ರಾಜ್ಯದ 15 ಜಿಲ್ಲೆಗಳಲ್ಲಿ ಅಕಾಲಿಕ ಮಳೆ : ಮಾರ್ಚ್ 25 ರವರೆಗೆ ಅಬ್ಬರಿಸಲಿದೆ

Kannadaprabha News   | Kannada Prabha
Published : Mar 19, 2026, 07:07 AM IST
Rain

ಸಾರಾಂಶ

ರಾಜ್ಯಾದ್ಯಂತ ಅಕಾಲಿಕ ಮಳೆಯ ಅಬ್ಬರ ಮುಂದುವರಿದಿದ್ದು, ಬೆಂಗಳೂರು, ಚಿಕ್ಕಮಗಳೂರು, ಶಿವಮೊಗ್ಗ ಸೇರಿ ರಾಜ್ಯದ 15 ಜಿಲ್ಲೆಗಳಲ್ಲಿ ಬುಧವಾರವೂ ಮಳೆಯಾಗಿದೆ. ಆಲಿಕಲ್ಲು ಮಳೆಗೆ ಮಾವು, ಕಾಫಿ, ಬಾಳೆ, ಅಡಕೆ ಸೇರಿ ತೋಟದ ಬೆಳೆಗಳು ಹಾನಿಗೊಳಗಾಗಿವೆ.

  ಬೆಂಗಳೂರು :  ರಾಜ್ಯಾದ್ಯಂತ ಅಕಾಲಿಕ ಮಳೆಯ ಅಬ್ಬರ ಮುಂದುವರಿದಿದ್ದು, ಬೆಂಗಳೂರು, ಚಿಕ್ಕಮಗಳೂರು, ಶಿವಮೊಗ್ಗ ಸೇರಿ ರಾಜ್ಯದ 15 ಜಿಲ್ಲೆಗಳಲ್ಲಿ ಬುಧವಾರವೂ ಮಳೆಯಾಗಿದೆ. ಆಲಿಕಲ್ಲು ಮಳೆಗೆ ಮಾವು, ಕಾಫಿ, ಬಾಳೆ, ಅಡಕೆ ಸೇರಿ ತೋಟದ ಬೆಳೆಗಳು ಹಾನಿಗೊಳಗಾಗಿವೆ. ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನ ಸಾಲಗುಂದ ಗ್ರಾಮದಲ್ಲಿ ಸಿಡಿಲು ಬಡಿದು ಕುರಿಗಾಹಿಯೊಬ್ಬ ಮೃತಪಟ್ಟಿದ್ದು, ಮೃತ ವ್ಯಕ್ತಿಯನ್ನು ಗ್ರಾಮದ ಮಂಜುನಾಥ ಕರಿಯಪ್ಪ (21) ಎಂದು ಗುರುತಿಸಲಾಗಿದೆ. ಹೊಲದಲ್ಲಿ ಕುರಿ ಕಾಯುತ್ತಿದ್ದಾಗ ಸಿಡಿಲು ಬಡಿದಿದ್ದು, ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಹಲವೆಡೆ ಒಂದೂವರೆ ಗಂಟೆ ಆಲಿಕಲ್ಲು ಮಳೆ

ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಹಲವೆಡೆ ಮಧ್ಯಾಹ್ನದ ವೇಳೆ ಸುಮಾರು ಒಂದೂವರೆ ಗಂಟೆ ಆಲಿಕಲ್ಲು ಮಳೆಯಾಗಿದ್ದು, ಬಾಳೆಹೊನ್ನೂರಲ್ಲಿ ಆಲಿಕಲ್ಲು ಕೆಲ ಹೊತ್ತು ರಸ್ತೆಯನ್ನೇ ಮುಚ್ಚಿತ್ತು. ಚಿಕ್ಕಮಗಳೂರು ತಾಲೂಕಿನ ಖಾಂಡ್ಯದಲ್ಲಿ ಒಂದೇ ದಿನ 2.50 ಇಂಚಿನಷ್ಟು ಮಳೆ ಸುರಿದಿದೆ. ಹೋಬಳಿ ವ್ಯಾಪ್ತಿಯ ಜಮೀನು, ತೋಟ, ಮನೆಗಳ ಬಳಿ ಸುಮಾರು 2 ಅಡಿಗಳಷ್ಟು ಎತ್ತರದ ಆಲಿಕಲ್ಲಿನ ರಾಶಿ ಕಂಡು ಬಂತು.

ದಾವಣಗೆರೆ ಸಮೀಪದ ಗುಡಾಳ್‌ ಗ್ರಾಮದ ಸುತ್ತಮುತ್ತ ಬುಧವಾರ ಸಂಜೆ ಸುರಿದ ಆಲಿಕಲ್ಲು ಮಳೆ, ಕಾಶ್ಮೀರದ ದೃಶ್ಯವೈಭವವನ್ನು ನೆನಪಿಸಿತು. ಕಲಬುರಗಿಯಲ್ಲಿ ಗಾಳಿ-ಮಳೆಗೆ 2 ಕೋಟಿ ರು.ವೆಚ್ಚದಲ್ಲಿ ನಿರ್ಮಿಸಿದ್ದ ಪ್ರಬುದ್ಧ ಅಕಾಡೆಮಿಯ ಪಾರ್ಕಿಂಗ್‌ ಶೆಡ್ ನೆಲಕ್ಕುರುಳಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಬೆಳಗಾವಿ ಜಿಲ್ಲೆ ಸಂಕೇಶ್ವರ ಹೊರವಲಯದಲ್ಲಿ ಸಿಡಿಲಬ್ಬರದ ಮಳೆಗೆ 39 ಕುರಿಗಳು ಸಾವನ್ನಪ್ಪಿವೆ.

