ಮೋದಿ, ಪೂರ್ವಿ ಮತ್ತು ಪರೀಕ್ಷೆ: ಈಡೇರಲಿ ಕನ್ನಡದ ಕಂದನ ಆಕಾಂಕ್ಷೆ!

By Web DeskFirst Published Jan 24, 2019, 2:17 PM IST
Highlights

ಉತ್ತರ ಕನ್ನಡ ಜಿಲ್ಲೆಯ 10ನೇ ತರಗತಿ ವಿದ್ಯಾರ್ಥಿನಿಯೋರ್ವಳು, ಇದೇ ಜ.29ರಂದು ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆಯಲಿರುವ ‘ಪರೀಕ್ಷಾ ಕಿ ಬಾತ್ ಪಿಎಂ ಕೆ ಸಾಥ್’ ಕಾರ್ಯಕ್ರಮಕ್ಕೆ ಆಯ್ಕೆಯಾಗಿದ್ದಾಳೆ.

ಕಾರವಾರ(ಜ.24): ‘ಓ ನನ್ನ ಚೇತನ ಆಗು ನೀ ಅನಿಕೇತನ..’ ಎಂದು ರಾಷ್ಟ್ರಕವಿ ಕುವೆಂಪು ಕನ್ನಡದ ಮಕ್ಕಳಿಗೆ ಹೇಳಿ ಹೋಗಿದ್ದರು. ಅದರಂತೆ ಕನ್ನಡಾಂಬೆಯ ಮಕ್ಕಳು ದೇಶ, ವಿದೇಶಗಳಲ್ಲಿ ತಮ್ಮ ಜ್ಞಾನದ ರೆಕ್ಕೆಪುಕ್ಕ ಕಟ್ಟಿಕೊಂಡು ಹಾರಾಡುತ್ತಿವೆ. ರಾರಾಜಿಸುತ್ತಿವೆ. ವಿಶ್ವದ ಜ್ಞಾನ ಜಗತ್ತನ್ನು ಆಳುತ್ತಿವೆ.

ಅದರಂತೆ ಉತ್ತರ ಕನ್ನಡ ಜಿಲ್ಲೆಯ 10ನೇ ತರಗತಿ ವಿದ್ಯಾರ್ಥಿನಿಯೋರ್ವಳು, ಇದೇ ಜ.29ರಂದು ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆಯಲಿರುವ ‘ಪರೀಕ್ಷಾ ಕಿ ಬಾತ್ ಪಿಎಂ ಕೆ ಸಾಥ್’ ಕಾರ್ಯಕ್ರಮಕ್ಕೆ ಆಯ್ಕೆಯಾಗಿದ್ದಾಳೆ.

ಉತ್ತರ ಕನ್ನಡ ಜಿಲ್ಲೆಯ ನವೋದಯ ಶಾಲೆಯ ಪೂರ್ವಿ ಸುಂದರ್ ಶಾನಭಾಗ್ ಎಂಬ ವಿದ್ಯಾರ್ಥಿನಿ, ಭಾರತದ ಪ್ರಧಾನಿ ಜೊತೆ ಪರೀಕ್ಷೆ ಎದುರಿಸುವ ಬಗೆ ಕುರಿತು ಚರ್ಚೆ ನಡೆಸುತ್ತಾಳೆ ಎಂದರೆ ಅದು ಕನ್ನಡಿಗರೆಲ್ಲರೂ ಹೆಮ್ಮೆಪಡುವ ಸಂಗತಿಯೇ ಹೌದು.  

ಪರೀಕ್ಷೆ ಎದುರಿಸುವ ಬಗೆ, ತಯಾರಿ ಹಾಗೂ ಪರೀಕ್ಷೆ ನಂತರ ವಿದ್ಯಾರ್ಥಿ ಮುಂದಿರುವ ಆಯ್ಕೆಗಳ ಕುರಿತು ಪ್ರಧಾನಿ ಮೋದಿ ಜೊತೆ ಚರ್ಚಿಸುವುದು ಈ ಕಾರ್ಯಕ್ರಮದ ಉದ್ದೇಶ.

ದೆಹಲಿಯಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಪೂರ್ವಿ ತಮ್ಮ ಪೋಷಕರೊಂದಿಗೆ ಇಂದು ದೆಹಲಿಗೆ ಹೊರಟಿರುವುದಾಗಿ ಶಾಲೆಯ ಪ್ರಾಚಾರ್ಯ ವಿ.ಬಿ.ಲಮಾಣಿ ತಿಳಿಸಿದ್ದಾರೆ.

ಶಾಲೆಯ ಒಟ್ಟು 110 ವಿದ್ಯಾರ್ಥಿಗಳು ಆನ್ ಲೈನ್ ನಲ್ಲಿ ನಡೆಯುವ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು. ಅದರಲ್ಲಿ ಪೂರ್ವಿ ಸುಂದರ್ ಶಾನಭಾಗ್ ಮಾತ್ರ ಆಯ್ಕೆಯಾಗಿದ್ದಾರೆ ಎಂದು ಲಮಾಣಿ ತಿಳಿಸಿದ್ದಾರೆ.

click me!