
ಬೆಂಗಳೂರು (ಫೆ.28): ಬೆಳಗಾವಿಯಲ್ಲಿ ಕನ್ನಡದ ಕಂಡಕ್ಟರ್ ಮೇಲೆ ಮರಾಠಿಗರ ಹಲ್ಲೆ, ಕನ್ನಡಿಗರ ಮೇಲೆ ಎಂಇಎಸ್ ಪುಂಡಾಟ ಹಾಗೂ ಶಿವಸೇನೆ ನಾಯಕರು ಹಾಗೂ ಕಾರ್ಯಕರ್ತರು ಕರ್ನಾಟಕಕ್ಕೆ ಕಾಲಿಡದಂತೆ ಗಡಿಪಾರು ಮಾಡಬೇಕು ಎಂದು ಆಗ್ರಹಿಸಿ ಮಾ.22ರಂದು ಕರ್ನಾಟಕ ಬಂದ್‌ಗೆ ಘೋಷಣೆ ಮಾಡಲಾಗಿದೆ. ಇದರ ಜೊತೆಗೆ, ಮಾ.3ರಿಂದಲೇ ರಾಜಭವನ ಮುತ್ತಿಗೆ, ಮಾ.7 ಬೆಳಗಾವಿ ಚಲೋ ಸೇರಿ ಹಂತ ಹಂತವಾಗಿ ರಾಷ್ಟ್ರೀಯ ಹೆದ್ದಾರಿಗಳನ್ನು ಬಂದ್ ಮಾಡಲಾಗುವುದು ಎಂದು ಕನ್ನಡಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ಹೇಳಿದ್ದಾರೆ.
ಈ ಕುರಿತು ಬೆಂಗಳೂರಿನಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಎಂಇಎಸ್ ಸಂಘಟನೆ ನಿಷೇಧ ಮಾಡಬೇಕು. ಶಿವಸೇನೆ ಗಡಿಪಾರು ಮಾಡಬೇಕು. ಸಂಭಾಜಿ ಪ್ರತಿಮೆ ತೆರವುಗೊಳಿಸಬೇಕು. ಕಂಡಕ್ಟರ್ ಮೇಲಿನ ಹಲ್ಲೆಗೆ ಉನ್ನತ ಮಟ್ಟ ತನಿಖೆಯಾಗಬೇಕು. ಕೊಪ್ಪಳ ಕಾರ್ಖಾನೆಗಳಿಂದ ಪರಿಸರ ಹಾಳಾಗುತ್ತಿದ್ದು, ಇದಕ್ಕೆ ತಡೆ ನೀಡಬೇಕು. ಪರಭಾಷೆಯವರು ತಮ್ಮದೇ ಭಾಷಾ ವ್ಯಾಮೋಹ ಹೊಂದಿದ್ದರೆ ನಮ್ಮ ರಾಜ್ಯದಿಂದ ಹೊರಗಡೆ ಹೋಗಬೇಕು. ಕೇಂದ್ರ ಸರ್ಕಾರ ರಾಜ್ಯಕ್ಕೆ ಮಲತಾಯಿ ಧೋರಣೆ ಮಾಡುತ್ತಿರುವುದನ್ನು ನಿಲ್ಲಿಸಬೇಕು. ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮೂಲೆಗುಂಪಾಗಿದ್ದು, ಇದಕ್ಕೆ ಶಕ್ತಿ ತುಂಬಬೇಕು ಎಂದು ಆಗ್ರಹಿಸಿ ಮಾ.22ರಂದು ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದೆ ಎಂದರು.
ರಾಜ್ಯದಲ್ಲಿ ಕನ್ನಡ ಒಕ್ಕೂಟದಿಂದ ಹಂತ ಹಂತವಾಗಿ ಪ್ರತಿಭಟನೆ
ಮಾರ್ಚ್ 3 - ಬೆಳಿಗ್ಗೆ 11 ಗಂಟೆಗೆ ರಾಜಭವನ ಮುತ್ತಿಗೆ.
ಮಾರ್ಚ್ 7 - ರಂದು ಬೆಳಗಾವಿ ಚಲೋ.
ಮಾರ್ಚ್ 11 - ಅತ್ತಿಬೆಲೆ ತಮಿಳುನಾಡು ಗಡಿ ಬಂದ್.
