
ಬೆಂಗಳೂರು: ಬೆಂಗಳೂರು-ಮೈಸೂರು ಇನ್ಫ್ರಾಸ್ಟ್ರಕ್ಚರ್ ಕಾರಿಡಾರ್ (ನೈಸ್) ಯೋಜನೆಯಲ್ಲಿ ಸುಮಾರು 3 ಲಕ್ಷ ಕೋಟಿ ರು.ಗೂ ಅಧಿಕ ಮೊತ್ತದ ಬೃಹತ್ ಹಗರಣ ನಡೆದಿದೆ. ಈ ಯೋಜನೆ ನೆಪದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಯೋಜನೆಯ ಗುತ್ತಿಗೆದಾರ ಅಶೋಕ್ ಖೇಣಿ ಇಬ್ಬರೂ ಶಾಮೀಲಾಗಿ ಭಾರೀ ಪ್ರಮಾಣದ ಭೂಮಿಯನ್ನು ಕೊಳ್ಳೆ ಹೊಡೆದಿದ್ದಾರೆ ಎಂದು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.
ಮಂಗಳವಾರ ‘ಪವರ್‌ಪಾಯಿಂಟ್’ ಪ್ರದರ್ಶನದೊಂದಿಗೆ ಸುದ್ದಿಗೋಷ್ಠಿ ನಡೆಸಿದ ಅವರು, ನೈಸ್ ಯೋಜನೆಗಾಗಿ ಮುಗ್ಧ ಜನರಿಂದ ಸ್ವಾಧೀನಪಡಿಸಿಕೊಂಡಿದ್ದ ಭೂಮಿಯನ್ನು ಡಿಕೆ (ಡಿ.ಕೆ.ಶಿವಕುಮಾರ್) ಮತ್ತು ಎಕೆ (ಅಶೋಕ್ ಖೇಣಿ) ಜತೆಯಾಗಿ ಭಾರೀ ಪ್ರಮಾಣದಲ್ಲಿ ಲೂಟಿ ಹೊಡೆದಿದ್ದಾರೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ತಮ್ಮ ಕುಟುಂಬದ ಸದಸ್ಯರ ಹೆಸರಿನಲ್ಲಿ 300 ಎಕರೆಯಷ್ಟು ನೈಸ್ ಭೂಮಿಯನ್ನು ಅಕ್ರಮವಾಗಿ ಕೊಳ್ಳೆ ಹೊಡೆದಿದ್ದಾರೆ ಎಂದು ಹಲವು ದಾಖಲೆ ಬಿಡುಗಡೆ ಮಾಡಿದರು.
ನೈತಿಕತೆ ಮಾರಿಕೊಂಡಿರುವುದರಿಂದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೈಸ್ ವಿರುದ್ಧ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ಹೀಗಾಗಿ ತಕ್ಷಣ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಇಲ್ಲವೇ ಆ ಪಕ್ಷದ ಹೈಕಮಾಂಡ್ ಇಂತಹ ಅನೈತಿಕ ವ್ಯಕ್ತಿಯನ್ನು ಕಿತ್ತೊಗೆಯಬೇಕು. ನೈಸ್ ಗುತ್ತಿಗೆದಾರ ಅಶೋಕ್ ಖೇಣಿಯನ್ನು ತಕ್ಷಣ ಬಂಧಿಸಿ ಆತನ ಪಾಸ್‌ಪೋರ್ಟ್ ಮುಟ್ಟುಗೊಲು ಹಾಕಿಕೊಳ್ಳಬೇಕು ಎಂದು ಆಗ್ರಹಿಸಿದರು.
