ವೀರಪ್ಪನ್‌ ಕೋಟೆ ಈಗ ನಕ್ಸಲರ ಹೊಸ ಅಡ್ಡೆ!

By Web DeskFirst Published Dec 18, 2018, 9:06 AM IST
Highlights

ವೀರಪ್ಪನ್‌ ಕೋಟೆಗೆ ನಕ್ಸಲರ ಲಗ್ಗೆ| ಪ್ರಭಾವ ವಿಸ್ತರಣೆಗೆ ಕರ್ನಾಟಕ- ತಮಿಳುನಾಡು- ಕೇರಳ ಗಡಿ ಸಂಧಿಸುವ ಸ್ಥಳ ಆಯ್ಕೆ| ಕೇರಳದಲ್ಲಿ ಪದೇಪದೇ ನಕ್ಸಲರ ಗೋಚರ

ನವದೆಹಲಿ[ಡಿ.18]: ಕರ್ನಾಟಕ ಹಾಗೂ ತಮಿಳುನಾಡು ಪೊಲೀಸರನ್ನು ದಶಕಗಳ ಕಾಲ ನಿದ್ರೆಗೆಡಿಸಿದ್ದ ನರಹಂತಕ, ಕಾಡುಗಳ್ಳ ವೀರಪ್ಪನ್‌ ‘ಕಾರ್ಯಕ್ಷೇತ್ರ’ದಲ್ಲಿ ತಮ್ಮ ಭದ್ರಕೋಟೆಯನ್ನು ಸ್ಥಾಪಿಸಲು ನಕ್ಸಲರು ಮುಂದಾಗಿರುವ ಕಳವಳಕಾರಿ ಸಂಗತಿ ಗುಪ್ತಚರ ವರದಿಯೊಂದರಿಂದ ಬೆಳಕಿಗೆ ಬಂದಿದೆ.

ಕರ್ನಾಟಕ- ತಮಿಳುನಾಡು- ಕೇರಳ ರಾಜ್ಯಗಳ ಗಡಿಗಳು ದಟ್ಟಅಡವಿಯಲ್ಲಿ ಸಂಧಿಸುತ್ತವೆ. ವೀರಪ್ಪನ್‌ ಬದುಕಿದ್ದಷ್ಟೂದಿವಸ ಈ ಪ್ರದೇಶವನ್ನು ತನ್ನ ಕೋಟೆಯಾಗಿ ಮಾಡಿಕೊಂಡಿದ್ದ. ಆತನ ಹತ್ಯೆ ನಂತರ ತೆರವಾಗಿರುವ ಈ ಜಾಗದಲ್ಲಿ ತಮ್ಮ ಪ್ರಭಾವ ವಿಸ್ತರಿಸಿಕೊಳ್ಳಲು ನಕ್ಸಲರು ತಂತ್ರಗಾರಿಕೆ ರೂಪಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಪಶ್ಚಿಮಘಟ್ಟವನ್ನು ತಮ್ಮ ನೆಲೆಯಾಗಿ ಪರಿವರ್ತನೆ ಮಾಡಿಕೊಳ್ಳುವ ಉದ್ದೇಶದಿಂದ ಕಳೆದೊಂದು ದಶಕದಿಂದ ನಿಧಾನವಾಗಿ ಬೇರು ಬಿಡುತ್ತಿರುವ ನಕ್ಸಲರು, ಇನ್ನು ಕೆಲವೇ ವರ್ಷಗಳಲ್ಲಿ ಪಶ್ಚಿಮಘಟ್ಟಅದರಲ್ಲೂ ವಿಶೇಷವಾಗಿ ತ್ರಿವಳಿ ರಾಜ್ಯಗಳ ಸಂಗಮ ಸ್ಥಳದಲ್ಲಿ ಕ್ರೋಢೀಕೃತ ರಂಗವೊಂದನ್ನು ಸ್ಥಾಪಿಸಲಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ಈ ಭಾಗದಲ್ಲಿರುವ ಪ್ರಕೃತಿ, ಸರ್ಕಾರಿ ಸೇವೆಗಳ ಅಲಭ್ಯತೆ ಹಾಗೂ ಸರ್ಕಾರಗಳ ವಿರುದ್ಧ ಜನರಲ್ಲಿ ಇರುವ ಸಿಟ್ಟು ಎಂಬ ಮೂರು ಅಂಶಗಳು ನಕ್ಸಲರ ಪ್ರಭಾವ ವಿಸ್ತರಣೆಗೆ ಅನುಕೂಲಕಾರಿಯಾಗಿವೆ. ಹೀಗಾಗಿ ನಕ್ಸಲರು ಈ ಸ್ಥಳವನ್ನೇ ಆಯ್ಕೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ನಕ್ಸಲರು ಬೇರು ಬಿಡುತ್ತಿರುವ ಸುದ್ದಿಗೆ ಇಂಬು ನೀಡುವಂತೆ ಕೇರಳದ ವಯನಾಡು, ಮಲ್ಲಪುರಂ, ಕಣ್ಣೂರು, ಕೋಳಿಕೋಡ್‌ ಹಾಗೂ ಪಾಲಕ್ಕಾಡ್‌ ಜಿಲ್ಲೆಗಳಲ್ಲಿ ನಕ್ಸಲರು ಕಂಡುಬರುವ ಪ್ರಕರಣಗಳು ಹೆಚ್ಚಾಗಿವೆ. ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಈ ಎಲ್ಲ ಜಿಲ್ಲೆಗಳು ತಳಮಟ್ಟದಲ್ಲಿ ಕಾಣಿಸಿಕೊಂಡಿವೆ. ಹೀಗಾಗಿ ನಕ್ಸಲರ ಬೆಳವಣಿಗೆ ಹಾಗೂ ಕಾರ್ಯಾಚರಣೆಗೆ ಈ ಜಾಗಗಳು ಹೇಳಿ ಮಾಡಿಸಿದಂತಿವೆ ಎಂದು ಗುಪ್ತಚರ ವರದಿ ವಿವರಿಸಿದೆ ಎಂದು ವರದಿ ಹೇಳುತ್ತದೆ.

