'ನನ್ನ ಮಗಳು ನೆನಪಾಗಿ ಸುಮ್ಮನಿರಾಗಲಿಲ್ಲ..' ಪ್ರಾಣ ಪಣಕ್ಕಿಟ್ಟು ಹೆಜ್ಜೇನು ದಾಳಿಯಿಂದ ತಾಯಿ-ಮಗುವನ್ನ ರಕ್ಷಿಸಿದ ವೀರಕಪುತ್ರ!

Published : Mar 13, 2026, 11:50 AM ISTUpdated : Mar 13, 2026, 11:54 AM IST
Veerakaputra Srinivasa Saves Mother daughter from Bee Attack at Banashankari bengaluru

ಸಾರಾಂಶ

ಬೆಂಗಳೂರಿನ ಬನಶಂಕರಿಯಲ್ಲಿ ಸಾವಿರಾರು ಜೇನ್ನೊಣಗಳು ತಾಯಿ-ಮಗುವಿನ ಮೇಲೆ ದಾಳಿ ಮಾಡಿದಾಗ, ವೀರಕಪುತ್ರ ಶ್ರೀನಿವಾಸ ಅವರು ತಮ್ಮ ಪ್ರಾಣವನ್ನೂ ಲೆಕ್ಕಿಸದೆ  ರಕ್ಷಿಸಿದ್ದಾರೆ. ತಾಯಿ-ಮಗುವನ್ನು ಸುರಕ್ಷಿತ ಸ್ಥಳಕ್ಕೆ ಕಳುಹಿಸಿ ಕಾಪಾಡಿದ ವೀರಕಪುತ್ರ ತಾವೇ ಜೇನ್ನೊಣಗಳ ದಾಳಿಗೆ ತುತ್ತಾಗಿ ಅಸ್ವಸ್ಥರಾಗಿದ್ದಾರೆ.

ಸಿಲಿಕಾನ್ ಸಿಟಿಯ ಬನಶಂಕರಿಯಲ್ಲಿ ನಿನ್ನೆ ಸಂಜೆ ಭೀಕರ, ಮನಕಲುಕುವ ಘಟನೆಯೊಂದು ನಡೆದಿದೆ. ಸಾವಿರಾರು ಹೆಜ್ಜೇನುಗಳು ಏಕಾಏಕಿ ದಾಳಿ ಮಾಡಿ ತಾಯಿ-ಮಗುವನ್ನು ಮುತ್ತಿಕೊಂಡಿದ್ದಾಗ, ವೀರಲೋಕ ಬುಕ್ಸ್' ಸಂಸ್ಥೆಯ ಸ್ಥಾಪಕರಾದ ವೀರಕಪುತ್ರ ಶ್ರೀನಿವಾಸ ಅವರು ತಮ್ಮ ಪ್ರಾಣವನ್ನೂ ಲೆಕ್ಕಿಸದೆ ಅಕ್ಷರಶಃ ಸಾವಿನ ದವಡೆಯಿಂದ ಇಬ್ಬರನ್ನು ಪಾರು ಮಾಡಿದ್ದಾರೆ.

ಜೇನುಗೂಡಿನಂತಾಗಿದ್ದ ತಾಯಿ-ಮಗು!

ಬನಶಂಕರಿಯ ಸುಚಿತ್ರಾ ಫಿಲ್ಮ್ ಸೊಸೈಟಿ ಬಳಿ ಈ ಘಟನೆ ನಡೆದಿದೆ. ರಸ್ತೆಯಲ್ಲಿ ಹೋಗುತ್ತಿದ್ದ ತಾಯಿ ಮತ್ತು ಪುಟ್ಟ ಮಗುವಿನ ಮೇಲೆ ಸಾವಿರಾರು ಜೇನ್ನೊಣಗಳು ದಾಳಿ ಮಾಡಿದ್ದವು. ಆ ದೃಶ್ಯ ಎಷ್ಟು ಭೀಕರವಾಗಿತ್ತೆಂದರೆ, ವೀರಕಪುತ್ರ ಶ್ರೀನಿವಾಸ ಹೇಳುವಂತೆ ಜೇನ್ನೊಣಗಳು ಮುತ್ತಿಕೊಂಡಿದ್ದ ಕಾರಣ ಆ ತಾಯಿ ಮಗು ಮನುಷ್ಯರಂತೆ ಕಾಣುತ್ತಿರಲಿಲ್ಲ, ಬದಲಿಗೆ ರಸ್ತೆ ಮಧ್ಯೆ ಒಂದು ಜೇನುಗೂಡು ನಿಂತಂತೆ ಕಾಣುತ್ತಿತ್ತು. ತಾಯಿ ತನ್ನ ಮಗುವನ್ನು ಕಾಂಗರೂ ರೀತಿ ಅಪ್ಪಿಕೊಂಡು, ಮಗುವಿಗೆ ಜೇನ್ನೊಣಗಳು ಕಚ್ಚದಂತೆ ತಾನು ನೋವನ್ನು ಅನುಭವಿಸುತ್ತಾ ಕಿರುಚುತ್ತಿದ್ದರು.

