ಮಳೆಗಾಲ ಪ್ರಾರಂಭವಾದ್ರೆ ಸಾಕು ಉತ್ತರ ಕನ್ನಡ ಜಿಲ್ಲೆಯ ಅಲ್ಲಲ್ಲಿ ಗುಡ್ಡ ಕುಸಿತದ ಆತಂಕ ಪ್ರಾರಂಭವಾಗುತ್ತದೆ. ಅದರಲ್ಲೂ ಐಆರ್‌ಬಿ ಕಂಪೆನಿ ನಡೆಸುತ್ತಿರುವ ರಾಷ್ಟ್ರೀಯ ಹೆದ್ದಾರಿ 66ರ ಕಾಮಗಾರಿ, ಸಂಪೂರ್ಣ ಅವೈಜ್ಞಾನಿಕವಾಗಿದ್ದು, ರಸ್ತೆ ಬದಿಯಲ್ಲೇ ಅಲ್ಲಲ್ಲಿ ಗುಡ್ಡ ಕುಸಿತಗಳು ಕಾಣಿಸಿಕೊಳ್ಳುತ್ತಿವೆ.
ಭರತ್‌ರಾಜ್ ಕಲ್ಲಡ್ಕ, ಏಷ್ಯಾನೆಟ್ ಸುವರ್ಣ ನ್ಯೂಸ್, ಕಾರವಾರ
ಉತ್ತರ ಕನ್ನಡ (ಜೂ.28): ಮಳೆಗಾಲ ಪ್ರಾರಂಭವಾದ್ರೆ ಸಾಕು ಉತ್ತರ ಕನ್ನಡ ಜಿಲ್ಲೆಯ ಅಲ್ಲಲ್ಲಿ ಗುಡ್ಡ ಕುಸಿತದ ಆತಂಕ ಪ್ರಾರಂಭವಾಗುತ್ತದೆ. ಅದರಲ್ಲೂ ಐಆರ್‌ಬಿ ಕಂಪೆನಿ ನಡೆಸುತ್ತಿರುವ ರಾಷ್ಟ್ರೀಯ ಹೆದ್ದಾರಿ 66ರ ಕಾಮಗಾರಿ, ಸಂಪೂರ್ಣ ಅವೈಜ್ಞಾನಿಕವಾಗಿದ್ದು, ರಸ್ತೆ ಬದಿಯಲ್ಲೇ ಅಲ್ಲಲ್ಲಿ ಗುಡ್ಡ ಕುಸಿತಗಳು ಕಾಣಿಸಿಕೊಳ್ಳುತ್ತಿವೆ. ಹೀಗಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುವ ವೇಳೆಯೂ ವಾಹನ ಸವಾರರು ತಮ್ಮ ಜೀವವನ್ನು ಕೈಯಲ್ಲಿ ಹಿಡಿದು ಸಂಚಾರ ಮಾಡಬೇಕಾದ ಪರಿಸ್ಥಿತಿ ಉಂಟಾಗಿದೆ. ಈ ಕುರಿತ ಒಂದು ವರದಿ ಇಲ್ಲಿದೆ ನೋಡಿ. ಹೌದು, ಕರ್ನಾಟಕದ ಕರಾವಳಿ ಭಾಗಗಳಲ್ಲಿ ಕಳೆದ ಎರಡ್ಮೂರು ದಿನಗಳಿಂದ ಮುಂಗಾರು ಮಳೆ ಭರ್ಜರಿಯಾಗೇ ಸುರಿಯುತ್ತಿದ್ದು, ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ.
undefined
ಆದರೆ, ಈ ನಡುವೆ ಜಿಲ್ಲೆಯ ಅಲ್ಲಲ್ಲಿ ಗುಡ್ಡ ಕುಸಿತದ ಆತಂಕವೂ ಕಾಣಿಸಿಕೊಂಡಿದೆ. ಕಳೆದ 9 ವರ್ಷಗಳಿಂದ ಮಂಗಳೂರಿನಿಂದ ಗೋವಾವರೆಗೆ ರಾಷ್ಟ್ರೀಯ ಹೆದ್ದಾರಿ 66ರ ಕಾಮಗಾರಿ ನಡೆಯುತ್ತಿದ್ದು, ಈವರೆಗೆ ಪೂರ್ಣಗೊಂಡಿಲ್ಲ. ಜೊತೆಗೆ ಈ ಕಾಮಗಾರಿ ಸಂಪೂರ್ಣವಾಗಿ ಅವೈಜ್ಞಾನಿಕವಾಗಿದ್ದು, ಹೆದ್ದಾರಿಯುದ್ದಕ್ಕೂ ಅಲ್ಲಿಲ್ಲಿ ಗುಡ್ಡ ಕುಸಿತಗಳಾಗುತ್ತಿವೆ. ಹೀಗಾಗಿ ವಾಹನ ಸವಾರರು ಐಆರ್‌ಬಿ ಕಂಪೆನಿ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕಾರವಾರ ಬಿಣಗಾ ಗುಡ್ಡದ ಬಳಿ ಗುಡ್ಡ ಕುಸಿತವಾಗಿದ್ದು, ಬೃಹತ್ ಗಾತ್ರದ ಕಲ್ಲುಗಳು ರಾಷ್ಡ್ರೀಯ ಹೆದ್ದಾರಿಯ ಮೇಲೆಯೇ ಉರುಳಿ ಬಿದ್ದಿವೆ.
Uttara Kannada: ಮಕ್ಕಳ ಭವಿಷ್ಯ ನುಂಗುತ್ತಿದೆ ಕಲ್ಲಿನ ಕ್ವಾರಿ: ಕುಸಿದು ಬೀಳುವ ಭೀತಿಯಲ್ಲಿ ಶಿರಸಿಯ ಶಾಲೆ!
