ಸಚಿವರು ರಾಜ್ಯಕ್ಕೆ ಬಂದಾಗ ಕಾರ್ಖಾನೆಯನ್ನು ಮುಚ್ಚದಂತೆ ಮನವಿ ಮಾಡಲಾಗಿತ್ತು. ತಾವೂ ಕೇಂದ್ರದ ಮೇಲೆ ಒತ್ತಡ ತಂದು ಕಾರ್ಖಾನೆಯನ್ನು ಮುಚ್ಚಿದರೆ ಸುಮಾರು 10 ಸಾವಿರ ಜನರು ಉದ್ಯೋಗ ಕಳೆದುಕೊಳ್ಳುತ್ತಾರೆ. ಹಾಗಾಗಿ, ಮುಚ್ಚಬಾರದು ಎಂದು ಮನವಿ ಮಾಡಿದ್ದೆವು. ಹೀಗಾಗಿ ಸರ್ಕಾರ ಕಾರ್ಖಾನೆ ಸದ್ಯಕ್ಕೆ ಮುಚ್ಚುವುದಿಲ್ಲ ಎಂದು ತಿಳಿಸಿದರು.
ರಾಜ್ಯದಲ್ಲಿ ಬಿಜೆಪಿ-ಕಾಂಗ್ರೆಸ್ ಪಕ್ಷಗಳ ರಾಜಕೀಯ ಸ್ಥಿತಿ ಚಿಂತಾಜನಕ: ಸಿ.ಎಂ.ಇಬ್ರಾಹಿಂ
ಕೇಂದ್ರ ಸರ್ಕಾರ ಕಾರ್ಖಾನೆಯನ್ನು ಮುಚ್ಚದಿರುವ ಬಗ್ಗೆ ಮತ್ತು ಸೈಲ್ ಮುಂದುವರಿಸಿಕೊಂಡು ಹೋಗುವ ಬಗ್ಗೆ ಮೌಖಿಕವಾಗಿ ಒಪ್ಪಿಗೆ ನೀಡಿದೆ. ನೀತಿಸಂಹಿತೆ ಹಿನ್ನೆಲೆಯಲ್ಲಿ ಲಿಖಿತವಾಗಿ ತಿಳಿಸಲು ಆಗುತ್ತಿಲ್ಲ. ಆದರೆ, ಬಿಜೆಪಿ ಕೊಟ್ಟ ಮಾತಿಗೆ ತಪ್ಪುವುದಿಲ್ಲ. ಹಾಗಾಗಿ ವಿಐಎಸ್‌ಎಲ್ ಕಾರ್ಖಾನೆ ಮುಚ್ಚುವುದಿಲ್ಲ. ಕಾರ್ಮಿಕರು ಭಯಪಡುವ ಅಗತ್ಯವೂ ಇಲ್ಲ ಎಂದರು. ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್ತು ಸದಸ್ಯ ಎಸ್.ರುದ್ರೇಗೌಡ, ಪ್ರಮುಖರಾದ ಜ್ಯೋತಿಪ್ರಕಾಶ್, ದತ್ತಾತ್ರಿ, ಧರ್ಮಪ್ರಸಾದ್, ಜಗದೀಶ್, ರಾಮಲಿಂಗಪ್ಪ, ಎಸ್. ಕುಮಾರ್, ಬುಳ್ಳಾಪುರ ಬಸವರಾಜಪ್ಪ ಮತ್ತಿತರರು ಇದ್ದರು.
