
ಭೈರಪ್ಪನವರ ಊರು ಸಂತೇಶಿವರ. ನನ್ನ ಊರು ದಂಡಿನಶಿವರ. ಎರಡೂ ಒಂದೇ ಸೀಮೆ. ಅವರದ್ದು ಚನ್ನರಾಯಪಟ್ಟಣ ತಾಲ್ಲೂಕು, ನಮ್ಮದು ತುರುವೇಕೆರೆ ತಾಲ್ಲೂಕು. ನಮ್ಮೂರಿಗೂ ಅವರೂರಿಗೂ ಕೇವಲ 12 ಕಿಮೀ ಅಂತರ.
ಹೈಸ್ಕೂಲ್ ದಿನಗಳಿಂದಲೇ ಭೈರಪ್ಪನವರು ನಮ್ಮ ಸೀಮೆಯ ಪ್ರಖ್ಯಾತ ಸಾಹಿತಿಗಳು ಅನ್ನೋದು ನಮ್ಮ ಮೇಷ್ಟರಿಂದ ಕಾದಂಬರಿ ಓದಿದ ಹಿರಿಯರಿಂದ ತಿಳಿದಿತ್ತು. ಅವರ ಕಾದಂಬರಿ ಓದಿದ ಮೇಲಂತೂ ಅದರಲ್ಲಿ ಬರುವ ಸನ್ನಿವೇಶಗಳು ನಮ್ಮ ಊರಿನಲ್ಲೇ ನಡೀತಿದೆ, ನಮ್ಮ ಬೀದಿಯಲ್ಲೇ ನಡೀತಿದೆ ಅನಿಸುತ್ತಿತ್ತು. ಅಕ್ಕಪಕ್ಕದಲ್ಲೇ ಕಂಡ ವ್ಯಕ್ತಿಗಳಿಗೂ ಅವರ ಕಾದಂಬರಿಗಳ ಪಾತ್ರಗಳಿಗೂ ಸಾಮ್ಯತೆ ಇತ್ತು. ಅವರ ಕಾದಂಬರಿಯ ಭಾಷೆ ನಮ್ಮಲ್ಲಿಯದು ಎನ್ನುವುದು ಇನ್ನಷ್ಟು ಆಪ್ತತೆಗೆ ಕಾರಣವಾಯಿತು.
ಇದನ್ನೂ ಓದಿ: ಭಿತ್ತಿಯಲ್ಲಿ ಬದುಕಿನ ಬಗ್ಗೆ ಭೈರಪ್ಪ ಅವರ ಬರಹ, ಜೀವನದ ಬಗ್ಗೆ ನಾವು ತಿಳಿಯಬೇಕಾದ ಅಮೂಲ್ಯ ನುಡಿಗಳು!
ಕ್ರಿಯಾಶೀಲತೆಯ ವಿಚಾರದಿಂದ ನೋಡುವುದಾದರೆ, ಕಾದಂಬರಿ ಕ್ಷೇತ್ರದ ಅನಭಿಷಿಕ್ತ ದೊರೆ ಎಸ್ ಎಲ್ ಭೈರಪ್ಪ ಎನ್ನುವುದು ಎಲ್ಲರೂ ಒಪ್ಪುವ ಮಾತು. ಅನಕೃ, ತರಾಸು ನಂತರದ ದಿನಗಳಲ್ಲಿ ಇಷ್ಟು ಪ್ರಖ್ಯಾತಿಯನ್ನು ಇಷ್ಟು ಅಭಿಮಾನ ವರ್ಗವನ್ನು ಪಡೆದಂಥ ಮತ್ತೊಬ್ಬ ಸಾಹಿತಿಯನ್ನು ನಾನು ಕಾಣೆ. ಭಾರತದ 16 ಭಾಷೆಗಳಲ್ಲಿ ಅವರ ಕಾದಂಬರಿ ಅನುವಾದಗೊಂಡಿದೆ.
ಮೊದಲಸಲ ಭೈರಪ್ಪನವರನ್ನು ನೋಡಿದ್ದು:
ನಾನು ಮೊದಲು ಭೈರಪ್ಪನವರನ್ನು ನೋಡಿದ ಸನ್ನಿವೇಶ ಮನಸ್ಸಲ್ಲಿ ಹಸಿರಾಗಿದೆ. 1985ನೇ ಇಸವಿ. ದೂರದರ್ಶನದಲ್ಲಿ ಚಕ್ರವ್ಯೂಹ ಎಂಬ ಸಂವಾದ ಕಾರ್ಯಕ್ರಮ ಪ್ರಸಾರವಾಗುತ್ತಿತ್ತು. ಅದಕ್ಕೆ ಪ್ರಶ್ನೆಗಳನ್ನು ಮುಂಚೆ ಕಳಿಸಿ ಆಯ್ಕೆ ಆದರೆ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶ ಇರುತ್ತಿತ್ತು. ನಾನು ಕಾರ್ಡಿನಲ್ಲಿ ಪ್ರಶ್ನೆ ಬರೆದು ಕಳಿಸಿದ್ದೆ. ಆ ಪ್ರಶ್ನೆ ಆಯ್ಕೆ ಆಯ್ತು. ನನಗೆ ಲಾಟರಿ ಹೊಡೆದಷ್ಟು ಸಂತೋಷವಾಗಿತ್ತು.
