ಅಸಹಜ ಲೈಂಗಿಕ ದೌರ್ಜನ್ಯ ಕೇಸಿನಲ್ಲಿ ಜೈಲು ಸೇರಿದ್ದ ವಿಧಾನಪರಿಷತ್ ಸದಸ್ಯ ಸೂರಜ್ ರೇವಣ್ಣ ಜಾಮೀನು ಪಡೆದು ಮಂಗಳವಾರ ಜೈಲಿನಿಂದ ಬಿಡುಗಡೆ ಆಗಿದ್ದಾರೆ.
ಬೆಂಗಳೂರು (ಜು.23): ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜಾಮೀನು ಮಂಜೂರು ಮಾಡಿರುವ ಹಿನ್ನೆಲೆಯಲ್ಲಿ ಹಾಸನ ಜಿಲ್ಲೆಯ ಜೆಡಿಎಸ್ ನಾಯಕ ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ಮಂಗಳವಾರ ಜೈಲಿನಿಂದ ಬಿಡುಗಡೆ ಆಗಿದ್ದಾರೆ.
ಸೂರಜ್ ರೇವಣ್ಣ ವಿರುದ್ಧ ದಾಖಲಾದ 2 ಎಫ್‌ಐಆರ್ ಪೈಕಿ ಚೇತನ್ ಎಂಬುವರು ನೀಡಿದ ದೂರಿನಲ್ಲಿ ಷರತ್ತು ಬದ್ಧ ಜಾಮೀನು ಸಿಕ್ಕರೆ, ಎಂ.ಎಲ್. ಶಿವಕುಮಾರ್ ನೀಡಿದ ದೂರಿನಲ್ಲಿ ನಿರೀಕ್ಷಣಾ ಜಾಮೀನು ಮಂಜೂರಾಗಿದೆ. ಈ ಹಿನ್ನೆಲೆಯಲ್ಲಿ ಕಳೆದ ಒಂದು ತಿಂಗಳಿನಿಂದ ಅನುಭವಿಸುತ್ತಿರುವ ಸೆರೆಮನೆ ವಾಸದಿಂದ ಮಂಗಳವಾರ ಬಿಡುಗಡೆ ಆಗಿದ್ದಾರೆ. ಸೋಮವಾರ ಮೊದಲು ಸಂತ್ರಸ್ತ ಚೇತನ್ ದೂರಿನ ವಿಚಾರಣೆ ನಡೆಸಿದ ನ್ಯಾಯಾಲಯವು, 2 ಲಕ್ಷ ರೂ. ಮೌಲ್ಯದ ವೈಯಕ್ತಿಕ ಬಾಂಡ್ ಮತ್ತು ಇಬ್ಬರ ಭದ್ರತೆ ಒದಗಿಸಬೇಕು. ಸಾಕ್ಷಿಗಳ ಮೇಲೆ ಪ್ರಭಾವ ಬೀರಬಾರದು. ಸಾಕ್ಷಿಗಳಿಗೆ, ದೂರುದಾರರಿಗೆ ಬೆದರಿಕೆ ಹಾಕಬಾರದು ಮತ್ತು ಸಾಕ್ಷಿ ನಾಶಕ್ಕೆ ಪ್ರಯತ್ನಿಸಬಾರದು ಎಂದು ಸೂಚನೆ ನೀಡಿತ್ತು. ಈ ಎಲ್ಲ ಷರತ್ತುಗಳನ್ನು ಒಪ್ಪಿಕೊಂಡು ದಾಖಲೆಗಳನ್ನು ಪೂರೈಸಿ ಮಧ್ಯಾಹ್ನ 3 ಗಂಟೆಗೆ ಜೈಲಿನಿಂದ ಹೊರಗೆ ಬಂದಿದ್ದಾರೆ.
ಸೂರಜ್ ರೇವಣ್ಣ ಮಹಾನ್ ದೈವ ಭಕ್ತ, ಅವ್ನು ಬಹಳ ಬೇಗ ಹೊರಬರುತ್ತಾನೆ: ಹೆಚ್ ಡಿ ರೇವಣ್ಣ
ಜೈಲಿನಿಂದ ಹೊರಬಂದು ಮಾಧ್ಯಮಗಳೊಂದಿಗೆ ಮಾತನಾಡಿದ ಸೂರಜ್ ರೇವಣ್ಣ, ಸತ್ಯವನ್ನು ಬಹಳದಿನ ಮುಚ್ಚಿಡಲು ಆಗೊಲ್ಲ; ಯಾವುದೇ ಆಧಾರವಿಲ್ಲದ ಸುಳ್ಳು ಆರೋಪಗಳನ್ನು ಮಾಡಿ, ಷಡ್ಯಂತ್ರ ಹಾಗೂ ಕುತಂತ್ರವನ್ನು ಮಾಡಿ ನಮ್ಮ ಕುಟುಂಬ ಹಾಗೂ ನನ್ನನ್ನು ವೈಯಕ್ತಿಕವಾಗಿ ತೇಜೋವಧೆ ಮಾಡಬೇಕೆಂದು ಸುಳ್ಳು ಕೇಸ್ ದಾಖಲಿಸಿದ್ದಾರೆ. ಆದರೆ, ಇದಕ್ಕೆ ಕೆಲವೇ ದಿನಗಳಲ್ಲಿ ಸೂಕ್ತ ಉತ್ತರ ಕೂಡ ಬರುತ್ತದೆ. ನಾನು ಮುಂದಿನ 2-3 ದಿನಗಳಲ್ಲಿ ಮಾಧ್ಯಮಗಳ ಮುಂದೆ ಬಂದು ಸ್ಪಷ್ಟೀಕರಣ ಕೊಡ್ತೇನೆ. ನಾವೇನು ಈ ಕೇಸ್‌ಗೆ ಹೆದರಿಕೊಂಡು ಹೋಗುವುದಿಲ್ಲ. ಹಾಸನ ಜಿಲ್ಲೆಯಲ್ಲಿ ನಡೆಯುವಂತಹ ರಾಜಕಾರಣ ಎಂದಿನಂತೆ ನಡೆಯುತ್ತದೆ ಎಂದು ಹೇಳಿದರು.
