2023ರ ಸಿರಿಧಾನ್ಯ ವರ್ಷಕ್ಕೆ ಕರ್ನಾಟಕದ ಕೊಡುಗೆ ಹೆಚ್ಚಲಿ : ಶೋಭಾ ಕರಂದ್ಲಾಜೆ

By Suvarna NewsFirst Published Sep 21, 2021, 2:11 PM IST
Highlights
  • 2023ನ್ನು ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷ ಎಂದು ಘೋಷಣೆ
  • ಕರ್ನಾಟಕದಿಂದ ಸಿರಿಧಾನ್ಯಗಳ ರಫ್ತು ಪ್ರಮಾಣ ಹೆಚ್ಚಬೇಕು ಎಂದ ಸಚಿವೆ ಶೋಭಾ ಕರಂದ್ಲಾಜೆ

ಬೆಂಗಳೂರು (ಸೆ.21): 2023ನ್ನು ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷ ಎಂದು ಘೋಷಿಸಲಾಗಿದ್ದು, ಈ ವೇಳೆಗೆ ಕರ್ನಾಟಕದಿಂದ ಸಿರಿಧಾನ್ಯಗಳ ರಫ್ತು ಪ್ರಮಾಣ ಹೆಚ್ಚಬೇಕು ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಎಂದು ಹೇಳಿದ್ದಾರೆ.

ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಣೆಯ ಭಾಗವಾಗಿ ಕೇಂದ್ರ ವಾಣಿಜ್ಯ ಇಲಾಖೆಯು ಕರ್ನಾಟಕ ಸರ್ಕಾರದ ಸಹಯೋಗದೊಂದಿಗೆ ನಗರ 'ದಿ ಲಲಿತ್‌ ಅಶೋಕ್‌' ಹೋಟೆಲ್‌ನಲ್ಲಿ ಇಂದು ಆಯೋಜಿಸಿದ್ದ "ವಾಣಿಜ್ಯ ಉತ್ಸವ" ಉದ್ಘಾಟಿಸಿ ಅವರು ಮಾತನಾಡಿದರು.   

“2023ನೇ ವರ್ಷವನ್ನು ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷ ಎಂದು ವಿಶ್ವಸಂಸ್ಥೆ ಘೋಷಿಸಿದೆ. ಕರ್ನಾಟಕ ಸಿರಿಧಾನ್ಯಗಳ ತವರೂರು. ಜೋಳ, ರಾಗಿ ನಮ್ಮ ಪ್ರಮುಖ ಆಹಾರ. ಇವುಗಳ ಉತ್ಪಾದನೆ ಹಾಗೂ ರಫ್ತು ಹೆಚ್ಚಬೇಕಾಗಿದೆ. ಕೃಷಿ ಕ್ಷೇತ್ರದ ಪ್ರಗತಿ ಮತ್ತು ನಮ್ಮ ರೈತ ಸಮುದಾಯದ ಕಲ್ಯಾಣಕ್ಕಾಗಿ ಕರ್ನಾಟಕ ಕೈಗೊಳ್ಳುವ ಕ್ರಮಗಳಿಗೆ ಅಗತ್ಯ ಸಹಕಾರ ನೀಡಲು ಕೇಂದ್ರ ಸರ್ಕಾರ ಸಿದ್ಧ,” ಎಂದು ಹೇಳಿದರು. 

ಸಿರಿಧಾನ್ಯಗಳಿಗೆ ಬಂಗಾರದ ಬೆಲೆ : ಬೆಳೆಯಲು ರೈತರ ಹಿಂದೇಟು

"ಮಾವು, ದಾಳಿಂಬೆ, ಹೂವು, ಎಣ್ಣೆ, ತಾಳೆ ಮುಂತಾದ ಕೃಷಿ ಉತ್ಪನ್ನಗಳ ಪ್ರಮಾಣ ಹಾಗೂ ಗುಣಮಟ್ಟ ಹೆಚ್ಚಿಸಲು ಇಂಡೋ-ಇಸ್ರೇಲ್-ನೆದರ್‌ಲ್ಯಾಂಡ್ ಕಾರ್ಯಕ್ರಮದ ಅಡಿಯಲ್ಲಿ ರಾಜ್ಯ 6  ಸೆಂಟರ್‌ ಆಫ್‌ ಎಕ್ಸಲೆನ್ಸ್‌ ಕೇಂದ್ರಗಳನ್ನು ಸ್ಥಾಪಿಸಿದೆ. ಇದು ಸಂತಸದ ವಿಷಯ," ಎಂದು ತಿಳಿಸಿದರು. 

