
ಬೆಂಗಳೂರು (ಸೆ.09): ಬಿಜೆಪಿ ಮುಖಂಡ ಮತ್ತು ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣದ ಆರೋಪಿ ಹಾಗೂ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು 2 ದಿನಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ತಮ್ಮ ಮಗನ ಶಸ್ತ್ರಚಿಕಿತ್ಸೆಯ ಹಿನ್ನೆಲೆಯಲ್ಲಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಪರಿಗಣಿಸಿದ ನ್ಯಾಯಾಲಯ ಈ ಆದೇಶ ನೀಡಿದೆ.
ಮಗನ ಚಿಕಿತ್ಸೆಗೆ ಜಾಮೀನು ಅರ್ಜಿ
ಸಿಬಿಐ ವಶದಲ್ಲಿರುವ ವಿನಯ್ ಕುಲಕರ್ಣಿ ಅವರು, ತಮ್ಮ ಮಗನಿಗೆ ಶಸ್ತ್ರಚಿಕಿತ್ಸೆ ಇರುವುದರಿಂದ 10 ದಿನಗಳ ಕಾಲ ಮಧ್ಯಂತರ ಜಾಮೀನು ಕೋರಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ನ್ಯಾ. ಸಂತೋಷ್ ಗಜಾನನ ಭಟ್ ಅವರಿದ್ದ ನ್ಯಾಯಪೀಠ ಈ ಅರ್ಜಿಯ ವಿಚಾರಣೆ ನಡೆಸಿತು. ಕುಲಕರ್ಣಿ ಅವರ ಮಗ ಬೆಂಗಳೂರಿನ ಕನ್ನಿಂಗ್‌ಹ್ಯಾಂ ರಸ್ತೆಯಲ್ಲಿರುವ ಸ್ಪರ್ಷ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ವಿಚಾರಣೆ ವೇಳೆ, ನ್ಯಾಯಾಲಯವು ಸ್ಪರ್ಷ್ ಆಸ್ಪತ್ರೆಯಿಂದ ವಿನಯ್ ಕುಲಕರ್ಣಿ ಅವರ ಮಗನ ಆರೋಗ್ಯ ಮತ್ತು ಚಿಕಿತ್ಸೆಯ ಕುರಿತು ವರದಿ ಪಡೆದು ಸಲ್ಲಿಸುವಂತೆ ಸಿಬಿಐ ಅಧಿಕಾರಿಗಳಿಗೆ ಸೂಚನೆ ನೀಡಿತು. ಆಸ್ಪತ್ರೆಯ ವರದಿ ಪರಿಶೀಲಿಸಿದ ನಂತರವೇ ಜಾಮೀನಿನ ಬಗ್ಗೆ ತೀರ್ಮಾನ ಕೈಗೊಳ್ಳುವುದಾಗಿ ನ್ಯಾಯಾಧೀಶರು ತಿಳಿಸಿದರು. ಮಧ್ಯಾಹ್ನ 3 ಗಂಟೆಯ ನಂತರ ವರದಿ ಆಧರಿಸಿ ನ್ಯಾಯಾಲಯವು ಆದೇಶ ಹೊರಡಿಸಿತು. ಪುನಃ ವಿಚಾರಣೆ ಆರಂಭಿಸಿತು.
ಯೋಗೀಶ್ ಗೌಡ ಕೊಲೆ ಕೇಸ್; ವಿನಯ್ ಕುಲಕರ್ಣಿ ಪರಪ್ಪನ ಅಗ್ರಹಾರ ಜೈಲಿಗೆ!
ಷರತ್ತುಬದ್ಧ ಜಾಮೀನು ಮಂಜೂರು:
ನಂತರ ನ್ಯಾಯಾಲಯವು ವಿನಯ್ ಕುಲಕರ್ಣಿಗೆ 2 ದಿನಗಳ ಕಾಲ ಮಧ್ಯಂತರ ಜಾಮೀನು ಮಂಜೂರು ಮಾಡಿದ್ದು, ಕೆಲವು ಕಟ್ಟುನಿಟ್ಟಿನ ಷರತ್ತುಗಳನ್ನು ವಿಧಿಸಿದೆ. ಸೆಪ್ಟೆಂಬರ್ 11 ರಂದು ಸಂಜೆ 5 ಗಂಟೆಗೆ ಕಡ್ಡಾಯವಾಗಿ ನ್ಯಾಯಾಲಯಕ್ಕೆ ಹಾಜರಾಗುವಂತೆ ಸೂಚಿಸಿದೆ. ಜಾಮೀನಿನ ಅವಧಿಯಲ್ಲಿ ಯಾವುದೇ ಸಾರ್ವಜನಿಕ ಸಭೆ, ರಾಜಕೀಯ ರ್ಯಾಲಿ ಅಥವಾ ಪ್ರತಿಭಟನೆಗಳಲ್ಲಿ ಭಾಗವಹಿಸದಂತೆ ನಿರ್ಬಂಧ ವಿಧಿಸಿದೆ. ಈ ಆದೇಶದಿಂದಾಗಿ, ವಿನಯ್ ಕುಲಕರ್ಣಿ ತಮ್ಮ ಮಗನ ಚಿಕಿತ್ಸೆಯ ಸಮಯದಲ್ಲಿ ಜೊತೆಯಿರಲು ಅವಕಾಶ ಪಡೆದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