Russia-Ukraine Crisis: ಕನ್ನಡಿಗರ ರಕ್ಷಣೆಗೆ ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌ ಯತ್ನ

Kannadaprabha News   | Asianet News
Published : Feb 26, 2022, 10:24 AM ISTUpdated : Feb 26, 2022, 10:48 AM IST
Russia-Ukraine Crisis: ಕನ್ನಡಿಗರ ರಕ್ಷಣೆಗೆ ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌ ಯತ್ನ

ಸಾರಾಂಶ

*  ವಿದ್ಯಾರ್ಥಿಗಳ ರಕ್ಷಣೆಗೆ ಸಚಿವ ಜೈಶಂಕರ್‌ ಭೇಟಿ ಮಾಡಿ ಮನವಿ *  ರಾಜೀವ್‌ ಚಂದ್ರಶೇಖರ್‌ ಮನವಿಗೆ ಸ್ಪಂದಿಸಿದ ಕೇಂದ್ರ ಸಚಿವ *  ಉಕ್ರೇನಿಂದ ನಮ್ಮವರ ಕರೆತರುವುದು ಕೇಂದ್ರದ ಹೊಣೆ: ಸಿದ್ದು  

ನವದೆಹಲಿ(ಫೆ.26):  ರಷ್ಯಾದ(Russia) ದಾಳಿಗೆ ಸಿಲುಕಿರುವ ಉಕ್ರೇನ್‌ನಲ್ಲಿ(Ukraine) ಪ್ರಾಣ ಭೀತಿ ಎದುರಿಸುತ್ತಿರುವ ಕನ್ನಡಿಗ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆತರುವ ನಿಟ್ಟಿನಲ್ಲಿ ಕರ್ನಾಟಕದ ಸಂಸದ ರಾಜೀವ್‌ ಚಂದ್ರಶೇಖರ್‌(Rajeev Chandrasekhar) ಅವರು ಕಾರ್ಯಪ್ರವೃತ್ತರಾಗಿದ್ದಾರೆ.

ಶುಕ್ರವಾರ ವಿದೇಶಾಂಗ ಸಚಿವ ಎಸ್‌. ಜೈಶಂಕರ್‌(S Jaishankar) ಅವರನ್ನು ಭೇಟಿ ಮಾಡಿದ ಬಿಜೆಪಿ ಸಂಸದ ರಾಜೀವ್‌ ಚಂದ್ರಶೇಖರ್‌ ಅವರು, ಉಕ್ರೇನ್‌ನಲ್ಲಿ ಸಿಲುಕಿರುವ ಕರ್ನಾಟಕ(Karnataka) ವಿದ್ಯಾರ್ಥಿಗಳನ್ನು(Students) ಸುರಕ್ಷಿತವಾಗಿ ತಾಯ್ನಾಡಿಗೆ ಕರೆತರಬೇಕು ಎಂದು ಮನವಿ ಮಾಡಿದರು. ಈ ವೇಳೆ ಉಕ್ರೇನ್‌ನಲ್ಲಿ ಇರುವ ಕರ್ನಾಟಕದ ವಿದ್ಯಾರ್ಥಿಗಳ ಸುರಕ್ಷತೆಗೆ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಸಚಿವರು ಭರವಸೆ ನೀಡಿದ್ದಾರೆ ಎಂದು ಹೇಳಿದ್ದಾರೆ.

Ukraine Russia Crisis: ಎರಡೇ ದಿನ, ರಷ್ಯಾ ಉಕ್ರೇನ್ ಸದ್ದನ್ನು ಅಡಗಿಸಿದ್ದು ಹೇಗೆ?

ಕನ್ನಡಿಗರ ವಾಪಸ್‌ ಬಗ್ಗೆ ವಿದೇಶಾಂಗ ಸಚಿವರ ಜತೆ ಚರ್ಚೆ: ಸಿಎಂ

ಬೆಂಗಳೂರು:  ಯುದ್ಧಪೀಡಿತ ಉಕ್ರೇನ್‌ ದೇಶದಿಂದ ರಾಜ್ಯದ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆತರಲು ವಿದೇಶಾಂಗ ಸಚಿವರಲ್ಲಿ ಮನವಿ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಹೇಳಿದ್ದಾರೆ.