ವೀರಪ್ಪನ್‌ ವಿರುದ್ಧದ ಕಾರ್ಯಾಚರಣೆಯ ದೆಸೆಯಿಂದಾಗಿ ತ್ರಿವಳಿ ರಾಜ್ಯಗಳ ಸಂಗಮದಲ್ಲಿರುವ ದಟ್ಟಅಡವಿ ಕುರಿತು ಕರ್ನಾಟಕ ಹಾಗೂ ತಮಿಳುನಾಡು ಪೊಲೀಸರಿಗೆ ಅರಿವಿದೆ. ಆದರೆ ಕೇರಳ ಪೊಲೀಸರಿಗೆ ಕಾರ್ಯಾಚರಣೆಯ ಅನುಭವವಿಲ್ಲ. ಇದರ ಲಾಭ ಮಾಡಿಕೊಂಡು ಜನರ ವಿಶ್ವಾಸ ಗಳಿಸಿ, ತರಬೇತಿಗಳನ್ನು ನಕ್ಸಲರು ನಡೆಸುತ್ತಿದ್ದಾರೆ. ವಯನಾಡ್‌ ಅರಣ್ಯದಲ್ಲಿ ಶಸ್ತ್ರಾಸ್ತ್ರ ತರಬೇತಿ ಕಾಲಕಾಲಕ್ಕೆ ನಡೆಯುತ್ತಿದೆ ಎಂದು ಕರ್ನಾಟಕ ಹಾಗೂ ತಮಿಳುನಾಡು ಪೊಲೀಸರಿಗೂ ರವಾನೆಯಾಗಿರುವ ಗುಪ್ತಚರ ವರದಿ ಹೇಳುತ್ತದೆ ಎಂದು ಮಾಧ್ಯಮ ವರದಿ ವಿವರಿಸಿದೆ.

ಕರ್ನಾಟಕ ಹಾಗೂ ತಮಿಳುನಾಡು ನಡೆಸುವ ನಕ್ಸಲ್‌ ನಿಗ್ರಹ ಕಾರ್ಯಾಚರಣೆ ಸಂದರ್ಭದಲ್ಲಿ ಮಾವೋವಾದಿಗಳು ಕೇರಳ ಅರಣ್ಯ ಪ್ರವೇಶಿಸುತ್ತಿದ್ದಾರೆ. ಮೂರು ರಾಜ್ಯಗಳ ನಡುವೆ ಸಮನ್ವಯತೆ ಇಲ್ಲದೇ ಹೋದರೆ ನಕ್ಸಲರ ವಿರುದ್ಧ ಕಾರ್ಯಾಚರಣೆ ಸುಲಭವಿಲ್ಲ ಎಂದೂ ತಿಳಿಸಿದೆ.

click me!