ಪ್ರಾರ್ಥನಾ ಮಂದಿರಗಳ ಧ್ವಂಸ ತಡೆಗೆ ವಿಧೇಯಕ!

Published : Sep 21, 2021, 07:41 AM IST
ಪ್ರಾರ್ಥನಾ ಮಂದಿರಗಳ ಧ್ವಂಸ ತಡೆಗೆ ವಿಧೇಯಕ!

ಸಾರಾಂಶ

* ಅಸೆಂಬ್ಲಿಯಲ್ಲಿ ಧಾರ್ಮಿಕ ಕಟ್ಟಡಗಳ ಸಂರಕ್ಷಣೆ ಮಸೂದೆ ಮಂಡನೆ * ಕೋರ್ಟ್‌ ಏನೇ ಆದೇಶ ನೀಡಿದ್ದರೂ ಧಾರ್ಮಿಕ ಕೇಂದ್ರ ಸುರಕ್ಷಿತ * ಪ್ರಾರ್ಥನಾ ಮಂದಿರಗಳ ಧ್ವಂಸ ತಡೆಗೆ ವಿಧೇಯಕ

ವಿಧಾನಸಭೆ(ಸೆ.21): ಸುಪ್ರೀಂಕೋರ್ಟ್‌ ಹಾಗೂ ಹೈಕೋರ್ಟ್‌ ಆದೇಶದ ಹೊರತಾಗಿಯೂ ರಾಜ್ಯದಲ್ಲಿ ಅನಧಿಕೃತ ಧಾರ್ಮಿಕ ಕಟ್ಟಡಗಳ ತೆರವು ತಡೆಯಲು ರಾಜ್ಯ ಸರ್ಕಾರವು ‘ಕರ್ನಾಟಕ ಧಾರ್ಮಿಕ ಕಟ್ಟಡಗಳ ಸಂರಕ್ಷಣೆ ವಿಧೇಯಕ-2021’ ಹೆಸರಿನ ಮಹತ್ವದ ಮಸೂದೆಯನ್ನು ಸೋಮವಾರ ವಿಧಾನಸಭೆಯಲ್ಲಿ ಮಂಡಿಸಿದೆ.

ಇದರಡಿ ಕಾನೂನಿನ ನಿಯಮಗಳಲ್ಲಿ ಏನೇ ಇದ್ದರೂ, ಯಾವುದೇ ನ್ಯಾಯಾಲಯ, ನ್ಯಾಯಾಧಿಕರಣ, ಪ್ರಾಧಿಕಾರಗಳು ಯಾವುದೇ ತೀರ್ಪು ಅಥವಾ ಆದೇಶ ನೀಡಿದ್ದರೂ ಕಾಯಿದೆ ಅನುಷ್ಠಾನವಾಗುವ ದಿನದಿಂದ ಸರ್ಕಾರ ರೂಪಿಸುವ ನಿಯಮಗಳ ಅನ್ವಯ ಧಾರ್ಮಿಕ ಕಟ್ಟಡಗಳಿಗೆ ಸಂಪೂರ್ಣ ರಕ್ಷಣೆ ಕಲ್ಪಿಸುವುದಾಗಿ ಸ್ಪಷ್ಟಪಡಿಸಲಾಗಿದೆ.

ಮೈಸೂರು ಜಿಲ್ಲೆಯ ನಂಜನಗೂಡು ದೇವಾಲಯ ತೆರವಿಗೆ ರಾಜ್ಯಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಎಚ್ಚೆತ್ತ ರಾಜ್ಯ ಸರ್ಕಾರವು, ನೂತನ ಕಾಯಿದೆ ಅನುಷ್ಠಾನ ಬರುವವರೆಗೆ ನಿರ್ಮಾಣಗೊಂಡಿರುವ ಎಲ್ಲಾ ದೇವಾಲಯಗಳಿಗೂ ರಕ್ಷಣೆ ನೀಡುವ ಅಂಶವನ್ನು ವಿಧೇಯಕದಲ್ಲಿ ಸೇರಿಸಿದೆ. ಅಲ್ಲದೆ, ಕಾಯಿದೆ ಅನುಷ್ಠಾನಗೊಂಡ ಬಳಿಕ ಯಾವುದೇ ಅನಧಿಕೃತ ದೇವಾಲಯ ನಿರ್ಮಾಣ ಮಾಡುವಂತಿಲ್ಲ ಎಂಬುದನ್ನೂ ಸ್ಪಷ್ಟವಾಗಿ ತಿಳಿಸಲಾಗಿದೆ.