ನೈಸ್ ಯೋಜನೆ ದೇವೇಗೌಡರ ಕೂಸು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಪಪ್ರಚಾರ ನಡೆಸುತ್ತಿದ್ದಾರೆ. ಆದರೆ ಸ್ವತಃ ಅವರೇ ಶಾಮೀಲಾಗಿರುವ ಈ ಹಗರಣ 2ಜಿ ಹಗರಣ, ಕಲ್ಲಿದ್ದಲು ಹಗರಣಕ್ಕಿಂತಲೂ ದೊಡ್ಡದು. ಗುಲಾಮಗಿರಿ ವ್ಯವಸ್ಥೆಯಲ್ಲಿ ಯಾವನೋ ಒಬ್ಬ ಗುತ್ತಿಗೆದಾರನ ಮರ್ಜಿಯಲ್ಲಿ ಸರ್ಕಾರ ಕೆಲಸ ಮಾಡುತ್ತಿದೆ ಎಂದು ಅನಿಸುತ್ತಿದೆ ಎಂದು ಅವರು ಟೀಕಿಸಿದರು.
ಈ ವಿಷಯದಲ್ಲಿ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಯಾರು ಯಾರು ಬಂದು ಚೌಕಾಸಿಗೆ ನಿಂತಿದ್ದಾರೆ ಎಂಬುದನ್ನು ಹೇಳಲಾರೆ. ಆದರೆ ರೈತರಿಂದ ಅನ್ಯಾಯವಾಗಿ ಕಿತ್ತುಕೊಂಡ ಭೂಮಿಯನ್ನು ಮರಳಿ ಅವರಿಗೆ ಕೊಡುವವರೆಗೂ ಬಿಡುವುದಿಲ್ಲ. ಎಕರೆಗೆ ಒಂದು ಸೈಟ್ ಪಡೆಯಲು ರೈತರೇನು ಭಿಕ್ಷುಕರೇ? ವಿಧಾನಸೌಧದ ಮೆಟ್ಟಿಲ ಮೇಲೆಯೇ ಇದರ ಬಗ್ಗೆ ಬಹಿರಂಗ ಚರ್ಚೆಗೆ ನಾನು ತಯಾರಿದ್ದೇನೆ. ಶಿವಕುಮಾರ್ ಅಷ್ಟೇ ಅಲ್ಲ, ಅವರ ಸಂಪುಟ ಸದಸ್ಯರು ಶಾಸಕರನ್ನು ಜೊತೆಯಲ್ಲಿ ಕರೆದುಕೊಂಡು ಬರಲಿ ಎಂದು ಸವಾಲು ಹಾಕಿದರು.
ದೇವೇಗೌಡರು ಮತ್ತು ಜೆ.ಎಚ್. ಪಟೇಲ್ ಅವರು ಇರುವ ತನಕ ಸರಿದಾರಿಯಲ್ಲಿ ನಡೆಯುತ್ತಿದ್ದ ಯೋಜನೆ ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿ ಆದ ನಂತರ ದಾರಿ ತಪ್ಪಿತು. ಅವರ ಸರ್ಕಾರದಲ್ಲಿ ನಗರಾಭಿವೃದ್ಧಿ ಮಂತ್ರಿ ಆಗಿದ್ದ ಡಿ.ಕೆ. ಶಿವಕುಮಾರ್ ಅವರು ಈ ಯೋಜನೆಗೆ ಪ್ರವೇಶ ಮಾಡಿದ ನಂತರ ಅಕ್ರಮಗಳ ಸರಣಿ ಶುರುವಾಯಿತು. ಯೋಜನೆಯ ಮೂಲ ಚೌಕಟ್ಟು ಒಪ್ಪಂದ ಬದಲಾಯಿಸಿ ಮನಸೋ ಇಚ್ಛೆ ಯೋಜನೆಯನ್ನು ವಿರೂಪಗೊಳಿಸಿದ್ದಾರೆ. ಆ ಮೂಲಕ ಬಡ ರೈತರ ಭೂಮಿಯನ್ನು ರಿಯಲ್ ಎಸ್ಟೇಟ್ ಉದ್ದೇಶಕ್ಕೆ ಕೊಳ್ಳೆ ಹೊಡೆದಿದ್ದಾರೆ ಎಂದು ಆರೋಪಿಸಿದರು.