
ನವದೆಹಲಿ: ತಮ್ಮ ಮಾಸಿಕ ಮನ್ ಕೀ ಬಾತ್ ರೇಡಿಯೋ ಭಾಷಣದಲ್ಲಿ ಕರ್ನಾಟಕದಲ್ಲಿ ಜೇನು ಕೃಷಿಯಲ್ಲಿ ತೊಡಗಿರುವ ತುಮಕೂರು ಹಾಗೂ ಪುತ್ತೂರಿನ 2 ಸಂಸ್ಥೆಗಳ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದ್ದು. ಇದರಿಂದ ಅನೇಕರು ಸ್ವಾವಲಂಬಿಗಳಾಗಿದ್ದಾರೆ ಎಂದಿದ್ದಾರೆ. ‘ನೀವೆಲ್ಲರೂ ಜೇನುತುಪ್ಪದ ಮಾಧುರ್ಯವನ್ನು ಸವಿದಿದ್ದೀರಿ, ಆದರೆ ಅದರ ಹಿಂದೆ ಎಷ್ಟು ಕಠಿಣ ಪರಿಶ್ರಮ, ಪರಂಪರೆ ಮತ್ತು ಪ್ರಕೃತಿಯೊಂದಿಗೆ ಅದು ಹೊಂದಿರುವ ಸುಂದರ ಸಾಮರಸ್ಯವಿದೆ ಎಂಬುದರ ಅರಿವು ಬಹುಶಃ ನಮಗಿರುವುದಿಲ್ಲ’ ಎಂದು ಹೇಳುತ್ತ ಅವರು ಕರ್ನಾಟಕದ 2 ಉದಾಹರಣೆ ನೀಡಿದ್ದಾರೆ.
ಪುತ್ತೂರಿನ ‘ಗ್ರಾಮಜನ್ಯ’ ಎಂಬ ರೈತ ಸಂಘಟನೆ ನೈಸರ್ಗಿಕ ಉಡುಗೊರೆಗೆ ಹೊಸ ಆಯಾಮ ನೀಡುತ್ತಿದೆ. ಜೇನಿಗೆ ಆಧುನಿಕ ಸಂಸ್ಕರಣಾ ಘಟಕವನ್ನು ನಿರ್ಮಿಸಿದೆ. ಪ್ರಯೋಗಾಲಯ, ಬಾಟಲ್, ಸಂಗ್ರಹಣೆ ಮತ್ತು ಡಿಜಿಟಲ್ ಟ್ರ್ಯಾಕಿಂಗ್‌ನಂತಹ ಸೌಲಭ್ಯ ಒದಗಿಸುತ್ತಿದೆ. ಈಗ, ಈ ಜೇನುತುಪ್ಪ ಬ್ರಾಂಡೆಡ್ ಉತ್ಪನ್ನವಾಗಿ ಹಳ್ಳಿಗಳಿಂದ ನಗರಗಳವರೆಗೆ ತಲುಪುತ್ತಿದೆ. 2500 ರೈತರಿಗೆ ಇದರ ಲಾಭ ಸಿಕ್ಕಿದೆ.
ತುಮಕೂರು ಜಿಲ್ಲೆಯ ‘ಶಿವಗಂಗಾ ಕಾಲಂಜಿಯಾ’ ಸಂಸ್ಥೆ ಪ್ರತಿಯೊಬ್ಬ ಸದಸ್ಯರಿಗೂ 2 ಜೇನು ಪೆಟ್ಟಿಗೆ ನೀಡುತ್ತಿದೆ. ಸಣ್ಣದಾಗಿ ಆರಂಭವಾದ ಈ ಅಭಿಯಾನ ಇದೀಗ ಹೆಮ್ಮರವಾಗಿದೆ. ಇದರ ಭಾಗವಾದ ರೈತರು ಜಂಟಿಯಾಗಿ ಜೇನುತುಪ್ಪವನ್ನು ಹೊರತೆಗೆದು, ಅದನ್ನು ಸುಂದರವಾಗಿ ಪ್ಯಾಕ್ ಮಾಡಿ ಸ್ಥಳೀಯ ಮಾರುಕಟ್ಟೆಗೆ ತಲುಪಿಸುತ್ತಾರೆ. ಇದರಿಂದ ಅವರಿಗೆ ಲಕ್ಷಾಂತರ ರುಪಾಯಿಗಳ ಗಳಿಸುತ್ತಿದ್ದಾರೆ.
