ಕಥೆಕೂಟದ 2024-25ನೇ ಸಾಲುಗಳ 'ಜಿ. ವೆಂಕಟಸುಬ್ಬಯ್ಯ ಭಾಷಾ ಸಮ್ಮಾನ್' ಪುರಸ್ಕಾರ ಘೋಷಣೆ!

Published : Aug 22, 2025, 05:21 PM IST
SN Sridhar and Tamil Selvi

ಸಾರಾಂಶ

ಕಥೆಕೂಟ ಸಂಸ್ಥೆಯಿಂದ ನಿಘಂಟುಕಾರ ಜಿ.ವೆಂಕಟಸುಬ್ಬಯ್ಯ ಸ್ಮರಣಾರ್ಥ ಕೊಡಮಾಡುವ 2024 ಹಾಗೂ 2025ನೇ ಸಾಲಿನ ಜಿ. ವೆಂಕಟಸುಬ್ಬಯ್ಯ ಭಾಷಾ ಸಮ್ಮಾನ್' ಪುರಸ್ಕಾರವು ಕ್ರಮವಾಗಿ ಪ್ರೊ.ಎಸ್.ಎನ್.ಶ್ರೀಧರ್ ಹಾಗೂ ತಮಿಳು ಸೆಲ್ವಿಗೆ ಲಭಿಸಿದೆ. ಈ ಪುರಸ್ಕಾರ ₹10 ಸಾವಿರ ನಗದು ಮತ್ತು ಫಲಕ ಒಳಗೊಂಡಿದೆ.

ಬೆಂಗಳೂರು (ಆ.22): ಕನ್ನಡ ಭಾಷೆಗೆ ಅಪಾರ ಕೊಡುಗೆ ನೀಡಿದ 'ನಿಘಂಟು ಬ್ರಹ್ಮ' ದಿವಂಗತ ಜಿ. ವೆಂಕಟಸುಬ್ಬಯ್ಯ ಅವರ ಸ್ಮರಣಾರ್ಥ, 'ಕಥೆಕೂಟ ಸಂಸ್ಥೆಯಿಂದ ಭಾಷೆಯಲ್ಲಿ ವಿಶಿಷ್ಟ ಪ್ರಯೋಗಗಳನ್ನು ಮಾಡಿದ ಮತ್ತು ಭಾಷೆಗೆ ಸೃಜನಶೀಲ ಕೊಡುಗೆ ನೀಡಿದ ಪ್ರತಿಭಾನ್ವಿತರಿಗೆ 'ಜಿ. ವೆಂಕಟಸುಬ್ಬಯ್ಯ ಭಾಷಾ ಸಮ್ಮಾನ್' ಪುರಸ್ಕಾರ ನೀಡುತ್ತಾ ಬಂದಿದೆ. ಇದೀಗ 2024 ಮತ್ತು 2025ರ ಪುರಸ್ಕೃತರನ್ನು ಘೋಷಣೆ ಮಾಡಲಾಗಿದೆ. ಈ ಪುರಸ್ಕಾರವು ₹10,000 ನಗದು ಮತ್ತು ಫಲಕವನ್ನು ಒಳಗೊಂಡಿದೆ.

2024 ಮತ್ತು 2025ರ ಪುರಸ್ಕಾರ ವಿಜೇತರ ಘೋಷಣೆ

ಪ್ರೊಫೆಸರ್ ಎಸ್.ಎನ್. ಶ್ರೀಧರ್‌ಗೆ 2024ನೇ ಸಾಲಿನ ಪುರಸ್ಕಾರ: ಕುಮಾರವ್ಯಾಸ ಭಾರತವನ್ನು ಇಂಗ್ಲಿಷಿಗೆ ಅನುವಾದಿಸುವ ತಂಡದ ಮುಖ್ಯಸ್ಥರಾಗಿರುವ 'ಹಿರಿಯ ಭಾಷಾವಿಜ್ಞಾನಿ ಪ್ರೊಫೆಸರ್ ಎಸ್.ಎನ್. ಶ್ರೀಧರ್' ಅವರಿಗೆ 2024ನೇ ಸಾಲಿನ ಪುರಸ್ಕಾರ ನೀಡಲು ತೀರ್ಮಾನಿಸಲಾಗಿದೆ. ನ್ಯೂಯಾರ್ಕ್‌ನ ಸ್ಟೋನಿಬ್ರೂಕ್ ವಿಶ್ವವಿದ್ಯಾಲಯದಲ್ಲಿ ಭಾಷಾವಿಜ್ಞಾನ ಮತ್ತು ಭಾರತೀಯ ಅಧ್ಯಯನ ವಿಭಾಗದಲ್ಲಿ ಪ್ರಾಧ್ಯಾಪಕರಾಗಿರುವ ಶ್ರೀಧರ್ ಅವರು, ಕುಮಾರವ್ಯಾಸ ಭಾರತದ ಇಂಗ್ಲಿಷ್ ಅನುವಾದ (The Kannada Mahabharata) ಯೋಜನೆಗೆ ಚಾಲನೆ ನೀಡಿದ್ದಾರೆ. 'ಮಾಡರ್ನ್ ಕನ್ನಡ ಗ್ರಾಮರ್', 'ಇಂದಿನ ಕನ್ನಡ: ರಚನೆ ಮತ್ತು ಬಳಕೆ' ಸೇರಿದಂತೆ 70ಕ್ಕೂ ಹೆಚ್ಚು ಪ್ರಕಟಿತ ಲೇಖನಗಳ ಮೂಲಕ ಕನ್ನಡ ಭಾಷಾವಿಜ್ಞಾನಕ್ಕೆ ಅಪಾರ ಕೊಡುಗೆ ನೀಡಿದ್ದಾರೆ.