ನಾನಾಗ ಕೇಳಿದ ಪ್ರಶ್ನೆ ಇನ್ನೂ ನೆನಪಿದೆ. ‘ನಿಮ್ಮ ಕಾದಂಬರಿಯ ಪಾತ್ರಗಳು ನಮ್ಮೂರಲ್ಲಿ ನಡೆದಂತೆ ಅನಿಸುತ್ತಲ್ಲ, ಪಾತ್ರಗಳು ನಾನು ಕಂಡಂತೆಯೇ ಇವೆಯಲ್ಲ, ಇದು ಹೇಗೆ ಸಾಧ್ಯವಾಗುತ್ತೆ? ನಮ್ಮೂರಿಗೆ ಬಂದು ನೋಡಿದ್ರಾ? ನಮ್ಮೂರಿನ ಜನರ ಬಳಿ ಮಾತಾಡಿ ಬರೆದದ್ದಾ?’ ಅಂತ ಕೇಳಿದ್ದೆ.
ಅದಕ್ಕವರು, ‘ಹಾಗೇನಿಲ್ಲ. ಸಾಮಾನ್ಯವಾಗಿ ಮನುಷ್ಯನ ಸ್ವಭಾವ ಜಗತ್ತಿನ ಎಲ್ಲಿ ಹೋದರೂ ಒಂದೇ ರೀತಿಯದು. ಭಾರತದ ಎಲ್ಲ ಹಳ್ಳಿಗಳಲ್ಲಿ ಪ್ರಯಾಣ ಮಾಡಿದ್ದೇನೆ. ಆಗ ಕಂಡುಕೊಂಡ ಅಂಶ ಅಂದರೆ ಅವರ ಮಾತುಕತೆ, ಚಿಂತನೆ ಒಂದೇ ಆಗಿರುತ್ತದೆ. ಉಡುಪು, ಭಾಷೆ, ಸಂಸ್ಕೃತಿ ಬದಲಾಗಿರಬಹುದು, ಮನಸ್ಥಿತಿ ಒಂದೇ ಇರುತ್ತದೆ’ ಅಂತ ಹೇಳಿದ್ದರು.
ಮುಂದೆ 2001-02ರಲ್ಲಿ ಎಸ್ ಎಲ್ ಭೈರಪ್ಪ ಅವರ ಸಾಕ್ಷ್ಯಚಿತ್ರ ಮಾಡಬೇಕು ಅಂದಾಗ ಎರಡನೇ ಬಾರಿ ಲಾಟರಿ ಹೊಡೆದ ಅನುಭವ. ನಾನು ಇಷ್ಟಪಟ್ಟ ಸಾಹಿತಿಯನ್ನು ಹತ್ತಿರದಿಂದ ನೋಡ್ತೀನಿ ಅನ್ನುವ ಹರುಷದ ಜೊತೆಗೆ ಅವರು ಇದಕ್ಕೆ ಒಪ್ಪಬಹುದಾ ಎಂಬ ಅನುಮಾನವೂ ಇತ್ತು. ಅಷ್ಟರಲ್ಲಾಗಲೇ ನನ್ನ ನಿರ್ದೇಶನದ ‘ಮುನ್ನುಡಿ’ ಸಿನಿಮಾಕ್ಕೆ ರಾಷ್ಟ್ರಪ್ರಶಸ್ತಿ ಬಂದಿತ್ತು. ಇದನ್ನು ಆಪ್ತರು ಅವರಿಗೆ ತಿಳಿಸಿದ್ದರು. ಭೈರಪ್ಪ ಅವರು ಸಣ್ಣದೊಂದು ತಕರಾರೂ ತೆಗೆಯದೇ ಒಪ್ಪಿದರು.
ಇದನ್ನೂ ಓದಿ: ಗತಜನ್ಮದಿಂದ.. ಉತ್ತರಕಾಂಡದವರೆಗೆ ಎಸ್‌ಎಲ್ ಭೈರಪ್ಪ ಬರೆದ ಮಹೋನ್ನತ ಕಾದಂಬರಿಗಳು..
