ತಮ್ಮ ವಿರುದ್ಧದ ಎಫ್‌ಐಆರ್ ರದ್ದುಪಡಿಸುವಂತೆ ಕೋರಿ ಇ.ಡಿ.ಉಪ ನಿರ್ದೇಶಕ ಮಿತ್ತಲ್ ಹಾಗೂ ಸಹಾಯಕ ನಿರ್ದೇಶಕ ಮುರುಳಿ ಕಣ್ಣನ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ, ಮಂಗಳವಾರ ಈ ಆದೇಶ ನೀಡಿತು.
ಬೆಂಗಳೂರು (ಜು.24): ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಅಕ್ರಮ ವರ್ಗಾವಣೆ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರು ಹೇಳುವಂತೆ ನಿಗಮದ ಹಿಂದಿನ ವ್ಯವಸ್ಥಾಪಕ ನಿರ್ದೇಶಕರೂ ಆಗಿದ್ದ ಸಮಾಜ ಕಲ್ಯಾಣ ಇಲಾಖೆಯ ಹಾಲಿ ಹೆಚ್ಚುವರಿ ನಿರ್ದೇಶಕ ಬಿ.ಕಲ್ಲೇಶ್ ಅವರಿಗೆ ಒತ್ತಡ ಹೇರಿದ ಹಾಗೂ ಬೆದರಿಕೆ ಹಾಕಿದ ಆರೋಪದ ಮೇಲೆ ಜಾರಿ ನಿರ್ದೇಶನಾಲಯದ (ಇ.ಡಿ.) ಅಧಿಕಾರಿಗಳಿಬ್ಬರ ವಿರುದ್ಧ ನಗರದ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎಫ್‌ಐಆರ್‌ಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.
ತಮ್ಮ ವಿರುದ್ಧದ ಎಫ್‌ಐಆರ್ ರದ್ದುಪಡಿಸುವಂತೆ ಕೋರಿ ಇ.ಡಿ.ಉಪ ನಿರ್ದೇಶಕ ಮಿತ್ತಲ್ ಹಾಗೂ ಸಹಾಯಕ ನಿರ್ದೇಶಕ ಮುರುಳಿ ಕಣ್ಣನ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ, ಮಂಗಳವಾರ ಈ ಆದೇಶ ನೀಡಿತು. ಪ್ರಕರಣ ಸಂಬಂಧ ಲಿಖಿತ ಆಕ್ಷೇಪಣೆ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿತು. ಅಧಿಕಾರಿಗಳು ತಮ್ಮ ಅಧಿಕೃತ ಕರ್ತವ್ಯಗಳನ್ನು ನಿರ್ವಹಿಸುವಾಗ ಅವರ ವಿರುದ್ಧವೇ ಎಫ್‌ಐಆರ್ ದಾಖಲಿಸುತ್ತಾ ಹೋದರೆ ಯಾವ ಅಧಿಕಾರಿಗಳಿಗೂ ತಮ್ಮ ಕರ್ತವ್ಯ ನಿರ್ವಹಿಸಲು ಸಾಧ್ಯವಾಗುವುದಿಲ್ಲ ಎಂದು ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟರು.