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು 2003ರಲ್ಲಿ ಕೇವಲ 4 ಕೋಟಿ ರು. ಮೌಲ್ಯದ ಆಸ್ತಿ ಹೊಂದಿದ್ದರು. ಅದು 2023ಕ್ಕೆ 1,413 ಕೋಟಿ ರು. ಮೀರಲು ಹೇಗೆ ಸಾಧ್ಯ? ಇಷ್ಟು ಬೇಗವಾಗಿ ಹಣ ಸಂಪಾದಿಸುವುದು ಹೇಗೆ? ಮೂಲ ಚೌಕಟ್ಟು ಒಪ್ಪಂದವನ್ನು ಹಾಳು ಮಾಡಿ ಭೂಮಿಯನ್ನು ಲೂಟಿ ಹೊಡೆದ ಪರಿಣಾಮ ಇಷ್ಟು ಆಸ್ತಿ ಸಂಪಾದನೆ ಆಗಿದೆ. ಈ ಅಶೋಕ್ ಖೇಣಿ 420 ಜನರಿಗೆ ಎನ್‌ಓಸಿ ಕೊಟ್ಟಿದ್ದಾನೆ. ನೈಸ್ ಯೋಜನೆಗೆ ಸ್ವಾಧೀನ ಮಾಡಿಕೊಂಡ ಭೂಮಿಯನ್ನು ಮಾರಾಟ ಮಾಡಿದ್ದಾನೆ. ಯಾರಪ್ಪನ ಆಸ್ತಿಯೆಂದು ಅವನು ಈ ಆಸ್ತಿಯನ್ನು ಮಾರಾಟ ಮಾಡಿದ್ದಾನೆ ಎಂದು ಖಾರವಾಗಿ ಪ್ರಶ್ನಿಸಿದರು.
ನೈಸ್ ಯೋಜನೆಗಾಗಿ ಕೆಐಎಡಿಬಿ ಸ್ವಾಧೀನಪಡಿಸಿಕೊಂಡಿದ್ದ ಭೂಮಿಯನ್ನು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಅವರ ಸಹೋದರ ಡಿ.ಕೆ.ಸುರೇಶ್, ತಾಯಿ ಗೌರಮ್ಮ, ಪುತ್ರಿ ಆಭರಣ ಹೆಸರಿನಲ್ಲಿ ಲಪಟಾಯಿಸಿದ್ದಾರೆ ಎಂದು ಆರೋಪಿಸಿದ ಕುಮಾರಸ್ವಾಮಿ, ಕುಟುಂಬದ ಸದಸ್ಯರ ಹೆಸರಿನಲ್ಲಿದ್ದ ಕೆಲ ಕ್ರಯಪತ್ರಗಳ ದಾಖಲೆ ಬಿಡುಗಡೆಗೊಳಿಸಿದರು.
ನೈಸ್ ಯೋಜನೆಗಾಗಿ ಕೆಐಎಡಿಬಿ ನೋಟಿಫಿಕೇಶನ್ ಮಾಡಿದ್ದ ಹೊಸಕೆರೆಹಳ್ಳಿ ಗ್ರಾಮದ ಭೂಮಿಯನ್ನು ಡಿ.ಕೆ.ಸುರೇಶ್ ಅವರು 2004ರಲ್ಲಿ ಖರೀದಿಸಿದ್ದಾರೆ. ನೋಟಿಫಿಕೇಶನ್ ಆಗಿದ್ದ ಭೂಮಿಯನ್ನು ಯಾವ ಆಧಾರದಡಿ ಖರೀದಿಸಿದರು? ಅಂದು 10 ಎಕರೆ ಭೂಮಿಯನ್ನು ಅಮಾಸೆ ಗೌಡ ಎಂಬ ವ್ಯಕ್ತಿ ಹೆಸರಿನಲ್ಲಿ ಖರೀದಿ ಮಾಡಿ, ನಂತರ ಅದನ್ನು ತಮ್ಮ ತಾಯಿ ಗೌರಮ್ಮ ಅವರ ಹೆಸರಿಗೆ ಮಾಡಿಸಿಕೊಳ್ಳುತ್ತಾರೆ. ಡಿ.ಕೆ.ಶಿವಕುಮಾರ್ ಎಸಗಿರುವ ಅಕ್ರಮಕ್ಕೆ ಇದೊಂದು ಜ್ವಲಂತ ಸಾಕ್ಷಿ ಎಂದು ಹೇಳಿದರು.