ಇದು ಓದುಗನೊಬ್ಬನಿಗೆ ಸಿಕ್ಕ ಅದೃಷ್ಟ, ನಾನೇ ಅದೃಷ್ಟವಂತ:
ಸಾಕ್ಷ್ಯ ಚಿತ್ರಕ್ಕಾಗಿ ಸುಮಾರು 15 ದಿನಗಳ ಕಾಲ ಅವರ ಜೊತೆಗೆ ಆಪ್ತವಾಗಿ ಒಡನಾಡುವ ಅವಕಾಶ ಸಿಕ್ಕಿತು. ಕಾರಲ್ಲಿ ಅವರ ಪಕ್ಕದಲ್ಲಿ, ಅವರ ಕಾರನ್ನೇ ಡ್ರೈವ್ ಮಾಡುತ್ತಾ ಎಲ್ಲ ವಿಚಾರಗಳ ಬಗ್ಗೆ ಅವರ ಬಳಿ ಮುಕ್ತವಾಗಿ ಚರ್ಚೆ ಮಾಡಿದ್ದೆ. ಮುಂದೆ 2009ಕ್ಕೆ ಮತ್ತೊಂದು ಸಾಕ್ಷಚಿತ್ರ ಮಾಡಿದೆ. 2013ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಗೂ ಅವರ ಬಗೆಗೆ ಸಾಕ್ಷಚಿತ್ರ ಮಾಡಿದೆ. ಅಷ್ಟೊತ್ತಿಗೆ ಅವರು ಬಹಳ ಮಾಗಿದ್ದರು. ಬೌದ್ಧಿಕವಾದ ಪ್ರೌಢತೆಯೂ ಎದ್ದುಕಾಣುತ್ತಿತ್ತು. ಹೀಗೆ ಈ ಮೂರು ಸಾಕ್ಷ್ಯ ಚಿತ್ರಗಳ ಮೂಲಕ ಅವರನ್ನು ತೀರ ಹತ್ತಿರದಿಂದ ಕಾಣುವಂಥ ಅವಕಾಶ ಸಿಕ್ಕಿತು. ಇದು ಓದುಗನೊಬ್ಬನಿಗೆ ಸಿಕ್ಕ ಅದೃಷ್ಟ. ನಾನು ಆ ವಿಚಾರದಲ್ಲಿ ಅದೃಷ್ಟವಂತ.
ಕಳೆದ ತಿಂಗಳು ಭೈರಪ್ಪ ಅವರ ಹುಟ್ಟುಹಬ್ಬ ಇತ್ತು. ಆ ಕಾರ್ಯಕ್ರಮದಲ್ಲಿ 57 ನಿಮಿಷದ ಸಾಕ್ಷ್ಯಚಿತ್ರ ಪ್ರದರ್ಶಿಸಿದ್ದೆ. ಅದನ್ನು 62 ಸಾವಿರಕ್ಕೂ ಅಧಿಕ ಜನ ನೋಡಿದ್ದಾರೆ. ಇದರಲ್ಲೇ ಗೊತ್ತಾಗುತ್ತದೆ, ಭೈರಪ್ಪ ಅವರಿಗೆ ಎಂಥಾ ದೊಡ್ಡ ಅಭಿಮಾನಿ ಬಳಗವಿತ್ತು ಎಂಬುದು.
ಭೈರಪ್ಪ ಅವರು 95 ವರ್ಷಗಳ ತುಂಬು ಜೀವನ ನಡೆಸಿದ್ದಾರೆ. ಆದರೆ ಅವರ ಶಿಸ್ತಿನ ಜೀವನ, ಆಹಾರ ಕ್ರಮ, ಯೋಚನಾ ರೀತಿ ನೋಡಿ ಶತಾಯುಷಿಗಳಾಗುತ್ತಾರೆ ಎಂಬ ಆಸೆ ಇತ್ತು. ಆದರೆ ಅವರು ಐದು ವರ್ಷ ಮೊದಲೇ ಹೋಗಿದ್ದಾರೆ. ಇದು ನನಗೆ ನನ್ನ ತಂದೆಯನ್ನು ಕಳೆದುಕೊಂಡದ್ದಕ್ಕಿಂತ ಹೆಚ್ಚಿನ ನೋವು ಕೊಟ್ಟಿದೆ.
ಮತ್ತೆ ಮತ್ತೆ ಓದಿಸಿಕೊಂಡು ಹೋಗುವಂಥಾ ಭೈರಪ್ಪ ಮತ್ತೆ ಮತ್ತೆ ಹುಟ್ಟಿಬರಲಿ ಎಂಬುದು ನನ್ನ ಪ್ರಾರ್ಥನೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