ತನಿಖೆಗೆ ಸಂಬಂಧಪಟ್ಟಂತೆ ಎಲ್ಲ ತನಿಖೆಗೂ ಸಹಕಾರ ಕೊಟ್ಟಿದ್ದೇನೆ. ನಾನು ತಪ್ಪು ಮಾಡಿಲ್ಲ ಎಂಬ ವಿಶ್ವಾಸದಿಂದಲೇ ನಾನು ಕಾನೂನು ಹೋರಾಟ ಮಾಡುತ್ತಿದ್ದೇನೆ, ನಮ್ಮ ಕಾನೂನಿನ ಮೇಲೆ ನಮಗೆ ನಂಬಿಕೆ ಇದ್ದು, ಈ ಕುತಂತ್ರದ ಕೇಸ್‌ನಿಂದ ಸಂಪೂರ್ಣವಾಗಿ ನಾನು ಹೊರಗೆ ಬರುತ್ತೇನೆ. ಈ ಕೇಸಿನಲ್ಲಿ 2-3 ದಿನಗಳಲ್ಲಿ ಸತ್ಯಾಂಶ ಹೊರಗೆ ಬರುತ್ತದೆ. ಎರಡು ವಿಷಯಕ್ಕೆ ನಾನು ಸ್ಪಷ್ಟೀಕರಣ ಕೊಡ್ತೇನೆ. ಶಿವಕುಮಾರ್ ಎನ್ನುವ ವ್ಯಕ್ತಿ ಇದಾರಲ್ಲ ಅವರು ನಮಗೆ ಯಾವುದೇ ಆಪ್ತ ಸಹಾಯಕ, ಕಾರು ಚಾಲಕ ಅಲ್ಲ. ನೀವು ಯಾವ ಪೊಲೀಸರು ಅಥವಾ ಇನ್ಯಾವುದೇ ತನಿಖಾ ಅಧಿಕಾರಿ ಕೇಳಿದರೂ ಅದನ್ನೊಂದೇ ನಾವು ಹೇಳಿರುವುದು. ನಮಗೆ ಇರುವುದು ಒಬ್ಬನೇ ಕಾರು ಚಾಲಕ ಲೋಕೇಶ್ ಎಂದು ಹೇಳಿದರು.
ಹೊಳೆನರಸೀಪುರದ ದೇವಾಲಯದಲ್ಲಿ ಜಾರಿ ಬಿದ್ದ ಶಾಸಕ ಎಚ್.ಡಿ. ರೇವಣ್ಣ: ಪಕ್ಕೆಲುಬಿಗೆ ಹಾನಿ!
ಹಾಸನ ಜಿಲ್ಲೆಯಲ್ಲಿ ರೇವಣ್ಣ ಸಾಹೇಬ್ರು ಸೇರಿದಂತೆ ನಮ್ಮ ಮೇಲೆ ಕಪ್ಪು ಚುಕ್ಕೆ ಇರಲಿಲ್ಲ. ನಮ್ಮ ಮೇಲೆ ಷಡ್ಯಂತ್ರದಿಂದ ವೈಯಕ್ತಿಕ ವಿಚಾರಗಳನ್ನು ಮುಂದಿಟ್ಟು ನಮ್ಮ ಕುಟುಂಬ ರಾಜಕಾರಣವನ್ನು ಕುಸಿತಗೊಳಿಸಬೇಕು ಎಂಬ ದುರುದ್ದೇಶದಿಂದ ಸುಳ್ಳು ಕೇಸನ್ನು ದಾಖಲಿಸಿದ್ದಾರೆ. ಆದರೆ, ಯಾರು ಕುತಂತ್ರ ಮಾಡಿದ್ದಾರೆಂಬುದು ಇನ್ನು 2 ದಿನಗಳಲ್ಲಿ ಉತ್ತರ ಕೊಡುತ್ತೇವೆ. ನಾನೇನು ಯಾರಿಗೂ ಹೆದರಿಕೊಂಡು ಎಲ್ಲಿಗೂ ಓಡಿ ಹೋಗಲ್ಲ. ಎಲ್ಲ ಪೊಲೀಸ್ ಅಧಿಕಾರಗಳ ತನಿಖೆಗೂ ನಾನು ಸ್ಪಷ್ಟ ಉತ್ತರ ಕೊಟ್ಟಿದ್ದೇನೆ. ಈ ಕೇಸ್‌ಗೆ ಸಂಬಂಧಪಟ್ಟಂತೆ ನಾಂದಿ ಹಾಡುತ್ತೇವೆ ಎಂದು ಸೂರಜ್ ರೇವಣ್ಣ ಹೇಳಿದರು.