2025ನೇ ಸಾಲಿನ ಪುರಸ್ಕಾರ : ಅನುವಾದಕಿ ಮತ್ತು ಭಾಷಾ ಸಂಶೋಧಕಿ 'ಡಾ. ತಮಿಳ್ ಸೆಲ್ವಿ' ಅವರಿಗೆ 2025ನೇ ಸಾಲಿನ ಪುರಸ್ಕಾರ ಲಭಿಸಿದೆ. ಮದ್ರಾಸ್ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಪ್ರಾಧ್ಯಾಪಕಿ ಮತ್ತು ಮುಖ್ಯಸ್ಥರಾಗಿರುವ ಇವರು, ಕನ್ನಡ ಮತ್ತು ತಮಿಳು ಭಾಷೆಗಳ ನಡುವೆ ಸೌಹಾರ್ದ ಸಂಬಂಧ ಬೆಳೆಸುವ ಕಾರ್ಯದಲ್ಲಿ ದಶಕಗಳಿಂದ ತೊಡಗಿಸಿಕೊಂಡಿದ್ದಾರೆ. 'ನಾನು ಅವನಲ್ಲ, ಅವಳು' ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಅನುವಾದ ಪ್ರಶಸ್ತಿ ಮತ್ತು ತಮಿಳುನಾಡು ಸರ್ಕಾರದ 'ಶ್ರೇಷ್ಠ ಅನುವಾದಕಿ ಪ್ರಶಸ್ತಿ'ಯೂ ಅವರಿಗೆ ಸಂದಿವೆ. 'ನೇಪಥ್ಯ', 'ಅಶೋಕ ಮಿತ್ರನ್ ಕಥೆಗಳು' ಸೇರಿದಂತೆ ಹಲವು ಪ್ರಸಿದ್ಧ ಅನುವಾದ ಕೃತಿಗಳನ್ನು ರಚಿಸಿದ್ದಾರೆ.

ಪುರಸ್ಕಾರ ವಿಜೇತರ ಆಯ್ಕೆ ಸಮಿತಿಯಲ್ಲಿ ಹಿರಿಯ ಕವಿ ಸುಬ್ರಾಯ ಚೊಕ್ಕಾಡಿ, ಲೇಖಕ ಗಿರೀಶ್ ರಾವ್ ಹತ್ವಾರ್ (ಜೋಗಿ), ಕಥೆಕೂಟದ ನಿರ್ವಾಹಕ ಗೋಪಾಲಕೃಷ್ಣ ಕುಂಟಿನಿ ಮತ್ತು ಜಿ.ವಿ. ಅರುಣ್ ಅವರು ಇದ್ದರು. ಪ್ರಶಸ್ತಿ ಪ್ರದಾನ ಸಮಾರಂಭವು 2025ರ ನವೆಂಬರ್ 1 ರಂದು ನಡೆಯಲಿದೆ ಎಂದು ಕಥೆಕೂಟದ ನಿರ್ವಾಹಕ ಗೋಪಾಲಕೃಷ್ಣ ಕುಂಟಿನಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ
ಕರ್ನಾಟಕದಲ್ಲಿ ಶೇ.63 ಭ್ರಷ್ಟಾಚಾರ: ಸಿಬಿಐ ತನಿಖೆಗೆ ಒತ್ತಾಯಿಸಿದ ಆರ್‌.ಅಶೋಕ್‌