ಶುಕ್ರವಾರ ಆರ್‌.ಟಿ.ನಗರದ ನಿವಾಸದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ವಿದೇಶಾಂಗ ಸಚಿವರ ಜತೆ ಚರ್ಚಿಸಲಾಗಿದ್ದು, ಕೇಂದ್ರ ಸರ್ಕಾರ(Central Government) ಭಾರತೀಯರ(Indians) ವಾಪಸಾತಿಗೆ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ. ವಿಮಾನಯಾನ ಸ್ಥಗಿತಗೊಂಡಿರುವ ಕಾರಣ ಭೂ ಸಾರಿಗೆ ಮೂಲಕ ಭಾರತೀಯರನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯುವ ಸಾಧ್ಯತೆಯ ಬಗ್ಗೆ ಪರಿಶೀಲಿಸಲಾಗುತ್ತಿದೆ ಎಂದು ತಿಳಿಸಿದರು. 

ಉಕ್ರೇನ್‌ನ ಪಶ್ಚಿಮ ಭಾಗದಲ್ಲಿ ರಕ್ಷಣಾ ಕಾರ್ಯಾಚರಣೆ ಮಾಡಬಹುದಾಗಿದೆ ಎಂಬ ಮಾಹಿತಿ ಇದೆ. ಭಾರತೀಯ ರಾಯಭಾರ ಕಚೇರಿ(Indian Embassy) ಎಲ್ಲ ವಿದ್ಯಾರ್ಥಿಗಳ ಸಂಪರ್ಕದಲ್ಲಿದೆ. ವಿದ್ಯಾರ್ಥಿಗಳ ಸುರಕ್ಷತೆ ಮತ್ತು ಊಟೋಪಚಾರದ ವ್ಯವಸ್ಥೆಗೂ ಮನವಿ ಮಾಡಿಕೊಳ್ಳಲಾಗಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಸಹಾಯವಾಣಿ(Helpline) ಪ್ರಾರಂಭಿಸಲಾಗಿದೆ. ಯುದ್ಧದ(War) ಪರಿಸ್ಥಿತಿ ತಿಳಿಗೊಳ್ಳುವವರೆಗೆ ಎಲ್ಲ ವಿದ್ಯಾರ್ಥಿಗಳು ಎಚ್ಚರಿಕೆಯಿಂದಿರಲು ವಿದೇಶಾಂಗ ಸಚಿವರು ಸೂಚನೆ ನೀಡಿದ್ದಾರೆ ಎಂದರು.

ಉಕ್ರೇನಿಂದ ನಮ್ಮವರ ಕರೆತರುವುದು ಕೇಂದ್ರದ ಹೊಣೆ: ಸಿದ್ದು

ನವದೆಹಲಿ: ರಷ್ಯಾ ದಾಳಿಗೆ ಒಳಗಾಗಿರುವ ಉಕ್ರೇನ್‌ನಿಂದ ರಾಜ್ಯದ ಮತ್ತು ದೇಶದ ಎಲ್ಲಾ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆತರುವುದು ಕೇಂದ್ರ ಸರ್ಕಾರದ ಹೊಣೆ. ಈ ಬಗ್ಗೆ ನಾನು ಮುಖ್ಯಮಂತ್ರಿಗಳು ಮತ್ತು ರಾಹುಲ್‌ ಗಾಂಧಿ(Rahul Gandhi) ಅವರ ಜೊತೆ ಮಾತನಾಡುತ್ತೇನೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ(Siddaramaiah) ಹೇಳಿದ್ದಾರೆ.

ನವದೆಹಲಿಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಕ್ರೇನ್‌ನಲ್ಲಿರುವ ರಾಯಭಾರ ಕಚೇರಿಯನ್ನು ಸಂಪರ್ಕಿಸಿ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆತರುವ ಕೆಲಸ ಕೇಂದ್ರದ್ದು. ರಾಜ್ಯಗಳು ಈ ಕಾರ್ಯಾಚರಣೆಗೆ ಆರ್ಥಿಕ ಸಹಾಯ ಮಾಡಬಹುದು ಅಷ್ಟೇ ಎಂದು ಅಭಿಪ್ರಾಯಪಟ್ಟರು.

ಉಕ್ರೇನ್‌ನಲ್ಲಿರುವ ಕನ್ನಡಿಗರನ್ನು ಸುರಕ್ಷಿತವಾಗಿ ಕರೆತನ್ನಿ: ಎಚ್‌ಡಿಕೆ

ಬೆಂಗಳೂರು:  ರಷ್ಯಾ ದಾಳಿಯಿಂದ ತತ್ತರಿಸಿರುವ ಉಕ್ರೇನ್‌ನಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಕನ್ನಡಿಗರ ರಕ್ಷಣೆಗೆ ಎಲ್ಲ ತುರ್ತು ಕ್ರಮಗಳನ್ನು ತಕ್ಷಣವೇ ಕೈಗೊಳ್ಳಬೇಕು ಮತ್ತು ಅವರೆಲ್ಲರನ್ನೂ ಸುರಕ್ಷಿತವಾಗಿ ತಾಯ್ನಾಡಿಗೆ ವಾಪಸ್‌ ಕರೆತರಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ(HD Kumaraswamy) ಒತ್ತಾಯಿಸಿದ್ದಾರೆ.