ಅಲ್ಲದೆ, ಇ.ಡಿ.ಅಧಿಕಾರಿಗಳ ವಿರುದ್ಧದ ಎಫ್‌ಐಆರ್ ಕುರಿತು ತನಿಖೆ ಮುಂದುವರಿಸಲು ಅನುಮತಿ ನೀಡಿದರೆ ಅದು ಕಾನೂನು ಪ್ರಕ್ರಿಯೆ ದುರ್ಬಳಕೆಯಾಗಲಿದೆ. ಹಾಗಾಗಿ, ಇ.ಡಿ. ಅಧಿಕಾರಿಗಳ ವಿರುದ್ಧದ ಮುಂದಿನ ಕಾನೂನು ಪ್ರಕ್ರಿಯೆಗೆ ತಡೆಯಾಜ್ಞೆ ನೀಡುವುದು ಸೂಕ್ತ ಎಂದು ಆದೇಶದಲ್ಲಿ ತಿಳಿಸಿದರು. ಇದಕ್ಕೂ ಮೊದಲು, ಎಫ್‌ಐಆರ್ ಗೆ ತಡೆ ನೀಡಲು ಆಕ್ಷೇಪ ವ್ಯಕ್ತಪಡಿಸಿದ ರಾಜ್ಯ ಸರ್ಕಾರದ ಪರ ಅಡ್ವೋಕೇಟ್ ಜನರಲ್, ದೂರುದಾರರಾಗಿರುವ ಕಲ್ಲೇಶ್ ಅವರ ವಿಚಾರಣೆ ಸಂದರ್ಭದಲ್ಲಿ ನಿಗಮದ ಹಗರಣದಲ್ಲಿ ಮುಖ್ಯಮಂತ್ರಿಗಳ ಹೆಸರು ಹೇಳುವಂತೆ ಅರ್ಜಿದಾರರು ಬೆದರಿಕೆ ಹಾಕಿದ್ದಾರೆ. ಕಲ್ಲೇಶ್ ಅವರ ವಿಚಾರಣೆ ನಡೆಸಿದ ಕೊಠಡಿಯ ಸಿಸಿಟಿವಿಯ ಸಂಪೂರ್ಣ ದೃಶ್ಯಗಳನ್ನು ಕೋರ್ಟ್‌ಗೆ ಸಲ್ಲಿಸುವಂತೆ ಇ.ಡಿ.ಗೆ ನಿರ್ದೇಶನ ನೀಡಬೇಕು ಎಂದು ಕೋರಿದರು.
ಮಹರ್ಷಿ ವಾಲ್ಮೀಕಿ ನಿಗಮದ ಹಗರಣ: ಜೈಲಲ್ಲಿರುವ ನಾಗೇಂದ್ರ ಭೇಟಿಗೆ 20 ಕಾರಲ್ಲಿ ಬಂದ ಬಳ್ಳಾರಿ ಟೀಂ
ಅರ್ಜಿದಾರರ ಪರ ಸಹಾಯಕ ಸಾಲಿಸಿಟರ್ ಜನರಲ್ ಅರವಿಂದ ಕಾಮತ್ ವಾದ ಮಂಡಿಸಿ, ಕಲ್ಲೇಶ್ ಅವರನ್ನು ಜುಲೈ 16ರಂದು ವಿಚಾರಣೆ ನಡೆಸಿದ್ದ ವೇಳೆ ಕೇಳಿದ್ದ 17 ಪ್ರಶ್ನೆಗಳ ಪೈಕಿ ಮೂರು ಪ್ರಶ್ನೆಗಳಿಗೆ ಉತ್ತರಿಸಲು ನನಗೆ ಕಡತ ಬೇಕಿದೆ. ಕೆಳ ಹಂತದ ಅಧಿಕಾರಿಗಳಿಂದ ಮಾಹಿತಿ ಪಡೆಯಬೇಕಿದೆ. ಇದಾದ ಆರು ದಿನಗಳ ಬಳಿಕ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ವಿರುದ್ಧವೇ ದೂರು ದಾಖಲಿಸಿದ್ದಾರೆ. ಆ ಮೂಲಕ ಇ.ಡಿ.ಅಧಿಕಾರಿಗಳು ಕರ್ತವ್ಯ ನಿರ್ವಹಿಸಲು ಹಾಗೂ ತನಿಖೆ ನಡೆಸುವುದಕ್ಕೆ ರಾಜ್ಯ ಸರ್ಕಾರ ಬೆದರಿಕೆ ಹಾಕಿದೆ. ಇ.ಡಿ. ಬಳಿ ದೋಷಾರೋಪ ನಿರೂಪಿಸಲು ಅಗತ್ಯ ದಾಖಲೆಗಳಿದ್ದರೂ, ಅಧಿಕಾರಿಗಳ ವಿರುದ್ಧವೇ ಕ್ರಿಮಿನಲ್ ಪ್ರಕರಣ ದಾಖಲಿಸಿ ಸಿಲುಕಿಸುವ ಕೆಲಸ ನಡೆಯುತ್ತಿದೆ ಎಂದು ಆರೋಪಿಸಿದರು. ಅಧಿಕಾರಿಗಳ ವಿರುದ್ಧದ ಎಫ್‌ಐಆರ್‌ಗೆ ತಡೆ ನೀಡುವಂತೆ ಕೋರಿದರು.