ಕೇಂದ್ರದಿಂದ ರಾಜ್ಯ ಸರ್ಕಾರಕ್ಕೆ ಬಂಪರ್ ಕೊಡುಗೆ

By Kannadaprabha NewsFirst Published Dec 11, 2019, 8:20 AM IST
Highlights

ರಾಜ್ಯದಲ್ಲಿ ಬಿಜೆಪಿ ಭರ್ಜರಿ ಜಯಗಳಿಸಿದ ಬೆನ್ನಲ್ಲೇ ಕೇಂದ್ರ ಸರ್ಕಾರ ಬಂಪರ್ ಗಿಫ್ಟ್ ನೀಡಿದೆ. 

ಬೆಂಗಳೂರು [ಡಿ.11]: ಉಪ ಚುನಾವಣೆಯಲ್ಲಿ ಹನ್ನೆರಡು ಸ್ಥಾನ ಗೆದ್ದು ಬಹುಮತ ಪಡೆದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ರಾಜ್ಯ ಬಿಜೆಪಿ ಸರ್ಕಾರಕ್ಕೆ ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಬರೋಬ್ಬರಿ 50 ಸಾವಿರ ಕೋಟಿ ರು. ಮೊತ್ತದ ರಸ್ತೆ ಹಾಗೂ ಹೆದ್ದಾರಿ ಯೋಜನೆಗಳಿಗೆ ತಾತ್ವಿಕ ಒಪ್ಪಿಗೆ ಮೂಲಕ ಬಂಪರ್ ಕೊಡುಗೆ ನೀಡಿದ್ದಾರೆ.

ಪ್ರಮುಖವಾಗಿ ಬೆಂಗಳೂರು-ಪುಣೆ ನಡುವಿನ ಹೆದ್ದಾರಿಯನ್ನು ‘ಎಕ್ಸ್‌ಪ್ರೆಸ್ ಮಾರ್ಗ’ವಾಗಿ ಪರಿವರ್ತಿಸುವ ಯೋಜನೆ ಜತೆಗೆ, ಕರ್ನಾಟಕದಲ್ಲಿ ಹಾದು ಹೋಗುವ  ಹುಬ್ಬಳ್ಳಿ- ಸೊಲ್ಲಾಪುರ-ಕರ್ನೂಲ್ ನಡುವಿನಎಕ್ಸ್‌ಪ್ರೆಸ್ ವೇಯನ್ನು ಚತುಷ್ಪಥ ಹೆದ್ದಾರಿ ಯಾಗಿ ಅಭಿವೃದ್ಧಿಪಡಿಸಲು ತಾತ್ವಿಕ ಅನುಮೋದನೆ ನೀಡಿದ್ದಾರೆ. ಅಲ್ಲದೆ, ಪ್ರಸಕ್ತ ಸಾಲಿನ ರಾಜ್ಯದ ವಾರ್ಷಿಕ ಅನುದಾನವನ್ನೂ ಗಣನೀಯವಾಗಿ ಹೆಚ್ಚಿಸುವ ಭರವಸೆ ನೀಡಿದ್ದಾರೆ.

ಮಂಗಳವಾರ ಬೆಂಗಳೂರಿನಲ್ಲಿ ನಡೆದ ಹೆದ್ದಾರಿ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಚಿವ ನಿತಿನ್ ಗಡ್ಕರಿ ಈ ಘೋಷಣೆ ಮಾಡಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ, ಲೋಕೋಪಯೋಗಿ ಸಚಿವ ಗೋವಿಂದ ಕಾರಜೋಳ, ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಸೇರಿದಂತೆ ಸರ್ಕಾರದ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದು ರಾಜ್ಯದ ವಿವಿಧ ಹೆದ್ದಾರಿ ಯೋಜನೆಗಳ ಕುರಿತು ಮಾಹಿತಿ ನೀಡಿದರು. 

ಗಡ್ಕರಿ ಬಹಿರಂಗ ಪಡಿಸಿದ್ರು ಟೋಲ್ ಸಂಗ್ರಹ ಹಣ; ಮೊತ್ತ ಕೇಳಿ ಬಿಚ್ಚಿ ಬಿದ್ದ ಜನ!...