ನೈಸ್ ಯೋಜನೆಯ ಸುಮಾರು 300 ಎಕರೆಗೂ ಅಧಿಕ ಭೂಮಿಯನ್ನು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕುಟುಂಬ ಲಪಟಾಯಿಸಿದೆ. ಕೆರೆಗಳು ಮತ್ತು ಗೋಮಾಳಗಳನ್ನೂ ಬಿಡದೆ ನುಂಗಿ ಹಾಕಿದ್ದಾರೆ. ಡಿಕೆಶಿ ಕುಟುಂಬ ಹಾಗೂ ಶೋಭಾ ಗ್ರೂಪ್ ಕಂಪನಿ ಜತೆ ಜಂಟಿ ಪಾಲುದಾರಿಕೆಯಲ್ಲಿ ಹೊಸಕೆರೆಹಳ್ಳಿ ಬಳಿ ಶೋಭಾ ಅಪಾರ್ಟ್‌ಮೆಂಟ್ ನಿರ್ಮಿಸಲಾಗಿದೆ. ಈಗ ನೋಡಿದರೆ ನೈಸ್ ಕಂಪನಿಯನ್ನು ನಾನೇಕೆ ಖರೀದಿಸಲಿ? ನನಗೇನು ತಲೆಕೆಟ್ಟಿದೆಯೇ ಎನ್ನುವ ಮುಖ್ಯಮಂತ್ರಿ ಬೇನಾಮಿ ಕಂಪನಿಗಳ ಮೂಲಕ ನಡೆಸಿರುವ ವ್ಯವಹಾರವನ್ನು ಮುಚ್ಚಿ ಹಾಕಲು ಸಾಧ್ಯವಿಲ್ಲ. ಬಹಳಷ್ಟು ನೈಸ್ ಆಸ್ತಿಗಳು ಆಭರಣ ಎನ್ನುವವರ ಹೆಸರಿನಲ್ಲಿ ನೋಂದಣಿ ಆಗಿವೆ. ದಾನ ಮತ್ತು ಪ್ರತಿದಾನಗಳು ನಡೆದಿವೆ. ಈ ಆಭರಣ ಎನ್ನುವವರು ಯಾರು ಎಂದು ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದರು.
ನೈಸ್ ಯೋಜನೆ ಸ್ವಾಧೀನ ಮಾಡಿದ್ದ ಹೊಸಕೆರೆಹಳ್ಳಿ ಟೋಲ್ ಪ್ಲಾಜಾ ಸಮೀಪದ ಜಾಗವನ್ನು ಡಿ.ಕೆ.ಸುರೇಶ್ ಅವರು 2004ರಲ್ಲಿ ಖರೀದಿಸುತ್ತಾರೆ. ಆ ಭೂಮಿ ಪರಿವರ್ತನೆಗೆ 2008ರಲ್ಲಿ ಡಿ.ಕೆ.ಸುರೇಶ್ ಅರ್ಜಿ ಸಲ್ಲಿಸುತ್ತಾರೆ. ವಿಚಿತ್ರವೆಂದರೆ ಅರ್ಜಿ ಹಾಕುವುದು ಡಿ.ಕೆ. ಸುರೇಶ್. ಆದರೆ ಆದೇಶ ಪತ್ರ ನೀಡುವುದು ಡಿ.ಕೆ.ಶಿವಕುಮಾರ್ ಹೆಸರಿಗೆ. ಡಿ.ಕೆ.ಸುರೇಶ್ ಅವರಿಗೆ ಡಿ.ಕೆ.ಶಿವಕುಮಾರ್ ಬೇನಾಮಿನಾ ಎಂದು ಪ್ರಶ್ನಿಸಿದರು.
