
ಬೆಂಗಳೂರು (ನ.15): ನಗರದ ಅರಮನೆ ಮೈದಾನದಲ್ಲಿ ಟ್ರೈಯೂನ್ ಎಕ್ಸಿಬಿಟರ್ಸ್ ಸಂಸ್ಥೆಯು ಮೂರು ದಿನಗಳ ಕಾಲ ಆಯೋಜಿಸಿರುವ ನಾಲ್ಕನೇ ಅಂತಾರಾಷ್ಟ್ರೀಯ ಆಟೋ ಶೋದಲ್ಲಿ ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರು ಅತೀವ ಆಸಕ್ತಿಯಿಂದ ಸಂಗ್ರಹಿಸಿರುವ ಕಾರುಗಳು ಕಣ್ಮನ ಸೆಳೆದವು. ಆಟೋ ಶೋದಲ್ಲಿ ಗತಕಾಲದ ಅಪರೂಪದ ವಾಹನಗಳಿಂದ ಹಿಡಿದು ಅತ್ಯಾಧುನಿಕ ಆಟೋಮೋಟಿವ್ ಎಲೆಕ್ಟ್ರಿಕ್ ತಂತ್ರಜ್ಞಾನ ಹೊಂದಿದ ವಿವಿಧ ಕಂಪನಿಗಳ ಕಾರು, ಬೈಕ್ ಅನಾವರಣಗೊಳಿಸಲಾಗಿದೆ.
ಪ್ರದರ್ಶನದಲ್ಲಿ ದೇಶದ ವಿವಿಧ ಕಂಪನಿಗಳ ಕಾರುಗಳ ಜತೆಗೆ ವಿಶೇಷವಾಗಿ ಡಾ.ವೀರೇಂದ್ರ ಹೆಗ್ಗಡೆ ಅವರು ಸಂಗ್ರಹಿಸಿರುವ ರಾಜ-ಮಹಾರಾಜರ ಕಾಲದ ಅತ್ಯಂತ ಅಪರೂಪದ ಗತಕಾಲದ ವೈವಿದ್ಯಮಯ ಹಾಗೂ ಆಕರ್ಷಣೀಯ ಕಾರುಗಳನ್ನು ಪಯಣ ಸಂಗ್ರಹಾಲಯದ ಹೆಸರಿನಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ.
ಸ್ವಾತಂತ್ಯಪೂರ್ವದ 1936ರ ಕಾಲದ ಜರ್ಮನ್ ಮೂಲದ ಒಪೆಲ್ ಕೆಡೆಟ್ಸ್, 1946ರ ಫೋರ್ಡ್ ಫ್ರಿಫೆಕ್ಟ್ ಇ93ಎ ಮಾಡೆಲ್ ಕಾರು, 1947ರ ಮೋರಿಸ್ 8 ಸಿರೀಸ್ಇ, ಬ್ಯೂಕ್ ಸೀರೀಸ್ 50, ಹಡ್ಸನ್ ಕಮೋಡೋರ್,ಮತ್ತು ಫ್ರೇಜರ್ ಎಫ್-47ಸಿ5 ಮ್ಯಾನ್ಹ್ಯಾಟನ್, ಸಿಟ್ರೋಯಿನ್ ಟ್ರಾಕ್ಷನ್ ಅವ್ಯಾಂಟ್ 11 ಸಿ.ವಿ ಸೇರಿದಂತೆ ವಿವಿಧ 8 ವಿಭಿನ್ನ ಕಾರುಗಳಿದ್ದು ಪ್ರತಿಯೊಂದು ವಿಶೇಷ ಆಕರ್ಷಣೀಯ ಬಣ್ಣ ಹೊಂದಿದ್ದು ನೋಡುಗರ ಗಮನ ಸೆಳೆಯುತ್ತಿವೆ.
ಧರ್ಮಸ್ಥಳದಲ್ಲಿ 2 ವಿಂಟೇಜ್ ಕಾರುಗಳಿಂದ ಆರಂಭವಾದ ವಸ್ತು ಸಂಗ್ರಹಾಲಯದಲ್ಲಿ ಇದೀಗ 250ಕ್ಕೂ ಹೆಚ್ಚು ಕಾರುಗಳನ್ನು ಸಂಗ್ರಹಿಸಲಾಗಿದೆ. ಇದು ಡಾ.ವೀರೇಂದ್ರ ಹೆಗ್ಗಡೆಯವರ ಸಾಂಸ್ಕೃತಿಕ ಪರಂಪರೆ, ಕಾರುಗಳ ಮೇಲಿರುವ ಆಸಕ್ತಿ, ಸೃಜನಾತ್ಮಕತೆ ತೋರಿಸುತ್ತದೆ. ಪಯಣ ವಸ್ತು ಸಂಗ್ರಹಾಲಯದಲ್ಲಿ ರಾಜಮನೆತನದ ಕಾರುಗಳು, ಸೇನಾ ಕಾರುಗಳು, ಸರ್ಕಾರಿ ಹರಾಜಿನ ಮೂಲಕ ಕೊಂಡ ಕಾರುಗಳನ್ನು ಸಂರಕ್ಷಿಸಲಾಗಿದೆ. ಈ ಮೂಲಕ ಮುಂದಿನ ಪೀಳಿಗೆಗೂ ಪರಿಚಯಿಸಲಾಗುತ್ತಿದೆ ಎಂದು ಪಯಣ ಸಂಗ್ರಹಾಲಯದ ವ್ಯವಸ್ಥಾಪಕ ವಿವೇಕ್ ಮಾಹಿತಿ ನೀಡಿದ್ದಾರೆ. ಈ ವೇಳೆ ಎಫ್‌ಕೆಸಿಸಿಐ ಮಾಜಿ ಅಧ್ಯಕ್ಷ ಡಾ.ಜಾಕೋಬ್ ಕ್ರಾಸ್ತಾ, ಪ್ರದರ್ಶಕ ಸಿರಿಲ್ ಪೆರೇರಾ ಇದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