
ಮಂಗಳೂರು (ಸೆ.25): ಅಕ್ರಮ ಶಸ್ತ್ರಾಸ್ತ್ರ ಹೊಂದಿದ ಆರೋಪದಲ್ಲಿ ಬಂಧನದ ಭೀತಿ ಎದುರಿಸುತ್ತಿರುವ ಸೌಜನ್ಯಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿಯವರು ಮಂಗಳೂರು ಜಿಲ್ಲಾ ಕೋರ್ಟ್‌ನಲ್ಲಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದು, ಸೆ.27ರಂದು ಅರ್ಜಿಯ ವಿಚಾರಣೆ ನಡೆಯಲಿದೆ. ಈ ಸಂಬಂಧ ಕೋರ್ಟ್ ಸಹಾಯಕ ಅಭಿಯೋಜಕರಿಗೆ ಆಕ್ಷೇಪಣೆಗಳಿದ್ದರೆ ಸಲ್ಲಿಸಲು ನೋಟಿಸ್ ಜಾರಿಗೊಳಿಸಿದೆ.
ಈ ಮಧ್ಯೆ, ಅಕ್ರಮ ಶಸ್ತ್ರಾಸ್ತ್ರ ಹೊಂದಿದ ಆರೋಪದಲ್ಲಿ ಬಂಧನ ಭೀತಿಯಲ್ಲಿ ತಲೆಮರೆಸಿಕೊಂಡಿರುವ ತಿಮರೋಡಿ ಮನೆಗೆ ಮೂರನೇ ನೋಟಿಸ್ ಅಂಟಿಸಲು ಪೊಲೀಸರು ತೀರ್ಮಾನಿಸಿದ್ದಾರೆ. ಅವರು ನಾಪತ್ತೆಯಾದ ಕಾರಣ ಈಗಾಗಲೇ ವಿಚಾರಣೆಗೆ ಆಗಮಿಸುವಂತೆ ಸೂಚಿಸಿ ಪೊಲೀಸರು ಅವರ ಮನೆಗೆ ಎರಡು ಬಾರಿ ನೋಟಿಸ್ ಅಂಟಿಸಿ ಬಂದಿದ್ದರು. ಸೆ.25ರಂದು ಹಾಜರಾಗುವಂತೆ ಎರಡನೇ ನೋಟಿಸ್‌ನ್ನು ಅಂಟಿಸಲಾಗಿದ್ದರೂ, ಗುರುವಾರ ಅವರು ವಿಚಾರಣೆಗೆ ಆಗಮಿಸುವುದು ಅನುಮಾನ. ಹೀಗಾಗಿ, ಪೊಲೀಸರು ಗುರುವಾರ ಮತ್ತೆ ಮೂರನೇ ನೋಟಿಸ್ ಜಾರಿಗೊಳಿಸುವ ಸಾಧ್ಯತೆ ಇದೆ.
ಇದನ್ನೂ ಓದಿ: sahyog portal: ಸಾಮಾಜಿಕ ಜಾಲತಾಣಗಳಿಗೆ ಅನಿಯಂತ್ರಿತ ಸ್ವಾತಂತ್ರ್ಯ ಕೊಟ್ಟರೆ ಅರಾಜಕತೆ- ಹೈಕೋರ್ಟ್
ರಾಯಚೂರಿಗೆ ಯಾಕೆ ತಿಮರೋಡಿ ಗಡಿಪಾರು?:
ಈ ಮಧ್ಯೆ, ಸಾಮಾಜಿಕ ಶಾಂತಿಭಂಗಕ್ಕೆ ಧಕ್ಕೆ ಉಂಟುಮಾಡುವ ಸಾಧ್ಯತೆ ಹಿನ್ನೆಲೆಯಲ್ಲಿ ಒಂದು ವರ್ಷ ಕಾಲ ಅವರನ್ನು ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನಗೆ ಗಡಿಪಾರು ಮಾಡಲಾಗಿದೆ. ಗಡಿಪಾರು ಆದೇಶದಲ್ಲಿರುವ ಸಮಯದಲ್ಲಿ ಪ್ರತಿ 7 ದಿನಗಳಿಗೊಮ್ಮೆ ಮಾನ್ವಿ ಪೊಲೀಸ್ ಠಾಣೆಯ ಠಾಣಾಧಿಕಾರಿಯವರ ಮುಂದೆ ಹಾಜರಾಗಲು ಸೂಚನೆ ನೀಡಲಾಗಿದೆ. ಈ ಆದೇಶದ ವಿರುದ್ಧ ತಿಮರೋಡಿಯವರು ಹೈಕೋರ್ಟ್ ಮೆಟ್ಟಿಲೇರುವ ಸಾಧ್ಯತೆ ಇದೆ.