ಯಡಿಯೂರಪ್ಪ ಅವರು, ರಾಜ್ಯದ ಸುಮಾರು ಒಂದು ಲಕ್ಷ ಕೋಟಿ ರು. ಮೊತ್ತದ ವಿವಿಧ ರಸ್ತೆ ಅಭಿವೃದ್ಧಿ ಯೋಜನೆಗಳಿಗೆ ಕೇಂದ್ರ ಸರ್ಕಾರದಿಂದ ಅನುಮೋದನೆ ನೀಡುವಂತೆ ಗಡ್ಕರಿ ಅವರಿಗೆ ಬೇಡಿಕೆ ಸಲ್ಲಿಸಿದರು. ತಕ್ಷಣ 50 ಸಾವಿರ ಕೋಟಿ ರು. ಮೊತ್ತದ ಹಲವು ಯೋಜನೆಗಳಿಗೆ ಸಭೆಯಲ್ಲೇ ಅನುಮೋದನೆ ನೀಡಲು ಒಪ್ಪಿದ ಸಚಿವರು ಉಳಿದ ಎಲ್ಲ ಬೇಡಿಕೆಗಳಿಗೆ ಹಂತ ಹಂತವಾಗಿ ಅನುಮೋದನೆ ನೀಡುವ ಭರವಸೆಯನ್ನೂ ನೀಡಿದರು.

ಜೂನ್‌ನಿಂದ ಭೂಸ್ವಾಧೀನ ಆರಂಭ: ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ನಿತಿನ್ ಗಡ್ಕರಿ, ಕರ್ನೂಲ್-ಹುಬ್ಬಳ್ಳಿ- ಸೊಲ್ಲಾಪುರ ಚತುಷ್ಪಥ ಹೆದ್ದಾರಿ ನಿರ್ಮಾಣ ಯೋಜನೆಗೆ ಜೂನ್‌ನಿಂದ ಭೂ ಸ್ವಾಧೀನ ಪ್ರಕ್ರಿಯೆ ಆರಂಭವಾಗಲಿದೆ. ಪುಣೆ -ಬೆಂಗಳೂರು ಎಕ್ಸ್‌ಪ್ರೆಸ್ ಮಾರ್ಗಕ್ಕೆ ತಕ್ಷಣವೇ ಸಮಗ್ರ  ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಪುಣೆ- ಬೆಂಗಳೂರು ಎಕ್ಸ್‌ಪ್ರೆಸ್ ಮಾರ್ಗ ನಿರ್ಮಾಣವನ್ನು ನಾವು ಮುಂಬೈ-ಬೆಂಗಳೂರು ಎಕ್ಸ್‌ಪ್ರೆಸ್ ಮಾರ್ಗ ಎಂದೇ ಪರಿಗಣಿಸುತ್ತೇವೆ. ಎರಡು ನಗರಗಳನ್ನು ಸಂಪರ್ಕಿಸುವ ಉತ್ತಮ ರಸ್ತೆ ಇದಾಗಲಿದೆ. ಕರ್ನಾಟಕದಲ್ಲಿ ಹಾದು ಹೋಗುವ ರಸ್ತೆಯ ಸುತ್ತಮುತ್ತ ಕೈಗಾರಿಕೆ ಹಬ್, ಲಾಜಿಸ್ಟಿಕ್ ಪಾರ್ಕ್ ನಿರ್ಮಾಣ ಮಾಡಿಕೊಂಡರೆ ಈ ಯೋಜನೆಯ ಮತ್ತಷ್ಟು ಲಾಭ ಮಾಡಿಕೊಳ್ಳಬಹುದು ಎಂದು ವಿವರಿಸಿದರು.

ಹೆದ್ದಾರಿ ಯೋಜನೆಗಳಿಗೆ ಕರ್ನಾಟಕ ಸೇರಿದಂತೆ ಎಲ್ಲೆಡೆ ಭೂ ಸ್ವಾಧೀನ ಮತ್ತು ಅರಣ್ಯ ಪರಿಸರ ಇಲಾಖೆಯ ನಿರಾಕ್ಷೇಪಣೆ ಪಡೆಯುವುದು ಸಮಸ್ಯೆಯಾಗುತ್ತಿದೆ. ಅದನ್ನು ತ್ವರಿತವಾಗಿ ಬಗೆಹರಿಸಿಕೊಂಡರೆ ರಾಜ್ಯಗಳು ಹೆಚ್ಚೆಚ್ಚು ಅನುದಾನ ಬಳಸಿಕೊಳ್ಳಬಹುದು. ಕರ್ನಾಟಕ ಸರ್ಕಾರಕ್ಕೂ ಇದನ್ನೂ ಮನವರಿಕೆ ಮಾಡಿಕೊಟ್ಟಿದ್ದೇನೆ ಎಂದು ಹೇಳಿದರು.

click me!