ಕಳೆದ 5 ವರ್ಷಗಳಿಂದ ಪುತ್ತೂರಿನಲ್ಲಿ ಕಾರ್ಯಾಚರಿಸುತ್ತಿರುವ ಗ್ರಾಮಜನ್ಯ ರೈತ ಜೇನು ಉತ್ಪಾದಕ ಸಂಸ್ಥೆಯ ಕುರಿತು ಭಾನುವಾರ ಆಕಾಶವಾಣಿಯಲ್ಲಿ ಪ್ರಸಾರವಾದ ಮನ್‌ಕಿ ಬಾತ್ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.
ಪುತ್ತೂರು ತಾಲೂಕಿನ ಮುಂಡೂರು ಗ್ರಾಮದಲ್ಲಿ ಗ್ರಾಮಜನ್ಯ ಸಂಸ್ಥೆಯು ಜೇನು ಕೃಷಿಗೆ ಸಂಬಂಧಿಸಿದಂತೆ ಕೆಲಸ ಮಾಡುತ್ತಿದ್ದು, ಸಂಸ್ಥೆಯ ಸ್ವಂತ ಕಟ್ಟಡದಲ್ಲಿ ಈ ಪ್ರಕ್ರಿಯೆ ನಡೆಯುತ್ತಿದೆ. ರೈತ ಸ್ನೇಹಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಗ್ರಾಮಜನ್ಯ ಸಂಸ್ಥೆಯು ಜೇನು ಕೃಷಿಗೆ ರೈತರಿಗೆ ಪ್ರೋತ್ಸಾಹ ನೀಡುತ್ತಿರುವ ಜೊತೆಗೆ ಮಾರುಕಟ್ಟೆಯ ವ್ಯವಸ್ಥೆಯ ಬಗ್ಗೆಯೂ ಯೋಜನೆ ರೂಪಿಸಿ ಜೇನು ಸಂಸ್ಕರಣಾ ಘಟಕ ಸ್ಥಾಪನೆ ಮಾಡಿದೆ.
ಅಲ್ಲದೆ ಜೇನು ಪ್ರೋಸೆಸ್‌ಗಾಗಿ ಹಲವಾರು ಯಂತ್ರಗಳನ್ನೂ ಖರೀದಿಸಿದೆ. ಜೇನು ಉತ್ಪಾದನೆಯ ಮಟ್ಟವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಆರಂಭಿಸಿರುವ ಈ ಸಂಸ್ಕರಣಾ ಘಟಕವು ದಕ್ಷಿಣ ಭಾರತದಲ್ಲಿ ಅತೀ ದೊಡ್ಡ ಘಟಕ ಎಂದು ಗುರುತಿಸಲ್ಪಟ್ಟಿದೆ. ಇಲ್ಲಿ ಜೇನು ಪ್ರಯೋಗಾಲಯ, ಜೇನು ಬಾಟಲಿಂಗ್ ಮತ್ತು ದಾಸ್ತಾನು ವ್ಯವಸ್ಥೆಗಳನ್ನು ಹೊಂದಿದೆ.
ಇದೀಗ ಪ್ರದಾನಿ ಮೋದಿ ಅವರು ತಮ್ಮ ಮನ್‌ಕಿ ಬಾತ್‌ನಲ್ಲಿ ಗ್ರಾಮಜನ್ಯದ ಬಗ್ಗೆ ಉಲ್ಲೇಖಿಸುತ್ತಾ, ಇದು ರೈತರಿಗೆ ಪ್ರಯೋಜನಕಾರಿಯಾಗಿದ್ದು, ಇಲ್ಲಿ ಲ್ಯಾಬ್, ಬಾಟಲಿಂಗ್ ಮತ್ತು ಸ್ಟೋರೇಜ್ ವ್ಯವಸ್ಥೆ ಮಾಡಲಾಗುತ್ತಿರುವುದನ್ನು ಶ್ಲಾಘಿಸಿದರು. ಜೊತೆಗೆ ತುಮಕೂರಿನ ಶಿವಗಂಗಾ ಕಾಲಿಂಜಿಯ ಸಂಘಟನೆಯು ಜೇನು ಸಾಕಾಣೆಗಾಗಿ ನಡೆಸುತ್ತಿರುವ ಪ್ರಯತ್ನಗಳನ್ನೂ ಉಲ್ಲೇಖಿಸಿದರು.