ಇದೇ ವೇಳೆ, ಪುತ್ತೂರಿನ ಸಹಾಯಕ ಕಮಿಷನರ್ ಅವರು ಮಹೇಶ್ ಶೆಟ್ಟಿ ತಿಮರೋಡಿ ಗಡೀಪಾರಿಗೆ ಆದೇಶ ನೀಡಿದ ಹಿನ್ನೆಲೆಯಲ್ಲಿ ಬೆಳ್ತಂಗಡಿ ಪೊಲೀಸರು ತಿಮರೋಡಿಗೆ ಗಡಿಪಾರು ನೋಟಿಸ್ ನೀಡಲು ಸಿದ್ಧತೆ ನಡೆಸಿದ್ದಾರೆ.
ತಿಮರೋಡಿಯವರು ಉಜಿರೆಯ ಮನೆಯಲ್ಲಿ ಇಲ್ಲದ ಕಾರಣ ಬೇರೆ ಕಡೆ ಪೊಲೀಸರು ತೆರಳಿದ್ದಾರೆ. ಬೆಂಗಳೂರು ಮತ್ತು ಚಿಕ್ಕಮಗಳೂರಿಗೆ ಪೊಲೀಸ್ ತಂಡ ತೆರಳಿದ್ದು, ಈ ಕಡೆಗಳಲ್ಲಿ ತಿಮರೋಡಿ ತಲೆಮರೆಸಿರುವ ಶಂಕೆ ಪೊಲೀಸರದ್ದು.
ಇದನ್ನೂ ಓದಿ: Dalit CM: 'ದಲಿತ ಸಿಎಂ ಆಗೋವರೆಗೂ ಸಾಯಲ್ಲ' ಸಂಸದ ರಮೇಶ್ ಜಿಗಜಿಣಗಿ ಶಪಥ!
ಸಾಮಾನ್ಯವಾಗಿ ಈ ರೀತಿ ಗಡೀಪಾರು ಮಾಡುವಾಗ ಪೊಲೀಸರು ವರದಿಯಲ್ಲಿ ನಾಲ್ಕು ಜಿಲ್ಲೆಗಳ ಹೆಸರನ್ನು ಸೂಚಿಸುತ್ತಾರೆ. ಮುಖ್ಯವಾಗಿ ಆ ಜಿಲ್ಲೆಗಳಲ್ಲಿ ಆರೋಪಿಯ ಇದುವರೆಗಿನ ಕೃತ್ಯಕ್ಕೆ ಪೂರಕವಾದ ಅಂಶಗಳು ಯಾವುದೂ ಇರಬಾರದು. ಅಲ್ಲಿ ಆತನ ಕೃತ್ಯ ಮುಂದುವರಿಯುವುದಕ್ಕೆ ಅವಕಾಶ ಇರಬಾರದು. ಮತ್ತು ಆ ಪ್ರದೇಶ ಸಾಕಷ್ಟು ದೂರ ಇರಬೇಕು. ಬೆಳ್ತಂಗಡಿಯಿಂದ ರಾಯಚೂರಿಗೆ ಸುಮಾರು 532 ಕಿ.ಮೀ. ದೂರ ಇದೆ. ಒಂದು ದಿನದಲ್ಲಿ ಬೆಳ್ತಂಗಡಿಗೆ ಬಂದು ಹೋಗುವುದು ಅಸಾಧ್ಯ. ಈ ಕಾರಣಕ್ಕೆ ರಾಯಚೂರಿಗೆ ಗಡೀಪಾರು ಮಾಡಲಾಗಿದೆ ಎಂದು ಹೇಳಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