ಮಗಳ ನೆನಪಾಗಿ ರಕ್ಷಣಗೆ ಮುಂದಾದ ವೀರಕಪುತ್ರ!

ಕಾರಿನಲ್ಲಿ ಹೋಗುತ್ತಿದ್ದ ವೇಳೆ  ಈ ದೃಶ್ಯ ಕಂಡು ಅವರ ಸೋದರ ನಾಗೇಶ್ 'ಇಳಿ ಬೇಗ' ಎಂದು ಕೂಗಿದಾಗ, ಮೊದಲಿಗೆ ಏನಾಗುತ್ತಿದೆ ಗೊತ್ತಾಗದೆ ತಡವರಿಸಿದ ವೀರಕಪುತ್ರ ಶ್ರೀನಿವಾಸ ಅವರು ತಾಯಿ-ಮಗಳ ಮೇಲೆ ಹೆಜ್ಜೇನು ದಾಳಿ ಆಗುತ್ತಿರುವುದು ತಿಳಿದಾಗ ಹಿಂದೆ ಮುಂದೆ ಯೋಚಿಸದೇ ಕೈಯಲ್ಲಿದ್ದ ಒಂದು ಸಣ್ಣ ಬಟ್ಟೆಯನ್ನೇ ಎತ್ತಿಕೊಂಡು ಜೇನ್ನೊಣಗಳ ನಡುವೆ ತಾಯಿ ಮಗಳ ರಕ್ಷಣೆಗೆ ದಾವಿಸಿದ್ದಾರೆ.. 

ಆ ಮಗು ಅಳುತ್ತಿದ್ದನ್ನು ನೋಡಿ ನನಗೆ ನನ್ನ ಮಗಳು ನದಿಯ ನೆನಪಾಗಿಬಿಟ್ಟಿತು, ಅದಕ್ಕೆ ಸುಮ್ಮನಿರಲು ಸಾಧ್ಯವಾಗಲಿಲ್ಲ' ಎಂದು ಅವರು ಘಟನೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಸಮಯಪ್ರಜ್ಞೆ ಮೆರೆದ ಸಾಹಸಿ

ಜೇನ್ನೊಣಗಳ ದಾಳಿಯಿಂದ ತಪ್ಪಿಸಿಕೊಳ್ಳಲು ಶ್ರೀನಿವಾಸ್ ಅವರು ಮೊದಲಿಗೆ ತಾಯಿ-ಮಗುವನ್ನು ಕರೆದುಕೊಂಡು ಸುಚಿತ್ರಾ ಫಿಲ್ಮ್ ಸೊಸೈಟಿಯ ಒಳಗೆ ಓಡಿದ್ದಾರೆ. ಅಲ್ಲಿನ ಶೌಚಾಲಯದ ಒಳಗೆ ಅವರನ್ನು ಕಳುಹಿಸಿ ಬಾಗಿಲು ಹಾಕುವ ಮೂಲಕ ಜೇನ್ನೊಣಗಳ ಹಿಂಡಿನಿಂದ ಅವರನ್ನು ರಕ್ಷಿಸಿದ್ದಾರೆ. ಆದರೆ, ತಾಯಿ-ಮಗಳನ್ನ ರಕ್ಷಿಸುವ ಭರದಲ್ಲಿ ಶ್ರೀನಿವಾಸ್ ಅವರು ಹೊರಗೇ ಉಳಿದುಬಿಟ್ಟಿದ್ದರಿಂದ ಬೆನ್ನಟ್ಟಿದ್ದ ಜೇನ್ನೊಣಗಳು ಕೊನೆಗೆ ಅವರ ಮೇಲೆ ದಾಳಿ ನಡೆಸಿವೆ. ಸುಮಾರು ಇಪ್ಪತ್ತಕ್ಕೂ ಹೆಚ್ಚು ಜೇನುಮುಳ್ಳುಗಳು ಅವರ ದೇಹಕ್ಕೆ ನಾಟಿದ್ದು, ಅವರು ಕೂಡ ತೀವ್ರ ಅಸ್ವಸ್ಥರಾಗಿದ್ದರು.