ಗ್ರಾಮ ಜನ್ಯ ಜೇನು ಉತ್ಪಾದನಾ ಸಂಸ್ಥೆಯನ್ನು ಕಳೆದ ೫ ವರ್ಷಗಳ ಹಿಂದೆ ಹುಟ್ಟು ಹಾಕಲಾಗಿತ್ತು. ಇದೀಗ ಸಂಸ್ಥೆಯ ವತಿಯಿಂದ ನಡೆಸಲಾಗುತ್ತಿರುವ ಜೇನು ಉತ್ಪಾದನಾ ಘಟಕ ಉತ್ತಮವಾಗಿ ಬೆಳೆಯುತ್ತಿದೆ ಎನ್ನುವುದಕ್ಕೆ ಪ್ರಧಾನಿಗಳ ಶ್ಲಾಘನೆ ಸಾಕ್ಷಿಯಾಗಿದೆ ಎಂದು ಸಂಸ್ಥೆಯ ನಿರ್ದೇಶಕ ನಿರಂಜನ್ ಪೋಳ್ಯ ಪ್ರತಿಕ್ರಿಯಿಸಿದ್ದಾರೆ.
ಪ್ರದಾನಿಗಳ ಉಲ್ಲೇಖವು ಸಂಸ್ಥೆಯ ಸಾರ್ಥಕ ಕ್ಷಣವಾಗಿದೆ. ಕೃಷಿಕರ ಸಹಾಯ ಸಹಕಾರದಿಂದಾಗಿ ಗ್ರಾಮಜನ್ಯ ಸಂಸ್ಥೆ ಬೆಳವಣಿಗೆ ಕಂಡಿದೆ. ಇದೊಂದು ರೈತ ಉತ್ಪಾದಕ ಸಂಸ್ಥೆಯಾಗಿದ್ದು ತಕ್ಷಣವೇ ಲಾಭದಾಯಕವಾಗಿ ಮುಂದುವರಿಯಲು ಸಾಧ್ಯವಿಲ್ಲ. ೫ ವರ್ಷಗಳ ಬಳಿಕ ಈಗಷ್ಟೇ ಆದಾಯವನ್ನು ಕಾಣಲಾರಂಬಿಸಿದೆ ಎಂದು ತಿಳಿಸಿದ್ದಾರೆ. ಸಂಸ್ಥೆಯ ಸಾಧನೆಯ ಕುರಿತು 2025 ಮೇ 5ರಂದು ‘ಕನ್ನಡಪ್ರಭ’ ವಿಶೇಷ ವರದಿ ಪ್ರಕಟಿಸಿತ್ತು.
ನಮ್ಮ ಘಟಕದಲ್ಲಿ ಜೇನು ಸಂಸ್ಕರಿಸಿ ಕೊಡುತ್ತಿದ್ದೇವೆ. ಜೊತೆಗೆ ನಮ್ಮಲ್ಲಿಯದ್ದೇ ಸುಮಾರು ೩೦೦ ಪೆಟ್ಟಿಗೆಗಳಿವೆ. ಇವೆಲ್ಲವನ್ನೂ ಸೇರಿಸಿಕೊಂಡಿ ಸಂಸ್ಕರಣಾ ಘಟಕದಲ್ಲಿ ಕೆಲಸ ಆರಂಭಿಸಲಾಗಿದೆ. ನಮ್ಮಲ್ಲಿ ಈಗಾಗಲೇ ಬಾಟ್ಲಿಂಗ್, ಲೇಬಲಿಂಗ್ ಮತ್ತು ಕೋಲ್ಡ್ ಸ್ಟೋರೇಜ್ ಯಂತ್ರಗಳು ಸೆಟ್‌ಅಪ್ ಆಗಿದೆ. ಜೊತೆಗೆ ಉತ್ತಮ ಕಟ್ಟಡವೂ ನಿರ್ಮಾಣಗೊಂಡಿದೆ. ಘಟಕವು ಪೂರ್ಣ ಪ್ರಮಾಣದಲ್ಲಿ ಕಾರ್ಯ ನಿರ್ವಹಿಸಲು ದ.ಕ. ಜಿಲ್ಲೆ ಸೇರಿದಂತೆ ಸುತ್ತಮುತ್ತಲ ಕನಿಷ್ಟ 5 ಜಿಲ್ಲೆಗಳಲ್ಲಿನ ಜೇನು ಸಂಗ್ರಹ ನಮ್ಮಲ್ಲಿ ಆಗಬೇಕಾಗಿದೆ. ಸುತ್ತಮುತ್ತಲಿನ ಎಲ್ಲಾ ಜಿಲ್ಲೆಗಳಿಗೂ ಘಟಕದಿಂದ ಪ್ರಯೋಜನವಾಗಬೇಕು ಎಂಬುದು ನಮ್ಮ ಆಶಯವಾಗಿದೆ.
ನಿರಂಜನ ಪೋಳ್ಯ, ನಿರ್ದೇಶಕರು, ಗ್ರಾಮಜನ್ಯ ರೈತ ಜೇನು ಉತ್ಪಾದಕ ಸಂಸ್ಥೆ, ಪುತ್ತೂರು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