"ರಫ್ತು ಮಾರುಕಟ್ಟೆ ವ್ಯಾಪ್ತಿ ವಿಸ್ತರಣೆ ಹಾಗೂ ಸುಧಾರಣೆಗೆ ಒತ್ತು ನೀಡಿ ಕೃಷಿ ರಫ್ತು ಕೇಂದ್ರ ಸ್ಥಾಪನೆಗೆ ರಾಜ್ಯ ಮುಂದಾಗಿದೆ. ನಮ್ಮ ಉತ್ಪನ್ನಗಳಿಗೆ ಜಾಗತಿಕ ಮಟ್ಟದಲ್ಲಿ ಬೇಡಿಕೆ ಹೆಚ್ಚಿಸಲು ಮಾರ್ಕೆಟಿಂಗ್ ಮತ್ತು ರಫ್ತು ಪ್ರಚಾರ ಚಟುವಟಿಕೆ ಬಗ್ಗೆಯೂ ರಾಜ್ಯ ಗಮನಹರಿಸಿದೆ. 'ಆತ್ಮ ನಿರ್ಭಾರ ಭಾರತ್ ಅಭಿಯಾನ'ದಡಿ ಪ್ರಧಾನ ಮಂತ್ರಿಯವರ "ಮೈಕ್ರೋ ಫುಡ್ ಪ್ರೊಸೆಸಿಂಗ್ ಎಂಟರ್‌ಪ್ರೈಸಸ್‌' ಅನುಷ್ಠಾನದಲ್ಲೂ ಕರ್ನಾಟಕ ಸಕ್ರಿಯವಾಗಿದೆ,"ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

"ಜಾಗತಿಕವಾಗಿ ಉತ್ತಮ ವ್ಯಾಪಾರ ಸಂಬಂಧ ಕಾಯ್ದುಕೊಂಡಿರುವ ಕರ್ನಾಟಕವು ಕಾಫಿ, ಸಾಂಬಾರು ಪದಾರ್ಥಗಳು, ರೇಷ್ಮೆ, ಗೋಡಂಬಿ, ಕರಕುಶಲ ವಸ್ತುಗಳಿಗೆ ಹಿಂದಿನಿಂದಲೂ ಹೆಸರುವಾಸಿಯಾಗಿದೆ. ಇತ್ತೀಚಿನ ವರ್ಷಗಳಲ್ಲಿ ಎಂಜಿನಿಯರಿಂಗ್ ಸರಕುಗಳು, ಸಿದ್ಧ ಉಡುಪುಗಳು, ಚರ್ಮದ ಸರಕು, ರಾಸಾಯನಿಕಗಳು, ಖನಿಜ ಮತ್ತು ಅದಿರುಗಳ ರಫ್ತಿನಲ್ಲಿ ಪ್ರಮುಖ ಸ್ಥಾನ ಪಡೆದಿದ್ದೇವೆ. ಇದರ ಜತೆಗೆ, ಕೃಷಿ ಉತ್ಪನ್ನಗಳ ರಫ್ತಿಗೆ ಉದ್ಯಮಿಗಳು ಹೆಚ್ಚಿನ ಆದ್ಯತೆ ನೀಡಬೇಕು,"ಎಂದು ಮನವಿ ಮಾಡಿದರು.  

"ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಮಾರ್ಗದರ್ಶನದಲ್ಲಿ ಸೇವಾ ರಫ್ತು ಉತ್ತೇಜನಾ ಮಂಡಳಿ (ಎಸ್‌ಇಪಿಸಿ) ಆಯೋಜಿಸಿರುವ ಕಾರ್ಯಕ್ರಮದಲ್ಲಿ ವಾಣಿಜ್ಯೋದ್ಯಮಿಗಳು, ಕೈಗಾರಿಕಾ ಸಂಘಗಳ ಪ್ರತಿನಿಧಿಗಳು, ರಫ್ತು ಉತ್ತೇಜನ ಮಂಡಳಿಗಳ ಪ್ರಮುಖರು ಮತ್ತು ಉದ್ಯಮ ತಜ್ಞರು ಭಾಗಿಯಾಗಿದ್ದು, ಕಾರ್ಯಕ್ರಮ ಫಲಪ್ರದವಾಗಲಿದೆ. ಇಂಥ ಕಾರ್ಯಕ್ರಮಗಳು, ಸ್ವ ಉದ್ಯಮ ಸ್ಥಾಪಿಸಿ, ಉದ್ಯೋಗಾವಕಾಶ ಸೃಷ್ಟಿಸಲು ಪ್ರೇರಣೆಯಾಗುವುದು," ಎಂದು ಹೇಳಿದರು.

 ಕಾರ್ಯಕ್ರಮದಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ, ಸರಕಾರದ ಅಪರ ಮುಖ್ಯ ಕಾರ್ಯದರ್ಶಿ ಡಾ. ಇವಿ ರಣಮಣರೆಡ್ಡಿ, ಕೇಂದ್ರ ವಾಣಿಜ್ಯ ಇಲಾಖೆಯ ಜಂಟಿ ಕಾರ್ಯದರ್ಶಿ ದರ್ಪಣ್‌ ಜೈನ್‌,  ವಾಣಿಜ್ಯ ಮತ್ತು ಎಸ್‌ಇಪಿಸಿ ಅಧ್ಯಕ್ಷ ಮನೇಕ್‌ ಇ ದಾವರ್‌ ಉಪಸ್ಥಿತರಿದ್ದರು. 

ಒಂದು ದಿನದ ಕಾರ್ಯಕ್ರಮ: ವಾಣಿಜ್ಯ ಉತ್ಸವದ ಭಾಗವಾಗಿ ನಾಳೆಯೂ (ಸೆಪ್ಟಂಬರ್‌ 22) ಅಶೋಕ್‌ ಹೋಟೆಲ್‌ನಲ್ಲಿ ಒಂದು ದಿನ ಕಾರ್ಯಕ್ರಮ ಆಯೋಜಿಸಲಾಗಿದೆ.

click me!