
ಬೆಂಗಳೂರು: ನೈಸ್ ಯೋಜನೆ ಮೂಲ ಚೌಕಟ್ಟು ಒಪ್ಪಂದಕ್ಕೆ(ಫ್ರೇಮ್ ವರ್ಕ್ ಅಗ್ರಿಮೆಂಟ್) ಸಹಿ ಹಾಕಿದ್ದು ಅಂದಿನ ಸಿಎಂ ಎಚ್.ಡಿ.ದೇವೇಗೌಡರು. ಕಾಲಾನಂತರ ಮೂಲ ಚೌಕಟ್ಟು ಒಪ್ಪಂದ ಬದಲಿಸಿದ್ದು ಅಂದಿನ ನಗರಾಭಿವೃದ್ಧಿ ಸಚಿವರಾಗಿದ್ದ ಇಂದಿನ ಸಿಎಂ ಡಿ.ಕೆ.ಶಿವಕುಮಾರ್ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಆರೋಪ ಮಾಡಿದ್ದಾರೆ.
ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ನೈಸ್ ಯೋಜನೆ ಕುರಿತು ದಾಖಲೆಗಳನ್ನು ಬಿಡುಗಡೆಗೊಳಿಸಿ, ಯಾರ ಕಾಲದಲ್ಲಿ ಏನೇನಾಗಿತ್ತು ಎಂದು ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ನೀಡಿದರು.
‘ಬೆಂಗಳೂರು- ಮೈಸೂರು ಮೂಲಸೌಕರ್ಯ ಕಾರಿಡಾರ್’ ಎಂದು ರೂಪಿಸಲಾಗಿದ್ದ ಮೂಲ ಯೋಜನೆಯ ತಿಳಿವಳಿಕೆ ಪತ್ರಕ್ಕೆ (ಎಂಒಯು) ಅಂದಿನ ಸಿಎಂ ದೇವೇಗೌಡರು 1995ರ ಫೆ.20ರಂದು ಸಹಿ ಹಾಕಿದ್ದರು. ಈ ಮೂಲ ಒಪ್ಪಂದ ನೈಸ್ ಕಂಪನಿ ಜತೆಗೆ ಆಗಿರಲಿಲ್ಲ. ಬದಲಾಗಿ ಸಿಎಚ್‌ಬಿ, ಕಲ್ಯಾಣಿ ಗ್ರೂಪ್ ಮತ್ತು ಎಸ್.ಎ. ಎಂಜಿನಿಯರಿಂಗ್ ಅಂಡ್ ಕನ್ಸ್‌ಸ್ಟ್ರಕ್ಷನ್ ಸಂಸ್ಥೆಗಳನ್ನು ಒಳಗೊಂಡ ಒಕ್ಕೂಟದೊಂದಿಗೆ ಒಪ್ಪಂದವಾಗಿತ್ತು. ಈ ಒಪ್ಪಂದಕ್ಕೆ ಮೊದಲು ಯಾರು ಸಹಿ ಹಾಕಿದರು ಎಂಬುದು ಪ್ರಶ್ನೆಯಲ್ಲ. ನಂತರದ ದಿನಗಳಲ್ಲಿ ಯೋಜನೆಯನ್ನು ಹೇಗೆ ಬದಲಾಯಿಸಲಾಯಿತು ಮತ್ತು ಅದಕ್ಕೆ ಯಾರು ಅನುಮೋದನೆ ನೀಡಿದರು ಎಂಬುದು ಮುಖ್ಯ ಪ್ರಶ್ನೆಯಾಗಿದೆ ಎಂದರು.
ಈ ಯೋಜನೆಯ ಅನುಷ್ಠಾನಕ್ಕಾಗಿ ಖಾಸಗಿ ಹಾಗೂ ಸರ್ಕಾರಿ ಭೂಮಿ ಸೇರಿದಂತೆ ಒಟ್ಟು 20,193 ಎಕರೆ ಭೂಮಿಯನ್ನು ನೀಡುವ ಒಪ್ಪಂದ ಇದಾಗಿತ್ತು. ಮೂಲ ಪ್ರಸ್ತಾವನೆಯಲ್ಲಿ ಏಳು ಟೌನ್ ಶಿಪ್‌ಗಳಿದ್ದವು. ಆದರೆ ನಂತರ ಸಚಿವ ಸಂಪುಟವು ಐದು ಟೌನ್‌ಶಿಪ್‌ಗೆ ಅನುಮೋದನೆ ನೀಡಿತ್ತು. ಈಗ ತಿರುಚಲಾಗಿರುವ ಯೋಜನೆ ದೇವೇಗೌಡರ ಕೂಸು ಎಂದು ಅಪಪ್ರಚಾರ ಮಾಡಲಾಗುತ್ತಿದೆ. ದೇವೇಗೌಡರು ಒಪ್ಪಂದಕ್ಕೆ ಸಹಿ ಹಾಕಿರುವುದು ನಿಜ. ಆದರೆ ಆ ನಂತರ ಆಗಿರುವ ಔಟ್ ಲೈನ್ ಡೆವಲಪ್ಮೆಂಟ್ ಪ್ಲಾನ್‌ಗೆ ದೇವೇಗೌಡರು ಹೇಗೆ ಹೊಣೆಗಾರರಾಗುತ್ತಾರೆ? ಅದಕ್ಕೆ ಡಿ.ಕೆ. ಶಿವಕುಮಾರ್ ಮುಖ್ಯ ಕಾರಣ. ಅವರಿಗೂ ಮತ್ತು ನೈಸ್ ಗುತ್ತಿಗೆದಾರನಿಗೂ ಇರುವ ಸಂಬಂಧವೇನು? ಒಟ್ಟಿಗೆ ಸೇರಿ ಭೂಮಿಯನ್ನು ಕೊಳ್ಳೆ ಹೊಡೆಯುವ ದುರುದ್ದೇಶದಿಂದಲೇ ಮೂಲ ಚೌಕಟ್ಟು ಒಪ್ಪಂದವನ್ನು ಕಾನೂನುಬಾಹಿರವಾಗಿ ಬದಲಾಯಿಸಿಕೊಂಡರು ಎಂದು ಕುಮಾರಸ್ವಾಮಿ ಅವರು ಆರೋಪಿಸಿದರು.