ಮಾರ್ಚ್ 14 - ಮಂಡ್ಯ ಮೈಸೂರು, ರಾಮನಗರ ರಾಷ್ಟ್ರೀಯ ಹೆದ್ದಾರಿ ಬಂದ್
ಮಾರ್ಚ್ 16 - ಹೊಸಕೋಟೆ ರಾಷ್ಟ್ರೀಯ ಹೆದ್ದಾರಿ ಬಂದ್.
ಮಾರ್ಚ್ 22 - ಬೆಳಿಗ್ಗೆ 6 ರಿಂದ ಸಂಜೆ 6 ರವರೆಗೆ ಅಖಂಡ ಕರ್ನಾಟಕ ಬಂದ್
ಕರ್ನಾಟಕ ಬಂದ್ ಗೆ ಕರೆ ನೀಡಿರುವುದಕ್ಕೆ ಯಾರೊಬ್ಬರೂ ನನ್ನನ್ನು ಕರೆದಿಲ್ಲ ಅಂತ ಮಾತನಾಡಬೇಡಿ. ನಾನು ಪ್ರವೀಣ್ ಶೆಟ್ಟಿ ಅವರನ್ನ ಕರೆದಿದ್ದೆ. ಆದರೆ ಪಾಪ ಅವರು ಎಲ್ಲ ಹೋಗಿದ್ದಾರೋ ಗೊತ್ತಿಲ್ಲ. ನಾನು ನಾರಾಯಣಗೌಡರಿಗೂ ಬಹಿರಂಗವಾಗಿ ಕರೆಯುತ್ತೇನೆ. ಮುಖ್ಯಮಂತ್ರಿ ಸಿದ್ದರಾಮಯ್ಯಗೆ ನಾವು ಕಳಕಳಿಯಿಂದ ಮನವಿ ಮಾಡುತ್ತೇನೆ. ಇದು ರಾಜಕೀಯವಲ್ಲ ಸಂಪೂರ್ಣ ಬೆಂಬಲ ನೀಡಬೇಕು. ರಾಮಲಿಂಗರೆಡ್ಡಿ ಅವರು ನಿಮ್ಮ ಇಲಾಖೆಯ ಎಲ್ಲ ಬಸ್ಸುಗಳನ್ನ ನಿಲ್ಲಿಸಿ ಬೆಂಬಲ ಸೂಚಿಸಬೇಕು. ಹೋಟೆಲ್ ಅವರು ಬಂದ್ ಮಾಡಿ ಬೆಂಬಲ ನೀಡಿಬೇಕು ಎಂದು ಆಗ್ರಹಿಸಿದರು.
ಇನ್ನು ಬೆಂಗಳೂರು ಸೇರಿದಂತೆ ರಾಜ್ಯದೆಲ್ಲೆಡೆ ಇರುವ ಶಾಪಿಂಗ್ ಮಾಲ್ ಗಳೆಲ್ಲ ಮುಚ್ಚುತ್ತಾರೆ ನಾವು ಮಾತನಾಡಿದ್ದೇವೆ. ಸರ್ಕಾರಿ ನೌಕರರರ ಸಂಘ ಗೌರವದಿಂದ ಹೇಳುತ್ತೇನೆ ಬೆಂಬಲ ನೀಡಿ. ಖಾಸಗಿ ಶಾಲೆ, ಸರ್ಕಾರಿ ಶಾಲೆ ರಜೆ ಘೋಷಣೆ ಮಾಡಿ. ಎಲ್ಲ ಐಟಿ ಕಂಪನಿಗಳು ಕೂಡ ರಜೆ ಕೊಡಬೇಕು. ಎಲ್ಲ ಅಂಗಡಿ, ಮುಂಗಟ್ಟುಗಳನ್ನು ಮುಚ್ಚಿ ವ್ಯಾಪಾರ, ವ್ಯವಹಾರ ನಿಲ್ಲಿಸಬೇಕು. ಉಳಿದಂತೆ ಎಲ್ಲ ಜನಸಾಮಾನ್ಯರು ಇದಕ್ಕೆ ಬೆಂಬಲ ನೀಡಲಿದ್ದಾರೆ ಎಂದು ವಾಟಾಳ್ ನಾಗರಾಜ್ ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