2011ರಲ್ಲಿ ಶೋಭಾ ಡೆವಲಪರ್ ಜತೆ ಅಗ್ರಿಮೆಂಟ್ ಆಗುತ್ತದೆ. ಈ ಜಮೀನು ನಮ್ಮ ಸ್ವಂತದ್ದು ಎಂದು ಅರ್ಜಿ ಹಾಕುತ್ತಾರೆ. 2007ರಲ್ಲಿ ನೈಸ್ ಕಂಪನಿಗೆ 5 ಕೋಟಿ ರು. ಹಣ ಕೊಟ್ಟಿರುತ್ತಾರೆ. 2015ರಲ್ಲಿ ಶೋಭಾ ಡೆವಲಪರ್‌ಗೆ ಎನ್ಓಸಿ ದೊರೆಯುತ್ತದೆ. ಆ ಯೋಜನೆಯಲ್ಲಿ ಡಿ.ಕೆ. ಶಿವಕುಮಾರ್ ಕುಟುಂಬಕ್ಕೆ ಸುಮಾರು 400 ಪ್ಲಾಟ್ ಗಳು ದೊರೆಯುತ್ತವೆ. ಇವತ್ತು ಅವುಗಳ ಬೆಲೆ ಸುಮಾರು ಎರಡರಿಂದ 2,500 ಕೋಟಿ ರು. ಇದೆ. ಕೇವಲ 5 ಕೋಟಿ ರು. ಹೂಡಿ ಇಷ್ಟು ಹಣ ದುಡಿಯುವುದು ಎಂದರೆ ತಮಾಷೆಯ ಸಂಗತಿಯೇ ಎಂದು ಎಚ್.ಡಿ.ಕುಮಾರಸ್ವಾಮಿ ಲೇವಡಿ ಮಾಡಿದರು.
ಸಿದ್ಧಗಂಗಾ ಮಠದ ಹೆಸರಿನಲ್ಲಿ ಇದ್ದ 7 ಎಕರೆ ಭೂಮಿಯನ್ನು ನೈಸ್ ಯೋಜನೆಗೆ ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಅಶೋಕ್ ಖೇಣಿ ಮಠಕ್ಕೆ ಹೈಟೆಕ್ ಅಡುಗೆ ಮನೆ ಮಾಡಿಸಿಕೊಡುವುದಾಗಿ ಹಿರಿಯ ಸ್ವಾಮೀಜಿಗೆ ಹೇಳಿದ್ದ. ಅವರಿಗೆ ಅಡುಗೆ ಮನೆಯನ್ನು ಕಟ್ಟಿಕೊಡಲಿಲ್ಲ, ಇತ್ತ ಖಾಲಿ ಇರುವ ಜಮೀನಿಗೆ ಎನ್‌ಒಸಿಯನ್ನೂ ಕೊಡಲಿಲ್ಲ ಎಂದು ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಸದ್ಯಕ್ಕೆ ನೈಸ್ ಅಕ್ರಮದ ಭಾಗ-1ನ್ನಷ್ಟೇ ಬಿಡುಗಡೆ ಮಾಡಿದ್ದೇನೆ. ಅತಿ ಶೀಘ್ರದಲ್ಲಿಯೇ ಭಾಗ-2ರ ಮೂಲಕ ಮತ್ತಷ್ಟು ದಾಖಲೆಗಳನ್ನು ಬಿಡುಗಡೆ ಮಾಡುತ್ತೇನೆ
-ಎಚ್.ಡಿ.ಕುಮಾರಸ್ವಾಮಿ, ಕೇಂದ್ರ ಸಚಿವ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