ಸುಪ್ರೀಂಕೋರ್ಟ್‌ ಹಾಗೂ ಹೈಕೋರ್ಟ್‌ ಆದೇಶದ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಅನಧಿಕೃತ ಧಾರ್ಮಿಕ ಕಟ್ಟಡಗಳ ತೆರವು ಕಾರ್ಯಾಚರಣೆ ನಡೆಸಬೇಕಾದ ಒತ್ತಡದಲ್ಲಿ ರಾಜ್ಯ ಸರ್ಕಾರ ಸಿಲುಕಿತ್ತು. ಈ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಸೋಮವಾರ ಬೆಳಗ್ಗೆ ಸಚಿವ ಸಂಪುಟದಲ್ಲಿ ಪ್ರಾರ್ಥನಾ ಮಂದಿರಗಳ ಸಂರಕ್ಷಣೆಗಾಗಿ ತಿದ್ದುಪಡಿ ವಿಧೇಯಕ ಮಂಡಿಸುವ ಮಹತ್ವದ ತೀರ್ಮಾನ ಕೈಗೊಳ್ಳಲಾಯಿತು.

ಇದರಂತೆ ಸೋಮವಾರ ಸಂಜೆ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ‘ಕರ್ನಾಟಕ ಧಾರ್ಮಿಕ ಕಟ್ಟಡಗಳ ಸಂರಕ್ಷಣೆ ವಿಧೇಯಕ-2021’ ಮಂಡಿಸಿದರು.

ಇನ್ನುಮುಂದೆ ಅನಧಿಕೃತ ಕಟ್ಟಡ ನಿರ್ಮಿಸುವಂತಿಲ್ಲ:

ವಿಧೇಯಕ ಜಾರಿಯಾದ ಕ್ಷಣದಿಂದ ರಾಜ್ಯ ಸರ್ಕಾರ ಅಥವಾ ಯಾವುದೇ ಸ್ಥಳೀಯ ಪ್ರಾಧಿಕಾರವು ಭವಿಷ್ಯದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ಧಾರ್ಮಿಕ ಕಟ್ಟಡವನ್ನು ನಿರ್ಮಿಸಲು ಅವಕಾಶ ನೀಡುವಂತಿಲ್ಲ.

ಇನ್ನು ಸಂರಕ್ಷಿತ ಕಟ್ಟಡಗಳಲ್ಲಿ ಧಾರ್ಮಿಕ ಕಾರ್ಯಚಟುವಟಿಕೆಗಳನ್ನು ನಡೆಸಲು ಅವಕಾಶ ನೀಡಲಾಗಿದೆ. ಆದರೆ, ರಾಜ್ಯ ಸರ್ಕಾರ ಅಥವಾ ಸರ್ಕಾರದ ಅಧಿಕಾರಿ ಇಲ್ಲವೇ ನೌಕರರು ಈ ಕಾಯ್ದೆಯಡಿಯಲ್ಲಿ ಸದ್ಭಾವನೆಯಿಂದ ಮಾಡಿದ ಅಥವಾ ಮಾಡಲು ಉದ್ದೇಶಿಸಿದ ಯಾವುದೇ ಕೆಲಸದ ವಿರುದ್ಧ ದಾವೆ, ವಿಚಾರಣೆ ಹಾಗೂ ಕಾನೂನು ಪ್ರಕರಣ ಹೂಡುವಂತಿಲ್ಲ ಎಂದು ಅಧಿಕಾರಿಗಳಿಗೆ ರಕ್ಷಣೆ ನೀಡಲಾಗಿದೆ.

ಈ ವಿಧೇಯಕ ಮಂಡನೆ ಸಂದರ್ಭದಲ್ಲಿ ಪ್ರತಿಪಕ್ಷದ ಸದಸ್ಯರು ತರಾತುರಿಯಲ್ಲಿ ವಿಧೇಯಕ ಮಂಡನೆ ಮಾಡಬಾರದು ಎಂದು ವಿರೋಧ ವ್ಯಕ್ತಪಡಿಸಿದರು. ಈ ಹಿನ್ನೆಲೆಯಲ್ಲಿ ವಿಧೇಯಕ ಅಂಗೀಕಾರ ಪ್ರಕ್ರಿಯೆ ಮುಂದೂಡಲಾಗಿದ್ದು, ಚರ್ಚೆ ಬಳಿಕ ಅಂತಿಮ ನಿರ್ಧಾರ ಆಗಲಿದೆ.

ಇದಕ್ಕೂ ಮೊದಲು ನಡೆದ ಸಚಿವ ಸಂಪುಟ ಸಭೆಯಲ್ಲಿ ಅನಧಿಕೃತವಾಗಿ ನಿರ್ಮಿಸಿ ತೆರವುಗೊಳಿಸಲಾದ ಕಟ್ಟಡಗಳನ್ನು ಸರ್ಕಾರವು ನಿರ್ಮಿಸಿಕೊಡಲು ನಿಯಮಗಳಲ್ಲಿ ಅವಕಾಶವಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ ಎಂದು ಮೂಲಗಳು ತಿಳಿಸಿವೆ.

