
ಬೆಂಗಳೂರು(ಅ.26): ಹುಲಿ ಉಗುರಿನ ಆಭರಣ ಧರಿಸಿದ್ದಕ್ಕೆ ಸಂಬಂಧಿಸಿದಂತೆ ಚಲನಚಿತ್ರ ನಟರ ವಿರುದ್ಧ ದೂರು ನೀಡಲು ವಿವಿಧ ಸಂಘಟನೆಗಳು ಬುಧವಾರ ಅರಣ್ಯ ಇಲಾಖೆಗೆ ದೂರು ಸಲ್ಲಿಸಿದವು. ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಆಗಮಿಸಿದ ಹಿನ್ನೆಲೆಯಲ್ಲಿ ಮಲ್ಲೇಶ್ವರದ ಅರಣ್ಯ ಭವನಕ್ಕೆ ಸಾಕಷ್ಟು ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಹುಲಿ ಉಗುರು ಧರಿಸಿದ ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ವಿರುದ್ಧ ಅರಣ್ಯ ಇಲಾಖೆ ಕ್ರಮ ಕೈಗೊಂಡ ನಂತರ ಇದೇ ರೀತಿ ಹುಲಿ ಉಗುರು ಧರಿಸಿದ ನಟ ಮತ್ತಿತರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗಿದ್ದವು. ಈ ಭಾವ ಚಿತ್ರ ಆಧರಿಸಿ ನಟರು ಸೇರಿದಂತೆ ಮತ್ತಿತರ ವಿರುದ್ಧ ಕ್ರಮ ಕೈಗೊಳ್ಳುವಂತೆ ವಿವಿಧ ಸಂಘಟನೆಗಳು ಆಗ್ರಹಿಸತೊಡಗಿವೆ.
News Hour: ರಾಜ್ಯದಲ್ಲಿ ಬಿರುಗಾಳಿ ಎಬ್ಬಿಸಿದ ಆಪರೇಷನ್ ಹುಲಿ ಉಗುರು!
ಬುಧವಾರ ಜನತಾ ಪಕ್ಷ ಸೇರಿದಂತೆ ಕೆಲ ಕನ್ನಡಪರ ಸಂಘಟನೆಗಳು ಅರಣ್ಯ ಭವನಕ್ಕೆ ತೆರಳಿ ಚಲನಚಿತ್ರ ನಟರಾದ ಜಗ್ಗೇಶ್, ದರ್ಶನ್, ನಿಖಿಲ್ ಕುಮಾರಸ್ವಾಮಿ, ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಹಾಗೂ ಧಾರ್ಮಿಕ ಮುಖಂಡರಾದ ವಿನಯ್ ಗುರೂಜಿ, ಧನಂಜಯ ಗುರೂಜಿ ಅವರನ್ನೂವಿಚಾರಣೆಗೊಳಪಡಿಸಿ, ಕಾನೂನಿನಂತೆ ಕ್ರಮ ಕೈಗೊಳ್ಳಬೇಕು ಜನತಾ ಪಕ್ಷದ ಕಾರ್ಯದರ್ಶಿ ನಾಗೇಶ್ ಹಾಗೂ ಕಾರ್ಯಕರ್ತರು ಆಗ್ರಹಿಸಿದರು.
ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಎಪಿಸಿಸಿಎಫ್) ಕುಮಾರ್ ಪುಷ್ಕರ್ ಅವರು ಸಂಘಟನೆಗಳ ಕಾರ್ಯಕರ್ತರಿಂದ ದೂರು ಸ್ವೀಕರಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಆದರೆ, ಅದಕ್ಕೊಪ್ಪದ ಕಾರ್ಯಕರ್ತರು ಕೂಡಲೆ ನಟರು ಹಾಗೂ ಧಾರ್ಮಿಕ ಮುಖಂಡರನ್ನು ಬಂಧಿಸುವಂತೆ ಆಗ್ರಹಿಸಿದರು. ಇದರಿಂದ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗುವಂತಾಗಿತ್ತು
ಪೊಲೀಸ್ ಬಂದೋಬಸ್ತ್
ಹುಲಿ ಉಗುರು ಧರಿಸಿದ್ದ ಕುರಿತಂತೆ ನಟರ ವಿರುದ್ಧ ಮಂಗಳವಾರದಿಂದಲೇ ದೂರುಗಳು ದಾಖಲಾಗುತ್ತಿದ್ದು, ಈ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಬುಧವಾರ ಹೆಚ್ಚಿನ ಸಂಖ್ಯೆಯಲ್ಲಿ ಜನರು ದೂರು ನೀಡಲು ಬಂದಿದ್ದರಿಂದಾಗಿ ಅರಣ್ಯ ಭವನದ ಎದುರು ಕೆಎಸ್‌ಆರ್‌ಪಿ ತುಕಡಿಯೊಂದನ್ನು ನಿಯೋಜಿಸಿ ಭದ್ರತೆ ಒದಗಿಸಲಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