ಆಸ್ಪತ್ರೆಯಲ್ಲಿ ಭಾವುಕ ಕ್ಷಣಗಳು

ಸದ್ಯ ಎಲ್ಲರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಈ ವೇಳೆ ವೀರಕಪುತ್ರ ಶ್ರೀನಿವಾಸ ಅವರು ಆ ತಾಯಿ ಆರೋಗ್ಯ ವಿಚಾರಿಸಲು ಹೋದಾಗ, 'ಸರ್, ನಾನು ಬದುಕ್ತೀನಲ್ಲ? ನನ್ನ ಮಗಳ ಜೊತೆಗಿರ್ತೀನಲ್ವಾ... ಅಂತ ಆ ತಾಯಿ ಕೇಳುವಾಗ ಕಣ್ತುಂಬಿಕೊಂಡೆ. ಆಕೆ ಮಲಗಿದ್ದ ಜಾಗದಿಂದಲೇ ಕೈ ಎತ್ತಿ ಕಾಪಾಡಿದ್ದಕ್ಕೆ ಥ್ಯಾಂಕ್ಯೂ ಸರ್‌ ಅಂದಾಗ, ಮನುಷ್ಯನಾಗಿಯೇ ಉಳಿದಿದ್ದೇನೆ ಅನ್ನಿಸ್ತು ಎಂದು ಭಾವುಕರಾಗಿ ಬರೆದುಕೊಂಡಿದ್ದಾರೆ.

ಕೊನೆಯಲ್ಲಿ ವೀರಕಪುತ್ರ ಶ್ರೀನಿವಾಸ ಅವರು ತಮ್ಮ ಪೋಸ್ಟ್‌ನಲ್ಲಿ ಘಟನೆಯ ಸಂಪೂರ್ಣ ವಿವರ ನೀಡುತ್ತಾ, ತಾಯಿ-ಮಗಳ ಮೇಲೆ ಹೆಜ್ಜೇನು ದಾಳಿ ನಡೆದರೂ ರಕ್ಷಣೆ ದಾವಿಸದ ಜನರ ಅಸಹಾಯಕತೆ ಮತ್ತು ಬಿಬಿಎಂಪಿಯ ನಿರ್ಲಕ್ಷ್ಯದ ಬಗ್ಗೆಯೂ ಬೇಸರ ವ್ಯಕ್ತಪಡಿಸಿದ್ದಾರೆ. ಸುಖಗಳಲ್ಲಿ ಸಾವಿರ ಜನರಿದ್ದರೂ, ಕಷ್ಟಗಳಲ್ಲಿ ನಾವೊಬ್ಬರೇ ಇರ್ತೀವಿ ಅನ್ನೋ ಮಾತು ಮತ್ತೊಮ್ಮೆ ದರ್ಶನಕೊಟ್ಟು ಹೋಯ್ತು. ಇಷ್ಟೆಲ್ಲಾ ಆಗುತ್ತಿದ್ದರೂ ರಸ್ತೆಯಲ್ಲಿ ಒಬ್ಬೇ ಒಬ್ಬರು ಗಾಡಿ ನಿಲ್ಲಿಸಲಿಲ್ಲ. ನಾನಲ್ಲಿ, ಪ್ರಾಥಮಿಕ ಚಿಕಿತ್ಸೆಯನ್ನಷ್ಟೇ ಪಡೆದು, ಅಲ್ಲಿಂದ ನನ್ನ ಸ್ನೇಹಿತರಾದ ಡಾ.ವಿಜಯ್‌ ಅವರ ಕೂಡ್ಲು ಬಳಿ ಇರುವ ಸಾಯಿಸ್ಪರ್ಶ್‌ ಆಸ್ಪತ್ರೆಗೆ ಬಂದೆ. ಧನ್ಯವಾದಗಳು... ಏನೇ ಆಗಲಿ, ಒಳ್ಳೆಯದನ್ನೇ ಮಾಡು..

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರಾಜ್ಯಕ್ಕೆ ಗ್ಯಾಸ್ ಸಿಲಿಂಡರ್ ಕೊರತೆಯಿಲ್ಲ, ಜನರಿಗೆ LPG ಅಭಾವದ ಆತಂಕ ಬೇಡ: ಆಹಾರ ಇಲಾಖೆ ಸುತ್ತೋಲೆ!
ಭಾರತದ ದೈತ್ಯ ಐಟಿ ಕಂಪನಿ ಇನ್ಫೋಸಿಸ್, ತನ್ನ ಉದ್ಯೋಗಿಗಳಿಗೆ 'ಮನೆಯಿಂದಲೇ ಊಟದ ಬಾಕ್ಸ್' ತರುವಂತೆ ಸೂಚನೆ!