ಈ ಬಾರಿ ಎಂಟೂ ಕ್ಷೇತ್ರದಲ್ಲಿ ಗೆಲವು: ಚುನಾವಣೆಗೆ ಬಿಜೆಪಿ ಸಂಪೂರ್ಣ ಸಿದ್ಧವಾಗಿದ್ದು, ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ವಿಶ್ವಾಸ ವ್ಯಕ್ತಪಡಿಸಿದರು. ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಪ್ರಜಾಪ್ರಭುತ್ವದ ಹಬ್ಬಕ್ಕೆ ನಮ್ಮ ಪಕ್ಷ ಸಂಪೂರ್ಣವಾಗಿ ಸಿದ್ಧವಾಗಿದೆ. ನಾವು ಯುದ್ಧ ಬಂದಾಗ ಶಸ್ತ್ರಾಭ್ಯಾಸ ನಡೆಸುವವರಲ್ಲ.
ಈಗಾಗಲೇ ನಮ್ಮ ಕಾರ್ಯಕರ್ತರು ಚುನಾವಣೆ ಎದುರಿಸಲು ಸಿದ್ಧರಾಗಿದ್ದಾರೆ. ಈಗಾಗಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅಭಿವೃದ್ಧಿ ಕೆಲಸಗಳನ್ನು ಜನರಿಗೆ ಮುಟ್ಟಿಸುವ ಕೆಲಸವಾಗಿದೆ ಎಂದು ಹೇಳಿದರು. ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲ ಎಂಟು ವಿಧಾನಸಭಾ ಸ್ಥಾನಗಳಲ್ಲಿ ಕಳೆದ ಬಾರಿ ಏಳು ಸ್ಥಾನ ಗೆದ್ದಿದ್ದೆವು. ಈ ಬಾರಿ ಎಂಟೂ ಸ್ಥಾನಗಳನ್ನೂ ಗೆಲ್ಲಲಿದ್ದೇವೆ. ಬಿಜೆಪಿ ಪಕ್ಷದಲ್ಲಿ ಅಲ್ಲಲ್ಲಿ ಕೇಳಿಬರುತ್ತಿರುವ ಅಸಮಾಧಾನ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಮನೆಯಲ್ಲಿ ಆಸ್ತಿಯಿದ್ದಾಗ ಜಗಳಗಳು ಜಾಸ್ತಿ. ಅಧಿಕೃತವಾಗಿ ಅಭ್ಯರ್ಥಿಗಳ ಪಟ್ಟಿಪ್ರಕಟಗೊಂಡ ಬಳಿಕ ಎಲ್ಲವೂ ಸರಿಯಾಗಲಿವೆ ಎಂದು ಹೇಳಿದರು.
ಸುರಪುರ ಅಭಿವೃದ್ಧಿಗೆ ಬೆಜೆಪಿ ಬೆಂಬಲಿಸಿ: ಶಾಸಕ ರಾಜೂಗೌಡ
ಶಿಕಾರಿಪುರದಲ್ಲಿ ನಡೆದ ಘಟನೆ ಬೇಸರ ತಂದಿದೆ. ಇದು ಮೀಸಲಾತಿ ಹೋರಾಟದ ನೆಪ ಅಷ್ಟೇ. ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ಮೀಸಲಾತಿ ವಿಷಯವನ್ನು ಚುನಾವಣೆ ಸಂದರ್ಭದಲ್ಲಿ ಬೇಳೆ ಬೇಯಿಸಿಕೊಳ್ಳಲು ಬಳಸಿಕೊಳ್ಳುತ್ತಿದ್ದಾರೆ. ವಿರೋಧ ಪಕ್ಷದ ಪ್ರಾಯೋಜಕತ್ವದಲ್ಲಿ ಪ್ರತಿಭಟನೆಗೆ ಸಿದ್ಧರಿದ್ದಾರೆ. ಇದು ನಡೆಯುವುದಿಲ್ಲ. ಸಹಿಸಿಕೊಳ್ಳಲು ಆಗದ ಕೆಟ್ಟಮನಸ್ಸಿನವರು ನಮ್ಮ ಮನೆಮೇಲೆ ಕಲ್ಲು ಹೊಡೆದಿದ್ದಾರೆ
- ಬಿ.ವೈ.ರಾಘವೇಂದ್ರ, ಸಂಸದ