ವಿಧೇಯಕದ ಪರಿಣಾಮವೇನು?

ವಿಧೇಯಕದ ಮೂಲಕ ಧಾರ್ಮಿಕ ಕಟ್ಟಡಗಳ ರಕ್ಷಣೆಗೆ ಹೊಸ ನಿಯಾಮವಳಿ ರೂಪಿಸಲು ಸರ್ಕಾರ ನಿರ್ಧಾರ ಮಾಡಿದೆ. ವಿಧೇಯಕ ಅಂಗೀಕಾರಗೊಂಡು ಅಧಿಸೂಚನೆ ರೂಪದಲ್ಲಿ ಜಾರಿಯಾದ ಕ್ಷಣದಿಂದ ನ್ಯಾಯಾಲಯದ ತೀರ್ಪು ಹಾಗೂ ವಿಚಾರಣೆ ಹೊರತಾಗಿಯೂ ಧಾರ್ಮಿಕ ಕಟ್ಟಡಗಳಿಗೆ ರಕ್ಷಣೆ ನೀಡಬಹುದು. ಅಲ್ಲದೆ, ಈ ರೀತಿಯ ಕಟ್ಟಡಗಳನ್ನು ತೆರವುಗೊಳಿಸದೆ ರಕ್ಷಣೆ ನೀಡುವ ಅಧಿಕಾರಿಗಳ ಮೇಲೆ ಯಾವುದೇ ಕ್ರಮ ಕೈಗೊಳ್ಳುವಂತಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ಇನ್ನು ಯಾವುದೇ ನ್ಯಾಯಾಲಯದಲ್ಲಿ ಇತ್ಯರ್ಥವಾಗದೆ ಉಳಿದಿರುವ ಹಾಗೂ ಸರ್ಕಾರದ ನಿಯಮಗಳಿಂದ ಹೊರಗೆ ಇರುವ ಧಾರ್ಮಿಕ ಕಟ್ಟಡಗಳ ಸಂರಕ್ಷಣೆ ಮಾಡಲು ಅವಕಾಶವಿಲ್ಲ ಎಂದು ಹೇಳಲಾಗಿದೆ.

ಮಸೂದೆಯಲ್ಲೇನಿದೆ?

- ಕಾಯಿದೆ ಜಾರಿಯಾಗುವ ಕ್ಷಣದವರೆಗೂ ಅಸ್ತಿತ್ವದಲ್ಲಿರುವ ಧಾರ್ಮಿಕ ಕಟ್ಟಡಗಳಿಗೆ ಸಂರಕ್ಷಣೆ

- ಕಾನೂನಿನಲ್ಲಿ ಏನೇ ನಿಯಮವಿದ್ದರೂ ಈ ಕಾಯ್ದೆ ಬಂದ ನಂತರ ಧಾರ್ಮಿಕ ಕಟ್ಟಡಗಳಿಗೆ ರಕ್ಷಣೆ

- ಕೋರ್ಟ್‌, ನ್ಯಾಯಾಧಿಕರಣ, ಪ್ರಾಧಿಕಾರ ಏನೇ ತೀರ್ಪು/ಆದೇಶ ನೀಡಿದ್ದರೂ ಅನ್ವಯವಿಲ್ಲ

- ಇನ್ಮುಂದೆ ಹೊಸದಾಗಿ ಅನಧಿಕೃತ ಧಾರ್ಮಿಕ ಕಟ್ಟಡಗಳ ನಿರ್ಮಾಣಕ್ಕೆ ಅವಕಾಶ ನೀಡುವಂತಿಲ್ಲ

- ಸದ್ಭಾವನೆಯಿಂದ ಕಟ್ಟಡ ಸಂರಕ್ಷಣೆ ಮಾಡುವ ಅಧಿಕಾರಿ ವಿರುದ್ಧ ಕ್ರಮ ತೆಗೆದುಕೊಳ್ಳುವಂತಿಲ್ಲ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಶಾಲೆಯಿಂದ ಮರಳುತ್ತಿದ್ದ ವೇಳೆ ಬೀದಿ ನಾಯಿ ದಾಳಿ, 5 ವರ್ಷದ LKG ಬಾಲಕಿಗೆ ಗಂಭೀರ ಗಾಯ
ಕರ್ನಾಟಕದಲ್ಲಿ ನಿಮ್ಹಾನ್ಸ್ ಮಾದರಿಯ ಮತ್ತಷ್ಟು ಸಂಸ್ಥೆಗಳು ಅಗತ್ಯ: ಸಚಿವ ಶರಣ ಪ್ರಕಾಶ್ ಪಾಟೀಲ್