ಹೀಗಾಗಿ ದ್ವಿಮುಖ ಸಂಚಾರವನ್ನು ಬಂದ್ ಮಾಡಿ ಏಕ ಮುಖ ಸಂಚಾರಕ್ಕೆ ಮಾತ್ರ ಅವಕಾಶ ಮಾಡಿಕೊಡಲಾಗಿದೆ. ಈ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ 2014 ರಲ್ಲಿ ಪ್ರಾರಂಭವಾಗಿದ್ದು, 2018 ರಲ್ಲಿ ಮುಕ್ತಾಯವಾಗಬೇಕಿತ್ತು. ಆದರೆ, ಒಂಭತ್ತು ವರ್ಷಗಳು ಕಳೆದರೂ ಹೆದ್ದಾರಿ ಕಾಮಗಾರಿ ಮಾತ್ರ ಪೂರ್ಣಗೊಂಡಿಲ್ಲ. ಈ ಕಾಮಗಾರಿ ಸಂಪೂರ್ಣ ಅವೈಜ್ಞಾನಿಕವಾಗಿದ್ದು, ಗುಡ್ಡಗಳನ್ನು ಅಸುರಕ್ಷಿತ ರೀತಿಯಲ್ಲಿ ತುಂಡರಿಸಿ ರಸ್ತೆ ನಿರ್ಮಾಣ ಮಾಡಿದ್ದರಿಂದ ಮಳೆಗಾಲದ ಈ ಸಂದರ್ಭದಲ್ಲ ಕುಸಿಯುವ ಆತಂಕ ಶುರುವಾಗಿದೆ.
ಇನ್ನು ಮೂರು ವರ್ಷಗಳ ಹಿಂದೆ ಐಆರ್‌ಬಿ ಅವೈಜ್ಞಾನಿಕ ಕಾಮಗಾರಿಯಿಂದಲೇ ಕುಮಟಾ ತಾಲೂಕಿನ ತಂಡ್ರಕುಳಿ ಗ್ರಾಮದ ಬಳಿ ಗುಡ್ಡ ಕುಸಿತವಾಗಿ ನಾಲ್ಕು ಜನರು ಸಾವನ್ನಪ್ಪಿದರು. ಇಷ್ಟಾದರೂ ಈ ಕಂಪೆನಿಯವರು ಮಾತ್ರ ಎಚ್ಚೆತ್ತು ಕೊಂಡಿಲ್ಲ.. ಈಗ ಮಳೆಗಾಲ ಪ್ರಾರಂಭವಾಗಿದ್ದು, ಹೆದ್ದಾರಿಯುದ್ದಕ್ಕೂ ಅಲ್ಲಲ್ಲಿ ಗುಡ್ಡ ಕುಸಿತವಾಗುತ್ತಿದೆ. ಇದರಿಂದಾಗಿ ಅಲ್ಲಲ್ಲಿ ಬ್ಯಾರಿಕೇಡ್ ಹಾಕಿ ರಸ್ತೆ ಬಂದ್ ಮಾಡಲಾಗಿದೆ. ಕಾರವಾರದ ಸುರಂಗ ಮಾರ್ಗದ ಬಳಿಯೂ ಬ್ಯಾರಿಕೇಡ್ ಹಾಕಲಾಗಿದ್ದು, ಅಲ್ಲೂ ಕುಸಿಯುವ ಆತಂಕ ಶುರುವಾಗಿದೆ.
ಅಕ್ಕಿ ವಿಚಾರದಲ್ಲಿ ಸಿ.ಟಿ.ರವಿ ಯಾಕೆ ಮೈ ಪರಿಚಿಕೊಳ್ಳುತ್ತಿದ್ದಾರೋ ಗೊತ್ತಿಲ್ಲ: ಸಚಿವ ಎಂ.ಸಿ.ಸುಧಾಕರ್
ಉಸ್ತುವಾರಿ ಸಚಿವರ ಕಾರ್ಯದರ್ಶಿ ರಿತೇಶ್ ಸಿಂಗ್ ಕೂಡಾ ಹೆದ್ದಾರಿ ಪರಿಶೀಲನೆ ನಡೆಸಿದ್ದು, ಮೇಲ್ನೋಟಕ್ಕೆ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದ್ದು, ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಐಆರ್‌ಬಿ ಅವೈಜ್ಞಾನಿಕ ಕಾಮಗಾರಿಯಿಂದ ವಾಹನ ಸವಾರರಂತೂ ಆತಂಕಿತರಾಗಿದ್ದು, ಯಾವಾಗ ತಮ್ಮ ಜೀವನಕ್ಕೆ ಅಪಾಯ ಉಂಟಾಗಬಹುದು ಎಂಬ ಭೀತಿಯಲ್ಲೇ ಜನರು ಪ್ರಯಾಣ ನಡೆಸುತ್ತಿದ್ದಾರೆ. ಒಟ್ಟಿನಲ್ಲಿ ಉತ್ತರಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿ ಮುಂಗಾರು ಚುರುಕಾಗಿದ್ದು, ರಾಷ್ಟ್ರೀಯ ಹೆದ್ದಾರಿಯ ಅಲ್ಲಲ್ಲಿ ಗುಡ್ಡು ಕುಸಿತದ ಆತಂಕ ಶುರುವಾಗಿದೆ. ಹೀಗಾಗಿ ವಾಹನ ಸವಾರರು ಐಆರ್‌ಬಿ ವಿರುದ್ಧ ಹಿಡಿಶಾಪ ಹಾಕುತ್ತ ಸಂಚಾರ ಮಾಡುವಂತಾಗಿದೆ.