ಗುಂಡ್ಲುಪೇಟೆ, ಹನೂರು ಸೇರಿ ಚಾಮರಾಜನಗರ ಜಿಲ್ಲೆಯ ಹಲವೆಡೆ ಆಲಿಕಲ್ಲು ಸಹಿತ ಮಳೆಯಾಗಿದ್ದು, ಕಲ್ಲಂಗಡಿ, ಮೆಣಸಿನಕಾಯಿ, ಟೊಮೊಟೊ, ಬಾಳೆಗೆ ಆಲಿಕಲ್ಲು ಪೆಟ್ಟು ನೀಡಿದೆ. ಇದೇ ವೇಳೆ, ಮೈಸೂರು, ಬೀದರ್‌, ಕೊಡಗು, ಬಳ್ಳಾರಿ, ಗದಗ ಜಿಲ್ಲೆಗಳಲ್ಲಿಯೂ ಮಳೆಯಾಗಿದೆ.

 ಈ ಪ್ರಮಾಣದ ಆಲಿಕಲ್ಲು ಮಳೆಗೆ ಹವಾಮಾನ ವೈಪರೀತ್ಯ ಕಾರಣ

ಮಳೆಗಾಲದಲ್ಲಿ ಆಲಿಕಲ್ಲು ಮಳೆ ಬರುವುದು ಸಾಮಾನ್ಯವಾದರೂ, ಧಾರವಾಡ ಜಿಲ್ಲೆಯ ಇತಿಹಾಸದಲ್ಲಿ ಬೇಸಿಗೆಯಲ್ಲಿ, ಇಷ್ಟೊಂದು ರೀತಿಯಲ್ಲಿ ದೊಡ್ಡ ಪ್ರಮಾಣದ ಆಲಿಕಲ್ಲಿನ ಸುರಿಮಳೆ ಆಗಿದ್ದಿಲ್ಲ. ಇದು ಹವಾಮಾನ ವೈಪರೀತ್ಯದ ಸ್ಪಷ್ಟ ಎಚ್ಚರಿಕೆ ಎಂದು ಹವಾಮಾನ ತಜ್ಞರು ಎಚ್ಚರಿಸಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಪರಿಸರ ಮಾಲಿನ್ಯದಿಂದಾಗಿ ತಾಪಮಾನ ಹೆಚ್ಚಾಗಿದ್ದು, ಪರಿಸರದ ಮೇಲ್ಮೈ ಯಲ್ಲಿ ಸುಳಿಗಾಳಿ ಉಂಟಾದಾಗ ಈ ರೀತಿ ಆಗಲಿದೆ. ಸಾಮಾನ್ಯವಾಗಿ ಬಿಸಿಲಿನಿಂದ ತೇವಾಂಶದ ನೀರು ಆವಿಯಾಗಿ ಮೇಲಕ್ಕೆ ಚಲಿಸುತ್ತದೆ. ಎತ್ತರ ಹೆಚ್ಚಾದಂತೆ ಉಷ್ಣಾಂಶ ಕಡಿಮೆಯಾಗಿ, ಬಳಿಕ, ತೇವಾಂಶ ತಂಪಾಗಿ ಮಳೆಯಾಗುತ್ತದೆ. ಆದರೆ, ನಿಧಾನವಾಗಿ ಉಷ್ಣಾಂಶ ಮತ್ತಷ್ಟು ಕಡಿಮೆಯಾದಾಗ, ಸುಳಿಗಾಳಿ ಉಂಟಾಗಿ, ಮಳೆ ಹನಿಗಳು ಮಂಜುಗಡ್ಡೆಯಾಗಿ, ಆಲಿಕಲ್ಲು ಮಳೆ ಸುರಿಯುತ್ತದೆ. ಕಲಘಟಗಿಯಲ್ಲಿ ಭಾರೀ ಆಲಿಕಲ್ಲು ಮಳೆಯಾಗಿದ್ದು ಹೀಗೆ ಎನ್ನುತ್ತಾರೆ ಧಾರವಾಡ ಕೃಷಿ ವಿಶ್ವವಿದ್ಯಾಲಯದ ಹವಾಮಾನಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಪೋತದಾರ.

ಬಂಗಾಳಕೊಲ್ಲಿಯಲ್ಲಿ ಸುಳಿಗಾಳಿ ಇದ್ದು ಮಾರ್ಚ್ 25 ರವರೆಗೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಜ್ಞರು ಎಚ್ಚರಿಸಿದ್ದಾರೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕಾಂಗ್ರೆಸ್ಸಿಗೆ ಈಗ ಉಪಚುನಾವಣೆ ಟಿಕೆಟ್‌ ಕಗ್ಗಂಟು
ಮರ್ಯಾದಾ ಹತ್ಯೆಗೆ 5 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