ಹೈಕೋರ್ಟ್, ಸುಪ್ರೀಂ ಕೋರ್ಟ್‌ನಲ್ಲಿ ಈ ನೈಸ್ ಯೋಜನೆಯ ಫ್ರೇಮ್ ವರ್ಕ್ ಅಗ್ರಿಮೆಂಟ್‌ಗೆ ನೈಸ್ ಕಂಪನಿ ಒಪ್ಪುತ್ತದೆ. ಆದರೆ, 1999ರ ಏ.23ರಂದು ನೈಸ್ ಗುತ್ತಿಗೆದಾರ ಮೂಲಚೌಕಟ್ಟು ಒಪ್ಪಂದ ಬದಲಾವಣೆ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆಯುತ್ತಾನೆ. ನಂದಿ ಎಕನಾಮಿಕ್ ಕಾರಿಡಾರ್ ಎಂದು ಮತ್ತೊಂದನ್ನು ತರುತ್ತಾರೆ. ಅದರಂತೆ 2002ರ ಆಗಸ್ಟ್‌ನಲ್ಲಿ ಒಪ್ಪಂದ ಆಗುತ್ತದೆ. 2003ರ ಮೇ 21ರಂದು ಅಂದಿನ ನಗರಾಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ‘ಬಿಎಂಐಸಿಪಿಎ’ ರಚನೆ ಮಾಡಲಾಗುತ್ತದೆ. ಇದರಲ್ಲಿ ರಾಜರಾಜೇಶ್ವರಿ ನಗರದ ನಿವಾಸಿ ಹನುಮಂತರಾಯಪ್ಪ ಎಂಬ ವ್ಯಕ್ತಿಯೂ ಇದ್ದರು. ಆಗಲೇ ಇವರೆಲ್ಲರೂ ನೈಸ್ ಭೂಮಿಯನ್ನು ಕೊಳ್ಳೆ ಹೊಡೆಯಲು ಒಂದು ಸಿಂಡಿಕೇಟ್ ಮಾಡಿಕೊಂಡು ವ್ಯವಸ್ಥಿತವಾದ ಸಂಚು ಮಾಡಿಕೊಂಡಿದ್ದರು ಎಂದು ಅವರು ಆರೋಪ ಮಾಡಿದರು.
ದೇವೇಗೌಡ ಕಾಲದಲ್ಲಿ ಫ್ರೇಮ್ ವರ್ಕ್ ಅಗ್ರಿಮೆಂಟ್‌ನಲ್ಲಿದ್ದ ಟೌನ್ ಶಿಪ್ ಜಾಗದ ಅಳತೆಯನ್ನು ಡಿ.ಕೆ. ಶಿವಕುಮಾರ್ ಬದಲಾವಣೆ ಮಾಡುತ್ತಾರೆ. ಟೌನ್ ಶಿಪ್ ಮತ್ತು ಟೋಲ್ ರೋಡ್ ಗೆ ಜಾಗ ಜಾಸ್ತಿ ಮಾಡಿಕೊಳ್ಳುತ್ತಾರೆ. 2004ರ ಫೆ.12ರಂದು ಔಟ್ ಲೈನ್ ಡೆವಲಪ್ ಮೆಂಟ್ ಪ್ಲಾನ್ ಮೂಲಕ ಫ್ರೇಮ್ ವರ್ಕ್ ಅಗ್ರಿಮೆಂಟ್ ಬದಲಾವಣೆ ಮಾಡಿಸಿದ್ದಾರೆ. ಕ್ಯಾಬಿನೆಟ್ ತೀರ್ಮಾನ ಇಲ್ಲದೆ ಈ ಬದಲಾವಣೆಗೆ ಅನುಮತಿ ಕೊಟ್ಟವರು ಯಾರು? 2,700 ಎಕರೆ ಭೂಮಿಯನ್ನು ಬೆಂಗಳೂರು ಸುತ್ತಮುತ್ತ ಲೂಟಿ ಮಾಡಲು ಯಾರು ಪ್ರೇರಣೆ ಕೊಟ್ಟರು? ಇಂತಹವರನ್ನು ಸಿಎಂ ಮಾಡಿದರೆ ರಾಜ್ಯ ಉಳಿಯುತ್ತದೆಯೇ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