Russia Ukraine War: ಜಗತ್ತಿನ ನಂ.1 ಶಕ್ತಿಶಾಲಿ ದೇಶ ಸುಮ್ಮನೆ ನೋಡುತ್ತಿದೆ!

ಈ ಕುರಿತು ಟ್ವೀಟ್‌ ಮಾಡಿರುವ ಅವರು, ಉಕ್ರೇನ್‌ನಲ್ಲಿ ರಾಜ್ಯದ 91 ವಿದ್ಯಾರ್ಥಿಗಳು ಸಿಲುಕಿರುವ ಮಾಹಿತಿಯನ್ನು ಸರ್ಕಾರವೇ ನೀಡಿದೆ. ಶೆಲ್‌, ಕ್ಷಿಪಣಿ, ಬಾಂಬ್‌ ದಾಳಿ ಭಿತಿಯಿಂದ ವಿದ್ಯಾರ್ಥಿಗಳು ಬಂಕರ್‌ಗಳಲ್ಲಿ ಮತ್ತು ಮೆಟ್ರೋ ರೈಲು ಅಂಡರ್‌ಗ್ರೌಂಡ್‌ನಲ್ಲಿ ಆಶ್ರಯ ಪಡೆದಿದ್ದಾರೆ. ಆ ದೃಶ್ಯಗಳು ಕಳವಳಕಾರಿ. ಸ್ಫೋಟದ ಸದ್ದು ಕೇಳಿಸಿಕೊಂಡು ಕ್ಷಣಕ್ಷಣಕ್ಕೂ ಭಯಪಡುತ್ತಿರುವ ಅವರೆಲ್ಲರನ್ನು ನೋಡಿದರೆ ಯುದ್ಧದ ಭೀಕರತೆ ಎಂತಹದ್ದು ಎಂಬುದನ್ನು ಅರಿಯಬಹುದು ಎಂದಿದ್ದಾರೆ.

ಅಲ್ಲಿ ವಿದ್ಯಾರ್ಥಿಗಳು ಸಂಕಷ್ಟದಲ್ಲಿದ್ದರೆ, ಇಲ್ಲಿ ಅವರ ತಂದೆ-ತಾಯಿ ಮಕ್ಕಳ ಬಗ್ಗೆ ತೀವ್ರ ಆತಂಕದಲ್ಲಿದ್ದಾರೆ. ಉಕ್ರೇನ್‌ನಲ್ಲಿ ಬಾಂಬ್‌ಗಳ ಮೊರೆತಕ್ಕೆ ಅವರು ಮತ್ತಷ್ಟುಕಂಗಾಲಾಗುತ್ತಿದ್ದಾರೆ. ನಾನು ಕನ್ನಡಿಗರ ರಕ್ಷಣೆಗೆ ನೇಮಕಗೊಂಡಿರುವ ಉಸ್ತುವಾರಿ ಅಧಿಕಾರಿ ಜತೆ ನಿರಂತರ ಸಂಪರ್ಕದಲ್ಲಿದ್ದೇನೆ. ಕೇಂದ್ರ ಸರ್ಕಾರವು ತನ್ನೆಲ್ಲ ರಾಜತಾಂತ್ರಿಕ ಮಾರ್ಗಗಳನ್ನು ಬಳಸಿಕೊಂಡು ಉಕ್ರೇನ್‌ನಲ್ಲಿರುವ ಎಲ್ಲ ಕನ್ನಡಿಗರನ್ನೂ ಏರ್‌ಲಿಫ್ಟ್‌ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಶಾಲೆಯಿಂದ ಮರಳುತ್ತಿದ್ದ ವೇಳೆ ಬೀದಿ ನಾಯಿ ದಾಳಿ, 5 ವರ್ಷದ LKG ಬಾಲಕಿಗೆ ಗಂಭೀರ ಗಾಯ
ಕರ್ನಾಟಕದಲ್ಲಿ ನಿಮ್ಹಾನ್ಸ್ ಮಾದರಿಯ ಮತ್ತಷ್ಟು ಸಂಸ್ಥೆಗಳು ಅಗತ್ಯ: ಸಚಿವ ಶರಣ ಪ್ರಕಾಶ್ ಪಾಟೀಲ್